24ರಂದು ಪತ್ತನಾಜೆ: ಅಂಕ, ಜಾತ್ರೆ, ಯಕ್ಷಗಾನ ಪ್ರದರ್ಶನಗಳಿಗೆ ತೆರೆ

| Published : May 22 2024, 12:48 AM IST

ಸಾರಾಂಶ

ಈ ವರ್ಷ ಮೇ 24ರಂದು ಪತ್ತನಾಜೆ ಆಚರಣೆ ಆಗಲಿದ್ದು, ಬಳಿಕ ತುಳುನಾಡಿನಲ್ಲಿ ಅಂಕ, ಆಯನ, ನೇಮ ಮುಂತಾದ ಧಾರ್ಮಿಕ ಉತ್ಸವಗಳು ನಿಷಿದ್ಧ. ಮತ್ತೆ ನವಂಬರ್‌ ತಿಂಗಳಿನಲ್ಲಿ ಎರ್ಮಾಳು ಜಾತ್ರೆಯ ಮೂಲಕ ದೀಪಾವಳಿ ಆರಂಭಗೊಂಡ ಬಳಿಕ ಪುನಃ ಚಾಲನೆಯಾಗಲಿದೆ.

ಪ್ರಕಾಶ್‌ ಎಂ.ಸುವರ್ಣ

ಕನ್ನಡಪ್ರಭವಾರ್ತೆ ಮೂಲ್ಕಿ

ತುಳುನಾಡಿನಲ್ಲಿ ಪತ್ತನಾಜೆ ಬಂತೆಂದರೆ ಪ್ರಸ್ತುತ ಸಾಲಿನ ಅಂಕ, ಆಯನ, ನೇಮ, ಜಾತ್ರೆ, ಯಕ್ಷಗಾನಗಳು ಮುಕ್ತಾಯಗೊಂಡಿವೆ ಎಂಬ ಅನಾದಿ ಕಾಲದಿಂದ ಚಾಲ್ತಿಯಲ್ಲಿದ್ದು ಇಂದಿಗೂ ಮುಂದುವರಿಯುತ್ತಿದೆ. ಈ ವರ್ಷ ಮೇ 24ರಂದು ಪತ್ತನಾಜೆ ಆಚರಣೆ ಆಗಲಿದ್ದು, ಬಳಿಕ ತುಳುನಾಡಿನಲ್ಲಿ ಅಂಕ, ಆಯನ, ನೇಮ ಮುಂತಾದ ಧಾರ್ಮಿಕ ಉತ್ಸವಗಳು ನಿಷಿದ್ಧ. ಮತ್ತೆ ನವಂಬರ್‌ ತಿಂಗಳಿನಲ್ಲಿ ಎರ್ಮಾಳು ಜಾತ್ರೆಯ ಮೂಲಕ ದೀಪಾವಳಿ ಆರಂಭಗೊಂಡ ಬಳಿಕ ಪುನಃ ಚಾಲನೆಯಾಗಲಿದೆ.

ಪರಶುರಾಮನ ಸೃಷ್ಟಿಯಾಗಿರುವ ಕೇರಳದ ಕಾಸರಗೋಡು ಜಿಲ್ಲೆಯಿಂದ ಹಿಡಿದು, ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಬಾರ್ಕೂರುವರೆಗಿನ ತುಳುನಾಡಿನಲ್ಲಿ ಹಿಂದಿನಿಂದ ತುಳುನಾಡಿನ ಕೆಲವು ಸಂಪ್ರದಾಯಗಳು ಇಂದಿಗೂ ನಡೆಯುತ್ತ ಬಂದಿದೆ. ಅದರಲ್ಲಿ ಒಂದು ಪತ್ತನಾಜೆ.

ವೃಷಭ ಮಾಸ ಅಂದರೆ ತುಳುವಿನ ಪಂಚಾಂಗದಲ್ಲಿ ಬೇಶ ತಿಂಗಳು. ಬೇಶ ತಿಂಗಳಿನಲ್ಲಿ ಸಂಕ್ರಮಣದ ಬಳಿಕ ಬರುವ 10 ನೇ ದಿನಕ್ಕೆ ಪತ್ತನಾಜೆ ಅಂತ ಕರೆಯುತ್ತಾರೆ. ಪತ್ತನೆ ಅಂದರೆ ಹತ್ತನೇ ಎಂದೂ, ಹಾಗೂ ಅಜೆ ಅಂದರೆ ಹೆಜ್ಜೆ ಎಂದು ಅರ್ಥ. ಪತ್ತೆರುನ ಅಜೆ ಪತ್ತನಾಜೆ ಆಗಿದೆ. ಹಿಂದಿನ ದಿನಗಳಲ್ಲಿ ಪತ್ತನಾಜೆಯಿಂದ ಗದ್ದೆ ಉಳುವ ಮೂಲಕ ಕೃಷಿ ಕೆಲಸ ಆರಂಭಗೊಂಡು 18 ನೇ ದಿನದಂದು ನೇಜಿ ನೆಡುವ ಸಂಪ್ರದಾಯವಿತ್ತು. ಹಿಂದಿನ ದಿನಗಳಲ್ಲಿ ಆರು ತಿಂಗಳು ಮಳೆಗಾಲ, ಆರು ತಿಂಗಳು ಸೆಕೆಗಾಲವಿದ್ದು ಮೇ ತಿಂಗಳಿನಿಂದ ನವಂಬರ್ ತಿಂಗಳವರೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ನೇಮೋತ್ಸವ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳಿಗೆ ಪುರುಷೋತ್ತು ಇಲ್ಲದ ಕಾರಣ ಸ್ಥಗಿತಗೊಳಿಸಲಾಗುತ್ತಿತ್ತು.

ಜನಜನಿತ ಗಾದೆ: ‘ಎರ್ಮಾಳು ಜಪ್ಪು ಖಂಡೇವು ಅಡೆಪು’ ಎಂಬ ಗಾದೆಯಂತೆ ನವಂಬರ್ ತಿಂಗಳಿನಲ್ಲಿ ಎರ್ಮಾಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಮೂಲಕ ತುಳುನಾಡಿನಲ್ಲಿ ಉತ್ಸವಗಳು ಆರಂಭಗೊಂಡು ಮೇ ತಿಂಗಳಿನ ಮೇಷ ಸಂಕ್ರಮಣದಂದು ಪಾವಂಜೆ ಸಮೀಪದ ಖಂಡೇವುನಲ್ಲಿ ನಡೆಯುವ ಖಂಡೇವು ಜಾತ್ರೆ ಮೂಲಕ ಸಂಪನ್ನಗೊಳ್ಳುತ್ತದೆ.

ಪತ್ತನಾಜೆಯ ಬಳಿಕ ನೇಮೋತ್ಸವದ ಗಗ್ಗರದ ಸದ್ದು, ಯಕ್ಷಗಾನ ಬಯಲಾಟದ ಚೆಂಡೆಯ ಸದ್ದು, ದೈವಸ್ಥಾನಗಳಲ್ಲಿ ನಡೆಯುವ ನೇಮೋತ್ಸವದ ಸಂದರ್ಭದ ತಾಸೆಯ ಸದ್ದು , ದೇವಳಗಳ ಜಾತ್ರಾ ಮಹೋತ್ಸವಗಳ ಸಂದರ್ಭದ ಸಿಡಿಮದ್ದು , ಕದೋನಿಯ ಸದ್ದು ಎಲ್ಲವು ನಿಲ್ಲುತ್ತದೆ. ಪತ್ತನಾಜೆಯಂದು ದೇವಸ್ಥಾನಗಳಲ್ಲಿ ವಸಂತ ಪೂಜೆ ನಡೆದು ಬಳಿಕ ದೇವರು ಗರ್ಭಗುಡಿಯೊಳಗೆ ಸೇರುತ್ತಾರೆ. ದೈವಗಳು ಕೂಡ ಗುಡಿಯೊಳಗೆ ಸೇರಿಕೊಳ್ಳುತ್ತದೆ. ದೀಪಾವಳಿಯ ಬಳಿಕ ದೇವರು ಗರ್ಭಗುಡಿಯಿಂದ ಹೊರಗೆ ಬಂದು ಉತ್ಸವ ಆರಂಭಗೊಳ್ಳುತ್ತದೆ.

ಉತ್ಸವಗಳಿಗೂ ಬಿಡುವು: ಬೇಶ, ಕಾರ್ತೆಲ್ ಮತ್ತು ಆಟಿ ಈ ಮೂರು ತಿಂಗಳ ಕಾಲ ತುಳುನಾಡಿನ ಯಾವುದೇ ದೇವಸ್ಥಾನ, ದೈವಸ್ಥಾನಗಳಲ್ಲಿ ಯಾವುದೇ ವಿಶೇಷ ಉತ್ಸವ ನಡೆಯುವುದಿಲ್ಲ, ಆಟಿ ತಿಂಗಳು ಮುಗಿದು ಸೋಣ ತಿಂಗಳು ಅಂದರೆ ಸಿಂಹ ಮಾಸದಲ್ಲಿ ಸಿಂಹ ಸಂಕ್ರಮಣದ ಬಳಿಕ ಹಿಂದೂ ಸಂಪ್ರದಾಯದ ಪ್ರಕಾರ ಶುಭ ಕಾಲವಾಗಿದ್ದು ಅಂದಿನಿಂದ ಎಲ್ಲ ಉತ್ಸವಗಳು ಆರಂಭಗೊಳ್ಳುತ್ತದೆ.

ಕೆಲವು ಸಂದರ್ಭದಲ್ಲಿ ಆಟಿ ತಿಂಗಳಿನಲ್ಲಿ ಅಷ್ಟಮಿ ಬಂದರೆ ಅದನ್ನು ಆಚರಿಸುವುದಿಲ್ಲ, ಸೋಣ ತಿಂಗಳಿನಲ್ಲಿ ಬರುವ ಅಷ್ಟಮಿಯನ್ನು ಆಚರಿಸುವ ಪದ್ಧತಿ ಇದೆ. ಇದು ಹಿಂದಿನ ಕಾಲದಿಂದ ನಡೆದು ಕೊಂಡು ಬಂದ ಸಂಪ್ರದಾಯವಾಗಿದ್ದು ಈಗಿನ ಪೀಳಿಗೆ ಕೂಡ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಈ ಬಾರಿ ಸಿಂಹ ಮಾಸ, ಸೋಣ ತಿಂಗಳಿನಲ್ಲಿ ಆ. 26 ರಂದು ಕೃಷ್ಣ ಜನ್ಮಷ್ಟಮಿ ಬರಲಿದೆ.

ದೈವಗಳು ಘಟ್ಟ ಹತ್ತುತ್ತವೆ:

ತುಳುನಾಡಿನಲ್ಲಿ ದೈವಸ್ಥಾನಗಳಲ್ಲಿ ಕೋಲ, ನೇಮ, ಅಗೇಲು, ತಂಬಿಲ ಮುಂತಾದ ಸೇವೆಗಳಿಗೆ ಪತ್ತನಾಜೆ ಗಡುವಾಗಿದ್ದು ಪತ್ತನಾಜೆ ಬಳಿಕ ತುಳುನಾಡಿನಲ್ಲಿ ಜಾರಂದಾಯ, ಧೂಮಾವತಿ ಸೇರಿದಂತೆ ರಾಜನ್ ದೈವಗಳಿಗೆ ಪತ್ತನಾಜೆ ಪ್ರಧಾನ ಗಡು, ಹಿಂದಿನ ದಿನಗಳಲ್ಲಿ ಪತ್ತನಾಜೆ ಬಳಿಕ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.

ಪ್ರತಿ ವರ್ಷ ಮೇ ತಿಂಗಳ 24 ರಂದು ಪತ್ತನಾಜೆ ಬರುತ್ತದೆ. ಕೆಲವು ಬಾರಿ 25 ರಂದು ಬರುತ್ತದೆ. ಹಿಂದಿನ ದಿನಗಳಲ್ಲಿ ಪತ್ತನಾಜೆಯಿಂದ ಮಳೆಗಾಲ ಆರಂಭಗೊಳ್ಳುತ್ತಿದ್ದು ಪತ್ತನಾಜೆಯಂದು ಎರಡು ಹನಿಯಾದರೂ ಮಳೆ ಬೀಳಲೆಬೇಕು. ಈಗ ಪ್ರಕೃತಿಯ ಏರು ಪೇರುಗಳಿಂದ ವ್ಯತ್ಯಾಸಗಳು ಉಂಟಾಗಿದ್ದರೂ ಸಂಪ್ರದಾಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಈ ಬಾರಿ ಮಳೆ ಕಡಿಮೆಯಾಗಿದ್ದು ಯಕ್ಷಗಾನ ಆಟಗಳು ಕಾಲ ಮಿತಿಯಲ್ಲಿ ನಡೆಯುತ್ತಿದೆ. ದೀಪಾವಳಿಯ ಬಳಿಕ ಎಲ್ಲ ದೇವಸ್ಥಾನ, ದೈವಸ್ಥಾನಗಳಲ್ಲಿ ಬಲಿ, ಜಾತ್ರೆ ಮುಂತಾದ ಉತ್ಸವಗಳು ಆರಂಭಗೊಳ್ಳುತ್ತದೆ. ಯಕ್ಷಗಾನಗಳ ಮೇಳಗಳು ಕೂಡ ಪತ್ತನಾಜೆಯಂದು ತಮ್ಮ ಕೊನೆಯ ಪ್ರದರ್ಶನವನ್ನು ನೀಡಿ ಗೆಜ್ಜೆ ಕಳಚಿ ಪೂಜೆ ಸಲ್ಲಿಸಿ ತಿರುಗಾಟ ಮುಕ್ತಾಯ ಮಾಡುತ್ತದೆ. ದೀಪಾವಳಿಯ ಬಳಿಕ ದೀಪೋತ್ಸವ ಸಂದರ್ಭದಲ್ಲಿ ಪುನಃ ಪ್ರದರ್ಶನಕ್ಕೆ ಅಣಿಯಾಗುತ್ತದೆ.

ಹಿಂದಿನ ದಿನಗಳಲ್ಲಿ ತುಳುನಾಡಿನಲ್ಲಿ ಕೃಷಿ ಪ್ರಧಾನವಾಗಿದ್ದು ಪತ್ತನಾಜೆಯ ಬಳಿಕ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅಂಕ, ಆಯನ, ನೇಮ, ಜಾತ್ರೆಗಳನ್ನು ಮುಕ್ತಾಯಗೊಳ್ಳುವ ಪದ್ಧತಿಯಿತ್ತು. ಅಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಆಟಿ ತಿಂಗಳಿನಲ್ಲಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸಿ ಜೀವನ ಸಾಗಿಸುತ್ತಿದ್ದರು. ನಮ್ಮ ತುಳುನಾಡಿನ ಸಂಸ್ಕಾರ, ಆಚರಣೆಯನ್ನು ಮುಂದಿನ ಪೀಳಿಗೆ ಕೂಡ ಮುಂದುವರಿಸಿಕೊಂಡು ಹೋಗದಿದ್ದಲ್ಲಿ ನಮ್ಮ ಸಂಪ್ರದಾಯಗಳು ಉಳಿಯು ಸಾಧ್ಯತೆ ಕಡಿಮೆ.

ಡಾ. ಗಣೇಶ್‌ ಅಮೀನ್‌ ಸಂಕಮಾರ್‌, ಜಾನಪದ ವಿದ್ವಾಂಸ