ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ವಸ್ತುಗಳ ರಾಶಿ

| Published : Oct 14 2025, 01:00 AM IST

ಸಾರಾಂಶ

ಅರೆಹಳ್ಳಿ ಪಟ್ಟಣದ ಹೊರವಲಯ ಸ್ಮಶಾನದ ಹತ್ತಿರ ಹಾಗೂ ಇನ್ನಿತರ ವಿವಿಧ ರಸ್ತೆ ಬದಿಗಳಲ್ಲಿ ತ್ಯಾಜ್ಯವನ್ನು ಬಿಸಾಡುತ್ತಿದ್ದು ಸುತ್ತಮುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ದಾರಿಹೋಕರು ಮೂಗು ಮುಚ್ಚಿ ಓಡಾಡುತ್ತಾ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೆಲವರು ತಮ್ಮ ವಾಹನಗಳಲ್ಲಿ ಕಸ ತಂದು ಪಟ್ಟಣದ ಹೊರವಲಯ ಲಿಂಗಾಪುರ ಗ್ರಾಮ ವ್ಯಾಪ್ತಿಯ ಸ್ಮಶಾನದ ಹತ್ತಿರ ಸೇರಿದಂತೆ ಇನ್ನಿತರ ವಿವಿಧ ರಸ್ತೆಯ ಬದಿಗಳಲ್ಲಿ ತ್ಯಾಜ್ಯವನ್ನು ಬಿಸಾಡುತ್ತ ರಾಶಿ ಹಾಕುತ್ತಿರುವುದನ್ನು ಕಂಡು ಸಾರ್ವಜನಿಕರು ಅವರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಅರೆಹಳ್ಳಿ ಪಟ್ಟಣದ ಹೊರವಲಯ ಸ್ಮಶಾನದ ಹತ್ತಿರ ಹಾಗೂ ಇನ್ನಿತರ ವಿವಿಧ ರಸ್ತೆ ಬದಿಗಳಲ್ಲಿ ತ್ಯಾಜ್ಯವನ್ನು ಬಿಸಾಡುತ್ತಿದ್ದು ಸುತ್ತಮುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ದಾರಿಹೋಕರು ಮೂಗು ಮುಚ್ಚಿ ಓಡಾಡುತ್ತಾ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಂತೆ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗಳ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿಯು ಪಟ್ಟಣದ ಹೊರವಲಯ ಹೆಗ್ಗಡಿಹಳ್ಳಿ ರಸ್ತೆಯಲ್ಲಿ ಕೆಲ ವರ್ಷಗಳ ಹಿಂದೆಯೇ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯನ್ನು ಆರಂಭಿಸಿತ್ತಾದರೂ ನಾನಾ ಕಾರಣಗಳಿಂದ ಅಂತಿಮ ಹಂತ ತಲುಪುವಲ್ಲಿ ವಿಳಂಬವಾಗಿದೆ. ಪಟ್ಟಣದ ಬಹುತೇಕ ಮನೆಗಳಲ್ಲಿ ಶೇಖರಿಸಿಟ್ಟ ತ್ಯಾಜ್ಯವನ್ನು ವಾಹನಗಳ ಮೂಲಕ ಸಂಗ್ರಹಿಸಿ ನಿಗದಿಪಡಿಸಿದ ಸ್ಥಳದಲ್ಲಿ ಪಂಚಾಯಿತಿಯವರು ವಿಲೇವಾರಿ ಮಾಡುತ್ತಿದ್ದಾರೆ. ಆದರೆ ಕೆಲವರು ತಮ್ಮ ವಾಹನಗಳಲ್ಲಿ ಕಸ ತಂದು ಪಟ್ಟಣದ ಹೊರವಲಯ ಲಿಂಗಾಪುರ ಗ್ರಾಮ ವ್ಯಾಪ್ತಿಯ ಸ್ಮಶಾನದ ಹತ್ತಿರ ಸೇರಿದಂತೆ ಇನ್ನಿತರ ವಿವಿಧ ರಸ್ತೆಯ ಬದಿಗಳಲ್ಲಿ ತ್ಯಾಜ್ಯವನ್ನು ಬಿಸಾಡುತ್ತ ರಾಶಿ ಹಾಕುತ್ತಿರುವುದನ್ನು ಕಂಡು ಸಾರ್ವಜನಿಕರು ಅವರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿಯು ಪಟ್ಟಣದ ಶುಚಿತ್ವಕ್ಕೆ ಮಹತ್ವ ನೀಡುವ ಉದ್ದೇಶದಿಂದ ಈ ಹಿಂದೆ ಪ್ರತಿ ಮನೆಗಳಿಗೆ ತ್ಯಾಜ್ಯಗಳನ್ನು ಸಂಗ್ರಹ ಮಾಡಲು ಬಕೆಟ್‌ಗಳನ್ನೂ ವಿತರಿಸಿದೆ. ಪಟ್ಟಣದಲ್ಲಿ ಪ್ರತಿನಿತ್ಯ ಹಾಗೂ ಹೊರ ವಲಯ ಗ್ರಾಮಗಳಲ್ಲಿ ವಾರಕ್ಕೆ ಎರಡು ಬಾರಿ ವಾಹನಗಳ ಮೂಲಕ ತ್ಯಾಜ್ಯವನ್ನು ಸಂಗ್ರಹಿಸಿ ಪಟ್ಟಣದ ಹೊರವಲಯ ನಿಗದಿಪಡಿಸಿದ ಸ್ಥಳದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಕೆಲವರು ರಸ್ತೆಯ ಬದಿಗಳಲ್ಲಿ ತಂದು ಬಿಸಾಡುತ್ತಿರುವುದು ಅಶುಚಿತ್ವಕ್ಕೆ ಕಾರಣವಾಗುತ್ತಿದೆ. ರಸ್ತೆಯ ಬದಿಯಲ್ಲಿ ಇರುವ ತ್ಯಾಜ್ಯವನ್ನು ಹಲವು ಬಾರಿ ಪಂಚಾಯಿತಿಯವರು ವಿಲೇವಾರಿ ಮಾಡಿ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಕಸ ಹಾಕುವುದು ನಿಂತಿಲ್ಲ. ಬೇಲೂರು ಕೊಡ್ಲಿಪೇಟೆ ಜಿಲ್ಲಾ ಹೆದ್ದಾರಿ ರಸ್ತೆಯಲ್ಲಿ ಸಕಲೇಶಪುರ ಸುಬ್ರಮಣ್ಯ ಧರ್ಮಸ್ಥಳಕ್ಕೆ ದಿನನಿತ್ಯ ಪ್ರವಾಸಿಗರು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ವಾಹನ ಸವಾರರು ತ್ಯಾಜ್ಯ ವಸ್ತುಗಳ ಗಬ್ಬು ವಾಸನೆಯ ನಡುವೆ ಹಾದು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಬದಿ ಕಸ ಹಾಕುವುದಕ್ಕೆ ಕಡಿವಾಣ ಹಾಕಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಇರುವ ಎಲ್ಲಾ ರಸ್ತೆಯ ಬದಿಯಲ್ಲಿ ತ್ಯಾಜ್ಯ ವಸ್ತುಗಳ ತಿಪ್ಪೆ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.