ರಾಜ್ಯ ಸರ್ಕಾರದ ಹಣದ ನಿರೀಕ್ಷೆಯಲ್ಲಿ ಕುಳಿತ ಮೈಷುಗರ್...!

| Published : Feb 12 2025, 12:31 AM IST

ಸಾರಾಂಶ

ಸರ್ಕಾರ ಏನೇ ಸರ್ಕಸ್ ಮಾಡಿದರೂ ಮೈಷುಗರ್ ಕಾರ್ಖಾನೆಯನ್ನು ಆರ್ಥಿಕ ಮುಗ್ಗಟ್ಟಿನಿಂದ ಹೊರತರಲಾಗುತ್ತಿಲ್ಲ. ಇನ್ನೂ ಕಾರ್ಖಾನೆ ಹಣಕ್ಕಾಗಿ ಸರ್ಕಾರವನ್ನು ಎದುರುನೋಡುತ್ತಲೇ ಇದೆ. ಕಂಪನಿಯ ಪುನಶ್ಚೇತನ ಮರೀಚಿಕೆಯಾಗೇ ಉಳಿದಿದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಾದರೂ ಮೈಷುಗರ್ ಆರ್ಥಿಕ ಸದೃಢತೆಗೆ ಸರ್ಕಾರ ಬಲ ನೀಡಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರ ಏನೇ ಸರ್ಕಸ್ ಮಾಡಿದರೂ ಮೈಷುಗರ್ ಕಾರ್ಖಾನೆಯನ್ನು ಆರ್ಥಿಕ ಮುಗ್ಗಟ್ಟಿನಿಂದ ಹೊರತರಲಾಗುತ್ತಿಲ್ಲ. ಇನ್ನೂ ಕಾರ್ಖಾನೆ ಹಣಕ್ಕಾಗಿ ಸರ್ಕಾರವನ್ನು ಎದುರುನೋಡುತ್ತಲೇ ಇದೆ. ಕಂಪನಿಯ ಪುನಶ್ಚೇತನ ಮರೀಚಿಕೆಯಾಗೇ ಉಳಿದಿದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಾದರೂ ಮೈಷುಗರ್ ಆರ್ಥಿಕ ಸದೃಢತೆಗೆ ಸರ್ಕಾರ ಬಲ ನೀಡಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.

ಫೆಬ್ರವರಿ ತಿಂಗಳ ಮಧ್ಯಂತರ ಆಗಮಿಸಿದರೂ ಕಾರ್ಖಾನೆ ಬಾಯ್ಲಿಂಗ್ ಹೌಸ್ ದುರಸ್ತಿ ಕಾಣದೆ ನೆನಗುದಿಗೆ ಬಿದ್ದಿದೆ. ಅದರ ದುರಸ್ತಿಗೆ ೬೦ ಕೋಟಿ ರು. ಅವಶ್ಯವಿದೆ. ಈ ಹಣಕ್ಕೆ ಸರ್ಕಾರವನ್ನು ಎದುರುನೋಡುವುದು ಅನಿವಾರ್ಯವಾಗಿದೆ. ಎಥೆನಾಲ್ ಘಟಕ ಸ್ಥಾಪನೆಗೆ ೧೧೦ ಕೋಟಿ ರು. ಸೇರಿದಂತೆ ೧೭೦ ಕೋಟಿ ರು. ನೀಡುವಂತೆ ಕಳೆದ ಬಜೆಟ್ ಸಮಯದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯೇ ಸಿಗಲಿಲ್ಲ. ಇದು ಕೂಡ ಕಾರ್ಖಾನೆ ಪುನಶ್ಚೇತನದ ಕನಸು ಕನಸಾಗಿಯೇ ಉಳಿಯುವಂತಾಗಿದೆ.

ಈಗಾಗಲೇ ಕಾರ್ಖಾನೆಯ ೫೨ ಕೋಟಿ ರು. ವಿದ್ಯುತ್ ಬಿಲ್ ಮನ್ನಾದಿಂದ ಸರ್ಕಾರಕ್ಕೆ ೩೭ ಕೋಟಿ ರು. ನಷ್ಟ ಉಂಟಾಗಿರುವುದಾಗಿ ಆರ್ಥಿಕ ಇಲಾಖೆ ಮತ್ತು ಸಿಎಜಿ ವರದಿಯಲ್ಲಿ ತಿಳಿಸಿದೆ. ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೂ ಸರ್ಕಾರ ಮುಂದೆ ಹೆಜ್ಜೆ ಇಟ್ಟಂತೆ ಕಂಡುಬರುತ್ತಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಕಾರ್ಖಾನೆಗೆ ಹಣ ಬಿಡುಗಡೆ ಮಾಡುವುದೇ ಎನ್ನುವುದು ಪ್ರಶ್ನೆಯಾಗಿದೆ.

ಕಬ್ಬಿನ ಹಣ ಪಾವತಿ:

೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ೫೦ ಕೋಟಿ ರು. ಹಣ ಬಿಡುಗಡೆ ಮಾಡಿತು. ೨೦೨೪-೨೫ನೇ ಹಂಗಾಮಿನಲ್ಲಿ ಸರ್ಕಾರದಿಂದ ಹಣವನ್ನು ನಿರೀಕ್ಷಿಸದೆ ಸುಮಾರು ೨ ಲಕ್ಷ ಟನ್ ಕಬ್ಬನ್ನು ಅರೆಯಿತು.

ಆದಾಯ ತೆರಿಗೆ ಇಲಾಖೆ ಟಿಡಿಎಸ್ ಕಾಯ್ದೆಯಡಿ ಅಸಲು, ಬಡ್ಡಿ, ದಂಡ ಸೇರಿ ಮೈಸೂರು ಸಕ್ಕರೆ ಕಾರ್ಖಾನೆಗೆ ೧೧೧.೫೦ ಕೋಟಿ ರು. ಹಣ ಪಾವತಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಿ ತೆರಿಗೆ ಮನ್ನಾ ಮಾಡಿಸಲಾಗಿದೆ. ಸಕ್ಕರೆ ಮಾರಾಟದಿಂದ ೪೫ ಕೋಟಿ ರು. ಹಣ ಸಂಗ್ರಹವಾಗಿದ್ದು, ೧೨ ಸಾವಿರ ಟನ್ ಮೊಲಾಸಸ್ ಉತ್ಪಾದನೆಯಾಗಿ ೧೫.೩೬ ಕೋಟಿ ರು. ಹಣ ನಿರೀಕ್ಷಿಸಲಾಗಿದೆ.

ಸಹ ವಿದ್ಯುತ್ ಘಟಕದಲ್ಲಿ ೧,೫೪,೯೩,೦೦೦ ಯೂನಿಟ್ ಉತ್ಪಾದನೆಯಾಗಿ ಅದರ ಮಾರಾಟದಿಂದ ೪.೫೩ ಕೋಟಿ ರು. ದೊರಕಿದೆ. ಈ ಮೂಲಗಳಿಂದ ಸಂಗ್ರಹವಾದ ಹಣವೆಲ್ಲವೂ ಕಬ್ಬು ಬೆಳೆಗಾರರಿಗೆ ಪಾವತಿ ಮತ್ತು ಇತರೆ ಖರ್ಚುಗಳಿಗೆ ನೀಡಲಾಗಿದೆ. ಇದೀಗ ಬಾಯ್ಲಿಂಗ್ ಹೌಸ್ ದುರಸ್ತಿಗೆ ಬಂದಿರುವುದರಿಂದ ಅದನ್ನು ದುರಸ್ತಿಪಡಿಸುವಷ್ಟು ಹಣ ಕಾರ್ಖಾನೆ ಬಳಿ ಇಲ್ಲ. ಬಾಯ್ಲಿಂಗ್ ಹೌಸ್ ದುರಸ್ತಿಗೆ ಸರ್ಕಾರದ ಆರ್ಥಿಕ ಒತ್ತಾಸೆ ನೀಡದಿದ್ದರೆ ಕಾರ್ಖಾನೆಯನ್ನು ಮುನ್ನಡೆಸುವುದು ಕಷ್ಟಕರ ಎಂದು ಹೇಳಲಾಗುತ್ತಿದೆ.

ರೈತ ಸಂಘಟನೆಗಳಿಂದ ಒತ್ತಡ:

ಮುಂಬರುವ ಜೂನ್ ತಿಂಗಳಿನಿಂದಲೇ ಕಬ್ಬು ಅರೆಯುವಂತೆ ರೈತ ಸಂಘಟನೆಗಳು ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮೇಲೆ ತೀವ್ರ ಒತ್ತಡ ಹೇರುತ್ತಿವೆ. ಬಾಯ್ಲಿಂಗ್ ಹೌಸ್ ದುರಸ್ತಿಯಾಗದ ಹೊರತು ಕಾರ್ಖಾನೆ ಆರಂಭಿಸುವ ಸಾಧ್ಯವೇ ಇಲ್ಲ. ಅದಕ್ಕಾಗಿ ತುರ್ತಾಗಿ ಹಣ ಬಿಡುಗಡೆ ಮಾಡಿಸಿ ಮುಂದಿನ ಹಂಗಾಮಿನಲ್ಲಿ ಕಾರ್ಖಾನೆ ಸುಗಮವಾಗಿ ನಡೆಯುವುದಕ್ಕೆ ಅನುಕೂಲ ಮಾಡಿಕೊಡುವಂತೆ ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ.

ಕಾರ್ಖಾನೆ ವ್ಯಾಪ್ತಿಯಲ್ಲಿ ಸಾಕಷ್ಟು ಕಬ್ಬಿದೆ. ಕಬ್ಬು ಪೂರೈಸುವುದಕ್ಕೆ ರೈತರು ಸಿದ್ದರಿದ್ದಾರೆ. ಆದರೆ, ಕಾರ್ಖಾನೆ ಕಬ್ಬು ಅರೆಯುವುದಕ್ಕೆ ಸಿದ್ಧಗೊಳ್ಳುವ ಲಕ್ಷಣಗಳು ಕಾಣಿಸದಿರುವುದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ. ಇದೇ ಸಮಯಕ್ಕೆ ಖಾಸಗಿ ಕಾರ್ಖಾನೆಯವರು ಮೈಷುಗರ್ ವ್ಯಾಪ್ತಿಯ ಕಬ್ಬಿಗೆ ಲಗ್ಗೆ ಇಡುವ ಮುನ್ನವೇ ಕಾರ್ಖಾನೆ ಆರಂಭಕ್ಕೆ ಪೂರ್ವಸಿದ್ಧತೆಗಳು ಆರಂಭಗೊಂಡಿರುವ ಸಂದೇಶವನ್ನು ತುರ್ತಾಗಿ ರೈತರಿಗೆ ಸಚಿವರು ಮತ್ತು ಜಿಲ್ಲಾಡಳಿತ ರವಾನಿಸಬೇಕಿದೆ. ಇಲ್ಲದಿದ್ದರೆ ಮೈಷುಗರ್ ಕಬ್ಬು ಖಾಸಗಿ ಕಾರ್ಖಾನೆಯವರ ಪಾಲಾಗುವುದು ನಿಶ್ಚಿತವಾಗಲಿದೆ.

ಚಲುವರಾಯಸ್ವಾಮಿ ಮುಂದೆ ಸವಾಲು:

ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮೈಷುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ವಿದ್ಯುತ್‌ ಬಿಲ್ ಬಾಕಿ ಮನ್ನಾ ಹಿಂದೆಯೂ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡರ ಪಾತ್ರ ದೊಡ್ಡದಿದೆ. ಇದೀಗ ಬಾಯ್ಲಿಂಗ್ ಹೌಸ್ ದುರಸ್ತಿಪಡಿಸಿ ಕಾರ್ಖಾನೆ ಕಬ್ಬು ಅರೆಯುವಿಕೆ ಕಾರ್ಯಾಚರಣೆಗೆ ಸಜ್ಜಗೊಳಿಸುವುದು ಸಚಿವರಿಗೆ ಸವಾಲಾಗಿ ಪರಿಣಮಿಸಿದೆ.

ಕಾರ್ಖಾನೆ ಆರ್ಥಿಕ ಸುಧಾರಣೆಗೆ ಎಥೆನಾಲ್ ಘಟಕ ಆರಂಭದ ಅವಶ್ಯಕತೆ ಇದೆಯಾದರೂ ಸದ್ಯಕ್ಕೆ ಬಾಯ್ಲಿಂಗ್ ಹೌಸ್ ದುರಸ್ತಿಯಾದರೆ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗುತ್ತದೆ. ಅದಕ್ಕೆ ಬೇಕಿರುವ ೬೦ ಕೋಟಿ ರು. ಹಣವನ್ನು ಕಾರ್ಖಾನೆಗೆ ಒದಗಿಸುವುದು ಚಲುವರಾಯಸ್ವಾಮಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಕಾರ್ಖಾನೆ ಆರಂಭವಾಗದೆ ಖಾಸಗೀಕರಣಕ್ಕೆ ಒತ್ತಾಸೆಯಾಗಿ ನಿಂತರೆ ರೈತ ಸಂಘಟನೆಗಳು, ಜನರ ಆಕ್ರೋಶಕ್ಕೆ ತುತ್ತಾಗುವ ಭಯವೂ ಕಾಡುತ್ತಿದೆ.

ಬಜೆಟ್‌ನಲ್ಲಿ ಆರ್ಥಿಕ ಬಲ ಸಿಗುವುದೇ?

ರಾಜ್ಯ ಬಜೆಟ್ ಸನ್ನಿಹಿತವಾಗಿದೆ. ಮೈಷುಗರ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಎರಡು ವರದಿಗಳು ಸರ್ಕಾರದ ಮುಂದಿವೆ. ಹೊಸ ಕಾರ್ಖಾನೆ ಸ್ಥಾಪನೆ, ಹಾಲಿ ಇರುವ ಕಾರ್ಖಾನೆಯನ್ನೇ ಆಧುನೀಕರಣಗೊಳಿಸಿ ಆರ್ಥಿಕ ಬಲ ತುಂಬುವುದು. ಈ ಎರಡು ವರದಿಗಳಲ್ಲಿ ಯಾವುದನ್ನು ಸರ್ಕಾರ ಪರಿಗಣಿಸಲಿದೆ ಕುತೂಹಲ ಜನರನ್ನು ಕಾಡುತ್ತಿದೆ.

ಒಂದೆಡೆ ಎಥೆನಾಲ್ ಘಟಕ ಮತ್ತು ಬಾಯ್ಲಿಂಗ್ ಹೌಸ್ ದುರಸ್ತಿಗೆ ಸರ್ಕಾರ ಹಣ ಒದಗಿಸಿದ್ದೇ ಆದಲ್ಲಿ ಕಾರ್ಖಾನೆ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಮುನ್ನಡೆಯಲು ಸಾಧ್ಯವಾಗಲಿದೆ. ಇದರಿಂದ ಕಾರ್ಖಾನೆಗೆ ಆರ್ಥಿಕ ಬಲವೂ ಸಿಗಲಿದೆ. ಇನ್ನೊಂದೆಡೆ ಆರ್ಥಿಕ ಇಲಾಖೆ ಹಾಗೂ ಸಿಎಜಿ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾರ್ಖಾನೆಯನ್ನು ಖಾಸಗೀಕರಣದತ್ತ ಕೊಂಡೊಯ್ಯುವ ಆತಂಕವೂ ಸೃಷ್ಟಿಯಾಗಿದೆ.

ಸಚಿವರಿಂದ ಭರವಸೆ

ಸದ್ಯ ಮೈಷುಗರ್ ಕಾರ್ಖಾನೆ ಇರುವ ಸ್ಥಿತಿಯಲ್ಲಿ ಜೂನ್‌ನಿಂದ ಕಾರ್ಯಾರಂಭ ಮಾಡುವುದು ಕಷ್ಟವಿದೆ. ಬಾಯ್ಲಿಂಗ್ ಹೌಸ್ ದುರಸ್ತಿಯಾಗದೆ ಕಾರ್ಖಾನೆ ಆರಂಭ ಸಾಧ್ಯವಿಲ್ಲ. ಯಂತ್ರೋಪಕರಣಗಳ ಓವರ್‌ ಆಯಿಲ್ ಆಗಬೇಕಿದೆ. ಈ ವಿಷಯವಾಗಿ ಸಭೆ ಕರೆಯುವಂತೆ ಸಚಿವರಿಗೆ ದೂರವಾಣಿ ಮೂಲಕ ತಿಳಿಸಿದ್ದೇವೆ. ಅವರು ತಮ್ಮ ಅಧ್ಯಕ್ಷತೆಯಲ್ಲೇ ಶೀಘ್ರದಲ್ಲೇ ತುರ್ತು ಸಭೆ ಕರೆಯುವ ಭರವಸೆ ನೀಡಿದ್ದಾರೆ.

- ಸುನಂದಾ ಜಯರಾಂ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ಸರ್ಕಾರ ಹಣ ನೀಡುವ ವಿಶ್ವಾಸ

ಬಾಯ್ಲಿಂಗ್ ಹೌಸ್ ದುರಸ್ತಿ ಹಾಗೂ ಎಥೆನಾಲ್ ಘಟಕ ಆರಂಭಕ್ಕೆ ೧೭೦ ಕೋಟಿ ರು. ನೀಡುವಂತೆ ಕಳೆದ ಬಜೆಟ್ ಸಮಯದಲ್ಲೇ ಪ್ರಸ್ತಾವನೆ ನೀಡಿದ್ದೇವೆ. ಬಾಯ್ಲಿಂಗ್ ಹೌಸ್ ದುರಸ್ತಿಗೆ ೬೦ ಕೋಟಿ ರು. ಖರ್ಚಾಗಲಿದ್ದು, ಸರ್ಕಾರ ಹಣ ನೀಡಬಹುದೆಂಬ ವಿಶ್ವಾಸದಲ್ಲಿದ್ದೇವೆ. ಕಾರ್ಖಾನೆ ಕಬ್ಬು ಅರೆಯುವಿಕೆಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಿದ್ದೇವೆ. ಈ ವಿಷಯವಾಗಿ ರೈತರಿಗೆ ಯಾವುದೇ ಆತಂಕ ಬೇಡ.

- ಸಿ.ಡಿ.ಗಂಗಾಧರ, ಅಧ್ಯಕ್ಷರು, ಮೈಷುಗರ್ ಕಾರ್ಖಾನೆ