ಜಿಪಂ, ತಾಪಂ ಸ್ಪರ್ಧೆಗೆ ಪೂರ್ವ ತಯಾರಿ..!

| Published : May 28 2024, 01:03 AM IST

ಸಾರಾಂಶ

ಜಿಪಂ ಮತ್ತು ತಾಪಂ ಕ್ಷೇತ್ರ ಪುನರ್‌ ವಿಂಗಡಣೆಯಾಗಿರುವುದರಿಂದ ಹಲವರು ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳನ್ನು ಕಳೆದುಕೊಂಡು ಅವಕಾಶ ವಂಚಿತರಾಗಿದ್ದರೆ, ಕೆಲವರು ಹೊಸದಾಗಿ ಸೇರ್ಪಡೆಯಾಗಿರುವ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಕ್ಷೇತ್ರದ ಮೀಸಲಾತಿ ಹಿಂದೆ ಯಾವುದಿತ್ತು, ಈಗ ಯಾವ ಮೀಸಲಾತಿ ಆಗಬಹುದು ಎಂಬ ಲೆಕ್ಕಾಚಾರದೊಂದಿಗೆ ಕ್ಷೇತ್ರವನ್ನು ಪ್ರತಿನಿಧಿಸುವುದಕ್ಕೆ ಪೂರ್ವ ತಯಾರಿ ಆರಂಭಿಸಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮೂರೂವರೆ ವರ್ಷದ ಬಳಿಕ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವುದಕ್ಕೆ ಸರ್ಕಾರ ಮನಸ್ಸು ಮಾಡಿದೆ. ನಾಯಕರ ಚುನಾವಣೆಗಳೆಲ್ಲವೂ ಮುಗಿದಿದ್ದು, ಇದೀಗ ಕಾರ್ಯಕರ್ತರು ಚುನಾವಣೆ ಎದುರಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಜಿಪಂ ಮತ್ತು ತಾಪಂ ಕ್ಷೇತ್ರಗಳು ಬದಲಾವಣೆಯಾಗಿದ್ದು, ಅದಕ್ಕೆ ತಕ್ಕಂತೆ ಕ್ಷೇತ್ರಗಳಿಂದ ಕಣಕ್ಕಿಳಿಯುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಜಿಪಂ ಮತ್ತು ತಾಪಂ ಕ್ಷೇತ್ರ ಪುನರ್‌ ವಿಂಗಡಣೆಯಾಗಿರುವುದರಿಂದ ಹಲವರು ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳನ್ನು ಕಳೆದುಕೊಂಡು ಅವಕಾಶ ವಂಚಿತರಾಗಿದ್ದರೆ, ಕೆಲವರು ಹೊಸದಾಗಿ ಸೇರ್ಪಡೆಯಾಗಿರುವ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಕ್ಷೇತ್ರದ ಮೀಸಲಾತಿ ಹಿಂದೆ ಯಾವುದಿತ್ತು, ಈಗ ಯಾವ ಮೀಸಲಾತಿ ಆಗಬಹುದು ಎಂಬ ಲೆಕ್ಕಾಚಾರದೊಂದಿಗೆ ಕ್ಷೇತ್ರವನ್ನು ಪ್ರತಿನಿಧಿಸುವುದಕ್ಕೆ ಪೂರ್ವ ತಯಾರಿ ಆರಂಭಿಸಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಚುನಾವಣೆಯೇ ನಡೆಯದೆ ತೀವ್ರ ನಿರಾಸೆಗೊಳಗಾಗಿದ್ದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದೀಗ ಚುನಾವಣೆ ನಡೆಸುವ ಮುನ್ಸೂಚನೆ ದೊರೆತಿರುವುದರಿಂದ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಕ್ಷೇತ್ರದ ಜನರೊಂದಿಗೆ ಒಡನಾಟ ಹೆಚ್ಚಿಸಿಕೊಳ್ಳುತ್ತಾ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪುರುಷರೊಂದಿಗೆ ಮಹಿಳೆಯರೂ ಕೂಡ ಸಾಕಷ್ಟು ಚುರುಕಿನಿಂದ ಓಡಾಡುತ್ತಾ ತಾವೇ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಾ ಮುನ್ನಡೆದಿದ್ದಾರೆ. ಸ್ಥಳೀಯ ರಾಜಕೀಯ ನಾಯಕರ ಬಳಿ ಮುಖಂಡರು-ಕಾರ್ಯಕರ್ತರು ಜಿಪಂ-ತಾಪಂ ವ್ಯಾಪ್ತಿಯ ವಿವಿಧ ಕ್ಷೇತ್ರಗಳಿಂದ ಸ್ಪರ್ಧೆಗೆ ಅವಕಾಶ ಕಲ್ಪಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ತಾವು ಸ್ಪರ್ಧಿಸಲಾಗಿದ್ದ ಕಡೆ ಪತ್ನಿಯರಿಗೆ ಅವಕಾಶ ನೀಡುವಂತೆ ಕೋರಿಕೆ ಇಡುತ್ತಾ ನಾಯಕರ ಬೆನ್ನುಹತ್ತಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡರು- ಕಾರ್ಯಕರ್ತರು ತಾವು ಸ್ಪರ್ಧಿಸಬಹುದಾದ ಕ್ಷೇತ್ರಗಳನ್ನು ಗುರುತಿಸಿಕೊಂಡು ಸಚಿವರು, ಶಾಸಕರಿಗೆ ದುಂಬಾಲು ಬಿದ್ದಿದ್ದಾರೆ. ಮೊದಲು ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟವಾಗಲಿ ಆ ನಂತರ ಚರ್ಚಿಸೋಣ ಎನ್ನುತ್ತಿದ್ದರೂ ತಮ್ಮ ಸ್ಪರ್ಧೆಗೆ ಅನುಕೂಲವಾಗುವಂತೆ ಮೀಸಲಾತಿ ನಿಗದಿಯಾಗದಿದ್ದರೆ ಅದನ್ನು ಬದಲಾಯಿಸಿಕೊಡುವಂತೆಯೂ ಒತ್ತಡ ಹೇರುತ್ತಿದ್ದಾರೆ.

ಶಾಸಕರು, ಮಾಜಿ ಶಾಸಕರ ಪುತ್ರರು, ಸಹೋದರರು, ಸಂಬಂಧಿಗಳು ಹಾಗೂ ಪ್ರಭಾವಿ ಮುಖಂಡರ ಸಹೋದರರು, ಪತ್ನಿಯರು ಸೇರಿದಂತೆ ಹಲವಾರು ಮಂದಿ ಜಿಪಂ ಮತ್ತು ತಾಪಂ ಚುನಾವಣೆಯನ್ನು ಗುರಿಯಾಗಿಸಿಕೊಂಡು ಈಗಿನಿಂದಲೇ ನಾಯಕರೆದುರು ಬೇಡಿಕೆ ಇಡುತ್ತಿದ್ದಾರೆ. ಮೂರು ಪಕ್ಷಗಳ ವರ್ಚಸ್ವಿ ನಾಯಕರ ಕಡೆಯವರಿಗೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅವರೇ ಸೂಚಿಸುವ ವಿವಿಧ ಜಾತಿ-ಪಂಗಡದವರ ಸ್ಪರ್ಧೆಗೆ ಅವಕಾಶ ಕಲ್ಪಿಸಿಕೊಟ್ಟು ತಮ್ಮ ಪ್ರಾಬಲ್ಯ ಸ್ಥಾಪಿಸುವುದಕ್ಕೂ ಕಾರ್ಯಯೋಜನೆ ಸಿದ್ಧಪಡಿಸಿಕೊಂಡು ಚುನಾವಣಾ ಕಾರ್ಯಚಟುವಟಿಕೆಗಳಿಗೆ ಚುರುಕು ನೀಡುತ್ತಿದ್ದಾರೆ.

ಕ್ಷೇತ್ರ ಪುನರ್‌ ವಿಂಗಡಣೆಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಕಂಡುಬಂದಿರುವುದರಿಂದ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ. ಹಳಬರಲ್ಲಿ ಕೆಲವರು ಬದಲಾವಣೆಯೊಂದಿಗೆ ಹೊಂದಿಕೊಂಡು ಕ್ಷೇತ್ರದ ಜನರ ವಿಶ್ವಾಸದೊಂದಿಗೆ ಸ್ಪರ್ಧಿಸುವುದನ್ನೂ ಅಲ್ಲಗೆಳೆಯಲಾಗುವುದಿಲ್ಲ. ಜಿಪಂ ೪೦, ತಾಪಂ ೧೩೭ ಕ್ಷೇತ್ರಗಳು

ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆಯಿಂದ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ ೪೦ ಹಾಗೂ ತಾಪಂ ಕ್ಷೇತ್ರಗಳ ಸಂಖ್ಯೆಯನ್ನು ೧೩೭ಕ್ಕೆ ಇಳಿಸಲಾಗಿದೆ. ಈ ಹಿಂದೆ ಜಿಪಂ ಕ್ಷೇತ್ರಗಳ ಸಂಖ್ಯೆ ೪೧ ಇತ್ತು. ಆ ನಂತರ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ನೀಡಿದ್ದ ಕ್ಷೇತ್ರಗಳನ್ನು ಕೈಬಿಟ್ಟಿದ್ದಲ್ಲದೆ ಹಿಂದೆ ಇದ್ದ ೪೧ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಕಡಿತಗೊಳಿಸಲಾಗಿದೆ.

೨೦೨೧ರ ಫೆಬ್ರವರಿ ತಿಂಗಳಿನಲ್ಲಿ ಮಂಡ್ಯ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಿದ್ದ ವೇಳೆ ಜಿಪಂ ಕ್ಷೇತ್ರಗಳನ್ನು ೪೧ ರಿಂದ ೪೬ಕ್ಕೆ ಏರಿಸಲಾಗಿತ್ತು. ಮಂಡ್ಯ-೮, ಮದ್ದೂರು-೮, ಮಳವಳ್ಳಿ-೮, ಪಾಂಡವಪುರ-೫, ಶ್ರೀರಂಗಪಟ್ಟಣ-೫ ಹಾಗೂ ನಾಗಮಂಗಲ ತಾಲೂಕಿಗೆ ೫ ಕ್ಷೇತ್ರಗಳನ್ನು ನಿಗದಿಪಡಿಸಲಾಗಿತ್ತು. ಎಲ್ಲ ತಾಲೂಕಿಗೂ ತಲಾ ೧ ಕ್ಷೇತ್ರವನ್ನು ಹೆಚ್ಚುವರಿಯಾಗಿ ನೀಡಿತ್ತು.

ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ೨೯ ಕ್ಷೇತ್ರಗಳನ್ನು ಕಡಿತಗೊಳಿಸಿ ೧೫೫ ರಿಂದ ೧೨೬ಕ್ಕೆ ಇಳಿಸಿತ್ತು. ಮಂಡ್ಯ ತಾಲೂಕಿನಲ್ಲಿ ೨೮ ಕ್ಷೇತ್ರಗಳಿಂದ ೨೩ಕ್ಕೆ ಇಳಿಸಲಾಗಿತ್ತು. ಅದರಂತೆ ಮದ್ದೂರಿನಲ್ಲಿ ೨೭ ರಿಂದ ೨೨ಕ್ಕೆ, ಮಳವಳ್ಳಿಯಲ್ಲಿ ೨೫ ರಿಂದ ೨೦ಕ್ಕೆ, ಪಾಂಡವಪುರ ೧೭ ರಿಂದ ೧೪ಕ್ಕೆ, ಶ್ರೀರಂಗಪಟ್ಟಣದಲ್ಲಿ ೧೬ ರಿಂದ ೧೩ಕ್ಕೆ, ಕೆ.ಆರ್.ಪೇಟೆಯಲ್ಲಿ ೨೪ ರಿಂದ ೧೯ಕ್ಕೆ ಹಾಗೂ ನಾಗಮಂಗಲ ತಾಲೂಕಿನಲ್ಲಿ ೧೮ ರಿಂದ ೧೩ಕ್ಕೆ ಇಳಿಸಿತ್ತು. ಮತ್ತೆ ೧೬ ಡಿಸೆಂಬರ್ ೨೦೨೩ರಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ತಾಪಂ ಸ್ಥಾನಗಳ ಸಂಖ್ಯೆಯನ್ನು ೧೩೭ಕ್ಕೆ ಏರಿಸಿದೆ. ಅದರಂತೆ ನಾಗಮಂಗಲ-೧೬, ಶ್ರೀರಂಗಪಟ್ಟಣ-೧೬, ಪಾಂಡವಪುರ-೧೭, ಕೆ.ಆರ್.ಪೇಟೆ-೨೦, ಮಳವಳ್ಳಿ-೨೧, ಮದ್ದೂರು-೨೩, ಮಂಡ್ಯ ತಾಲೂಕಿಗೆ ೨೪ ಸ್ಥಾನಗಳನ್ನು ನಿಗದಿಪಡಿಸಿದೆ. ಇದೇ ಅಂತಿಮ ಆಗಬಹುದು ಅಥವಾ ಇನ್ನೊಂದಷ್ಟು ಬದಲಾವಣೆಯಾಗುವ ಸಾಧ್ಯತೆಗಳೂ ಇವೆ.