ಪೋಷಕರು ಮತ್ತು ಶಿಕ್ಷಕರು ತಮ್ಮ ಪ್ರತಿಷ್ಠೆಗೋಸ್ಕರ ಮಕ್ಕಳ ಮೇಲೆ ನಿರಂತರ ಹೊರೆ: ಸಮ್ಮೇಳನ ಸರ್ವಾಧ್ಯಕ್ಷೆ ಕು.ಕೆ.ಎಂ.ಅಪೇಕ್ಷ

| Published : Jan 17 2025, 12:45 AM IST

ಪೋಷಕರು ಮತ್ತು ಶಿಕ್ಷಕರು ತಮ್ಮ ಪ್ರತಿಷ್ಠೆಗೋಸ್ಕರ ಮಕ್ಕಳ ಮೇಲೆ ನಿರಂತರ ಹೊರೆ: ಸಮ್ಮೇಳನ ಸರ್ವಾಧ್ಯಕ್ಷೆ ಕು.ಕೆ.ಎಂ.ಅಪೇಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯಕ್ಕೆ ಹೆಚ್ಚು ಒಲವು ನೀಡಿದರೆ ನಮ್ಮ ಭಾಷೆಯನ್ನು ಉನ್ನತೀಕರಿಸಲು ಸಾಧ್ಯವಾಗುತ್ತದೆ. ಯಾವ ವ್ಯಕ್ತಿ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೋ ಅಂತಹ ವ್ಯಕ್ತಿ ಉತ್ತಮ ಸಮಾಜ ನಿರ್ಮಿಸುತ್ತಾನೆ. ಮಕ್ಕಳ ಜನಪದ ಗೀತೆ, ಸಣ್ಣ ಕಥೆ, ಕಾದಂಬರಿ, ನಾಟಕ ಮುಂತಾದವುಗಳು ಬೆಳೆಯಲು ಮಕ್ಕಳ ಸಾಹಿತ್ಯ ಸಮ್ಮೇಳನಗಳು ಅವಕಾಶ ಕೊಡುತ್ತವೆ. ಅಂತಹ ಕಾರ್ಯಕ್ಕೆ ಇಂದಿನ ಎಳೆಯ ಮಕ್ಕಳನ್ನು ಸಿದ್ಧಗೊಳಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಜಾನಪದ ಪರಂಪರೆಯಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಕಾಣಬಹುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪೋಷಕರು ಮತ್ತು ಶಿಕ್ಷಕರು ತಮ್ಮ ಪ್ರತಿಷ್ಠೆಗೋಸ್ಕರ ಮಕ್ಕಳ ಮೇಲೆ ನಿರಂತರವಾಗಿ ಹೊರೆಯನ್ನು ಹಾಕುತ್ತಿದ್ದಾರೆ. ಮಕ್ಕಳು ತೆಗೆಯುವ ಅಂಕಗಳ ಮೇಲೆ ಅವರ ವ್ಯಕ್ತಿತ್ವವನ್ನು ಅಳೆಯುವ ಪರಿಸ್ಥಿತಿಗೆ ನಾವು ತಲುಪಿದ್ದೇವೆ ಎಂದು ಪಾಂಡವಪುರ ತಾಲೂಕಿನ ಚಿನಕುರಳಿ ಎಸ್‌ಟಿಜೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ಸಮ್ಮೇಳನ ಸರ್ವಾಧ್ಯಕ್ಷೆ ಕು.ಕೆ.ಎಂ.ಅಪೇಕ್ಷ ವಿಷಾಧ ವ್ಯಕ್ತಪಡಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 80ನೇ ಜಯಂತ್ಯುತ್ಸವ ಹಾಗೂ 12ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಂದು ಮಗುವಿನಲ್ಲೂ ಸಹ ಒಂದಲ್ಲೊಂದು ವಿಶೇಷ ಸಾಮರ್ಥ್ಯ, ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಲೆಂದು ಮಕ್ಕಳು ಕಾಯುತ್ತಿರುತ್ತಾರೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಮಾತ್ರ ಮಕ್ಕಳು ಉನ್ನತಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸಬೇಡಿ:

ಇಲ್ಲಿ ಯಾರೂ ಸಹ ದಡ್ಡರಲ್ಲ. ಅಂತೆಯೇ ಎಲ್ಲರೂ ಸಹ ಬುದ್ಧಿವಂತರಲ್ಲ. ಅವರಿಗೆ ಸಿಗುವ ಅವಕಾಶಗಳ ಮೇಲೆ ಅವುಗಳು ಅವಲಂಬಿತವಾಗಿರುತ್ತವೆ. ಮಕ್ಕಳನ್ನು ಕೇವಲ ಪುಸ್ತಕದ ಹುಳುಗಳನ್ನಾಗಿಸಬೇಡಿ. ಮಕ್ಕಳು ಶಾಲಾ ಕಾಲೇಜುಗಳಲ್ಲಿ ಒದಗಿಸುವ ಪುಸ್ತಕಗಳಿಗಷ್ಟೇ ಸೀಮಿತರಾಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನೂ ಸಹ ಗಳಿಸುತ್ತಾರೆ. ಆದರೆ ನಮ್ಮ ರಾಷ್ಟ್ರದಲ್ಲಿ ಕೆಲವರು ಉತ್ತಮ ಅಂಕ ಪಡೆದಿದ್ದರೂ ಕೂಡ ಕೇವಲ ಪುಸ್ತಕದ ಹುಳುಗಳಾಗಿ ಕ್ರಿಯಾಶೀಲತೆಯ ಕೊರತೆಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಕಡಿಮೆ ಅಂಕ ಪಡೆಯುವ ಮಕ್ಕಳು ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನೂ ಕಲಿಸಬೇಕು. ಆಗ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಹೇಳಿದರು.

ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಿರಿ:

ಮೊಬೈಲ್ ಎಂಬ ಮಾಯಾಜಾಲ ಬಂದಾಗಿನಿಂದ ಮಕ್ಕಳಿಗೆ ಒಂದು ಸುಂದರವಾದ ಜಗತ್ತು ನಮ್ಮ ಮುಂದಿದೆ ಎಂಬ ಕಲ್ಪನೆಯೂ ಇಲ್ಲದಂತಾಗಿದೆ. ಪುಸ್ತಕ ಹಿಡಿದು ತಲೆ ತಗ್ಗಿಸಿ ಓದಿದರೆ ಮುಂದೆ ತಲೆ ಎತ್ತಿ ನಿಲ್ಲಬಹುದು. ಅದೇ ತಲೆ ತಗ್ಗಿಸಿ ಮೊಬೈಲ್ ಹಿಡಿದರೆ ಮುಂದೆಂದೂ ತಲೆ ಎತ್ತದಂತಾಗುತ್ತದೆ ಎಂದರು.

ಕನ್ನಡಕ್ಕೆ ಮೊದಲ ಆದ್ಯತೆ:

ಪೋಷಕರು ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮವನ್ನೇ ಹೆಚ್ಚಾಗಿ ತೋರಿಸುತ್ತಿದ್ದಾರೆ. ಎಲ್ಲಾ ಭಾಷೆಗಳನ್ನು ಕಲಿಯೋಣ. ಆದರೆ ಮೊದಲ ಆದ್ಯತೆಯನ್ನು ಕನ್ನಡ ಭಾಷೆಗೆ ನೀಡೋಣ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹ ಕನ್ನಡವನ್ನು ಅಳಿವಿನ ಅಂಚಿಗೆ ಕೊಂಡೊಯ್ಯದೆ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಕೂಡಿ ಮಾಡಬೇಕಿದೆ. ಇದು ಅಗಬೇಕೆಂದರೆ ಮೊದಲು ನಾವು ಕನ್ನಡವನ್ನು ಬಳಸಬೇಕು ಎಂದರು.

ಮಕ್ಕಳಿಗೆ ಉತ್ತಮ ಅವಕಾಶ:

ಸಾಹಿತ್ಯಕ್ಕೆ ಹೆಚ್ಚು ಒಲವು ನೀಡಿದರೆ ನಮ್ಮ ಭಾಷೆಯನ್ನು ಉನ್ನತೀಕರಿಸಲು ಸಾಧ್ಯವಾಗುತ್ತದೆ. ಯಾವ ವ್ಯಕ್ತಿ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೋ ಅಂತಹ ವ್ಯಕ್ತಿ ಉತ್ತಮ ಸಮಾಜ ನಿರ್ಮಿಸುತ್ತಾನೆ. ಮಕ್ಕಳ ಜನಪದ ಗೀತೆ, ಸಣ್ಣ ಕಥೆ, ಕಾದಂಬರಿ, ನಾಟಕ ಮುಂತಾದವುಗಳು ಬೆಳೆಯಲು ಮಕ್ಕಳ ಸಾಹಿತ್ಯ ಸಮ್ಮೇಳನಗಳು ಅವಕಾಶ ಕೊಡುತ್ತವೆ. ಅಂತಹ ಕಾರ್ಯಕ್ಕೆ ಇಂದಿನ ಎಳೆಯ ಮಕ್ಕಳನ್ನು ಸಿದ್ಧಗೊಳಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಜಾನಪದ ಪರಂಪರೆಯಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಕಾಣಬಹುದು ಎಂದು ತಿಳಿಸಿದರು.

ಜಿಲ್ಲೆಯ ಹಲವು ಮಹನೀಯರು ಸಾಹಿತ್ಯ ಕೃಷಿ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾವು ಹಿರಿಯರ ಸಾಹಿತ್ಯ ಸಮ್ಮೇಳನವನ್ನು ನೋಡುತ್ತಿದ್ದೆವು. ಶ್ರೀಮಠದ ಪೀಠಾಧ್ಯಕ್ಷರು ಮಕ್ಕಳಿಗಾಗಿ ಮಕ್ಕಳಲ್ಲಿರುವ ಪ್ರತಿಭೆ ಹೊರತರುವ ಉದ್ದೇಶದಿಂದ ಕಳೆದ 20 ವರ್ಷಗಳಿಂದ ಇಂತಹ ಸಮ್ಮೇಳನ ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.