ಸಾರಾಂಶ
ಎಲೆಕ್ಟ್ರಿಕ್ ಆಟೋಗಳ ಮೇಲೆ ನಿಯಂತ್ರಣ ಹೇರಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕಿದ್ದು, ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನಸಭೆ : ಎಲೆಕ್ಟ್ರಿಕ್ ಆಟೋಗಳ ಮೇಲೆ ನಿಯಂತ್ರಣ ಹೇರಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕಿದ್ದು, ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಪಡೆಯುವ ಅವಶ್ಯಕತೆ ಇಲ್ಲದ ಕಾರಣ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಬಿಜೆಪಿಯ ವೇದವ್ಯಾಸ ಕಾಮತ್ ಸಾರಿಗೆ ಸಚಿವರ ಗಮನ ಸೆಳೆದರು. ಅದಕ್ಕುತ್ತರಿಸಿದ ರಾಮಲಿಂಗಾರೆಡ್ಡಿ, ಎಲೆಕ್ಟ್ರಿಕ್ ಆಟೋಗಳು ಪರ್ಮಿಟ್ ಪಡೆಯದೇ ಸಾರ್ವಜನಿಕ ಸೇವೆ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಅದರ ಆಧಾರದ ಮೇಲೆ ರಾಜ್ಯ ಸರ್ಕಾರವೂ ಆದೇಶಿಸಿದೆ.
ಆದರೀಗ, ಎಲೆಕ್ಟ್ರಿಕ್ ಆಟೋ ಮತ್ತು ಪರ್ಮಿಟ್ ಆಟೋಗಳ ನಡುವೆ ಸಮಸ್ಯೆಯಾಗುತ್ತಿದೆ. ಅದನ್ನು ಸರಿಪಡಿಸಲು ಎಲೆಕ್ಟ್ರಿಕ್ ಆಟೋಗಳು ಪರ್ಮಿಟ್ ಪಡೆಯುವಂತೆ ಮಾಡಬೇಕಿದ್ದು, ಅದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಮುಂದಿನ ಅಧಿವೇಶನದಲ್ಲಿ ಅದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಕಾಯ್ದೆ ಮಂಡಿಸಲಾಗುವುದು ಎಂದು ಹೇಳಿದರು.