ಸಾರಾಂಶ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನಲ್ಲಿ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ತುಳು ಭಾಷೆಯ ಪ್ರಾಚೀನ ಹಸ್ತಪ್ರತಿ, ತಾಳೆ ಗರಿ, ದಾಖಲೆಗಳ ಸಂರಕ್ಷಣೆಯ ಕಾರ್ಯ ಅತ್ಯಗತ್ಯವಾಗಿ ನಡೆಯಬೇಕು ಎಂದು ಮಂಗಳೂರು ಥಿಯೋಲಾಜಿಕಲ್ ಕಾಲೇಜಿನ ಪತ್ರಗಾರ ವಿಭಾಗದ ನಿವೃತ್ತ ಸಹಾಯಕ ಬೆನೆಟ್ ಜಿ. ಅಮ್ಮನ್ನ ಹೇಳಿದರು.ಅವರು ಭಾನುವಾರ ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನಲ್ಲಿ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
8ನೇ ಶತಮಾನದಲ್ಲಿಯೇ ತುಳು ಭಾಷೆ ಸಮೃದ್ಧವಾಗಿತ್ತು. ಪಿ.ಎಸ್. ಪುಣಿಂಚಿತ್ತಾಯ ಅವರು ತುಳು ಲಿಪಿಯನ್ನು ಬೆಳಕಿಗೆ ತಂದಿದ್ದಾರೆ. ಮಂಗಳೂರಿನ ಥಿಯೋಲಾಜಿಕಲ್ ಕಾಲೇಜಿನ ಪತ್ರಾಗಾರದಲ್ಲಿ ಸಾಕಷ್ಟು ಹಸ್ತಪ್ರತಿಗಳಿವೆ. ಅಲ್ಲಿನ ಗ್ರಂಥಾಲಯದಲ್ಲಿ 40 ಸಾವಿರಕ್ಕೂ ಹೆಚ್ಚು ತುಳುದಾಖಲೆಗಳಿವೆ ಎಂದರು.ಪತ್ರಾಗಾರದಲ್ಲಿ ಕೆಲಸ ಮಾಡುತ್ತಿದ್ದಾಗ ನೂರಾರು ಸಂಶೋಧಕರು, ವಿದ್ಯಾರ್ಥಿಗಳು ನನ್ನ ಬಳಿಗೆ ಬಂದು ಸಂಶೋಧನೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದರಿಂದ ಸ್ಫೂರ್ತಿಗೊಂಡು ಸಂಶೋಧನಾ ಕ್ಷೇತ್ರಕ್ಕಿಳಿದೆ ಮತ್ತು ಕೃತಿ ರಚನೆಯಲ್ಲಿ ತೊಡಗಿಕೊಂಡೆ ಎಂದವರು ಹೇಳಿದರು.
ಚೇಳ್ಯಾರು ಗುತ್ತು ಎಸ್.ಆರ್. ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಹೆಗ್ಡೆ ಮಾತನಾಡಿ, ಬೆನೆಟ್ ಜಿ. ಅಮ್ಮನ್ನ ಅವರು ಸಿರಿ ಬಗ್ಗೆ ಹೊಸ ಶೋಧ ನಡೆಸಿದ್ದಾರೆ. ಆ ಕುರಿತ ಕೃತಿ ಅವರ ಸಂಪಾದಕತ್ವದಲ್ಲಿ ಶೀಘ್ರ ಹೊರಬರಲಿದೆ ಎಂದರು.ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಪ್ರಾಧ್ಯಾಪಕ ರಾಮದಾಸ ಪ್ರಭು, ‘ತುಳುನಾಡಿನ ಪ್ರಭುತ್ವ ಹಾಗೂ ಧಾರ್ಮಿಕ ಪಂಥಗಳು’ ಬಗ್ಗೆ ಉಪನ್ಯಾಸ ನೀಡಿದರು.
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಮುಖ್ಯಸ್ಥೆ ಸಾಯಿಗೀತ, ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಪದ್ಮಾವತಿ ಭಟ್ ಸಹಕರಿಸಿದರು.