ತೋಟದಲ್ಲಿಯೇ ಕೊಳೆಯುತ್ತಿರುವ ದಾಳಿಂಬೆ

| Published : Oct 28 2024, 01:05 AM IST / Updated: Oct 28 2024, 01:06 AM IST

ಸಾರಾಂಶ

ದಾಳಿಂಬೆ ಬೆಳೆಗಾರರಿಗೆ ಈಬಾರಿ ಸಂಕಷ್ಟ ಎದುರಾಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಹಿಂಗಾರು ಮಳೆ ನಷ್ಟವನ್ನು ತಂದಿದ್ದು, ಹೂಡಿದ ಬಂಡವಾಳವೂ ಬರದಂತಾಗಿದೆ.ಕಟಾವಿಗೆ ಬಂದಿದ್ದ ದಾಳಿಂಬೆ ಹಣ್ಣುಗಳು ತೋಟದಲ್ಲಿಯೇ ಕೊಳೆಯುವಂತಾಗಿರುವುದರಿಂದ ಬೆಳೆಗಾರ ದಿಕ್ಕು ತೋಚದಂತಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡು ರೈತರ ಜೀವನದಲ್ಲಿ ಹೊಸ ಬೆಳಕು ಮೂಡಿಸಿದ್ದ ದಾಳಿಂಬೆ ಬೆಳೆಯೂ ಹಿಂಗಾರು ಮಳೆಯ ಹೊಡೆತಕ್ಕೆ ಸಿಲುಕಿ ದಾಳಿಂಬೆ ಬೆಳೆಗಾರನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಉತ್ತಮ ಗುಣಮಟ್ಟದಲ್ಲಿ ಬೆಳೆ ಬೆಳೆದಿದ್ದ ದಾಳಿಂಬೆ ಬೆಳೆಗಾರರಿಗೆ ಈಬಾರಿ ಸಂಕಷ್ಟ ಎದುರಾಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಹಿಂಗಾರು ಮಳೆ ನಷ್ಟವನ್ನು ತಂದಿದ್ದು, ಹೂಡಿದ ಬಂಡವಾಳವೂ ಬರದಂತಾಗಿದೆ.ಕಟಾವಿಗೆ ಬಂದಿದ್ದ ದಾಳಿಂಬೆ ಹಣ್ಣುಗಳು ತೋಟದಲ್ಲಿಯೇ ಕೊಳೆಯುವಂತಾಗಿರುವುದರಿಂದ ಬೆಳೆಗಾರ ದಿಕ್ಕು ತೋಚದೆ ತಲೆಯ ಮೇಲೆ ಕೈಹೊತ್ತು ಕೂತಿದ್ದಾನೆ.

ದಾಳಿಂಬೆ ಬೆಳೆದ ರೈತರಿಗೆ ನಷ್ಟ

ಇತ್ತೀಚಿನ ವರ್ಷಗಳಲ್ಲಿ ದಾಳಿಂಬೆ ಬೇಸಾಯ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರನ್ನು ಆಕರ್ಷಿಸಿದ್ದು, ಆರ್ಥಿಕ ಚೈತನ್ಯಕ್ಕೆ ಕಾರಣವಾದ ಕಾರಣ ದೊಡ್ಡ ದೊಡ್ಡ ರೈತರು ದ್ರಾಕ್ಷಿಗೆ ಗುಡ್‌ಬೈ ಹೇಳಿ ದಾಳಿಂಬೆಯತ್ತ ಮುಖ ಮಾಡಿದ್ದರು. ವರಮಹಾಲಕ್ಷ್ಮೀ, ದಸರಾಗಳ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳಿಗೆ 100 ರಿಂದ 150, 180ರತನಕ ಕೆ.ಜಿಯೊಂದಕ್ಕೆ ಬೆಲೆಯಿತ್ತು. ಆದರೆ ದಸರಾ ಹಬ್ಬದೊಂದಿಗೆ ಸುರಿದ ನಿರಂತರ ಮಳೆಗೆ ಸಿಕ್ಕಿದ ದಾಳಿಂಬೆ ಬೆಳೆ ತೋಟದಲ್ಲಿ ತೇವಾಂಶ ಹೆಚ್ಚಾದ ಪರಿಣಾಮ ಕೊಳೆಯುವ ರೋಗ ಮತ್ತು ಎಣ್ಣೆ ಚುಕ್ಕೆ ರೋಗಕ್ಕೆ ತುತ್ತಾಗಿದೆ. ನೂರಾರು ಕನಸುಹೊತ್ತು ಬೆಳೆದಿದ್ದ ಬೆಳೆ ಕಣ್ಣಮುಂದೆಯೇ ಕೊಳೆಯುತ್ತಿರುವುದನ್ನು ನೋಡಿದ ದಾಳಿಂಬೆ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.

ಕಳೆದೆರಡು ವಾರಗಳ ಹಿಂದೆ ಮೂರು-ನಾಲ್ಕು ದಿನ ಸುರಿದ ನಿರಂತರ ಮಳೆಯಿಂದಾಗಿ ದಾಳಿಂಬೆಗೆ ಕಾಣಿಸಿಕೊಂಡಿರುವ ಎಣ್ಣೆಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಬೆಲೆ ಸಿಗದಂತೆ ಮಾಡಿದೆ. ದಾಳಿಂಬೆ ಬೆಳೆ ಜುಲೈ-ಸೆಪ್ಟಂಬರ್ ನಡುವೆ ಫಸಲಿಗೆ ಬರುತ್ತದೆ ಸಾಮಾನ್ಯವಾಗಿ ಜಿಲ್ಲೆಯಲ್ಲಿ ರಫ್ತು ಮಾಡುವ ಸೀನನ್ ಅಕ್ಟೋಬರ್ ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ ಮಾಚ್‌ವರೆಗೂ ಸಾಗುತ್ತದೆ. ಹೀಗಾಗಿ ಸೀಸನ್ ಪ್ರಾರಂಭವಾಗುವ ಮೊದಲೇ ರೋಗ ಮತ್ತು ಮಳೆಯ ಹೊಡೆತ ಹಣ್ಣುಬೆಳೆಗಾರರ ಬೆನ್ನು ಮೂಳೆ ಮುರಿದಿವೆ.ಉತ್ತಮ ಕ್ವಾಲಿಟಿ ಕೆಜಿಗೆ ₹50

ಸದ್ಯದ ಪರಿಸ್ಥಿತಿಯಲ್ಲಿ ಬಜಾರಿನಲ್ಲಿ ಡ್ಯಾಮೇಜ್ ಇಲ್ಲದ ಹಣ್ಣು ಒಂದುನ ಕೆ.ಜಿಗೆ 50 ರೂಪಾಯಿಯಂತೆ ಬಿಕರಿ ಯಾಗುತ್ತಿದೆ. ಬಜಾರಿನಲ್ಲಿಯೇ ಈ ಬೆಲೆಯಿದ್ದರೆ ತೋಟದಲ್ಲಿ ಇಪ್ಪತ್ತು- ಮುವತ್ತು ರೂಪಾಯಿಗೆ ಮಾರುವ ಸ್ಥಿತಿ ನಿರ್ಮಾಣ ವಾಗಿದೆ. ಜಿಲ್ಲೆಯ ಮಟ್ಟಿಗೆ ನೂರಾರು ಮಂದಿ ಯುವ ರೈತರು ತಮ್ಮ ಸಾಫ್ಟ್ವೇರ್ ಉದ್ಯೋಗವನ್ನು ತೊರೆದು ಹಳ್ಳಿಗಳಿಗೆ ಬಂದು ಕೃಷಿಗೆ ಇಳಿದಿದ್ದರು. ಆದರೆ ದಾಳಿಂಬೆ ಬೆಳೆದು ಕೈ ಸುಟ್ಟುಕೊಳ್ಳುವಂತಾಗಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲುವಳ್ಳಿ ಗ್ರಾಮದ ಮೋಹನ್ ಎಂಬ ಯುವಕ ಸಾಫ್ಟ್ವೇರ್ ಉದ್ಯೋಗ ಬಿಟ್ಟು ತಂದೆಯ ಜತೆ ಸೇರಿ ದಾಳಿಂಬೆ ಬೆಳೆ ಬೆಳೆಯಲು ನಿಂತಿದ್ದನು. ಮೂರು ಎಕರೆ ತೋಟದಲ್ಲಿ ಹದಿನೈದು ಲಕ್ಷ ರೂಪಾಯಿ ಖರ್ಚು ಮಾಡಿ ಈ ಬಾರಿ ದಾಳಿಂಬೆ ಬೆಳೆದಿದ್ದು ಉತ್ತಮವಾಗಿ ಬೆಳೆ ಬಂದಿತ್ತು. ಆದರೆ ಹಿಂಗಾರು ಮಳೆಯ ರೋಗದ ಕಾರಣ ಕೈಗೆ ಬಂದಿದ್ದ ತುತ್ತು ಬಾಯಿಗೆ ಬರದಂತಾಗಿದೆ.ಕಳೆದ ಒಂದು ವಾರದಿಂದ ಎಡಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ತೋಟದಲ್ಲಿ ಹಣ್ಣು ಕೊಳೆಯುವಂತೆ ಮಾಡುವ ಮೂಲಕ ವಿಧಿ ರೈತನ ಬದುಕನ್ನು ಅಣಕಿಸಿ ಕೇಕೆಹಾಕಿರುವುದು ಕಲ್ಲೆದೆಯನ್ನು ಕೂಡ ಕರಗಿಸುವಂತಿದೆ.

ಬೆಳೆಗಾರರಿಗೆ ತರಬೇತಿ

ಇದು ಒಬ್ಬಿಬ್ಬರು ರೈತರ ಗೋಳು ಮಾತ್ರವಲ್ಲ, ಜಿಲ್ಲೆಯಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆ ಬೆಳೆದಿರುವ ನೂರಾರು ರೈತರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಹದಿನೈದು ದಿನಗಳ ಕೆಳಗೆ ದಾಳಿಂಬೆ ಬೆಳೆಗಾರರ ಒಕ್ಕೂಟ ಜಿಲ್ಲಾಕೇಂದ್ರದಲ್ಲಿಯೇ ದಾಳಿಂಬೆ ಬೆಳೆಗಾರರ ಮಹಾಸಮ್ಮೇಳನ ನಡೆಸಿ ದಾಳಿಂಬೆ ಬೆಳೆಗೆ ಬರುವ ರೋಗ, ಔಷಧೋಪಚಾರ, ಮಾರುಕಟ್ಟೆ, ನಾಟಿ, ಆರೈಕೆ, ಇತ್ಯಾದಿಗಳ ಬಗ್ಗೆ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಿಂದ ತರಬೇತಿ ಕೊಡಿಸಿದ್ದನ್ನು ಇಲ್ಲಿ ನೆನೆಯ ಬಹುದು.