ಸಾರಾಂಶ
ಮುಂಗಾರು ಮಳೆ ಸಂಬಂಧ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆ
--- ರಾಜ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ
- ಜೀವಹಾನಿ, ಜಾನುವಾರು ಹಾನಿಯಾದಲ್ಲಿ ಕೂಡಲೇ ವರದಿಗೆ ಸೂಚನೆ- ಮರಗಳು, ವಿದ್ಯುತ್ ತಂತಿ, ಕಂಬ ಉರುಳಿ ವಿದ್ಯುತ್ ಕಡಿತ, ಕುಡಿಯುವ ನೀರಿಗೆ ತೊಂದರೆಗೆ ತಕ್ಷಣ ಸ್ಪಂದಿಸಿ
- ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಉಪಕರಣಗಳೊಂದಿಗೆ ಸನ್ನದ್ಧಕ್ಕೆ ಆದೇಶ- ಸಹಾಯವಾಣಿಗೆ ಬರುವ ದೂರುಗಳನ್ನು ಕಡ್ಡಾಯವಾಗಿ ದಾಖಲಿಸಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸದ್ಯದಲ್ಲಿಯೇ ಮುಂಗಾರು ಆರಂಭವಾಗಲಿದ್ದು, ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದರು.
ಮುಂಗಾರು ಮಳೆ ಸಂಬಂಧ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಯಿಂದ ಜೀವಹಾನಿ, ಜಾನುವಾರು ಹಾನಿಯಾದಲ್ಲಿ ಕೂಡಲೇ ವರದಿ ನೀಡಿ, ಪರಿಹಾರ ವಿತರಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕುರಿತು ಪರಿಶೀಲಿಸಬೇಕು, ರಾಜ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಹೇಳಿದರು.ಗಾಳಿ, ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬೀಳುವ ಮರಗಳನ್ನು ಕೂಡಲೇ ತೆರವುಗೊಳಿಸಲು ಅಗತ್ಯವಿರುವ ಎಲ್ಲಾ ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಬೇಕು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದರು.ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸನ್ನದ್ಧರಾಗಿರುವಂತೆ ಗೃಹರಕ್ಷಕ ದಳ ಸಿಬ್ಬಂದಿ ಸಹ ತುರ್ತು ಸೇವೆಗೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ವ್ಯತ್ಯಯ ಉಂಟಾದಲ್ಲಿ ಕೂಡಲೇ ಸರಿಪಡಿಸಬೇಕು. ಬೀಳುವ ಪರಿಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು, ಜೊತು ಬಿದ್ದಿರುವ ವಿದ್ಯುತ್ ತಂತಿಗಳು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಿ ವಿದ್ಯುತ್ ತಂತಿಯಿಂದ ಯಾವುದೇ ಜೀವ ಹಾನಿಯಾಗದಂತೆ ಎಚ್ಚರವಹಿಸಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಜನರಿಗೆ ಅನುಕೂಲವಾಗುವಂತೆ ಕಂಟ್ರೋಲ್ ರೂಂ ಸಂಖ್ಯೆಗಳನ್ನು ಪ್ರತಿ ತಾಲೂಕುಗಳಲ್ಲಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು. ಸಹಾಯವಾಣಿಗೆ ಬರುವ ದೂರುಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಹೇಳಿದರು.ಮಳೆ, ಪ್ರವಾಹ ಸಂದರ್ಭದಲ್ಲಿ ಏನೇ ತೊಂದರೆಯಾದಲ್ಲಿ ಕೂಡಲೇ ಘಟನಾ ಸ್ಥಳಕ್ಕೆ ಹೋಗಬೇಕು. ಜೀವ, ಆಸ್ತಿ ಹಾನಿ ಯಾಗದಂತೆ ಎಚ್ಚರಿಕೆ ವಹಿಸಬೇಕು. ಮಳೆಯಿಂದಾಗಿ ಗಿಡ ಮರಗಳು, ವಿದ್ಯುತ್ ತಂತಿಗಳ ಮೇಲೆ ಉರುಳಿ ವಿದ್ಯುತ್ ಕಡಿತ, ಕುಡಿಯುವ ನೀರಿಗೆ ತೊಂದರೆಯಂತಹ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಕಂದಾಯ, ಮೆಸ್ಕಾಂ, ಅರಣ್ಯ, ಲೋಕೋಪಯೋಗಿ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳ ಮಧ್ಯೆ ಸಮನ್ವಯ ಮುಖ್ಯವಾಗಿದ್ದು ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯುವುದು ಹಾಗೂ ಸೂಕ್ಷ್ಮ ಪ್ರದೇಶದಲ್ಲಿನ ಜನರನ್ನು ಬೇರೆಡೆಗೆ ಸ್ಥಳಾಂತ ರಿಸಲು ಕ್ರಮಕೈಗೊಳ್ಳಬೇಕೆಂದು ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಗ್ರಾಮ ಪಂಚಾಯಿತಿ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸುವುದು. ತಮ್ಮ ಇಲಾಖೆ ಹಂತದಲ್ಲಿಯೂ ಸಹ ಪ್ರಾಕೃತಿಕ ವಿಕೋಪ ತಿಳಿಸುವಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದರು.ಶಾಲೆ, ಅಂಗನವಾಡಿ ಕಟ್ಟಡಗಳು ದುರಸ್ತಿಯಲ್ಲಿದ್ದರೆ ಅಂತಹ ಕಟ್ಟಡಗಳನ್ನು ಗುರುತಿಸಿ ತಕ್ಷಣ ದುರಸ್ತಿ ಪಡಿಸಲು ಕ್ರಮ ವಹಿಸಬೇಕು. ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಚಿಕ್ಕಮಗಳೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
10 ಕೆಸಿಕೆಎಂ 1ಮುಂಗಾರು ಮಳೆ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಎಎಸ್ಪಿ ಕೃಷ್ಣಮೂರ್ತಿ, ಡಿಎಫ್‌ಒ ರಮೇಶ್‌ಬಾಬು ಇದ್ದರು.