ಕೌಶಲ್ಯ ತರಬೇತಿ ಯೋಜನೆಗೆ ಅನುದಾನವಿಲ್ಲ..!
KannadaprabhaNewsNetwork | Published : Oct 10 2023, 01:00 AM IST
ಕೌಶಲ್ಯ ತರಬೇತಿ ಯೋಜನೆಗೆ ಅನುದಾನವಿಲ್ಲ..!
ಸಾರಾಂಶ
ಕೌಶಲ್ಯ ತರಬೇತಿ ಯೋಜನೆಗೆ ಅನುದಾನವಿಲ್ಲ..!ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿ ಬರೀ ಕನಸು, ಕಾರ್ಯಾದೇಶ ನೀಡದ ಸರ್ಕಾರ; ಖಾಸಗಿ ತರಬೇತಿ ಸಂಸ್ಥೆಗಳು ಅತಂತ್ರ
- ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿ ಬರೀ ಕನಸು - ಕಾರ್ಯಾದೇಶ ನೀಡದ ಸರ್ಕಾರ; ಖಾಸಗಿ ತರಬೇತಿ ಸಂಸ್ಥೆಗಳು ಅತಂತ್ರ ಮಂಡ್ಯ ಮಂಜುನಾಥ ಕನ್ನಡಪ್ರಭ ವಾರ್ತೆ ಮಂಡ್ಯ ಪಿಯುಸಿ ಮತ್ತು ಪದವಿ ನಂತರ ಕೌಶಲ್ಯ ವೃದ್ಧಿಸುವ ಜೊತೆಗೆ ಉದ್ಯೋಗಕ್ಕೆ ಪೂರಕವಾದ ಅಲ್ಪಾವಧಿ ಕೋರ್ಸ್‌ಗಳನ್ನು ಸೃಷ್ಟಿಸಿ ಗ್ರಾಮೀಣ ಯುವಕ-ಯುವತಿಯರ ಉದ್ಯೋಗ ದೊರಕಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಲಾಗಿದ್ದ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಅನುದಾನವಿಲ್ಲದೆ ಹಳ್ಳ ಹಿಡಿದಿದೆ. ಯೋಜನೆ ಹಳಿ ತಪ್ಪಿರುವುದು ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಉದ್ಯೋಗ ಭಾಗ್ಯ ಸಿಗದಂತಾಗಿದೆ. ಈ ಯೋಜನೆಯಡಿ ತರಬೇತಿ ಪಡೆದು ಉದ್ಯೋಗ ಪಡೆಯುವ ಆಕಾಂಕ್ಷೆಯೊಂದಿಗೆ ನೂರಾರು ಯುವಕ- ಯುವತಿಯರು ಕೌಶಲ್ಯ ತರಬೇತಿ ನೀಡುವ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ೨೦೨೩-೨೪ನೇ ಸಾಲಿನಲ್ಲಿ ಕೌಶಲ್ಯ ತರಬೇತಿಗೆ ಇದುವರೆಗೂ ಸರ್ಕಾರದಿಂದ ಇದುವರೆಗೂ ಕಾರ್ಯಾದೇಶವಾಗಿಲ್ಲ. ಹೀಗಾಗಿ ಕುಶಲತೆಯ ಬೆಂಬಲವಿಲ್ಲದೆ ಯುವ ಕೈಗಳಿಗೆ ಬಲವನ್ನು ತುಂಬಲಾಗುತ್ತಿಲ್ಲ. ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಕೌಶಲ ತರಬೇತಿ ನೀಡುವ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಿದ್ದರೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಅನುಮೋದನೆ ಮಾತ್ರ ದೊರಕಿಲ್ಲ. ಸರ್ಕಾರವನ್ನು ನಂಬಿ ಲಕ್ಷಾಂತರ ರು. ಬಂಡವಾಳ ಹೂಡಿ ತರಬೇತಿ ನೀಡಿದ ಸಂಸ್ಥೆಗಳು ಇದೀಗ ಅತಂತ್ರ ಸ್ಥಿತಿ ತಲುಪಿವೆ. ಏನೆಲ್ಲಾ ಕೋರ್ಸ್‌ಗಳಿವೆ? ಹೊಲಿಗೆ, ಕಂಪ್ಯೂಟರ್, ಫ್ಯಾಷನ್ ಡಿಸೈನಿಂಗ್, ಎಂಬ್ರಾಯಿಡರಿಂಗ್, ಡೊಮೆಸ್ಟಿಕ್ ಐಟಿ ಹೆಲ್ಪ್ ಡೆಸ್ಕ್ ಅಟೆಂಡೆಂಟ್, ಡೇಟಾ ಎಂಟ್ರಿ ಆಪರೇಟರ್, ಜೂನಿಯರ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಫೀಲ್ಡ್ ಟೆಕ್ನೀಷಿಯನ್, ಸೋಲಾರ್ ಪ್ಯಾನಲರ್ ಇನ್‌ಸ್ಟಾಲೈಸೇಷನ್ ಸೇರಿದಂತೆ ಹಲವು ಅಲ್ಪಾವಧಿ ಕೋರ್ಸ್‌ಗಳನ್ನು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಉದ್ಯಮಶೀಲತೆ ಇಲಾಖೆ ಮೂಲಕ ಕೌಶಲ್ಯ ತರಬೇತಿ ನೀಡುವ ಸಂಸ್ಥೆಗಳಿಂದ ಉಚಿತವಾಗಿ ಯುವಕ-ಯುವತಿಯರಿಗೆ ನೀಡಲಾಗುತ್ತಿತ್ತು. ಈ ಎಲ್ಲ ಕೋರ್ಸ್‌ಗಳ ಅವಧಿಯೂ ೩ ತಿಂಗಳು ಮಾತ್ರವಿದ್ದು, ಕರ್ನಾಟಕ ಕೌಶಲ್ಯಾಭಿವೃದ್ಧಿ ಮಂಡಳಿಯಿಂದ ಪ್ರಮಾಣಪತ್ರ ನೀಡಲಾಗುತ್ತಿತ್ತು. ಇದರೊಂದಿಗೆ ವಾರ್ಷಿಕ ೫ ಲಕ್ಷ ಯುವಜನರಿಗೆ ಉದ್ಯೋಗ ಒದಗಿಸುವ ಉದ್ದೇಶವನ್ನು ಒಳಗೊಂಡಿತ್ತು. ಜಿಲ್ಲೆಯಲ್ಲಿ ೧೧ ತರಬೇತಿ ಕೇಂದ್ರಗಳು: ೨೦೨೨-೨೩ರಲ್ಲಿ ಮಂಡ್ಯ ಜಿಲ್ಲೆಯ ಮಂಡ್ಯದಲ್ಲಿ ೫, ಮದ್ದೂರು-೧, ಶ್ರೀರಂಗಪಟ್ಟಣ-೨, ಪಾಂಡವಪುರ-೨ ಮತ್ತು ನಾಗಮಂಗಲದಲ್ಲಿ ೧ ತರಬೇತಿ ಕೇಂದ್ರ ಸೇರಿದಂತೆ ೧೧ತರಬೇತಿ ಕೇಂದ್ರಗಳು ಅಭ್ಯರ್ಥಿಗಳಿಗೆ ತರಬೇತಿ ನೀಡಿವೆ. ಒಂದೊಂದು ಕೇಂದ್ರ ೧೨೦ ಅಭ್ಯರ್ಥಿಗಳಂತೆ ೧೩೨೦ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಅಲ್ಲದೆ, ತರಬೇತಿ ಪಡೆದ ಅಭ್ಯರ್ಥಿಗಳ ಪೈಕಿ ಸುಮಾರು ೬೫೦ಕ್ಕೂ ಹೆಚ್ಚು ಜನರಿಗೆ ವಿವಿಧೆಡೆ ಉದ್ಯೋಗವಕಾಶಗಳನ್ನು ಸೃಷ್ಟಿಸಿಕೊಡಲಾಗಿದೆ. ನುರಿತ ತರಬೇತುದಾರರಿಲ್ಲ: ಸರ್ಕಾರಿ ಸ್ವಾಮ್ಯದ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಮತ್ತು ಸರ್ಕಾರಿ ಸಹಭಗಿತ್ವದ ಕರ್ನ್ಟಾಕದ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಕೆಜಿಟಿಟಿಐ)ಗಳಲ್ಲೂ ಇನ್ನೋವೇಶನ್ ಅಂಡ್ ಡಿಸೈನ್, ಫಂಡಮೆಂಟಲ್ಸ್ ಅಂಡ್ ಪ್ರೊಡಕ್ಟವಿಟಿ ಟೂಲ್ಸ್, ಕಂಪ್ಯೂಟರ್ ಏಡನ್ ಮ್ಯಾನುಫ್ಯಾಕ್ಚರಿಂಗ್, ಎಲೆಕ್ಟ್ರಿಕ್ ವೆಹಿಕಲ್ ವೆಲ್ಡಿಂಗ್ ಸೇರಿದಂತೆ ೨೩ ಕೋರ್ಸ್‌ಗಳಿಗೆ ಅಗತ್ಯ ಉಪಕರಣಗಳಿದ್ದರೂ ತರಬೇತುದಾರರ ಕೊರತೆ ಇದೆ. ಇಲ್ಲಿ ದಾಖಲಾಗುವ ಅಭ್ಯರ್ಥಿಗಳ ಸಂಖ್ಯೆಯೂ ಕಡಿಮೆ ಇದೆ. ಲಕ್ಷಾಂತರ ರು. ಬಂಡವಾಳ ಹೂಡಿಕೆ: ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ ನೋಂದಣಿ ಮಾಡಿಸಿಕೊಂಡು ತರಬೇತಿ ನೀಡಿರುವ ಸಂಸ್ಥೆಗಳು ಸರ್ಕಾರವನ್ನು ನಂಬಿಕೊಂಡು ಕನಿಷ್ಠ ೧೦ ರಿಂದ ೨೦ ಲಕ್ಷ ರು. ಬಂಡವಾಳ ಹೂಡಿ ಕೇಂದ್ರಗಳನ್ನು ತೆರೆದಿದ್ದಾರೆ. ವಿವಿಧ ಕೋರ್ಸ್‌ಗಳಿಗೆ ತರಬೇತಿ ನೀಡುವುದಕ್ಕೆ ಹಣ ಕೊಟ್ಟು ಅನುಮತಿಯನ್ನೂ ದೊರಕಿಸಿಕೊಂಡಿದ್ದಾರೆ. ಇದೀಗ ಕೌಶಲ್ಯ ತರಬೇತಿಗೆ ಕಾರ್ಯಾದೇಶ ನೀಡದೆ ಕೈಬಿಟ್ಟಿರುವುದರಿಂದ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಈಗ ರಾಜ್ಯದ ತರಬೇತಿ ಕೇಂದ್ರದವರೆಲ್ಲರೂ ಒಗ್ಗೂಡಿ ಹೋರಾಟಕ್ಕಿಳಿದಿದ್ದಾರೆ. ಕೇಂದ್ರವನ್ನು ತೆರೆಯುವುದಕ್ಕೆ ಕಂಪ್ಯೂಟರ್, ಹೊಲಿಗೆ ಯಂತ್ರ, ಎಂಬ್ರಾಯಿಡರಿ ಮಿಷನ್, ಸೀಸಿ ಕ್ಯಾಮರಾ ಖರೀದಿಸಿ ಅಭ್ಯರ್ಥಿಗಳ ತರಬೇತಿಗೆ ಅನುಕೂಲವಾಗುವಂತೆ ನುರಿತ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ವೇತನ, ಕಟ್ಟಡದ ಬಾಡಿಗೆ, ಇಂಟರ್‌ನೆಟ್, ನಿರ್ವಹಣಾ ವೆಚ್ಚ ಸೇರಿ ತಿಂಗಳಿಗೆ ೫೦ ಸಾವಿರ ರು.ನಿಂದ ೬೦ ಸಾವಿರ ರು. ಖರ್ಚಾಗಿದೆ. ಈಗ ಏಕಾಏಕಿ ತರಬೇತಿಗೆ ಕಾರ್ಯಾದೇಶ ನೀಡದೆ ಸರ್ಕಾರಿ ಸಂಸ್ಥೆಗಳಲ್ಲೇ ತರಬೇತಿ ನೀಡುವುದಾಗಿ ಹೇಳುತ್ತಿರುವುದು ತರಬೇತಿ ಕೇಂದ್ರದವರನ್ನು ವಂಚಿಸಿದಂತಾಗಿದೆ ಎಂದು ಹೆಸರೇಳಲಿಚ್ಚಿಸದ ತರಬೇತಿ ಕೇಂದ್ರದವರ ಅಳಲಾಗಿದೆ. ನೂರಾರು ಅರ್ಜಿಗಳು: ಉಚಿತವಾಗಿ ಸಿಗುವ ತರಬೇತಿಯನ್ನು ಪಡೆಯುವುದಕ್ಕೆ ನಿರುದ್ಯೋಗಿ ಯುವಕ-ಯುವತಿಯರಿಂದ ನೂರಾರು ಅರ್ಜಿಗಳು ಬಂದಿವೆ. ಅದರಲ್ಲೂ ಜಿಲ್ಲೆಯಲ್ಲಿ ಮತ್ತು ಹೊರಗೆ ಗಾರ್ಮೆಂಟ್ಸ್‌ಗಳು ಹೆಚ್ಚಿರುವುದರಿಂದ ಹೊಲಿಗೆ, ಎಂಬ್ರಾಯಿಡರಿಂಗ್‌ಗೆ ಹೆಚ್ಚು ಯುವತಿಯರು ಅರ್ಜಿ ಸಲ್ಲಿಸುತ್ತಿದ್ದಾರೆ. ಸರ್ಕಾರದ ಕಾರ್ಯಾದೇಶವಿಲ್ಲದೆ ತರಬೇತಿ ನೀಡಲಾಗುತ್ತಿಲ್ಲ. ಅರ್ಜಿಗಳನ್ನು ಪಡೆದು ಕೇಂದ್ರದವರು ಸಂಗ್ರಹಿಸಿಡುತ್ತಿದ್ದರೆ, ಅಭ್ಯರ್ಥಿಗಳು ನಿತ್ಯ ಕೇಂದ್ರಗಳಿಗೆ ಬಂದು ವಾಪಸ್ ತೆರಳುತ್ತಿದ್ದಾರೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆಗೂ ಗ್ರಹಣ: ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದ ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಗೂ ಗ್ರಹಣ ಹಿಡಿದಿದೆ. ಈ ಯೋಜನೆಯಡಿ ಯುವಜನರಿಗೆ ನೀಡಲಾಗುತ್ತಿದ್ದ ಉದ್ಯಮಾಧಾರಿತ ಕೌಶಲ್ಯ ತರಬೇತಿಯೂ ಸ್ಥಗಿತಗೊಂಡಿದೆ. ಶಾಲಾ-ಕಾಲೇಜುಗಳನ್ನು ಬಿಟ್ಟ ಅಥವಾ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಪಡೆಯಲು ಅನುಕೂಲವಾಗುಯವಂತೆ ಆಯ್ದ ತರಬೇತಿ ಕೇಂದ್ರಗಳು ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟಿನ (ಎನ್‌ಎಸ್‌ಕ್ಯೂಎಫ್) ಪ್ರಕಾರ ತರಬೇತಿ ನೀಡುವ ಜೊತೆಗೆ ಮೃದು ಕೌಶಲ, ಉದ್ಯಮಶೀಲತೆ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ ವಿಷಯದಲ್ಲಿ ತರಬೇತಿ ನೀಡುವುದಲ್ಲದೆ, ತರಬೇತಿ ಮತ್ತು ಮೌಲ್ಯಮಾಪನ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಆದರೆ, ಇದರಡಿ ಕೂಡ ಯಾವುದೇ ತರಬೇತಿಯೂ ನಡೆಯುತ್ತಿಲ್ಲವಾಗಿದೆ. ------------ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಖಾಸಗಿ ತರಬೇತಿ ಕೇಂದ್ರಗಳು ನೀಡಿರುವ ತರಬೇತಿಯ ವಿವರಗಳನ್ನೆಲ್ಲಾ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದುವರೆಗೆ ನಮಗೆ ಯಾವುದೇ ಕಾರ್ಯಾದೇಶ ಬಂದಿಲ್ಲ. ಈ ತರಬೇತಿಯನ್ನು ಐಟಿಐ, ಪಾಲಿಟೆಕ್ನಿಕ್, ಜಿಟಿಟಿಸಿಗಳಿಂದ ಕೊಡಿಸಬೇಕೆಂಬ ಚಿಂತನೆ ನಡೆಯುತ್ತಿದೆ. ಇನ್ನೂ ಯಾವುದೂ ಅಂತಿಮವಾಗಿಲ್ಲ. ಹಾಗಾಗಿ ಯಾವುದೇ ತರಬೇತಿ ನೀಡಲಾಗುತ್ತಿಲ್ಲ. ಪಿಎಂಕೆವಿವೈ ಯೋಜನೆಯಡಿಯೂ ಸದ್ಯಕ್ಕೆ ತರಬೇತಿ ನೀಡಲಾಗುತ್ತಿಲ್ಲ. - ನಾಗಾನಂದ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಮಂಡ್ಯ