ಮಕ್ಕಳ ಭಾವನೆಗಳಿಗೆ ಪಾಲಕರು ಸ್ಪಂದಿಸಲಿ: ದಿವ್ಯಪ್ರಭು

| Published : Jul 15 2025, 11:45 PM IST

ಮಕ್ಕಳ ಭಾವನೆಗಳಿಗೆ ಪಾಲಕರು ಸ್ಪಂದಿಸಲಿ: ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರು ಬಾಲ್ಯ ವಿವಾಹವನ್ನು ಮಾಡುವ ಮುಂಚೆ ಒಂದು ಸಾರಿ ಮಕ್ಕಳ ಮನಸ್ಥಿತಿ, ಮಾನಸಿಕ ಸ್ಥಿತಿ, ದೈಹಿಕವಾಗಿ ಅವರ ಮೇಲೆ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳಬೇಕು.

ಧಾರವಾಡ: ತಮ್ಮದಲ್ಲದ ತಪ್ಪಿಗೆ ಪರಿತಪಿಸುತ್ತಿರುವ ಹಾಗೂ ದೌರ್ಜನ್ಯಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿರುವ ಬಾಲ ಸಂತ್ರಸ್ತೆಯರೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಂಗಳವಾರ ನೇರ ಸಂವಾದದ ಮೂಲಕ ಮಾತನಾಡಿದರು. ಜತೆಗೆ ಅವರ ಪಾಲಕರಿಗೆ ಧೈರ್ಯ ತುಂಬಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಪ್ರೋತ್ಸಾಹ ನೀಡಿದರು.

ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಪಂ ಭವನದಲ್ಲಿ ಆಯೋಜಿಸಿದ್ದ ಅತ್ಯಾಚಾರ, ಪೋಕ್ಸೋ, ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿ ಸಂತ್ರಸ್ತೆಯರು ಮತ್ತು ಅವರ ಪಾಲಕರೊಂದಿಗೆ ಸಂವಾದ ಮತ್ತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿಗಳು, ನೇರ ಸಂವಾದ ನಡೆಸಿದರು.

ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಲೈಂಗಿಕ ಶಿಕ್ಷಣದ ಅಗತ್ಯವಿದೆ. ವಿಶೇಷವಾಗಿ 13 ರಿಂದ 19 ವರ್ಷದವರೆಗೆ ಹೆಣ್ಣು ಮತ್ತು ಗಂಡು ಎಂಬ ವ್ಯತ್ಯಾಸವಿಲ್ಲದೆ ಅವರಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುತ್ತವೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ತಿಳುವಳಿಕೆ, ಮಾಹಿತಿ, ಆಪ್ತತೆ ಅಗತ್ಯವಿದ್ದು, ಪಾಲಕರು ಹೆಚ್ಚು ಸಮಯವನ್ನು ಮಕ್ಕಳೊಂದಿಗೆ ಕಳೆದು ಅವರ ಭಾವನೆಗಳಿಗೆ, ಕುತೂಹಲಗಳಿಗೆ ಸ್ಪಂದಿಸಬೇಕು ಎಂದರು.

ಪೋಷಕರು ಬಾಲ್ಯ ವಿವಾಹವನ್ನು ಮಾಡುವ ಮುಂಚೆ ಒಂದು ಸಾರಿ ಮಕ್ಕಳ ಮನಸ್ಥಿತಿ, ಮಾನಸಿಕ ಸ್ಥಿತಿ, ದೈಹಿಕವಾಗಿ ಅವರ ಮೇಲೆ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ಮದುವೆ ಮಾಡಿದರೆ ಭಾರ ಕಡಿಮೆ ಆಗುತ್ತದೆ ಎಂಬ ಮನಸ್ಥಿತಿಯಿಂದ ಪೋಷಕರು ಹೊರ ಬರಬೇಕು ಎಂದ ಅವರು, ಪೋಷಕರು ಮಕ್ಕಳೊಂದಿಗೆ ಮನಸ್ಸು ಬಿಚ್ಚು ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಗಂಡು- ಹೆಣ್ಣು ಎಂದು ಭೇದ ಭಾವ ಮಾಡದೆ, ಅವರಿಗೆ ಅರಿವು ಮೂಡಿಸಬೇಕು. ಗಂಡು ಮಕ್ಕಳಿಗೂ ಕೂಡ ಸಮಾಜದಲ್ಲಿ ಹೆಣ್ಣು ಮಕ್ಕಳೊಂದಿಗೆ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂಬುದನ್ನು ತಿಳಿ ಹೇಳಬೇಕು ಎಂದರು.

ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ತಂಡವು ಪೋಷಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ತಿಳಿಸುತ್ತದೆ. ಬಾಲ್ಯ ವಿವಾಹ ಮಾಡುವುದು ಕಾನೂನುಬಾಹಿರ ಮತ್ತು ಅದಕ್ಕೆ ಕಠಿಣ ಶಿಕ್ಷೆ ಇದೆ. ಪೋಷಕರು ಒಪ್ಪದಿದ್ದರೆ ಅಥವಾ ಬಾಲಕಿಯ ರಕ್ಷಣೆ ಅಗತ್ಯವಿದ್ದರೆ, ಅವಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ. ಬಾಲಕಿಗೆ ಸಖಿ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ನೀಡಿ, ಆಪ್ತಸಮಾಲೋಚನೆ ನಡೆಸಿ, ಅವಳ ಶಿಕ್ಷಣ ಮುಂದುವರಿಸಲು ಬೇಕಾದ ಎಲ್ಲಾ ನೆರವು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ಥ ಮಗುವಿಗೆ ಧೈರ್ಯ ತುಂಬಿ, ನ್ಯಾಯ ಒದಗಿಸುವ ಪ್ರಕ್ರಿಯೆಯಲ್ಲಿ ಸಖಿ ಕೇಂದ್ರ ಪ್ರಮುಖ ಪಾತ್ರ ವಹಿಸುತ್ತದೆ. ಸಂತ್ರಸ್ಥ ಮಗು ಯಾವುದೇ ಭಯವಿಲ್ಲದೆ, ಮುಕ್ತವಾಗಿ ಮಾತನಾಡಲು, ಸಖಿ ಕೇಂದ್ರವು ಸುರಕ್ಷಿತ ಮತ್ತು ಸ್ನೇಹಪರ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಮತ್ತು ಗಂಭೀರ ಸಮಸ್ಯೆಗಳನ್ನು ಕೇವಲ ತಡೆಗಟ್ಟುವುದಲ್ಲದೆ, ಸಂತ್ರಸ್ತರಿಗೆ ಮಾನಸಿಕ, ಸಾಮಾಜಿಕ, ಕಾನೂನಾತ್ಮಕ ಮತ್ತು ವೈದ್ಯಕೀಯ ನೆರವನ್ನು ಒಂದೇ ಸ್ಥಳದಲ್ಲಿ ಒದಗಿಸಿ, ಅವರು ಮತ್ತೆ ಸಹಜ ಜೀವನಕ್ಕೆ ಮರಳಲು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವೈ. ಪಾಟೀಲ ಮಾತನಾಡಿ, ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳಿಗೆ ಮತ್ತು ಸಂತ್ರಸ್ತೆಯರಿಗೆ ನಿಯಮಾನುಸಾರ ತಕ್ಷಣ ಸ್ಪಂದಿಸಿ, ಆಶ್ರಯ ನೆರವು ನೀಡಲಾಗುತ್ತದೆ. ಬಾಲ ಗರ್ಭಿಣಿಯವರಿಗೆ ಪ್ರತ್ಯೇಕವಾದ ವಸತಿ ನಿಲಯದ ಅಗತ್ಯವಿದೆ. ಮಿಷನ್ ವಾತ್ಸಲ್ಯ ಯೋಜನೆಯಡಿ ಸಮರ್ಪಕವಾಗಿ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಡಿಡಿಪಿಐ ಎಸ್‌.ಎಸ್‌. ಕೆಳದಿಮಠ, ಡಿಎಚ್‌ಓ ಡಾ. ಎಸ್‌.ಎಂ. ಹೊನಕೇರಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಡಾ. ಎಚ್.ಎಚ್. ಕುಕನೂರ, ಸುನಿತಾ ನಾಡಿಗೇರ, ಡಾ. ಕಮಲಾ ಬೈಲೂರ ಭಾಗವಹಿಸಿದ್ದರು.