ಬಣ್ಣದಲ್ಲಿ ಮಿಂದೆದ್ದ ಅಳ್ನಾವರ ಜನರು

| Published : Mar 15 2025, 01:07 AM IST

ಸಾರಾಂಶ

ಕಳೆದ ವರ್ಷ ಗ್ರಾಮದೇವಿ ಜಾತ್ರೆಯ ಸಲುವಾಗಿ ಹೋಳಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಿದ ಅಳ್ನಾವರ ಜನತೆ ಈ ವರ್ಷ ಬಲು ಹುರುಪಿನಿಂದ ಒಬ್ಬರಿಗೊಬ್ಬರು ಬಣ್ಣವನ್ನೆರಚುವ ಮೂಲಕ ಹಬ್ಬ ಆಚರಿಸಿದರು.

ಅಳ್ನಾವರ: ಕಳೆದ ವರ್ಷ ಗ್ರಾಮದೇವಿ ಜಾತ್ರೆಯ ಸಲುವಾಗಿ ಹೋಳಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಿದ ಅಳ್ನಾವರ ಜನತೆ ಈ ವರ್ಷ ಬಲು ಹುರುಪಿನಿಂದ ಒಬ್ಬರಿಗೊಬ್ಬರು ಬಣ್ಣವನ್ನೆರಚುವ ಮೂಲಕ ಹಬ್ಬ ಆಚರಿಸಿದರು.ನೆತ್ತಿ ಸುಡುವ ಬಿಸಿಲಿನಲ್ಲೂ ಮಕ್ಕಳು, ಹಿರಿಯರು-ಕಿರಿಯರೆನ್ನದೆ ಬಣ್ಣದ ಜೊತೆಗೆ ಒಬ್ಬರ ಮೇಲೋಬ್ಬರು ನೀರು ಸುರಿಯುತ್ತ ಹೋಳಿ ಆಚರಣೆಯಲ್ಲಿ ತೊಡಗಿದ್ದು ಕಂಡು ಬಂತು. ಮಧ್ಯಾಹ್ನದ ಹೊತ್ತಿಗೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗಿದ್ದ ಕಾಮ ದೇವನನ್ನು ಶ್ರದ್ಧಾ ಭಕ್ತಿಯಿಂದ ದಹನ ಮಾಡಲಾಯಿತು. ಅಳ್ನಾವರ ತಾಲೂಕಿನ ಕೆಲ ಗ್ರಾಮಗಳಲ್ಲಿ ಶನಿವಾರ ಹೋಳಿ ಆಚರಣೆ ನಡೆಯುತ್ತಿದ್ದರೆ ಪಟ್ಟಣದಲ್ಲಿ ಶುಕ್ರವಾರವೇ ಕಾಮದಹನ ನರವೇರಿಸಲಾಯಿತು,

ಮುಂಜಾನೆಯಿಂದಲೇ ಮಕ್ಕಳು ತರ ತರಹದ ಬಣ್ಣಗಳನ್ನು ತಯಾರಿಸಿಕೊಂಡು ಪಿಚಕಾರಿಗಳ ಮೂಲಕ ಸಿಂಪಡಿಸುವ ದೃಶ್ಯ ಸಾಮಾನ್ಯವಾಗಿದ್ದರೆ ಯುವಕರು ಒಣ ಬಣ್ಣವನ್ನೇ ತಲೆಗೆ ಮುಖಕ್ಕೆ ಬಳಿಯುತ್ತಿದ್ದರು. ದ್ವಿತೀಯ ಪಿಯು ಪರೀಕ್ಷೆಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಹಬ್ಬದ ಆಚರಣೆ ನಡೆದಿರುವುದು ವಿಶೇಷವಾಗಿತ್ತು.

ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಮುಚ್ಚಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಸಂಜೆ ಪುನರಾರಂಭಿಸಲಾಯಿತು. ಪ್ರಯಾಣಿಕರಿಗೆ ಯಾವುದೇ ಅಡಚಣೆಯಾಗದಂತೆ ಸಾರಿಗೆ ವ್ಯವಸ್ಥೆ ಸುಗಮವಾಗಿ ನಡೆಯಿತು. ಅನೇಕ ಕಡೆಗಳಲ್ಲಿ ಕೃತಕ ನೀರಿನ ಸಿಂಚನವನ್ನು ಸಿದ್ದಪಡಿಸಲಾಗಿತ್ತು. ಹಬ್ಬದಲ್ಲಿ ವಯಸ್ಸಿನ ನಿರ್ಬಂಧವಿಲ್ಲದೆ ಹಿರಿಯರು ಸಹ ತೊಡಗಿದ್ದರಿಂದ ಮೆರಗು ಹೆಚ್ಚಾಗಿತ್ತು. ಸರ್ಕಾರಿ ಕಚೇರಿ ಸಿಬ್ಬಂದಿ ಸಹ ನಿತ್ಯದ ಸಾರ್ವಜನಿಕ ಸೇವೆಯ ಜೊತೆಗೆ ಹೋಳಿ ಆಚರಣೆಯಲ್ಲಿ ಭಾಗವಹಿಸಿ ಪರಸ್ಪರ ಹೋಳಿ ಶುಭಾಶಯ ತಿಳಿಸಿದರು

ಜನರಿಗೆ ಹೋಳಿ ಶುಭಾಶಯ ತಿಳಿಸಿದ ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಹೋಳಿ ಆಚರಣೆ ಶಾಂತಿ ಮತ್ತು ಸೌಹಾರ್ದ ಬೆಸೆಯಲು ಸಹಕಾರಿಯಾಗಿದೆ ಎಂದಿದ್ದಾರೆ.

ಹೋಳಿ ಕಾಮದಹನ ಆಚರಣೆಯಿಂದ ಮಾನವನ ಮನಸ್ಸಿನಲ್ಲಿ ಮೂಡುವ ದೂರಾಲೋಚನೆಗಳು ದೂರಾಗುತ್ತವೆ. ನಮ್ಮಲ್ಲಿನ ಸಿಟ್ಟು ವೈರತ್ವ ನಾಶವಾಗುತ್ತದೆ ಎಂದು ಅಧ್ಯಾತ್ಮ ಚಿಂತಕ ಶಂಕರಯ್ಯ ದೇಗಾಂವಿಮಠ ತಿಳಿಸಿದರು.

ರಂಗು ರಂಗಿನ ಬಣ್ಣದೋಕುಳಿಗೆ ಧಾರವಾಡ ಸಜ್ಜು

ಧಾರವಾಡ: ರಂಗು ರಂಗಿನ ಬಣ್ಣದೋಕುಳಿಗೆ ಧಾರವಾಡ ಸಜ್ಜಾಗಿದ್ದು, ಶುಕ್ರವಾರ ಜಿಲ್ಲೆಯ ಬಹುಭಾಗದಲ್ಲಿ ಹುಣ್ಣಿಮೆ ಆಚರಣೆ ಮಾಡಿ ಶನಿವಾರ ರಂಗಿನಾಟಕ್ಕೆ ಸಜ್ಜಾಗಿದೆ. ಜಿಲ್ಲೆಯ ೩೯೫ ಗ್ರಾಮಗಳಲ್ಲಿಯೂ ಹೋಳಿ ಸಂಭ್ರಮ ಮನೆ ಮಾಡಿದ್ದು, ಇಲ್ಲಿ ೬೦೦ಕ್ಕೂ ಹೆಚ್ಚು ಕಾಮಣ್ಣನ ಮೂರ್ತಿಗಳು ಹಾಗೂ ಅವಳಿ ನಗರ ಸೇರಿ ಇತರೇ ಪಟ್ಟಣಗಳಲ್ಲಿ ೩೫೦ಕ್ಕೂ ಅಧಿಕ ರತಿ-ಕಾಮಣ್ಣನ ಮೂರ್ತಿಗಳು ಶುಕ್ರವಾರ ಪ್ರತಿಷ್ಠಾಪನೆಯಾದವು. ಶನಿವಾರ ಬೆಳಗ್ಗೆ ಕಾಮ ದಹನ ಮಾಡುವ ಮೂಲಕ ರಂಗಿನಾಟಕ್ಕೆ ಚಾಲನೆ ಸಿಗಲಿದೆ. ಧಾರವಾಡ ತಾಲೂಕಿನಲ್ಲಿಯೇ ಆರಾಧ್ಯ ದೈವ್ಯ ಆಗಿರುವ ಮುಳಮುತ್ತಲ ಕಾಮದೇವರಿಗೆ ಗುರುವಾರ ಬೆಳಗಿನ ಜಾವದ ವೇಳೆಗೆ ಹುಬ್ಬ ನಕ್ಷತ್ರದಂದು ಅಗ್ನಿಸ್ಪರ್ಶ ನೆರವೇರಿಸಲಾಯಿತು. ಬುಧವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಸಾವಿರಾರು ಜನರು ಕಾಮಣ್ಣನ ದರ್ಶನ ಮಾಡಿದರೆ ಇದರೊಂದಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಗುರುವಾರ ಬೆಳಗಿನ ಜಾವ ಕಾಮದಹನ ನೆರವೇರಿಸಲಾಯಿತು. ಇದಾದ ಬಳಿಕ ಗ್ರಾಮದ ಸಂಪ್ರದಾಯದಂತೆ ಓಕುಳಿ ಬಣ್ಣದಾಟವಿಲ್ಲದೇ ಹೋಳಿ ಹಬ್ಬ ಆಚರಿಸಲಾಯಿತು. ಇನ್ನು ಈ ಮುಳಮುತ್ತಲ ಕಾಮದಹನ ಪಾಲನೆ

ಮಾಡಿರುವ ತಡಕೋಡ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರುವಾರವೇ ಕಾಮದಹನ ನೆರವೇರಿಸಿದ್ದಲ್ಲದೇ ಬಣ್ಣದಾಟ ಆಡಿದರು.

ನಗರದಲ್ಲಿ ಶುಕ್ರವಾರ ಹುಣ್ಣಿಮೆ ಆಚರಣೆ ಮಾಡಲಾಗಿದ್ದು, ಶನಿವಾರ ಕಾಮದಹನ ನೆರವೇರಿಸುವ ಮೂಲಕ ಬಣ್ಣದಾಟಕ್ಕೆ ಚಾಲನೆ ದೊರೆಯಲಿದೆ. ಇದರ ಹಿನ್ನೆಲೆಯಲ್ಲಿ ಸುಭಾಸ ರಸ್ತೆ, ಸೂಪರ್ ಮಾರ್ಕೆಟ್ ಸೇರಿದಂತೆ

ಇನ್ನಿತರ ಮಾರುಕಟ್ಟೆಗಳಲ್ಲಿ ವಿವಿಧ ನಮೂನೆಯ ಬಣ್ಣ, ಗುಲಾಲು, ವಿಭಿನ್ನ ಆಕಾರದ ವಸ್ತುಗಳು ಗಮನ ಸೆಳೆದವು. ಹೋಳಿ ಹುಣ್ಣಿಮ ಆಚರಣೆಗಾಗಿ ಜನರು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಮಕ್ಕಳಿಗೆ ಬಣ್ಣ ಎರಚಲು ಬೇಕಾಗುವ ಗನ್, ಪಿಸ್ತೂಲ್, ವಿಭಿನ್ನ ಆಕಾರದ ಪಿಚಕಾರಿಗಳು, ಮುಖವಾಡ, ಶಿವನ ಜಡೆಯಂತಿರುವ ಕೂದಲಿನಿಂದ ತಯಾರಿಸಿದ ಚವರಿ ಸೆರಿದಂತೆ ಇತರೆ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು.

ಪ್ರತಿ ವರ್ಷದಂತೆ ಈ ವರ್ಷವೂ ರಾಜಕೀಯ ಮುಖಂಡರು ಯುವಕರಿಗಾಗಿ ರೇನ್ ಡ್ಯಾನ್ಸ್ ಆಯೋಜಿಸಿದ್ದು, ಬಿಜೆಪಿಯ ಅರವಿಂದ ಬೆಲ್ಲದ ಅಭಿಮಾನಿ ಬಳಗ ಹಾಗೂ ಧಾರವಾಡ ಬಣ್ಣದ ಉತ್ಸವ ಸಮಿತಿಯಿಂದ ಇಲ್ಲಿಯ ಎಸ್‌ಬಿಐ ಬ್ಯಾಂಕ್ ವೃತ್ತದಲ್ಲಿ ರೇನ್ ಡ್ಯಾನ್ಸ್ ಆಯೋಜಿಸಿದ್ದರೆ, ಇದಕ್ಕೆ ಪ್ರತಿಯಾಗಿ ವಿನಯ ಕುಲಕರ್ಣಿ

ಬ್ರಿಗೇಡ್ ವತಿಯಿಂದ ಶಿವಾಜಿ ವೃತ್ತದಲ್ಲಿ ಗಡಿಗೆ ಒಡೆಯುವ ಸ್ಪರ್ಧೆ ಹಾಗೂ ರೇನ್ ಡ್ಯಾನ್ಸ್ ಆಯೋಜಿಸಲಾಗಿದೆ. ಎರಡೂ ಕಡೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆಯೇ ಎಲ್ಲೂ ಗದ್ದಲ ಗೊಂದಲಕ್ಕೆ ಅವಕಾಶ ಇಲ್ಲದಂತೆ ಪೋಲಿಸ್ ಬಂದೋಬಸ್ತ್ ಸಹ ಒದಗಿಸಲಾಗಿದೆ.ಗಂಜೀಗಟ್ಟಿಯಲ್ಲಿ ಕಾಮ ದಹನ

ಕಲಘಟಗಿ: ತಾಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿ ಗ್ರಾಮ ದೇವಿ ಜಾತ್ರೆ ಕಾರಣವಾಗಿ ಸಾಂಕೇತಿಕ ಹೋಳಿ ಆಚರಿಸಲಾಯಿತು. ಗ್ರಾಮದ ಸರ್ಕಾರಿ ಕಾಮಣ್ಣನ ದಹನ ಮಾಡಲಾಯಿತು. ಕಾಮಣ್ಣ ಮತ್ತು ರತಿ ದೇವಿಯನ್ನು ಪ್ರತಿಷ್ಠಾಪಿಸಿ ಕಾಮ ದಹನ ಮಾಡಲಾಯಿತು. ಗ್ರಾಮ ದೇವತೆಗಳ ಜಾತ್ರೆ ಅಂಗವಾಗಿ ಗ್ರಾಮದಲ್ಲಿ ಬಣ್ಣದ ಓಕಳಿಯ ಆಡುವುದನ್ನು ನಿಷೇಧ ಮಾಡಲಾಗಿತ್ತು .

ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಮಂಜುನಾಥ ಧಾರವಾಡ, ನ್ಯಾಯವಾದಿ ಎನ್.ಬಿ. ಮುತ್ತಣ್ಣವರ, ಗ್ರಾಪಂ ಸದಸ್ಯ ಈರಯ್ಯ ಹಿರೇಮಠ, ಕೆಡಿಪಿ ಮಾಜಿ ಸದಸ್ಯ ಬಸಪ್ಪ ಅಳ್ಳೀಗೆರಿ, ದಾನಯ್ಯ ಕುರ್ಡಿಕೇರಿ, ರವಿ ಶಿಗಿಗಟ್ಟಿ, ನಿಂಗಪ್ಪ ಬಡಿಗೇರ, ಬಸನಗೌಡ ಭಾವಿಕಟ್ಟಿ, ಭೋಜನಗೌಡ ಭಾವಿಕಟ್ಟಿ, ಕಲ್ಲಪ್ಪ ಹಡಪದ, ಹನಮಂತ ಭಜಂತ್ರಿ ಸೇರಿದಂತೆ ಊರಿನ ಗುರು ಹಿರಿಯರು ಇದ್ದರು.