ಸಾವಿರ ಕೋಟಿಗೂ ಹೆಚ್ಚಿನ ಪ್ರೋತ್ಸಾಹ ಧನ ಬಾಕಿ

| Published : Apr 30 2024, 02:01 AM IST

ಸಾರಾಂಶ

ಕುದೂರು: ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ರಾಜ್ಯ ಸರ್ಕಾರ 1 ಸಾವಿರ ಕೋಟಿ ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದು, ಈ ಹಣವನ್ನೇ ನಂಬಿಕೊಂಡಿರುವ ಹೈನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕುದೂರು: ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ರಾಜ್ಯ ಸರ್ಕಾರ 1 ಸಾವಿರ ಕೋಟಿ ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದು, ಈ ಹಣವನ್ನೇ ನಂಬಿಕೊಂಡಿರುವ ಹೈನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿಂದಿನ ಸರ್ಕಾರ ಹೈನುಗಾರಿಕೆ ರೈತರಿಗೆ ಒಂದು ಲೀಟರ್ ಹಾಲಿಗೆ 2 ರುಪಾಯಿ ಪ್ರೋತ್ಸಾಹ ಧನ ಎಂದು ಘೋಷಿಸಿತ್ತು. ನಂತರ ಬಂದ ಸರ್ಕಾರ ಪ್ರೋತ್ಸಾಹಧನವನ್ನು 5 ರು.ಗಳಿಗೆ ಏರಿಸಿದರು. ಒಂದಷ್ಟು ದಿನವೂ ರೈತರಿಗೆ ಪ್ರೋತ್ಸಾಹ ಧನ ತಲುಪುವಂತೆ ಮಾಡಿದರು. ಆದರೆ ಕಳೆದ 8 ತಿಂಗಳಿಂದ ರೈತರಿಗೆ ಯಾವ ಪ್ರೋತ್ಸಾಹ ಧನವನ್ನು ನೀಡಿಲ್ಲ. ಏಕೆಂದು ಕೇಳಿದರೆ ಸರ್ಕಾರದಲ್ಲಿ ಹಣವಿಲ್ಲ ಎಂಬ ಉತ್ತರ ಕೇಳಿ ಬರುತ್ತಿದೆ. ಇದರಿಂದಾಗಿ ಕಳೆದ ಎಂಟು ತಿಂಗಳಿಂದ ಕರ್ನಾಟಕ ರಾಜ್ಯದ ಹೈನುಗಾರಿಕೆ ರೈತರಿಗೆ ಸರ್ಕಾರ ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಬಾಕಿ ಕೊಡಬೇಕಾಗಿದೆ.

14 ಒಕ್ಕೂಟಗಳಿಂದಲೂ ಬಾಕಿ ಉಳಿಕೆ :

ಕರ್ನಾಟಕ ರಾಜ್ಯದಲ್ಲಿ ಒಟ್ಟು ಹದಿನಾಲ್ಕು ಒಕ್ಕೂಟಗಳಿವೆ. ಬೆಂಗಳೂರ ಹಾಲು ಒಕ್ಕೂಟದಲ್ಲಿ ಈಗ ಬೇಸಿಗೆಯಾದ್ದರಿಂದ ಪ್ರತಿದಿನ 14.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಅಂದರೆ ಇಲ್ಲಿನ ರೈತರಿಗೆ ಪ್ರತಿದಿನ 72 ಲಕ್ಷದ 50 ಸಾವಿರ ರು.ಪ್ರೋತ್ಸಾಹ ಧನವನ್ನಾಗಿ ಪ್ರತಿದಿನ ಕೊಡಬೇಕು. ಹೀಗೆ ರಾಜ್ಯದ ಎಲ್ಲಾ ಒಕ್ಕೂಟಗಳಲ್ಲೂ ಹೀಗೆ ಲೆಕ್ಕ ಹಾಕಿದರೆ 8 ತಿಂಗಳಿಗೆ ಸಾವಿರ ಕೋಟಿಗೂ ಹಣ ಮೀರಿ ಹೋಗುತ್ತದೆ.

ಮೇವಿಲ್ಲದ ಕಾರಣ ಜಾನುವಾರು ಕಸಾಯಿಖಾನೆಗೆ :

ರೈತ ಕಂಬನಿ ಮಿಡಿಯುತ್ತಾನೆ. ನಾವು ಸಾಕಿದ ಹಸುಗಳನ್ನು ಮೇವಿಲ್ಲದೆ, ನೀರಿಲ್ಲದೆ ಚೈತನ್ಯ ನೀಡದಂತಹ ಹಾಲಿನ ಬೆಲೆ ಕೊಡುತ್ತಿರುವ ಹಿನ್ನಲೆಯಲ್ಲಿ ಸಾಯಲು ಆಗದೆ ಬದುಕಲೂ ಆಗದೆ ಇರುವಂತಹ ಸಂದರ್ಭದಲ್ಲಿ ರಾಸುಗಳನ್ನು ಕಸಾಯಿಖಾನೆಗೋ ಅಥವ ಮತ್ಯಾರಿಗೂ ಸಿಕ್ಕ ಬೆಲೆಗೆ ಮಾರಾಟ ಮಾಡುವಾಗ ಕರುಳು ಚುರುಕ್ ಎನ್ನುತ್ತದೆ.

ಹಸುಗಳು ತಿನ್ನುವ ಫೀಡ್, ಬೂಸಾ, ಇಂಡಿ ಇವುಗಳ ಬೆಲೆ ಗಗನಕ್ಕೇರಿವೆ. ಹಾಲು ಒಕ್ಕೂಟಗಳಿಂದ ನೀಡುವ ಫೀಡ್ ಎರಡು ತಿಂಗಳು ಅವಧಿಯಲ್ಲೇ ಒಂದು ಮೂಟೆಗೆ ಇನ್ನೂರು ರೂ ಹೆಚ್ಚು ಮಾಡಿದ್ದಾರೆ. ಮೊದಲು 1160 ರು.ಗಳಿಗೆ ಸಿಗುತ್ತಿದ್ದ ದನಗಳ ಆಹಾರ ಇಂದು 1300 ರು. ಆಗಿದೆ.

ಅದರಂಗಿಯ ವಿಜಯ್‌ಕುಮಾರ್ ಎಂಬ ರೈತ ಕೊಳ್ಳೇಗಾಲದಿಂದ ಟನ್ನಿಗೆ 5 ಸಾವಿರ ರು. ನೀಡಿ ಮೆಕ್ಕೆ ಜೋಳದ ಹುಲ್ಲು ತರಿಸಿದ್ದಾರೆ. ದನಕರುಗಳನ್ನು ಉಳಸಿಕೊಳ್ಳಬೇಕಾದರೆ ದೂರದೂರಿನಿಂದ ಹುಲ್ಲು ತರಿಸಬೇಕಾಗಿದೆ. ನಮ್ಮ ಪ್ರಾಂತ್ಯದಲ್ಲಿ ಸಾವಿರ ರು. ನೀಡುತ್ತೇನೆ ಎಂದರೂ ಒಂದು ಹೊರೆ ಹುಲ್ಲು ಸಿಗುತ್ತಿಲ್ಲ ಎಂದು ಕಂಬನಿ ಮಿಡಿಯುತ್ತಾರೆ.

ಮೇವಿನ ಕೇಂದ್ರದ ನಿರ್ಮಾಣವಾಗಲಿ :

ನೀರಿನ ಬರ ಬಂದಾಗ ಊರಿನ ಅರಳಿಕಟ್ಟೆಗಳಲ್ಲಿ ಒಂದು ದೊಡ್ಡ ಮಣ್ಣಿನ ಮಡಿಕೆಗಳಲ್ಲಿ ನೀರು ಹಾಕಿಡುತ್ತಿದ್ದರು. ಇದರಿಂದಾಗಿ ಬಿಸಿಲ ದಾಹ ತೀರಿಸಿಕೊಳ್ಳುತ್ತಿದ್ದರು. ಅದರಂತೆ ಅನ್ನದ ಬರ ತೀರಲು ಗಂಜಿ ಕೇಂದ್ರಗಳನ್ನು ತೆರೆಯುತ್ತಿದ್ದರು. ಈ ಬಾರಿ ರೈತಾಪಿ ವರ್ಗದವರ ರಾಸುಗಳು ಉಳಿಯಬೇಕಾದರೆ ಪ್ರತಿ ಗ್ರಾಮಗಳಲ್ಲೂ ಮೇವಿನ ಕೇಂದ್ರಗಳನ್ನು ಮಾಡಿ ಸರ್ಕಾರದ ವತಿಯಿಂದ ರೈತರ ರಾಸುಗಳಿಗೆ ಹುಲ್ಲು ಪೂರೈಕೆ ಮಾಡಿಕೊಡುವ ಕೆಲಸವಾಗಬೇಕು. ಇದರಿಂದಾಗಿ ರೈತ ಸಮಾಧಾನದ ಉಸಿರು ಬಿಡುವಂತಾಗುತ್ತದೆ.

ರೈತರೇ ಬೆಳೆದ ಬೆಳೆಗೆ ಬೆಲೆ ಹೆಚ್ಚು:

ಪಶು ಅಹಾರದ ಬೆಲೆ ಹೆಚ್ಚಾಗಲು ರೈತರೇ ಕಾರಣರಾಗಿದ್ದಾರೆ. ಏಕೆಂದರೆ ಜೋಳ, ಕಡಲೆಕಾಯಿ, ಕಾಕಂಬಿ ಬೆಳೆಯೋದು ರೈತರೇ ಆಗಿರುವಾಗ ಅವರೇ ಮಾರುಕಟ್ಟೆಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದ ಪರಿಣಾಮವಾಗಿ ಪಶು ಆಹಾರದ ಬೆಲೆ ಹೆಚ್ಚಾಗಿದೆ. ಹೇಗೆ ನೋಡಿದರೂ ಈ ಹಣ ರೈತರಿಗೇ ತಲುಪುವಂತಾಗುತ್ತಿದೆ ಎಂದು ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಪ್ರತಿಕ್ರಿಯೆ ನೀಡಿದರು.

ಆದರೆ, ಇಂತಹ ಸಂದರ್ಭದಲ್ಲಿ ಸರ್ಕಾರಗಳು ಮುಂದೆ ಬಂದು ರೈತರಿಂದ ಮೇವು ಕೊಂಡು ಕೊಂಚ ಕಡಿಮೆ ಬೆಲೆಯಲ್ಲಿ ರೈತರಿಗೆ ತಲುಪಿಸುವ ಕೆಲಸವನ್ನ ಒಕ್ಕೂಟಗಳ ಕಡೆಯಿಂದ ಮಾಡಿಸಬೇಕಾಗಿದೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ಹೈನುಗಾರಿಕೆ ಸುಧಾರಣೆ ಕಾಣುತ್ತದೆ ಎಂಬುದು ರೈತರ ಸಲಹೆಯಾಗಿದೆ. ಆದರೆ ರೈತರ ಮಾತನ್ನು ಕೇಳಿಸಿಕೊಳ್ಳಲಾರದಷ್ಟು ಕಿವುಡುತನವನ್ನು ಸರ್ಕಾರ ತೋರಿಸಬಾರದು ಎಂದೂ ಮನವಿ ಮಾಡಿದ್ದಾರೆ.

ರೈತರು ಸಹಕಾರ ಸಂಘಗಳಿಗೆ ನೀಡುವ ಹಾಲಿಗೆ ಸದ್ಯಕ್ಕೆ ನೀಡುತ್ತಿರುವ ಬೆಲೆ ಕಡಿಮೆ ಇದೆ. ಹಾಲಿನ 32 ರಿಂದ 34 ರು.ಗಳ ತನಕ ನೀಡಲಾಗುತ್ತಿದೆ. ಆದರೆ ತಮಿಳುನಾಡು, ಹರಿಯಾಣ, ಗುಜರಾತ್ ನಂತಹ ಇತರೆ ರಾಜ್ಯಗಳಲ್ಲಿ 45 ರು.ಗಳ ತನಕ ಬೆಲೆಯನ್ನು ರೈತರಿಗೆ ನೀಡಲಾಗುತ್ತಿದೆ. ಹೀಗೆ ರೈತರಿಂದ ಕೊಂಡ ಹಾಲನ್ನು ಗ್ರಾಹಕರಿಗೆ 55 ರು.ಗಳಿಗೆ ಮಾರಾಟ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ರೈತರ ಬದುಕು ಮತ್ತಷ್ಟು ಸುಧಾರಿಸುತ್ತದೆ ಎನ್ನುತ್ರಾರೆ ಹಾಲು ಒಕ್ಕೂಟದ ಸದಸ್ಯರು.ಕೋಟ್‌.............

ಸರ್ಕಾರ ರೈತರಿಗೆ ಹಣ ಬಿಡುಗಡೆ ಮಾಡಿಕೊಡಬೇಕು. ಈ ಬಾರಿಯ ಬಿಸಿಲು ಹೆಚ್ಚಾಗಿದೆ. ಬರ ತಾಂಡವವಾಡುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ರೈತರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿದರೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇಷ್ಟು ಬೇಸಿಗೆ ಇದ್ದರೂ ಹಾಲಿನ ಉತ್ಪಾದನೆಯೇನು ಕಡಿಮೆ ಆಗಿಲ್ಲ.

-ನರಸಿಂಹಮೂರ್ತಿ, ಮಾಜಿ ಅಧ್ಯಕ್ಷರು, ಬೆಂಗಳೂರು ಹಾಲು ಒಕ್ಕೂಟ

29ಕೆಆರ್ ಎಂಎನ್ 4.ಜೆಪಿಜಿ

ಬಮೂಲ್ ಕಚೇರಿ.