ಸಾಲಕ್ಕೆ ಸಹಕಾರಿ ಸಂಘ, ಜಮೆಗೆ ಖಾಸಗಿ ಬ್ಯಾಂಕ್ ಬೇಡ : ಸಹಕಾರಿ ಸಚಿವ ಕೆ. ಎನ್. ರಾಜಣ್ಣ ಮನವಿ

| N/A | Published : Feb 09 2025, 01:34 AM IST / Updated: Feb 09 2025, 08:43 AM IST

ಸಾರಾಂಶ

ಸಹಕಾರಿ ಆಂದೋಲನ ಆಗಲು ಯುವಕರು, ಹೊಸಬರು ಸಹಕಾರಿ ಕ್ಷೇತ್ರಕ್ಕೆ ಬರಬೇಕು. ಸಹಕಾರಿ ಇಲಾಖೆಯಲ್ಲಿ ಮೀಸಲಾತಿ ಅಳವಡಿಸುವ ಪ್ರಕ್ರಿಯೆ ನಡೆದಿದೆ. ಎಸ್‌ಸಿ-ಎಸ್‌ಟಿಯವರು ಸಹಕಾರಿ ಸಂಘದಲ್ಲಿ ಸದಸ್ಯರಾಗಬೇಕು. ಅವರ ಷೇರು ಹಣವನ್ನು ಸರ್ಕಾರವೇ ಭರಿಸುತ್ತದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಕುಕನೂರು: ಸಹಕಾರಿ ಸಂಘಗಳ ಬಲವರ್ಧನೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಸಾಲಕ್ಕೆ ಮಾತ್ರ ಸಹಕಾರಿ ಬ್ಯಾಂಕಿಗೆ ಬಂದು, ಜಮೆ ಹಾಗೂ ವಹಿವಾಟಿಗೆ ಖಾಸಗಿ ಬ್ಯಾಂಕ್ ಬಳಕೆ ಮಾಡುವ ಮನಸ್ಥಿತಿ ಬದಲಾಗಬೇಕು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಮನವಿ ಮಾಡಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಜರುಗಿದ ಸಹಕಾರಿ ಜಾಗೃತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಲೇವಾದೇವಿ ಸಾಲದ ಹೊರೆ ತಪ್ಪಿಸಲು ಸಹಕಾರಿ ಸಂಘ ಉದಯವಾದವು ಎಂಬ ಅಂಶವನ್ನು ಅವರು ನೆನಪಿಸಿದರು.

ತಾಲೂಕು ಮಟ್ಟದಲ್ಲೂ ಸಹಕಾರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು. ಇಲ್ಲಿ ಮಂಡಿಸಿರುವ ಹತ್ತು ನಿರ್ಣಯಗಳನ್ನು ಸಹಕಾರ ಇಲಾಖೆಯಲ್ಲಿ ರೋಲ್ ಮಾಡಲ್ ಆಗಿ ಪರಿಗಣಿಸಲಾಗುವುದು. ಈ ಸಾರಿ ಸಹಕಾರ ಇಲಾಖೆಗೆ ಕಡಿಮೆ ಅನುದಾನ ದೊರೆತಿದೆ. ಯಾಕೆಂದರೆ ಹೆಚ್ಚು ಹಣವನ್ನು ಕೃಷಿ ಸಾಲವನ್ನಾಗಿ ಇತರ ಬ್ಯಾಂಕ್‌ಗಳ ಮೂಲಕ ರೈತರಿಗೆ ನೀಡಿದ್ದೇವೆ ಎಂದು ರಿಸರ್ವ್‌ ಬ್ಯಾಂಕ್ ವರದಿ ನೀಡಿದೆ. ಆದರೆ ಕೃಷಿ ಸಾಲವನ್ನು ಗೋಲ್ಡ್ ಸಹ ಒತ್ತೆ ಇಟ್ಟು ಖಾಸಗಿಯವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಈ ಸಾರಿ ರಾಜ್ಯಕ್ಕೆ ಶೇ. 58 ರಷ್ಟು ಕಡಿಮೆ ಹಣ ಬಂದಿದೆ. ಗ್ರಾಮಮಟ್ಟದಲ್ಲಿ ಗ್ರಾಪಂಗೆ ಒಂದು ಸೊಸೈಟಿ ಪ್ರಾರಂಭವಾಗಬೇಕು. ಸೊಸೈಟಿ ಅಧ್ಯಕ್ಷರು ಗ್ರಾಪಂ ಸದಸ್ಯರ ರೀತಿ ಗ್ರಾಪಂ ಸಭೆಗೆ ಹಾಜರಾಗಬೇಕು ಎಂದು ಕಾನೂನು ತರಲಾಗುತ್ತಿದೆ ಎಂದು ಹೇಳಿದರು.

ಸಹಕಾರಿ ಆಂದೋಲನ ಆಗಲು ಯುವಕರು, ಹೊಸಬರು ಸಹಕಾರಿ ಕ್ಷೇತ್ರಕ್ಕೆ ಬರಬೇಕು. ಸಹಕಾರಿ ಇಲಾಖೆಯಲ್ಲಿ ಮೀಸಲಾತಿ ಅಳವಡಿಸುವ ಪ್ರಕ್ರಿಯೆ ನಡೆದಿದೆ. ಎಸ್‌ಸಿ-ಎಸ್‌ಟಿಯವರು ಸಹಕಾರಿ ಸಂಘದಲ್ಲಿ ಸದಸ್ಯರಾಗಬೇಕು. ಅವರ ಷೇರು ಹಣವನ್ನು ಸರ್ಕಾರವೇ ಭರಿಸುತ್ತದೆ ಎಂದು ರಾಜಣ್ಣ ಹೇಳಿದರು.

ಖಾಸಗಿ ಹಾಗೂ ಅನಧಿಕೃತ ಲೇವಾಲೇವಿದಾರರ ಸಾಲ ವಸೂಲಾತಿ ದಬ್ಬಾಳಿಕೆಯಿಂದ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದೆ. ಸರ್ಕಾರ ಸುಗ್ರೀವಾಜ್ಞೆ ಹೊರಡಿಸುತ್ತದೆ. ಹಾಗೆ ಪೊಲೀಸರು ಸ್ವಯಂಕೃತ ದೂರು ದಾಖಲು ಮಾಡಿಕೊಂಡು ತಪ್ಪಿತಸ್ಥರ ವಿರುದ್ಧ ಶೀಘ್ರ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಜಾಗೃತಿ ಸಮಾವೇಶ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಆರ್.ಡಿ.ಸಿ.ಸಿ. ಬ್ಯಾಂಕ್ ಪ್ರತ್ಯೇಕಿಸಿ, ಜಿಲ್ಲೆಗೆ ಹೊಸ ಡಿಸಿಸಿ ಬ್ಯಾಂಕ್ ದೊರೆಯಲಿ. ಸಹಕಾರ ಕ್ಷೇತ್ರ ಬೆಳೆಯಬೇಕು. ಹಿಂದೆ ಎಪಿಎಂಸಿ ಸಚಿವನಾಗಿದ್ದಾಗ ಎಪಿಎಂಸಿ ಕಾರ್ಯಕಾರಿ ಮಂಡಳಿಗೆ ಮೀಸಲಾತಿ ಘೋಷಣೆ ಮಾಡಿಸಿದ್ದೇನೆ. ಹಾಗೆ ಸಹಕಾರ ಇಲಾಖೆಗೆ ಮೀಸಲಾತಿ ಘೋಷಣೆ ಆಗಬೇಕು. ಈ ಸಮಾವೇಶ ಮಾಡಿರುವುದು ಹೊಸ ದಿಕ್ಕು ನೀಡಿದೆ. ರಾಯರಡ್ಡಿ ಅವರಿಂದ ಸಹಕಾರ ಕ್ಷೇತ್ರದಲ್ಲಿ ಹೊಸ ಗಾಳಿ ಬೀಸುತ್ತಿದೆ ಎಂದರು.

ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಲಾಯಿತು. ಕಾನೂನು, ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ರಾಜ್ಯ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ಅಧ್ಯಕ್ಷ ವೆಂಕಟರಾವ್‌ ನಾಡಗೌಡ, ಆರ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಚಿವ ಎಸ್.ಎಸ್. ಪಾಟೀಲ್, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಪಾ, ಸುರೇಶರಡ್ಡಿ ಮಾದಿನೂರು, ಕವಿತಾ ಗುಳಗಣ್ಣನವರ, ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ, ಪ್ರಭುಶಂಕರ, ಮಲ್ಲಿಕಾರ್ಜುನ ಪೂಜಾರ, ವಿಶ್ವನಾಥ ಮಲ್ಕೋಡ, ಚಂದ್ರಶೇಖರಯ್ಯ ಹಿರೇಮಠ, ಶೇಖರಗೌಡ ಉಳ್ಳಾಗಡ್ಡಿ, ರಾಘವೇಂದ್ರ ಜೋಷಿ ಆಚಾರ, ಕೆರಿಬಸಪ್ಪ ನಿಡಗುಂದಿ, ಯಂಕಣ್ಣ ಯರಾಶಿ ಇತರರಿದ್ದರು.