ಸಾರಾಂಶ
ಜಿ ದೇವರಾಜ ನಾಯ್ಡು
ಕನ್ನಡಪ್ರಭ ವಾರ್ತೆ ಹನೂರುಪವಾಡ ಪುರುಷ ಘನ ನೀಲಿ ಸಿದ್ದಪ್ಪಾಜಿ ತಪೋಭೂಮಿ ಇತಿಹಾಸ ಪ್ರಸಿದ್ಧ ಚಿಕ್ಕಲೂರು ಜಾತ್ರಾ ಮಹೋತ್ಸವದ ಮೂರನೇ ದಿನ ವಿವಿಧ ಉತ್ಸವಗಳು ಮುಡಿಸೇವೆ ಧಾರ್ಮಿಕ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು.
ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಹರಕೆ ಹೊತ್ತ ಭಕ್ತರಿಂದ ಮುಡಿಸೇವೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಕ್ಕಳು, ಹಿರಿಯರು ಮಹಿಳೆಯರು ದೇವರಿಗೆ ಮುಡಿ ಮುಡಿ ಅರ್ಪಿಸುವ ಹರಕೆ ತೀರಿಸಿದರು. ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥನೆ ಸಲ್ಲಿಸಿ ದೂಪ ಹಾಕಿ ಕಪ್ಪು ಭಸ್ಮ ಪಡೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.ವ್ಯಾಪಾರ ಜೋರು: ಐದು ದಿನಗಳ ಚಿಕ್ಕಲ್ಲೂರು ಜಾತ್ರೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಕ್ತಸಾಗರವೇ ಹರಿದು ಬಂದು ಕ್ಷೇತ್ರದಲ್ಲಿ ಬಿಡಾರ ಹೂಡಿದ್ದಾರೆ. ಹತ್ತಾರು ಎಕರೆ ಪ್ರದೇಶಗಳಲ್ಲಿ ಟೆಂಟ್ ಗಳು ತಲೆ ಎತ್ತಿದ್ದು ಕ್ಷೇತ್ರದಲ್ಲಿ ಎತ್ತ ನೋಡಿದರತ್ತ ಭಕ್ತಸಾಗರವೇ ಕಾಣಿಸುತ್ತಿದೆ.ಸುಗ್ಗಿ ಕಾಲ ಮುಗಿದ ಹಿನ್ನೆಲೆಯಲ್ಲಿ ರೈತರು ಹಾಗೂ ವಿವಿಧ ಗ್ರಾಮಗಳಿಂದ ಲಕ್ಷಾಂತರ ಭಕ್ತರು ಚಿಕ್ಕಲೂರು ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇಲ್ಲಿ ರೈತರಿಗೆ ಬೇಕಾದ ವ್ಯವಸಾಯದ ಸಲಕರಣೆಗಳು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮನೆಗಳಲ್ಲಿ ಬಳಸುವ ದಿನ ಬಳಕೆಯ ವಸ್ತುಗಳನ್ನು ಹಾಗೂ ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ವಿವಿಧ ವಸ್ತುಗಳು ಸಹ ಇಲ್ಲಿ ಖರೀದಿ ಭರಾಟೆ ಜೋರಾಗಿಯೇ ನಡೆಯಿತು.
ಸಿದ್ದಪ್ಪಾಜಿ ಕಥಾಪ್ರಸಂಗ:ಸಿದ್ದಪ್ಪಾಜಿ ಭಕ್ತಾದಿಗಳಿಗೆ ಸಿದ್ದಪ್ಪಾಜಿ ಕಥಾ ಪ್ರಸಂಗ ಮತ್ತು ಅವರ ಪವಾಡಗಳ ಬಗ್ಗೆ ತಿಳಿಸುವ ಹರಿಕಥೆ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಕಂಡಾಯಗಳ ಉತ್ಸವ ಮೆರವಣಿಗೆ ಸಹ ಜಾತ್ರೆಯಲ್ಲಿ ಧಾರ್ಮಿಕವಾಗಿ ನಡೆಯಿತು. ಜಿಲ್ಲಾಡಳಿತ ವತಿಯಿಂದ ಆರೋಗ್ಯ ತಪಾಸಣೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸೇರಿ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಅಧಿಕಾರಿಗಳು ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಾಣಿಬಲಿ ನಿಷೇಧ, ಚೆಕ್ ಪೋಸ್ಟ್ ಸ್ಥಾಪಿಸಿ ಕಟ್ಚೆಚ್ಚರ:ಜಾತ್ರೆಯಲ್ಲಿ ನಾಲ್ಕನೇ ದಿನ ಪಂಕ್ತಿ ಸೇವೆ ನಡೆಯಲಿದ್ದು ಬಾಡೂಟವನ್ನು ಎಡೆ ಇಟ್ಟು ಸಹಪಂಕ್ತಿ ಭೋಜನ ಮಾಡಲಿದ್ದಾರೆ. ಜಾತ್ರೆಯಲ್ಲಿ ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧ ಮಾಡಿರುವುದರಿಂದ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಪ್ರಾಣಿ- ಪಕ್ಷಿಗಳನ್ನು ಚಿಕ್ಕಲೂರಿಗೆ ಕೊಂಡೊಯ್ಯುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಪವಾಡದ ಭೂಮಿ ಚಿಕ್ಕಲ್ಲೂರು:ಲಕ್ಷಾಂತರ ಮಂದಿ ಭಕ್ತರು ಜಮೀನುಗಳಲ್ಲಿ ಟೆಂಟ್ ಹಾಕಿ ಮಲಗಿದರೂ ವಿಷಜಂತುಗಳು ಸುಳಿಯದಿರುವುದು ಇಲ್ಲಿನ ಪವಾಡ ಭೂಮಿಗೆ ನಿದರ್ಶನವಾಗಿದೆ. ಟೆಂಟ್ ಹಾಕಿ ಅಡುಗೆ ಮಾಡಿದರೂ, ಬಾಡೂಟ ತಿಂದರೂ ನೊಣ ಸೇರಿದಂತೆ ಕೀಟಗಳು ಕ್ಷೇತ್ರದಲ್ಲಿ ಸುಳಿಯುವುದಿಲ್ಲ. ಚಿಕ್ಕಲ್ಲೂರು ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಬಂದರೂ ಎಲ್ಲೆಂದರಲ್ಲಿ ರೈತರ ಜಮೀನುಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ರಾತ್ರಿ ಹಗಲು ಎನ್ನದೆ ವಾಸ್ತವ್ಯ ಮಾಡುವ ಮೂಲಕ ನಡೆಯುವ ಐದು ದಿನಗಳ ಜಾತ್ರೆಯಲ್ಲಿ ಭಕ್ತರು ಭಾಗವಹಿಸುವುದೇ ಸಾಂಪ್ರದಾಯಿಕವಾಗಿದೆ.