ಸಾರಾಂಶ
ಬೆಂಗಳೂರು : ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ಇದೇ ಮೊದಲ ಬಾರಿಗೆ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, 46 ಕೋಟಿ ರು.ವಹಿವಾಟು ನಡೆಸಿ ದಾಖಲೆ ಸೃಷ್ಟಿಸಿದೆ.
ಮಂಗಳವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪಂಶುಸಂಗೋಪನಾ ಸಚಿವ ಕೆ.ವೆಂಕಟೇಶ್, 2024ರ ದಸರಾ ಮತ್ತು ದೀಪಾವಳಿ ಅವಧಿಯಲ್ಲಿ 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು ಮಾರಾಟ ಮಾಡಿ 33.48 ಕೋಟಿ ರು. ವಹಿವಾಟು ದಾಖಲಿಸಿದ್ದವು. ಈ ಹಬ್ಬದ ಅವಧಿಯಲ್ಲಿ ನಂದಿನಿ ಬ್ರಾಂಡ್‌ನಡಿ ಲಭ್ಯವಿರುವ 40ಕ್ಕೂ ಹೆಚ್ಚು ಸಿಹಿ ಉತ್ಪನ್ನ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್ ಮುಂಚಿತ ಸಿದ್ಧತೆ ಕೈಗೊಂಡಿತ್ತು ಎಂದು ಹೇಳಿದರು.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2 ತಿಂಗಳು ಮುಂಚಿತವಾಗಿ ಎಲ್ಲ ಸದಸ್ಯರ ಹಾಲು ಒಕ್ಕೂಟಗಳ ಸಹಕಾರದಲ್ಲಿ ನಿಖರ ಯೋಜನೆ ರೂಪಿಸಿ ಒಂದು ಸಾವಿರ ಮೆಟ್ರಿಕ್ ಟನ್ ಮಾರಾಟದ ಗುರಿ ನಿಗದಿಪಡಿಸಲಾಗಿತ್ತು. ನಿರೀಕ್ಷೆಗೂ ಮೀರಿ ಈ ವರ್ಷ ಎಲ್ಲ ಒಕ್ಕೂಟಗಳು ಒಟ್ಟು ಸೇರಿ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ 46 ಕೋಟಿ ರು. ದಾಖಲೆಯ ವಹಿವಾಟು ಸಾಧಿಸಿವೆ. ಇದು ಮಹತ್ವದ ಮೈಲುಗಲ್ಲು. ಇದು ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೆ ಸಾಕ್ಷಿ. ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಸರಾದ ನಂದಿನಿ ಬ್ರ್ಯಾಂಡ್‌ಗೆ ಪ್ರೋತ್ಸಾಹಿಸಿದ ಎಲ್ಲ ಗ್ರಾಹಕರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಪ್ರತಿದಿನ ರಾಜ್ಯದ ವಿವಿಧ ಹೈನುಗಾರ ರೈತರಿಂದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಅದರಲ್ಲಿ ಸುಮಾರು 65 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಯುಎಚ್ ಹಾಲು ಉತ್ಪನ್ನಗಳನ್ನು ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ನಂದಿನಿ ಬ್ರಾಂಡ್ ನಡಿ 175ಕ್ಕೂ ಅಧಿಕ ಬಗೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಾಜ್ಯ, ನೆರೆರಾಜ್ಯಗಳು ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ದೆಹಲಿ, ಅಸ್ಸಾಂ ಮತ್ತು ಕೆಲ ಹೊರದೇಶಗಳ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ ಎಂದರು.
ನಂದಿನಿನ ಬೂತ್‌ನಲ್ಲಿ ಬೇರೆ ಬ್ರ್ಯಾಂಡ್ ಪದಾರ್ಥ ಮಾರಿದರೆ ಲೈಸೆನ್ಸ್ ರದ್ದು
ನಂದಿನಿ ಪಾರ್ಲರ್‌ಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೊರತುಪಡಿಸಿ ಇತರೆ ಬ್ರ್ಯಾಂಡ್‌ನ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡಿದರೆ, ಪಾರ್ಲರ್ ಮಾಲೀಕ ಪಡೆದ ಪರವಾನಗಿ ರದ್ದು ಪಡಿಸಲಾಗುವುದು. ಜೊತೆಗೆ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಯಾವುದೇ ನಕಲಿ ಉತ್ಪನ್ನಗಳು ಮಾರಾಟವಾದ ಕುರಿತು ದೂರು ಬಂದಲ್ಲಿ ಕೂಡಲೇ ಕ್ರಮಕೈಗೊಳ್ಳಲಾಗುವುದು. ಕೆಎಂಎಫ್‌ನ ಪರಿವೀಕ್ಷಣಾ ತಂಡ ಪ್ರತಿ ದಿನ ಇದನ್ನು ಪರಿಶೀಲಿಸುತ್ತಿರುತ್ತದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದರು.