ಸಾರಾಂಶ
ವಿಶೇಷ ವರದಿ
ಧಾರವಾಡ:ಗ್ರಾಮೀಣ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆ ಬರೀ ಸಮುದಾಯ ಆಧಾರಿತ ಕಾಮಗಾರಿಗಳು ಮಾತ್ರವಲ್ಲದೇ ರೈತರ ವೈಯಕ್ತಿಕ ಅಂದರೆ ಕೆರೆ ಕಾಮಗಾರಿ, ತೋಟಗಾರಿಕೆ ಬೆಳೆ ವಿಸ್ತರಣೆ ಅಂತಹ ಕೃಷಿ ಕಾಮಗಾರಿಗಳಿಗೂ ಆಸರೆಯಾಗಿದೆ.
ಈಚೆಗೆ ಮಾಧ್ಯಮ ತಂಡದ ಅಭಿವೃದ್ಧಿ ಪ್ರವಾಸ ಸಂದರ್ಭದಲ್ಲಿ ರೈತರ ಸ್ವಾವಲಂಬಿ ಜೀವನಕ್ಕೆ ಸಹಕಾರಿ ಆಗಿರುವ ನರೇಗಾ ಬಳಸಿಕೊಂಡು ರೈತರು ಕೃಷಿಯಲ್ಲಿ ಆರ್ಥಿಕವಾಗಿ ಸಬಲರಾಗಿರುವ ಮಾದರಿಗಳು ಕಂಡು ಬಂದವು.ಡ್ಯ್ರಾಗನ್ ಫ್ರೂಟ್:
ತಾಲೂಕಿನ ದುಬ್ಬನಮರಡಿ ಗ್ರಾಮದ ಅರವಿಂದ ಚವ್ಹಾಣ ಯುವ ರೈತ. ಕಳೆದ ಹತ್ತು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳದ ಬೇಸಾಯ ಮಾಡಿಕೊಂಡಿದ್ದರು. ಆದರೆ ನಿರೀಕ್ಷಿತ ಆದಾಯ ಇರಲಿಲ್ಲ. ನಂತರ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಉದ್ಯೋಗ ಖಾತರಿ ಯೋಜನೆಯಡಿ ಅರ್ಜಿ ಸಲ್ಲಿಸಿ 2022ರ ಮೇ ತಿಂಗಳಲ್ಲಿ ಒಂದು ಸಾವಿರ ಸಸಿ ನೆಟ್ಟಿದ್ದರು. ನರೇಗಾದಿಂದ ₹ 37 ಸಾವಿರ ಕೂಲಿ ಮೊತ್ತದ ಸೌಲಭ್ಯ ಪಡೆದಿದ್ದಾರೆ. ಈ ಬೆಳೆಯು ವರ್ಷದಲ್ಲಿ 4-5 ತಿಂಗಳ ವರೆಗೆ ಇಳುವರಿ ನೀಡುತ್ತಿದ್ದು ಫಲಾನುಭವಿಯು ಈ ವರೆಗೆ 50 ಕ್ವಿಂಟಲ್ ಇಳುವರಿ ಪಡೆದು ₹ 2.5 ಲಕ್ಷ ಆದಾಯ ಪಡೆದಿದ್ದಾರೆ. ಸಾಕಷ್ಟು ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ. ಕೃಷಿ, ತೋಟಗಾರಿಗೆ, ಮೀನುಗಾರಿಕೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಸಾಕಷ್ಟು ಸೌಲಭ್ಯಗಳಿದ್ದು ಅವುಗಳನ್ನು ಬಳಸಿಕೊಂಡು ಕೃಷಿ ಮಾಡಿದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ರೈತ ಅರವಿಂದ ಮಾಹಿತಿ ನೀಡಿದರು.ಪಪ್ಪಾಯಿ ಬೆಳೆದ ದಯಾನಂದ:
ಇನ್ನು, ಪಪ್ಪಾಯಿ ಬೆಳೆಯಲ್ಲಿ ದಯಾನಂದ ಎಂಬ ರೈತ ಅದ್ಭುತ ಲಾಭ ಪಡೆದಿದ್ದಾರೆ. ಮಾದನಭಾವಿ ಗ್ರಾಮದ 28 ವರ್ಷದ ದಯಾನಂದ ಹೊಳೆಹಡಗಲಿ, ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದವರು ಎಂದು ಅವರ ತೋಟಕ್ಕೆ ಭೇಟಿ ನೀಡಿದ ವೇಳೆ ತಿಳಿದು ಬಂತು. ಮೊದಲು ಕಬ್ಬು ಬೆಳೆಯುತ್ತಿದ್ದ ಅವರು, ಗ್ರಾಮ ಸಭೆಯಲ್ಲಿ ಭಾಗವಹಿಸಿ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳಿಂದ ನರೇಗಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಸಾವಯವ ರೀತಿಯಲ್ಲಿ ಪಪ್ಪಾಯಿ ಬೆಳೆಯಲು ಉತ್ಸುಕರಾದರು. 2023ರ ನವೆಂಬರ್ ನಲ್ಲಿ ಒಂದು ಎಕರೆಯಷ್ಟು ಬೆಳೆ ಬೆಳೆದಿದ್ದು ₹ 90 ಸಾವಿರದಷ್ಟು ನರೇಗಾ ಕೂಲಿ ಮೊತ್ತ ಪಡೆದಿದ್ದಾರೆ. ಇಲ್ಲಿಯ ವರೆಗೆ ಎರಡು ಬಾರಿ ಕಟಾವು ಮಾಡಿ 20 ಟನ್ ಇಳುವರಿ ಪಡೆದಿದ್ದಾರೆ. ಮಾರುಕಟ್ಟೆಯ ಬೆಲೆ ಪ್ರತಿ ಕೆಜಿಗೆ ₹ 12ರಂತೆ 20 ಟನ್‌ಗೆ ₹ 2.40 ಲಕ್ಷ ಆದಾಯ ಪಡೆದಿದ್ದಾರೆ.ಇದೇ ಮಾಧ್ಯಮ ಪ್ರವಾಸದಲ್ಲಿ ಮಾದನಭಾವಿ ಗ್ರಾಮದ ಘನ ಮತ್ತು ದ್ರವ ತ್ಯಾಜ್ಯವನ್ನು ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ (ಸ್ವಚ್ಛ ಸಂಕೀರ್ಣ ಘಟಕ)ವನ್ನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಕಸವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಒಣ ಕಸ ಸಂಗ್ರಹಣೆ ಮಾಡಿ ವಿಲೇವಾರಿ ಮಾಡಲಾಗುತ್ತಿದೆ. ಮಹಿಳಾ ಚಾಲಕಿಗೆ ಹಾಗೂ ಸಹಾಯಕಿ ತರಬೇತಿ ಪಡೆದು, ಜಯಮಾತಾ ಮಹಿಳಾ ಸಂಘದಿಂದಲೇ ಈ ಘಟಕ ನಡೆಸಲಾಗುತ್ತಿದೆ. ವಾಹನವು ಮನೆ-ಮನೆಗೂ ಹೋಗಿ ಕಸ ಸಂಗ್ರಹಣೆ ಮಾಡುತ್ತಿದೆ. ಗ್ರಾಮದ ನೈರ್ಮಲ್ಯವೂ ಕಾಪಾಡಿ ತಾವೂ ಸಹ ಆರ್ಥಿಕವಾಗಿ ಸಬಲರಾಗಲು ಯೋಜನೆ ಸಹಕಾರಿಯಾಗಿದೆ ಎನ್ನಬಹುದು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ, ಕೃಷಿ ಹೊಂಡ, ಕೃಷಿ ಬದು ನಿರ್ಮಾಣದ ಮೂಲಕ ಜಲಸಂರಕ್ಷಣೆ ಹಾಗೂ ರೈತರಿಗೆ ಸಂಪ್ರಾದಾಯಿಕ ಬೆಳೆಗಳ ಬದಲಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹಿಸಿ, ತೋಟಗಾರಿಕಾ ಬೆಳೆಗಳ ವಿಸ್ತರಣೆಗೆ ಆದ್ಯತೆ ನೀಡಲಾಗಿದೆ. ರೈತರು ನರೇಗಾ ಯೋಜನೆ ಬಳಸಿ ಆರ್ಥಿಕವಾಗಿ ಸಬಲರಾಗಲು ಮುಂದಾಬೇಕು ಎಂದು ಜಿಪಂ ಸಿಇಒ ಸ್ವರೂಪ ಟಿ.ಕೆ. ಹೇಳಿದರು.