ಮೂರನೇ ಬಾರಿಗೆ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ನಾಗರಾಜ

| Published : Aug 29 2025, 01:00 AM IST

ಮೂರನೇ ಬಾರಿಗೆ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ನಾಗರಾಜ
Share this Article
  • FB
  • TW
  • Linkdin
  • Email

ಸಾರಾಂಶ

ದೇವೇಗೌಡರ ಕುಟುಂಬ ಹಾಗೂ ತಾಲೂಕಿನ ಜೆಡಿಎಸ್‌ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿರುವ ಒಕ್ಕಲಿಗ ಸಮಾಜದ ಪ್ರಭಾವಿ ಮುಖಂಡ ಎಂ.ಎ ನಾಗರಾಜ್ ಅವರಿಗೆ ಮೂರನೇ ಬಾರಿಗೆ ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನ ದೊರಕಿರುವುದು ಮಂಕಾಗಿದ್ದ ಜೆಡಿಎಸ್ ಪಾಳಯಕ್ಕೆ ಮತ್ತೆ ಶಕ್ತಿ ಬಂದಂತಾಗಿದೆ. ಈಗ ಮೂರನೇ ಬಾರಿಗೆ ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನವನ್ನು ಬೇಲೂರಿನ ಒಕ್ಕಲಿಗರ ಪ್ರಭಾವಿ ಮುಖಂಡ, ಮಾಜಿ ತಾಪಂ ಅಧ್ಯಕ್ಷ ಎಂ ಎ ನಾಗರಾಜ್ ಅವರಿಗೆ ಕೊಡುವುದರ ಮೂಲಕ ಜೆಡಿಎಸ್ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸುವತ್ತ ಪಕ್ಷದ ವರಿಷ್ಠರು, ಮುಂದಾಗಿರುವ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೇಲೂರುದೇವೇಗೌಡರ ಕುಟುಂಬ ಹಾಗೂ ತಾಲೂಕಿನ ಜೆಡಿಎಸ್‌ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿರುವ ಒಕ್ಕಲಿಗ ಸಮಾಜದ ಪ್ರಭಾವಿ ಮುಖಂಡ ಎಂ.ಎ ನಾಗರಾಜ್ ಅವರಿಗೆ ಮೂರನೇ ಬಾರಿಗೆ ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನ ದೊರಕಿರುವುದು ಮಂಕಾಗಿದ್ದ ಜೆಡಿಎಸ್ ಪಾಳಯಕ್ಕೆ ಮತ್ತೆ ಶಕ್ತಿ ಬಂದಂತಾಗಿದೆ.ಸತತ ಮೂರು ದಶಕಗಳಿಂದ ಪಕ್ಷದ ಬೆನ್ನೆಲುಬಾಗಿ ನಿಂತು ತಾಲೂಕನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡುವಲ್ಲಿ ಹಲವು ಹಿರಿಯ ಮುಖಂಡರ ಜೊತೆ ಎಂ.ಎ ನಾಗರಾಜ್ ಅವರ ಪಾತ್ರ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಜೆಡಿಎಸ್‌ನಿಂದ ಸಾಕಷ್ಟು ಮಂದಿ ಬಂದು ಹೋಗಿದ್ದರೂ ಇವರು ಮಾತ್ರ ಪಕ್ಷ ನಿಷ್ಠೆಗೆ ತಲೆಬಾಗಿ ಅಚಲವಾಗಿ ಇಲ್ಲೇ ಉಳಿದಿದ್ದಾರೆ. ಪಕ್ಷ ಅಧಿಕಾರದಲ್ಲಿ ಇರಲಿ ಬಿಡಲಿ, ಕಾರ್ಯಕರ್ತರ ಸುಖ ದುಃಖಗಳಿಗೆ ಭಾಗಿಯಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿರುವುದರ ಜೊತೆಗೆ ತಾಲೂಕಿನ ಅಭಿವೃದ್ಧಿಗೆ ಸಂಸದರ ನಿಧಿಯಿಂದ ಅತಿ ಹೆಚ್ಚಿನ ಅನುದಾನ ತರುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

ಈ ಹಿಂದೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ವಿವಿಧ ಸ್ವ ಸಹಕಾರ ಸಂಘಗಳು ಹಾಗೂ ಪುರಸಭೆಯ ಚುನಾವಣೆಗಳಲ್ಲಿ ಪಕ್ಷವು ತನ್ನದೇ ಆದ ಛಾಪು ಮೂಡಿಸಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಬೇಲೂರು ತಾಲೂಕು ಜೆಡಿಎಸ್ ಭದ್ರಕೋಟೆ ಎಂದು ಸಾಬೀತುಪಡಿಸಿತ್ತು. ಮಾಜಿ ಸಚಿವ ಎಚ್ ಡಿ ರೇವಣ್ಣ ಮತ್ತು ಪತ್ನಿ ಭವಾನಿಯವರಿಗೆ ಬೇಲೂರು ತವರು ಮನೆಯಾಗಿತ್ತು. ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಭವಾನಿ ರೇವಣ್ಣ ಕೂಡ ಉತ್ಸುಕರಾಗಿದ್ದರು. ಸರ್ಕಾರದ ಅನುದಾನ ನೀಡುವ ಸಂದರ್ಭದಲ್ಲಿ ಬೇಲೂರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಕಳೆದ ಚುನಾವಣೆಯಲ್ಲಿ ಕೆ ಎಸ್ ಲಿಂಗೇಶ್‌ರವರ ಸೋಲಿನ ಬಳಿಕ ಹಾಗೂ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದ ಜೆಡಿಎಸ್ ಭದ್ರಕೋಟೆಯಲ್ಲಿ ಬಿರುಕು ಮೂಡಿತ್ತು. ಯುವ ಕಾರ್ಯಕರ್ತರು ಪಕ್ಷದಿಂದ ದೂರವಾಗುವ ಲಕ್ಷಣಗಳು ಗೋಚರವಾಗಿತ್ತು. ಆದರೂ ಪಕ್ಷದ ಮುಖಂಡರು ಎದೆಗುಂದದೆ ಸ್ಥಳೀಯ ಸಹಕಾರಿ ಸಂಘಗಳ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದರು. ಈಗ ಮೂರನೇ ಬಾರಿಗೆ ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನವನ್ನು ಬೇಲೂರಿನ ಒಕ್ಕಲಿಗರ ಪ್ರಭಾವಿ ಮುಖಂಡ, ಮಾಜಿ ತಾಪಂ ಅಧ್ಯಕ್ಷ ಎಂ ಎ ನಾಗರಾಜ್ ಅವರಿಗೆ ಕೊಡುವುದರ ಮೂಲಕ ಜೆಡಿಎಸ್ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸುವತ್ತ ಪಕ್ಷದ ವರಿಷ್ಠರು, ಮುಂದಾಗಿರುವ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಎಂ.ಎ ನಾಗರಾಜ್ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಮತ್ತು ಇತರೆ ಎಲ್ಲಾ ನಾಯಕರ ಸಹಕಾರದಿಂದ ತಮಗೆ ನಿರ್ದೇಶಕ ಸ್ಥಾನ ದೊರೆತಿದೆ. ನನಗೆ ಹಿರಿಯರು ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಬೆನ್ನಿಗೆ ಆಸರೆಯಾಗಿ ನಿಂತು ಮುಂಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರ ಸಹಕಾರದೊಂದಿಗೆ ಶ್ರಮಿಸುವುದಾಗಿ ಹೇಳಿದರು.ತಾಲೂಕಿನ ಎಲ್ಲಾ ಕಾರ್ಯಕರ್ತರೊಂದಿಗೆ ಆತ್ಮೀಯತೆ ಹಾಗೂ ಅಭಿಮಾನಿ ಬಳಗವನ್ನು ಹೊಂದಿರುವ ಎಂ. ಎ ನಾಗರಾಜ್ ಅವರು ತಳಮಟ್ಟದಿಂದ ಪಕ್ಷವನ್ನು ಫೀನಿಕ್ಸ್ ಪಕ್ಷಿಯಂತೆ ಪುಟಿದೇಳಿಸಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸಕ್ಕೆ ಮುಂದಾಗಲಿ, ತಮಗೆ ದೊರಕಿರುವ ಸ್ಥಾನವನ್ನು ಸದುಪಯೋಗಪಡಿಸಿಕೊಳ್ಳಲಿ ಎಂಬುದು ಕಾರ್ಯಕರ್ತರ ಆಶಯವಾಗಿದೆ.