ಸಾರಾಂಶ
‘ನನ್ನ ಊರಿನ ಋಣ ಯಾವಾಗಲೂ ನನ್ನ ಮೇಲೆ ಇದ್ದೇ ಇರುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು : ‘ನನ್ನ ಊರಿನ ಋಣ ಯಾವಾಗಲೂ ನನ್ನ ಮೇಲೆ ಇದ್ದೇ ಇರುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರು ತಾಲೂಕು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಈ ಹಿಂದೆ ತಾವು ಕಲಿತ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಊರಿನ ಶಾಲೆಯಲ್ಲಿ ನಾನು 5 ರಿಂದ 7 ತರಗತಿವರೆಗೆ ಓದಿದ್ದು, ಈ ಶಾಲೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ದತ್ತು ಪಡೆದಿದೆ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದು ಹೇಳಿದರು.
ಸಿದ್ದರಾಮನಹುಂಡಿಯಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳು ನಡೆಯುತ್ತಿವೆ. ಪದವಿ ಕಾಲೇಜಿಗೆ ವಿದ್ಯಾರ್ಥಿಗಳು ದೊರೆಯುವುದಿಲ್ಲ ಎಂದು ಪದವಿ ಕೋರ್ಸ್ ತೆರೆದಿಲ್ಲ. ಆದರೆ, ಊರಿನಲ್ಲಿ ಇತರ ಸೌಲಭ್ಯಗಳಾದ ಬಿಸಿಎಂ ವಿದ್ಯಾರ್ಥಿ ನಿಲಯ, ಪಶು ಚಿಕಿತ್ಸಾ ಕೇಂದ್ರ, ಗ್ರಂಥಾಲಯ, ಸಮುದಾಯ ಆರೋಗ್ಯ ಕೇಂದ್ರಗಳಿವೆ ಎಂದರು.
ಮಕ್ಕಳಿಗೆ ನಿರಾಸೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದರಾಮನಹುಂಡಿ ಗ್ರಾಮದಲ್ಲಿ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮಕ್ಕಳು ನಿರಾಸೆ ಅನುಭವಿಸಿದರು.
ನೂತನ ಕಟ್ಟಡದ ಶಾಲೆಯ ಸಭಾಂಗಣದಲ್ಲಿ ಮಕ್ಕಳು ನೆರೆದಿದ್ದರು. ಸಿದ್ದರಾಮಯ್ಯ ಅವರೊಂದಿಗೆ ಸಂವಾದ ನಡೆಸಲು ಕಾತುರದಿಂದ ಕಾಯುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ಸಭಾಂಗಣ ಪ್ರವೇಶಿಸುತ್ತಿದ್ದಂತೆ ನೂಕು ನುಗ್ಗಲು ಉಂಟಾಯಿತು. ಸಭಾಂಗಣದಲ್ಲಿ ಪ್ರವೇಶಿಸುತ್ತಿದ್ದಂತೆ ಕೆಲವು ಮಕ್ಕಳಿಗೆ ಸಿಎಂ ಕೈಕುಲುಕಿದರು. ಬಳಿಕ, ದೀಪ ಬೆಳಗಿಸಿ ನಿರ್ಗಮಿಸಿದರು. ಇದರಿಂದ ಮುಖ್ಯಮಂತ್ರಿಯೊಂದಿಗೆ ಮಾತನಾಡಲು ಕಾಯುತ್ತಿದ್ದ ಮಕ್ಕಳು ನಿರಾಸೆ ಅನುಭವಿಸಿದರು.