ಗಣಕದಲ್ಲಿ ಕನ್ನಡ ಬಳಸದಿದ್ದರೆ ಮೃತಭಾಷೆ ಆಗಲಿದೆ

| Published : Feb 09 2024, 01:50 AM IST

ಸಾರಾಂಶ

ಕನ್ನಡವು ಸಂಸ್ಕೃತದಂತೆ ಮೃತ ಭಾಷೆಯಾಗದಂತೆ ತಪ್ಪಿಸುವುದು ನಮ ಮುಂದಿನ ಸವಾಲು.ಗಣಕದಲ್ಲಿ ಕನ್ನಡ ಬಳಕೆ ಕಡಿಮೆಯಾದರೆ ಕ್ರಮೇಣ ಅದು ಆಡಳಿತ ಭಾಷೆಯ ಸ್ಥಾನವನ್ನೂ ಕಳೆದುಕೊಂಡು, ಕೇವಲ ಹಾಡು ಭಾಷೆಯಾಗಿ, ಮಂಕಾಗಿ ಮೃತ ಭಾಷೆಯಾಗುತ್ತದೆ

- ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಕಳವಳ

- ಚಾಮರಾಜ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

- ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ--

ಕನ್ನಡಪ್ರಭ ವಾರ್ತೆ ಮೈಸೂರು

ಆಡಳಿತದಲ್ಲಿ ಕನ್ನಡ ಅನುಷ್ಠಾನವಾಗಬೇಕು ಹಾಗೂ ಗಣಕಯಂತ್ರದಲ್ಲಿ ಕನ್ನಡದ ಸಂಪೂರ್ಣ ಬಳಕೆಯಾಗದಿದ್ದರೆ ಕನ್ನಡವು ಸಂಸ್ಕೃತದಂತೆ ಮೃತಭಾಷೆ ಆಗಲಿದೆ ಎಂದು ವಿಶ್ರಾಂತ ಕುಲಪತಿ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಕೆ. ಚಿದಾನಂದಗೌಡ ಕಳವಳ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕವು ಸುರ್ವಣ ಕರ್ನಾಟಕ ಸಂಭ್ರಮದ ಭಾಗವಾಗಿ ಗುರುವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಮೇಳನದಲ್ಲಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕನ್ನಡವು ಸಂಸ್ಕೃತದಂತೆ ಮೃತ ಭಾಷೆಯಾಗದಂತೆ ತಪ್ಪಿಸುವುದು ನಮ ಮುಂದಿನ ಸವಾಲು.ಗಣಕದಲ್ಲಿ ಕನ್ನಡ ಬಳಕೆ ಕಡಿಮೆಯಾದರೆ ಕ್ರಮೇಣ ಅದು ಆಡಳಿತ ಭಾಷೆಯ ಸ್ಥಾನವನ್ನೂ ಕಳೆದುಕೊಂಡು, ಕೇವಲ ಹಾಡು ಭಾಷೆಯಾಗಿ, ಮಂಕಾಗಿ ಮೃತ ಭಾಷೆಯಾಗುತ್ತದೆ ಎಂದರು.

ಒಂದು ಭಾಷೆಯನ್ನು ಬಳಸುವ ಜನರ ಸಂಸ್ಕೃತಿಯ ನಡುವೆ ಅವಿನಾಭಾವ ಸಂಬಂಧ ಇರುತ್ತದೆ. ಒಂದು ಕನ್ನಡ ಮೃತಭಾಷೆಯಾದರೆ ಅದರೊಡನೆ ಕರ್ನಾಟಕದ ಸಂಸ್ಕೃತಿಯು ನಾಶವಾಗುತ್ತದೆ. ಆಗ ಕನ್ನಡಿಗರಾದ ನಾವು ಬದಕಿದ್ದೂ ಮೃತರಾಗಿರುತ್ತೇವೆ ಎಂದರು.

ಜಾಗತೀಕರಣದ ಈ ಸಂದರ್ಭದಲ್ಲಿ ಭಾಷೆ ಮತ್ತು ಸಂಸ್ಕೃತಿ ಉಳಿವಿನ ಸವಾಲನ್ನು ಎದುರಿಸಬೇಕಿದೆ. ಇದಕ್ಕಾಗಿ ನಾವು ಹೋರಾಟ ನಡೆಸಬೇಕು. ಅಜ್ಞಾನದ ಮಾನಸಿಕ ಸ್ಥಿತಿಯೆದುರು, ಗಣಕದೊಡನೆ ಸಾಧ್ಯವಿರುವಲ್ಲೆಲ್ಲ ಕನ್ನಡವನ್ನು ಬಳಸುವ ಛಲ ಹೊತ್ತು ಸುಜ್ಞಾನದ ಬುದ್ಧಿಪೂರ್ವಕವಾದ ಹೋರಾಟ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಸಂಪೂರ್ಣವಾಗಿ ಮಾತೃಭಾಷೆಯಲ್ಲಿ ಆಗುವಂತೆ ಮಾಡುವುದು. ಗತಕಾಲದ ಕನ್ನಡ ವಿದ್ವಾಂಸರ ಕೊರತೆ ನಿವಾರಿಸುವುದು. ಕನ್ನಡದ ಮೇರು ಕೃತಿಗಳನ್ನು ತರ್ಜುಮೆ ಮಾಡುವುದು. ವಿದೇಶಗಳಲ್ಲಿ ಕನ್ನಡ ಪೀಠಗಳ ಸ್ಥಾಪನೆ ಅಗತ್ಯ ಎಂದರು.

ಬಾಹ್ಯಲೋಕದಲ್ಲಿ ಚಂದಿರನ ಅಂಗಳಕ್ಕೆ ಹೋಗಿ ಬಂದಿದ್ದೇವೆ. ಆದರೆ ಅಂತರಂಗದ ಮಂದಿರದಲ್ಲಿ ಅಮಾವಾಸ್ಯೆಯ ಕತ್ತಲಿದೆ. ವಿವೇಕ ಕಡಿಮೆಯಾಗಿ ವಿಶ್ವಜ್ಞಾನ ಹೆಚ್ಚುತ್ತಿದೆ. ಕಂಪ್ಯೂಟರಿನ ಕಾಮನ ಬಿಲ್ಲಿಗೆ ಕಣ್ಣು ತೆರೆದಿದ್ದೇವೆ. ಆದರೆ, ಕನ್ನಡದ ಕಂಪಿಗೆ ಮೂಗು ಮುಚ್ಚಿದ್ದೇವೆ ಎಂದು ಅವರು ಕುಟುಕಿದರು.

ಸಮ್ಮೇಳನ ಉದ್ಘಾಟಿಸಿದ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಮಕ್ಕಳಿಗೆ ಕನ್ನಡದ ಮೇಲೆ ಪ್ರೀತಿ, ಘನತೆ ಮತ್ತು ವಿಶ್ವಾಸ ಮೂಡಿಸಬೇಕು. ತಂತ್ರಜ್ಞಾನ, ಕೃಷಿ, ರಾಜಕಾರಣ ಸಹಿತವಾಗಿ ಎಲ್ಲವೂ ಒಂದಾಗಿ ಕನ್ನಡತನ ಮೆರೆದಾಗ ನಮ್ಮ ಭಾಷೆಗೆ ಉಳಿವು ಸಾಧ್ಯ ಎಂದರು.

ನಾವು ನಮ್ಮ ಮಕ್ಕಳಿಗೆ ನಮ್ಮ ಭಾಷೆಯ ಘನತೆ ಮತ್ತು ಶ್ರೇಷ್ಠತೆಯನ್ನು ಹೇಳಿಕೊಡದೆ ವಸಾಹತುಶಾಹಿ ಕಾರಣದ ಇಂಗ್ಲಿಷ್ಹೇಳಿಕೊಡುತ್ತಿದ್ದೇವೆ. ಇಂಗ್ಲೆಂಡಿನಿಂದ ಕೇವಲ 35 ಕಿ.ಮೀ ಇರುವ ಫ್ರಾನ್ಸ್ ನಲ್ಲಿ ಇಂಗ್ಲಿಷ್ ಭಾಷೆಗೆ ಪ್ರವೇಶವಿಲ್ಲ. ಜರ್ಮನಿಗರ ಪಾಲಿಗೆ ಇಂಗ್ಲಿಷ್ ಬಳಕೆಯೇ ಅವಮಾನ. ತರ್ಕ ಮತ್ತು ರಾಚನೀಕ ದೃಷ್ಟಿಯಿಂದಲೂ ಮುಖ್ಯವಲ್ಲದ ಇಂಗ್ಲಿಷ್ ಭಾಷೆಯನ್ನು ದೊಡ್ಡ ಭಾಷೆಯಾಗಿ ಕಟ್ಟಿದರು. ಅದು ಇಂಗ್ಲಿಷರ ತಾಕತ್ತು ಎಂದರು.

ತರ್ಕದ ದೃಷ್ಟಿಯಿಂದ ಪ್ರಪಂಚದ ಅತ್ಯುತ್ತಮ ಭಾಷೆಗಳಲ್ಲಿ ಕನ್ನಡವೂ ಒಂದು. ಈ ನೆಲದ ಕವಿಗಳು ಜಗತ್ತಿನ ಯಾವ ಕವಿಗಳಿಗೆ ಕಡಿಮೆ ಇಲ್ಲ. ದರ್ಶನ ದೃಷ್ಟಿಯಲ್ಲೂ ಕಡಿಮೆ ಇಲ್ಲ. ಬಹಳ ಕಾಲ ಆಳಿಸಿಕೊಂಡ ನಮಗೇ ಇದನ್ನು ಹೇಳುವ ತಾಕತ್ತು ಬೆಳೆಸಿಕೊಂಡಿಲ್ಲವಷ್ಟೇ ಎಂದರು.

ಈಗ ಕನ್ನಡ ಸಂರಕ್ಷಿಸುವುದು ಹುಲಿ ಸಂರಕ್ಷಣೆಯಂತೆ ಆಗಬೇಕು. ಕನ್ನಡ ಮೇಷ್ಟ್ರು, ಸಾಹಿತ್ಯ ಬರೆಯುವವರಿಗೆ ಸೇರಿದ್ದು, ಉಳಿದವರಿಗೆ ಸಂಬಂಧಿಸಿದ್ದಲ್ಲ ಎಂಬ ಕನ್ನಡದ ಬಗೆಗಿನ ತಪ್ಪು ಕಲ್ಪನೆಗಳು ನಿವಾರಣೆಯಾಗಬೇಕು ಎಂದರು.

ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಕೃತಿ ಲೋಕಾರ್ಪಣೆಗೊಳಿಸಿದರು. ಪ್ರೊ.ಸಿ. ನಾಗಣ್ಣ ವಿಶೇಷ ಉಪನ್ಯಾಸ ನೀಡಿದರು. ಕಸಾಪ ನಗರಾಧ್ಯಕ್ಷ ಕೆ.ಎಸ್. ಶಿವರಾಮು ಸ್ವಾಗತಿಸಿದರು. ಸಮ್ಮೇಳನದ ಪ್ರಧಾನ ಸಂಚಾಲಕ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.