ಸಾರಾಂಶ
ಕನ್ನಡ ಸಾಹಿತ್ಯ ಲೋಕದಲ್ಲಿ ಅಗ್ರಮಾನ್ಯ ಸಾಹಿತಿಗಳಾಗಿದ್ದ ದೇಜಗೌ
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕೆಂದು ಅವಿರತವಾಗಿ ಶ್ರಮಿಸಿದವರು ನಾಡೋಜ ದೇಜಗೌ ಎಂದು ಮೈಸೂರು ವಿವಿ ಸಿಂಡಿಕೇಟ್ ಸದಸ್ಯ, ಲೇಖಕ ಡಾ. ಬಸವರಾಜು ಸಿ. ಜೆಟ್ಟಿಹುಂಡಿ ತಿಳಿಸಿದರು.ನಗರದ ಮಹಾರಾಜ ಕಾಲೇಜು ಸ್ನಾತಕ ಗ್ರಂಥಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಡೋಜ ದೇ. ಜವರೇಗೌಡ ಅವರ ಜನ್ಮದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ಅಗ್ರಮಾನ್ಯ ಸಾಹಿತಿಗಳಾಗಿದ್ದ ದೇಜಗೌ ಅವರು, ಕನ್ನಡದ ರಾಷ್ಟ್ರಕವಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಕನ್ನಡ ಕಟ್ಟುವ, ಬೆಳೆಸುವ ಕೆಲಸ ಮಾಡಿದವರು ಎಂದರು.
ಕನ್ನಡಕ್ಕೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಪ್ರಯತ್ನದಲ್ಲಿ ದೇಜಗೌ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಕನ್ನಡ ಸಂಸ್ಕೃತಿ ಇತಿಹಾಸ, ಕಾವ್ಯ ಪರಂಪರೆಯಿಂದ ಕನ್ನಡಿಗರು ಚೈತನ್ಯ ತುಂಬಿಕೊಂಡು ರಾಷ್ಟ್ರದಲ್ಲಿ ತಲೆಯೆತ್ತಿ ಮೆರೆಯಬೇಕು. ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಅವರದು ಎಂದು ಅವರು ಸ್ಮರಿಸಿದರು.ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡಲ್ಲೂ ಕೃತಿ ರಚನೆ ಮಾಡಿರುವ ದೇಜಗೌ ಅವರು, ನೂರಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಹಾಗೆಯೇ ಮೈಸೂರು ವಿವಿ ಕುಲಪತಿಯಾಗಿಯೂ ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಮಹದೇಶ್, ಪ್ರಾಧ್ಯಾಪಕ ಡಾ.ಸಿ.ಡಿ. ಪರಶುರಾಮ, ಉಪ ಗ್ರಂಥಪಾಲಕ ಡಾ.ವೈ.ಎಲ್. ಸೋಮಶೇಖರ್, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಕೋಟೆ ಶಿವಶಂಕರ್, ಸಂಶೋಧನಾ ವಿದ್ಯಾರ್ಥಿಗಳು, ಗ್ರಂಥಾಲಯ ಸಿಬ್ಬಂದಿ ಇದ್ದರು.