ಸಾರಾಂಶ
ಕೊಪ್ಪಳ:
ಜಿಲ್ಲೆಯಾದ್ಯಂತ ಮಾವು ಬೆಳೆ ಈಗ ಕಟಾವಿಗೆ ಸಿದ್ಧವಾಗಿದೆ. ರೈತರಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದ್ದು, ವೈಜ್ಞಾನಿಕವಾಗಿ ಹಣ್ಣು ಮಾಗಿಸಿದಲ್ಲಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾವು ಕಟಾವು ಮೊದಲು ರೈತರು ಬೆಳೆದಿರುವ ಸೂಚನೆ ಗಮನಿಸಬೇಕು. ಕಾಯಿ ಕಚ್ಚಿದ ಆನಂತರ 15ರಿಂದ 16 ವಾರಗಳಲ್ಲಿ ಕಟಾವಿಗೆ ಬರುತ್ತವೆ. ಈ ಸಮಯದಲ್ಲಿ 6ರಿಂದ 8 ಕಾಯಿಗಳು ಉದುರಿ ಬೀಳುತ್ತವೆ. ಇವೆಲ್ಲವುಗಳನ್ನು ಗಮನಿಸಿ, ಸೂಕ್ತ ಸಮಯದಲ್ಲಿ ಕೊಯ್ಲು ಮಾಡಬೇಕು. 1ರಿಂದ 1.5 ಇಂಚಿನಷ್ಟು ದೇಟಿನೊಂದಿಗೆ ಕಟಾವು ಮಾಡಿ ನೆರಳಿನಲ್ಲಿ ಆರಿಸಬೇಕು.
ಮಾವು ಮಾಗಿಸುವ ಪ್ಲಾಸ್ಟಿಕ್ ಟೆಂಟ್ ವಿವರಣೆ:ಮಾವು ಮಾಗಿಸುವ ಟೆಂಟುಗಳು ಕಡಿಮೆ ಬೆಲೆಯಲ್ಲಿ ಬೆಂಗಳೂರು ಹೇಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಲಭ್ಯವಿದೆ. (080-28446815). ಈ ಟೆಂಟುಗಳು ಒಂದು ಟನ್‌ನಷ್ಟು ಹಣ್ಣುಗಳನ್ನು ಮಾಗಿಸುವ ಸಾಮರ್ಥ್ಯ ಹೊಂದಿದೆ. ಇದರ ಒಳಗಡೆ ಸುಮಾರು 750 ಕೆಜಿ ಹಣ್ಣುಗಳನ್ನು ಪ್ಲಾಸ್ಟಿಕ್ ಟ್ರೇಗಳಲ್ಲಿ ಅಳವಡಿಸಿ, ಆನಂತರ 5 ಲೀಟರ್ ನೀರಿಗೆ 10 ಮಿ.ಲೀ. ಇಥ್ರೇಲ್ ಜತೆಗೆ 2 ಗ್ರಾಂ. ಸೋಡಿಯಂ ಹೈಡ್ರಾಕ್ಸೈಡ್ ಹರಳುಗಳನ್ನು ಮಿಶ್ರಣಮಾಡಿ, ಟೆಂಟ್‌ನಲ್ಲಿಟ್ಟು ತಕ್ಷಣ ಗಾಳಿಯಾಡದಂತೆ ಸೀಲ್ ಮಾಡಬೇಕು. ಇದರ ಜತೆಗೆ ಒಂದು ಬ್ಯಾಟರಿ ಚಾಲಿತ ಫ್ಯಾನ್ ಇಡುವುದು ಹೆಚ್ಚು ಸೂಕ್ತ. ಈ ರೀತಿ ಉಪಚಾರ ಮಾಡಿದ 24 ಗಂಟೆಗಳ ನಂತರ ಟ್ರೇಗಳನ್ನು ಹೊರಗಡೆ ತೆಗೆದಿಡಬೇಕು. ಈ ರೀತಿ ಉಪಚರಿಸಿದ ಹಣ್ಣುಗಳು 4ರಿಂದ 5 ದಿನಗಳಲ್ಲಿ ಏಕರೂಪವಾಗಿ ಪಕ್ವಗೊಳ್ಳುತ್ತವೆ. ಇಂತಹ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆ ಇದೆ.
ಈ ಟೆಂಟ್ ಬೆಲೆ ಸುಮಾರು ₹4 ಸಾವಿರ ಇದ್ದು, ಯಲಬುರ್ಗಾ ತಾಲೂಕಿನ ನೆಲೊಗಲ್ ಗ್ರಾಮದ ಶ್ರೀನಿವಾಸ ಜಾಲಿಹಾಳ ತೋಟದಲ್ಲಿ ನೋಡಲು ಲಭ್ಯವಿದೆ. (8310431243). ಇಂತಹ ಹಣ್ಣುಗಳನ್ನು ಎ, ಬಿ, ಸಿ ಎಂದು ವರ್ಗಿಕರಿಸಿ ಮೆತ್ತನೆಯ ಹಾಸು (ಪೇಪರ್ ತುಂಡು ಅಥವಾ ಕಟ್ಟಿಗೆ ಹೊಟ್ಟು) ಹಾಕಿ ದೂರದ ಊರುಗಳಿಗೆ ಸಾಗಿಸಬಹುದಾಗಿದೆ. ನಿಲೋಗಲ್ ಗ್ರಾಮದಲ್ಲಿ ಮಾವು ಮಾಗಿಸುವ ಪ್ಲಾಸ್ಟಿಕ್ ಟೆಂಟ್ ಬಗ್ಗೆ ವಿಧಾನ ಪ್ರಾತ್ಯಕ್ಷಿಕೆಯನ್ನು ಮಾಡಿ ರೈತರಿಗೆ ತೋರಿಸಲಾಗಿದೆ. ಇದರ ಪ್ರಾಮುಖ್ಯತೆಯನ್ನು ಹೆಚ್ಚಿನ ರೈತರು ತಿಳಿದುಕೊಂಡು ಆದಾಯ ಹೆಚ್ಚಿಸಬೇಕೆಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ತಿಳಿಸಿದ್ದಾರೆ.