ಸಾರಾಂಶ
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಇದುವರೆಗೆ ಗ್ರಾಪಂ ಮಟ್ಟದಲ್ಲಿ ಕೆಲವೆಡೆ ಕಾರ್ಯ ನಿರ್ವಹಿಸುತ್ತಿದ್ದ, ಒಣ ಕಸವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಮೆಟಿರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಘಟಕ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪನೆಯಾಗಲಿದೆ. ಅಂದುಕೊಂಡಂತೆ ನಡೆದರೆ ಫೆಬ್ರವರಿ ತಿಂಗಳಲ್ಲಿ ಘಟಕ ಕಾರ್ಯಾರಂಭಿಸುವ ನಿರೀಕ್ಷೆಯಿದೆ.
ಪಚ್ಚನಾಡಿಯಲ್ಲಿ ಸ್ಥಾಪನೆಯಾಗಲಿರುವ ಈ ನೂತನ ಘಟಕಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಟೆಂಡರ್ ಕೂಡ ಕರೆಯಲಾಗಿದೆ. ಇದು ಕಾರ್ಯಾರಂಭವಾದರೆ ನಗರದ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಕ್ಕಿದಂತಾಗಲಿದೆ.ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ತೆಂಕ ಎಡಪದವು ಎಂಬಲ್ಲಿ ದಿನಕ್ಕೆ 10 ಟನ್ ಒಣತ್ಯಾಜ್ಯ ಸಂಸ್ಕರಣೆ ಸಾಮರ್ಥ್ಯದ ಎಂಆರ್‌ಎಫ್ ಘಟಕ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರು ಮತ್ತು ಮೂಡುಬಿದಿರೆ ತಾಲೂಕಿನ 51 ಗ್ರಾಮ ಪಂಚಾಯ್ತಿಗಳ ಒಣತ್ಯಾಜ್ಯ ನಿರ್ವಹಣೆ ಇದರಿಂದ ಸಾಧ್ಯವಾಗಿದೆ. ಇದರ ಬೆನ್ನಲ್ಲೇ ಇನ್ನೂ ಕೆಲವು ಗ್ರಾಪಂಗಳಲ್ಲಿ ಎಂಆರ್‌ಎಫ್ ಘಟಕ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಮಹಾನಗರ ಪಾಲಿಕೆಯಲ್ಲಿ ಈ ಸೌಲಭ್ಯ ಆರಂಭವಾಗುತ್ತಿರುವುದು ಇದೇ ಮೊದಲು.
‘ಒಣ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗಾಗಿ ಎಂಆರ್‌ಎಫ್ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರವು ಎಲ್ಲ ಮಹಾನಗರ ಪಾಲಿಕೆಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ ಡಿಪಿಆರ್ ತಯಾರಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದ್ದು, ಮೇ 30ರಂದು ಅನುಮೋದನೆ ದೊರೆತಿದೆ. ಈ ನಡುವೆ ವಿಧಾನ ಪರಿಷತ್ ಉಪಚುನಾವಣೆಯ ನೀತಿ ಸಂಹಿತೆ ಇದ್ದುದರಿಂದ ಟೆಂಡರ್ ವಿಳಂಬವಾಗಿದ್ದು, ಈಗ ಕರೆಯಲಾಗಿದೆ. ಶೀಘ್ರದಲ್ಲೇ ಈ ಕುರಿತಾದ ಪ್ರಕ್ರಿಯೆ ಪೂರ್ಣಗೊಂಡು ಫೆಬ್ರವರಿ ತಿಂಗಳೊಳಗೆ ಘಟಕ ಕಾರ್ಯಾರಂಭವಾಗಲಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ತಿಳಿಸಿದ್ದಾರೆ.ಎಂಆರ್‌ಎಫ್ ಘಟಕವನ್ನು ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಯೋಜನೆಯ ಒಟ್ಟು ಅಂದಾಜು ವೆಚ್ಚ 11.04 ಕೋಟಿ ರುಪಾಯಿ. ಇದರಲ್ಲಿ 5.94 ಕೋಟಿ ರು.ಗಳನ್ನು ಮಹಾನಗರ ಪಾಲಿಕೆ, ಉಳಿದ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸಲಿವೆ.
ದಿನಕ್ಕೆ 109 ಟನ್ ಸಾಮರ್ಥ್ಯ: ನೂತನವಾಗಿ ಆರಂಭವಾಗಲಿರುವ ಎಂಆರ್‌ಎಫ್ ಘಟಕ ದಿನಕ್ಕೆ 109 ಟನ್ ಒಣ ತ್ಯಾಜ್ಯ ಬೇರ್ಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರ ಸಿವಿಲ್ ಕಾಮಗಾರಿಗೆ ಅಂದಾಜು 8.55 ಕೋಟಿ ರು., ವಾಹನ ಮತ್ತು ಯಂತ್ರಗಳ ಖರೀದಿಗೆ 2.49 ಕೋಟಿ ರು. ವ್ಯಯಿಸಲಾಗುವುದು ಎಂದವರು ತಿಳಿಸಿದರು.ಮಹಾನಗರ ಪಾಲಿಕೆಯ ಎಲ್ಲ 60 ವಾರ್ಡ್‌ಗಳಿಂದ ಪ್ರತಿದಿನ ಸುಮಾರು 330 ಟನ್ ತ್ಯಾಜ್ಯ (ಹಸಿ, ಒಣ) ಉತ್ಪತ್ತಿಯಾಗುತ್ತದೆ. ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದ್ದರೆ, ಒಣ ತ್ಯಾಜ್ಯವನ್ನು ಸಣ್ಣ ಮಟ್ಟದಲ್ಲಿ ನಿರ್ವಹಿಸಲಾಗುತ್ತಿದೆ. ಎಂಆರ್‌ಎಫ್ ಘಟಕ ಆರಂಭವಾದರೆ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಒಣ ತ್ಯಾಜ್ಯಗಳನ್ನು ಯಂತ್ರಗಳ ಮೂಲಕ ವೈಜ್ಞಾನಿಕವಾಗಿ ಪ್ರತ್ಯೇಕಿಸಿ ಮರುಬಳಕೆಗೆ ಕಳುಹಿಸಲಾಗುತ್ತದೆ.