ತ್ವರಿತಗತಿ ನ್ಯಾಯದಾನಕ್ಕಾಗಿ ಅಗತ್ಯ ಕಾನೂನು ತಿದ್ದುಪಡಿ ಚಿಂತನೆ: ಸಚಿವ ಎಚ್‌.ಕೆ. ಪಾಟೀಲ

| Published : Nov 30 2024, 12:45 AM IST

ತ್ವರಿತಗತಿ ನ್ಯಾಯದಾನಕ್ಕಾಗಿ ಅಗತ್ಯ ಕಾನೂನು ತಿದ್ದುಪಡಿ ಚಿಂತನೆ: ಸಚಿವ ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಸಿವಿಲ್‌ ಪ್ರೊಸಿಷರ್‌ ಕೋಡ್‌ಗೆ ತಿದ್ದುಪಡಿ ತಂದು ಸಾಮಾನ್ಯ ಜನರ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವ ಕಾನೂನಿನಗೆ ರಾಷ್ಟ್ರಪತಿಗಳಿಂದ ಅಂಕಿತ ಪಡೆದು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ಎಚ್‌.ಕೆ. ಪಾಟೀಲ ಭರವಸೆ ನೀಡಿದರು.

ಧಾರವಾಡ: ಪ್ರಸ್ತುತ ಕಮರ್ಷಿಯಲ್‌ ನ್ಯಾಯಾಲಯದಲ್ಲಿ ತ್ವರತಗತಿಯಲ್ಲಿ ನಡೆಯುತ್ತಿರುವ ನ್ಯಾಯದಾನ ವ್ಯವಸ್ಥೆಯನ್ನು ಮನಗಂಡು ಅದೇ ಮಾದರಿಯಲ್ಲಿ ಅನ್ಯ ನ್ಯಾಯಾಲಯಗಳಲ್ಲೂ ತ್ವರಿತಗತಿಯಲ್ಲಿ ನ್ಯಾಯದಾನ ವ್ಯವಸ್ಥೆಗೆ ಕೈಗೊಳ್ಳಬೇಕಾದ ಅಗತ್ಯ ಕಾನೂನು ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಕೃಷಿ ವಿವಿಯಲ್ಲಿ ಶುಕ್ರವಾರ ನಡೆದ ರಾಜ್ಯ ಕಾನೂನು ವಿವಿ 6ನೇ ಘಟಿಕೋತ್ಸವದಲ್ಲಿ ಮಾತನಾಡಿದರು.

ನ್ಯಾಯ ವ್ಯವಸ್ಥೆಯನ್ನು ವಿಶ್ಲೇಷಿಸಿದಾಗ ಆಳವಾದ ಅಸಮಾನತೆ ಕಾಣಬಹುದು. ಕಾರ್ಪೋರೇಟ್‌ ಕಂಪನಿಗಳು ಹಾಗೂ ಶ್ರೀಮಂತರು ಅತ್ಯಂತ ದುಬಾರಿ ವಕೀಲರನ್ನು ನೇಮಿಸಿ, ತೀರ್ಪನ್ನು ತ್ವರಿತವಾಗಿ ಪಡೆಯುತ್ತಿದ್ದಾರೆ. ಬಡ ಮತ್ತು ರೈತ ಸಮುದಾಯಕ್ಕೆ ಸಂಬಂಧಿಸಿದ ಪ್ರಕರಣಗಳು ದಶಕಗಳಿಂದ ನ್ಯಾಯಾಲಯಗಳಲ್ಲಿ ಕೊಳೆಯುತ್ತಿವೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇತ್ಯರ್ಥವಾಗದೇ ರಜತ ಮಹೋತ್ಸವ, ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪ್ರಕರಣಗಳನ್ನು ಕಾಣುತ್ತಿದ್ದೇವೆ. ಆದ್ದರಿಂದ ರಾಜ್ಯ ಸರ್ಕಾರ ಸಿವಿಲ್‌ ಪ್ರೊಸಿಷರ್‌ ಕೋಡ್‌ಗೆ ತಿದ್ದುಪಡಿ ತಂದು ಸಾಮಾನ್ಯ ಜನರ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವ ಕಾನೂನಿನಗೆ ರಾಷ್ಟ್ರಪತಿಗಳಿಂದ ಅಂಕಿತ ಪಡೆದು ಅನುಷ್ಠಾನಗೊಳಿಸಲಾಗುವುದು ಎಂಬ ಭರವಸೆ ನೀಡಿದರು.

ವ್ಯಾಜ್ಯ ಮುಕ್ತ ಗ್ರಾಮ

ರಾಜ್ಯ ತನ್ನ ಒಪ್ಪಿತ ಕರ್ನಾಟಕ ಕಾನೂನು ನೀತಿ 2024ರ ಅನ್ವಯ ವ್ಯಾಜ್ಯಮುಕ್ತ ಗ್ರಾಮಗಳನ್ನು ಮಾಡುವತ್ತ ಪ್ರಥಮ ಹೆಜ್ಜೆ ಇಟ್ಟಿದೆ. ಮುಂಬರುವ ವರ್ಷಾಂತ್ಯಕ್ಕೆ ರಾಜ್ಯಾದ್ಯಂತ 100 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಿ ಜನರ ಮನೆ ಬಾಗಿಲಿಗೆ ನ್ಯಾಯದಾನ ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಸಂಸ್ಥೆಯ ಪದವೀದರರಾಗಿ ಈ ಉದಾತ್ತ ಗುರಿ ತಲುಪಲು ತಮ್ಮ ಕೊಡುಗೆ ಅಪಾರ ಎಂದರು.

ಸಂವಿಧಾನದ ಸೈನಿಕರಾಗಿ

ಭಾರತದಲ್ಲಿ ವೃತ್ತಿಗಳಲ್ಲಿ ವಕೀಲ ವೃತ್ತಿಯು ಅತ್ಯಂತ್ರ ಸ್ವತಂತ್ರವಾಗಿದೆ. ಈ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಬಳಸಿಕೊಂಡು ಪದವೀಧರರು ತಾವು ಸಂವಿಧಾನದ ಸೈನಿಕರಾಗಬೇಕು ಮತ್ತು ಸಂವಿಧಾನದಲ್ಲಿ ಮಿಡಿಯುವ ಮೌಲ್ಯಗಳ ಪ್ರತಿಪಾದಕರಾಗಬೇಕು. ನ್ಯಾಯ ಸಮಾನತೆ ಮತ್ತು ಸೇರ್ಪಡೆಗಾಗಿ ಪ್ರತಿಪಾದಿಸಲು ಇಲ್ಲಿ ಪಡೆದ ಶಿಕ್ಷಣವನ್ನು ಬಳಸಿ, ಧ್ವನಿ ಇಲ್ಲದವರ ಪರವಾಗಿ ತಾವುಗಳು ಧ್ವನಿಯಾಗಬೇಕು ಎಂದು ಪದವೀಧರರಿಗೆ ಸಲಹೆ ನೀಡಿದರು.

ಕಾನೂನು ವಿವಿಯು 15 ವರ್ಷಗಳ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇದ್ದರೂ ಸಮಾಧಾನಕರವಾಗಿದೆ. ಇದೊಂದು ಸ್ವಾವಲಂಬಿ ವಿವಿಯಾಗಿದ್ದು, ಕೆಲ ಅಡೆತಡೆಗಳ ಮಧ್ಯೆಯೂ ತನ್ನ ಕಾಲ ಮೇಲೆ ನಿಲ್ಲುವ ಶಕ್ತಿ ಬೆಳೆಸಿಕೊಂಡು ಮಾದರಿಯಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. 2024ರಿಂದ ವಿದ್ಯಾರ್ಥಿಗಳಿಗೆ ಯಾವುದೇ ಅವಕಾಶದಿಂದ ವಂಚಿತರಾಗದಂತೆ ಸ್ಪರ್ಧಾತ್ಮಕ ಹಾಗೂ ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ಸಮಯಕ್ಕೆ ವಿವಿ ಸಮರ್ಪಕಗೊಳಿಸಿದೆ. ವಿವಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಬೇಕಿದೆ. ಮುಂದಿನ ಎರಡು ವರ್ಷಗಳಲ್ಲಿ ₹80 ಕೋಟಿ ಮೌಲ್ಯದ ಮುಖ್ಯ ಕಟ್ಟಡ, ಗ್ರಂಥಾಲಯ, ವಸತಿ ನಿಲಯ ಹಾಗೂ ಇತರೆ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಸಚಿವ ಎಚ್‌.ಕೆ. ಪಾಟೀಲ ಭರವಸೆ ನೀಡಿದರು. ಕೆಲವರ ಸ್ವತ್ತಲ್ಲ

ಘಟಿಕೋತ್ಸವ ಪದವೀಧರರಿಗೆ ಬರೀ ಸಂಭ್ರಮವಾಗದೇ ಸಾಮಾನ್ಯರ ಮನೆಬಾಗಿಲಿಗೆ ನ್ಯಾಯ ತಲುಪಿಸುವ ಜವಾಬ್ದಾರಿ ಹೊಂದಿರುವ ನಾನು ಸೇರಿದಂತೆ ಎಲ್ಲರೂ ಆತ್ಮಾವಲೋಕನದ ಕ್ಷಣವಾಗಲಿ. ಕಾನೂನು ವೃತ್ತಿಪರರಾಗಿ, ನ್ಯಾಯ ಕೇವಲ ಕೆಲವರ ಸ್ವತ್ತಲ್ಲ. ಅದು ಎಲ್ಲರಿಗೂ ದಕ್ಕಬೇಕಾದ ಹಕ್ಕು ಎಂದು ಸುನಿಶ್ಚಿತಗೊಳಿಸಲು ನಿಮ್ಮ ಪಾತ್ರ ಹಿರಿದು.

ಎಚ್‌.ಕೆ. ಪಾಟೀಲ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು