ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಾಗನಹಳ್ಳಿಯ ಕೃಷಿ ವಿಸ್ತರಣಾ ಶಿಕ್ಷಣ ಘಟಕವು ವಿಶ್ವಜೇನು ದಿನಾಚರಣೆ ಆಯೋಜಿಸಿತ್ತು.ಬೆಂಗಳೂರು ಕೃಷಿ ವಿವಿಯ ನಿವೃತ್ತ ಡೀನ್ ಡಿ. ರಾಜಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2018 ರಿಂದ ವಿಶ್ವಸಂಸ್ಥೆಯು ಮೇ 20 ರಂದು ವಿಶ್ವಜೇನು ದಿನ ಆಚರಿಸುತ್ತಿದೆ. ಕೀಟಗಳ ವರ್ಗದಲ್ಲಿಯೇ ಜೇನುನೊಣಗಳಿಗೆ ಪ್ರಬುದ್ಧ ಸ್ಥಾನ ಇದೆ. ನೈಸರ್ಗಿಕ ದ್ರವ ರೂಪದ ಬಂಗಾರವೆಂದು ಕರೆಯುವ ಜೇನುತುಪ್ಪ, ಜೇನುಮೇಣ ಮತ್ತು ಕೆಲಸಗಾರ ಜೇನುನೊಣಗಳು ರಾಣಿ ಜೇನನ್ನು ಸಂರಕ್ಷಿಸಲು ತಯಾರಿಸುವ ರಾಜಶಾಯಿ ರಸಗಳಿಗಿರುವ ಔಷಧೀಯ ಗುಣಗಳು ಮತ್ತು ಜೇನು ಪರಾಗವನ್ನು ಸಸಾರಜನಕಯುಕ್ತ ಔಷಧಿಗಳಲ್ಲಿ ಬಳಸಲಾಗುತ್ತದೆ ಎಂದರು.
ಜರ್ಮನಿಯ ಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ಸ್ಟೈನ್ ಅವರು ಹೇಳಿರುವಂತೆ ಯಾವುದಾದರೂ ದುಷ್ಠಶಕ್ತಿ ಜೇನುನೊಣಗಳನ್ನು ಕ್ಷಿಪ್ರವಾಗಿ ಕ್ಷೀಣಿಸಿದರೆ ಮನುಕುಲದ ನಾಶ ಖಂಡಿತ ಎಂದರು.ಅಧ್ಯಕ್ಷತೆವಹಿಸಿದ್ದ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಹಾಗೂ ಹಿರಿಯಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ ಮಾತನಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಜೇನು ಕೃಷಿ ವಿಭಾಗವನ್ನು ಪ್ರತ್ಯೇಕವಾಗಿ ಪ್ರಾರಂಭಿಸಿದೆ ಎಂದರು.
ಜೇನುಕೃಷಿಯಲ್ಲಿ ಅನೇಕ ಸಂಶೋಧನೆಗಳನ್ನು ಕೈಗೊಂಡ ಕೀರ್ತಿ ಡಾ.ಡಿ. ರಾಜಗೋಪಾಲ್ ಅವರಿಗೆ ಸಲ್ಲುತ್ತದೆ. ಇತ್ತೀಚಿನ ದಿನಗಳಲ್ಲಿ ಜೇನು ಕೃಷಿಯು ಲಾಭದಾಯಕ ಉದ್ದಿಮೆಯಾಗಿದ್ದು, ಆಸಕ್ತಿಯಿಂದ ಮಾಡುವ ಕಡಿಮೆ ಖರ್ಚಿನ ಉದ್ದಿಮೆಯಾಗಿದೆ. ಪ್ರಪಂಚದ ಸುಮಾರು 3,06,000 ಸಸ್ಯ ಪ್ರಬೇಧಗಳು ಪರಾಗ ಸ್ಪರ್ಶ ಕ್ರಿಯೆಗೆ ಜೇನು ನೊಣಗಳನ್ನೇ ಅವಲಂಬಿಸಿವೆ. ಆದ್ದರಿಂದ ರೈತರು ತಮ್ಮ ತಾಕುಗಳಲ್ಲಿ ಜೇನುಪೆಟ್ಟಿಗೆಗಳನ್ನು ಅಳವಡಿಸಿ ಅಧಿಕ ಇಳುವರಿ ಪಡೆಯಬೇಕು ಎಂದರು.ತಾಂತ್ರಿಕ ಅಧಿವೇಶನದಲ್ಲಿ ವಿಜ್ಞಾನಿ ಡಾ.ಕೆ.ಟಿ. ವಿಜಯ್ ಕುಮಾರ್ ಅವರು ಜೇನು ಸಾಕಾಣಿಕೆಯನ್ನು ಉದ್ದಿಮೆಯನ್ನಾಗಿ ಪರಿವರ್ತಿಸುವ ರೀತಿ, ಜೇನು ಕುಟುಂಬಗಳು, ಜೇನು ಪೆಟ್ಟಿಗೆಗಳ ತಯಾರಿಕೆ ಮತ್ತು ಮಾರಾಟದ ಕುರಿತು ವಿವರಿಸಿದರು.