ಸಾರಾಂಶ
ಭದ್ರಾವತಿ : ಈದ್ ಮಿಲಾದ್ ಮೆರವಣಿಗೆ ವೇಳೆ ಕೆಲವು ಕಿಡಿಗೇಡಿಗಳು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ.
ನಗರದಲ್ಲಿ ಸೋಮವಾರ ಈದ್ ಮಿಲಾದ್ ಕಾರ್ಯಕ್ರಮವೊಂದರ ವೇಳೆ ಶಾಸಕ ಸಂಗಮೇಶ್ವರ್, ‘ಮುಂದಿನ ಜನ್ಮದಲ್ಲಿ ನನಗೆ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ’ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಸಂಜೆ ನಡೆದ ಮೆರವಣಿಗೆ ವೇಳೆ ಇಂಥದ್ದೊಂದು ಘೋಷಣೆ ಕೂಗಲಾಗಿದೆ.
ಸಂಜೆ 7.30ರ ವೇಳೆಗೆ ಮೆರವಣಿಗೆ ನಗರದ ಮಹಾತ್ಮಗಾಂಧಿ ವೃತ್ತದ (ಟಿ.ಕೆ.ರಸ್ತೆ) ಬಳಿ ಬಂದಾಗ ಕೆಲ ಕಿಡಿಗೇಡಿಗಳು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ. ಸುಮಾರು 12 ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ವಿಡಿಯೋದ ನೈಜತೆ ಕುರಿತು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಮೂವರು ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದೆ.
ಈ ಮಧ್ಯೆ, ಘಟನೆ ಖಂಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಮಾಧವಾಚಾರ್ಯ ವೃತ್ತದ ಬಳಿ ವಾಹನಗಳನ್ನು ತಡೆದು, ಆಕ್ರೋಶ ವ್ಯಕ್ತಪಡಿಸಿದರು. ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಇದರಿಂದಾಗಿ ನಗರದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.