ಸಾರಾಂಶ
ಗದಗ: ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತವಾಗಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಹೇಳಿದರು.
ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಪಥ ತೀವ್ರಗೊಳಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವ ಮೂಲಕ ಅಭಿವೃದ್ಧಿ ತೀವ್ರಗೊಳಿಸಲು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿದೆ ಎಂದರು.ಆಡಳಿತದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ: ಹೊಸ ಆರ್ಥಿಕ ವರ್ಷ ಪ್ರಾರಂಭವಾದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರದ ಬದ್ಧತೆಯ ಕುರಿತು ಎಲ್ಲ ಅಧಿಕಾರಿಗಳಿಗೆ ತಿಳಿಸಲಾಗಿದೆ.ಆಡಳಿತ ಪಾರದರ್ಶಕವಿರಬೇಕು. ಜನಸ್ನೇಹಿಯಾಗಿ ಸರ್ಕಾರಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.ನಾಗರಿಕರೊಂದಿಗೆ ಗೌರವದಿಂದ ಹಾಗೂ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸಬೇಕು. ಗದಗ ಜಿಲ್ಲೆಯು ಇ ಆಫೀಸ್ ನಿರ್ವಹಣೆಯಲ್ಲಿ ಪ್ರಥಮ ಸ್ಥಾನಲ್ಲಿರಬೇಕು. ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಇ–ಆಫೀಸ್ ಪ್ರಾರಂಭ ಮಾಡಬೇಕು.ಅಗಷ್ಟ 12 ರೊಳಗಾಗಿ ಜಿಲ್ಲಾಮಟ್ಟದ ಅಧಿಕಾರಿಗಳು ಆಡಳಿತವನ್ನು ಇ ಆಫೀಸ್‍ನಲ್ಲಿ ಪ್ರಾರಂಭಿಸಬೇಕು ಎಂದರು.
ಡೆಂಘೀ ಸ್ಥಿತಿಗತಿ: ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ 1479 ಡೆಂಘೀ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 1102 ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು, 70 ಡೆಂಘೀ ಪ್ರಕರಣಗಳು ಖಚಿತಪಟ್ಟಿವೆ. 49 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 32 ಜನರು ಗದಗನ ಜಿಮ್ಸ್‌ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಜನ ಐಸಿಯುನಲ್ಲಿದ್ದಾರೆ. 2 ಜನರು ವೆಂಟಿಲೇಟರ್ ಇಡಲಾಗಿತ್ತು ಅವರು ಕೂಡ ಈಗ ವೆಂಟಿಲೇಟರ್ ದಿಂದ ಹೊರಬಂದಿದ್ದಾರೆ. ಸಾರ್ವಜನಿಕರು ಡೆಂಘೀ ಲಕ್ಷಣಗಳಿದ್ದಲ್ಲಿ ನಿರ್ಲಕ್ಷ್ಯ ವಹಿಸದೇ ತಕ್ಷಣ ಚಿಕಿತ್ಸೆಗೆ ಒಳಗಾಗಬೇಕು ಎಂದು ಮನವಿ ಮಾಡಿದರು.ಅಭಿವೃದ್ಧಿ ಪಥದೆಡೆಗೆ ಪಯಣ: ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಗದಗ ಜಿಲ್ಲೆಯು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 16ನೇ ಸ್ಥಾನ ಪಡೆದಿದ್ದು, ಮುಂದಿನ 6-8 ತಿಂಗಳಲ್ಲಿ 10ನೇ ಸ್ಥಾನದೊಳಗೆ ಬರಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲಾ ಅಭಿವೃದ್ಧಿಗಾಗಿ ವಿಜನ್ ಡೊಕ್ಯುಮೆಂಟ್ 2024-25, 25-26, 26-27, ಸಿದ್ಧಪಡಿಸಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ.
ಶೇ.33ರಷ್ಟು ಅರಣ್ಯ ಪ್ರದೇಶ: ಜಿಲ್ಲೆಯಲ್ಲಿ 4 ಲಕ್ಷ ಗಿಡ ನೆಡುವ ಗುರಿಯಿದ್ದು, ಪ್ರಸಕ್ತ ಸಾಲಿನಲ್ಲಿ ಖಾಸಗಿಯವರಿಂದ ಸಸಿ ಖರೀದಿಸಿ ನೆಡುವ ಕುರಿತು ಕ್ರಮ ವಹಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಶೇ.33 ರಷ್ಟು ಅರಣ್ಯ ಪ್ರದೇಶ ಆಗುವ ಹಾಗೇ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ 5 ಕೋಟಿ ಪ್ಲಾಂಟೇಷನ್ ಮಾಡಲು ನಿರ್ಣಯಿಸಲಾಗಿದೆ. ಕಪ್ಪತಗುಡ್ಡದಲ್ಲಿ ಇನ್ನೂ ವಿವಿಧ ಗಿಡಗಳನ್ನು ಬೆಳೆಸಲು ಅವಕಾಶವಿದ್ದು ವಿಶೇಷ ಅರಣ್ಯ ನಿರ್ಮಿಸುವಲ್ಲಿ ಒತ್ತು ಕೊಡಲಾಗುತ್ತಿದೆ.400 ಶಾಲಾ ಕೊಠಡಿಗಳ ಅವಶ್ಯಕತೆ: ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ 400 ಕೊಠಡಿಗಳ ಕೊರತೆಯಿದ್ದು. ಸರ್ಕಾರದ ವಿವಿಧ ಯೋಜನೆಗಳ ಅನುದಾನದಿಂದ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 10,830 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹಣ ಬಿಡುಗಡೆ ಮಾಡಲಾಗಿದೆ. 2430 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬರಬೇಕಾಗಿದೆ. ಮಾಸಾಂತ್ಯದಲ್ಲಿ ಸ್ಕಾಲರ್ ಶಿಪ್ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು.
ಪ್ರವಾಸೋದ್ಯಮ ಅಭಿವೃದ್ಧಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಕಪ್ಪತಗುಡ್ಡದ ಅಭಿವೃದ್ಧಿ ಬಹಳ ಮುಖ್ಯವಾಗಿದ್ದು ಅನುಷ್ಟಾನಗೊಳಿಸಲಾಗುತ್ತಿದೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ನೈಟ್ ಸಫಾರಿ ಯೋಜನೆ ಜಾರಿಗೊಳಿಸಲು ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ₹4 ಕೋಟಿಗಳ ಅನುದಾನ ಒದಗಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಜನನ ಮರಣ ನೋಂದಣಿಗಳ ಕಾರ್ಯಕ್ಕೆ ಗ್ರಾಪಂ ಕಾರ್ಯದರ್ಶಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹುಲಕೋಟಿ ಗ್ರಾಪಂ ಫಲಾನುಭವಿಗೆ ಜನನ ಪ್ರಮಾಣ ಪತ್ರ ಹಸ್ತಾಂತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್.ಎಸ್ ಉಪಸ್ಥಿತರಿದ್ದರು.