ಸಮಗ್ರ, ಸಮತೋಲಿತ ಅಭಿವೃದ್ಧಿ ಕ್ರಮಗಳಿಗೆ ಆದ್ಯತೆ

| Published : Feb 21 2025, 12:51 AM IST

ಸಾರಾಂಶ

ಸರ್ಕಾರವು ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು 2007-08 ರಿಂದ ಜಾರಿಗೊಳಿಸಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ಈ ವರದಿಯ ಪುನರ್ ವಿಮರ್ಶೆ ಮಾಡುವುದರ ಜತೆಗೆ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಹೊಸ ಮಾರ್ಗಸೂಚಿ ಅಥವಾ ಶಿಫಾರಸ್‌ಗಳ ಅಗತ್ಯವಿದೆ. ಆದ್ದರಿಂದ ಸಮಿತಿಯು 40-50 ಸೂಚ್ಯಂಕಗಳನ್ನು ಪಟ್ಟಿ‌ ಮಾಡಿಕೊಂಡಿದ್ದು, ಅವುಗಳ ಆಧಾರದ‌ ಮೇಲೆ ವಿಸ್ತೃತವಾಗಿ ಅಧ್ಯಯನ ಕೈಗೊಂಡು ಅಗತ್ಯ ಕ್ರಮಗಳನ್ನು ಸಮಿತಿಯು ಶಿಫಾರಸ್‌ ಮಾಡಲಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರವು ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು 2007-08 ರಿಂದ ಜಾರಿಗೊಳಿಸಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ಈ ವರದಿಯ ಪುನರ್ ವಿಮರ್ಶೆ ಮಾಡುವುದರ ಜತೆಗೆ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಹೊಸ ಮಾರ್ಗಸೂಚಿ ಅಥವಾ ಶಿಫಾರಸ್‌ಗಳ ಅಗತ್ಯವಿದೆ. ಆದ್ದರಿಂದ ಸಮಿತಿಯು 40-50 ಸೂಚ್ಯಂಕಗಳನ್ನು ಪಟ್ಟಿ‌ ಮಾಡಿಕೊಂಡಿದ್ದು, ಅವುಗಳ ಆಧಾರದ‌ ಮೇಲೆ ವಿಸ್ತೃತವಾಗಿ ಅಧ್ಯಯನ ಕೈಗೊಂಡು ಅಗತ್ಯ ಕ್ರಮಗಳನ್ನು ಸಮಿತಿಯು ಶಿಫಾರಸ್‌ ಮಾಡಲಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಹೇಳಿದರು.

ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಗುರುವಾರ ಜರುಗಿದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ನಾಲ್ಕು ವಿಭಾಗಗಳಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿಂದ ಸಲಹೆ, ಅಭಿಪ್ರಾಯಗಳನ್ನು ಆಲಿಸಲಾಗುತ್ತಿದೆ. ಡಾ.ನಂಜುಂಡಪ್ಪ 2002ಕ್ಕೆ ವರದಿ ಸಲ್ಲಿಸಿರುತ್ತಾರೆ. ಅವರ ವರದಿಯು 35 ಸೂಚ್ಯಂಕಗಳ ಆಧಾರದಲ್ಲಿ ರಚಿಸಲಾಗಿರುತ್ತದೆ. ಅತ್ಯಂತ ಹಿಂದುಳಿದ, ಹಿಂದುಳಿದ ತಾಲೂಕುಗಳೆಂದು ವರ್ಗೀಕರಿಸಿದ್ದರು. ₹31 ಸಾವಿರ ಕೋಟಿ ಮೂಲಸೌಕರ್ಯಗಳಿಗೆ ಖರ್ಚು ಮಾಡಬೇಕು ಎಂದು ವರದಿಯಲ್ಲಿ ತಿಳಿಸಿದ್ದರು. ರಾಜ್ಯದ 4 ಜಿಲ್ಲೆಗಳಲ್ಲಿ ಮಾತ್ರ ತಲಾ ಆದಾಯ ರಾಜ್ಯದ ಒಟ್ಟಾರೆ ತಲಾ ಆದಾಯಕ್ಕಿಂತ ಹೆಚ್ಚಿದೆ. ಬೆಂಗಳೂರಿನ ತಲಾ ಆದಾಯವು ಹೆಚ್ಚಿದ್ದು, ಇದರಿಂದ ರಾಜ್ಯದ ಒಟ್ಟಾರೆ ತಲಾ ಆದಾಯ ಹೆಚ್ಚಾಗಿರುತ್ತದೆ. ಆದರೆ‌, ಉಳಿದ ಜಿಲ್ಲೆಗಳ ಕೊಡುಗೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ ಎಂದು ತಿಳಿಸಿದರು.

ನೀರಾವರಿಗೆ ಶೇ.25 ಹಾಗೂ ಗ್ರಾಮೀಣಾಭಿವೃದ್ಧಿಗೆ ಶೇ.21 ರಷ್ಟು ಖರ್ಚಾಗುತ್ತಿದೆ. ಉಳಿದ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ನೀಡಬೇಕಿದೆ. ಕೃಷಿ ಆದಾಯ‌ ಈಗ ಶೇ.9 ರಷ್ಟಿದೆ. ಕೈಗಾರಿಕೆ, ಉತ್ಪಾದನೆ ಮತ್ತಿತರ ಕ್ಷೇತ್ರಗಳಿಂದ ಉತ್ತಮ ಆದಾಯ ಬರುತ್ತಿದೆ. ಶೇ.9 ರಷ್ಟು ಆದಾಯ ಪ್ರಮಾಣವಿರುವ ಕ್ಷೇತ್ರದಲ್ಲಿ ಶೇ.41 ರಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ಈ ಅಸಮತೋಲನವನ್ನು ನಿವಾರಿಸಬೇಕಿದೆ ಎಂದರು.ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಆರ್ಥಿಕ ಇಲಾಖೆಯ ಕಾರ್ಯದರ್ಶಿ ವಿಶಾಲ್.ಆರ್, ಸರ್ಕಾರದ ವತಿಯಿಂದ‌ ಅನುದಾನ ಘೋಷಣೆ ಜತೆಗೆ ಖಾಸಗಿ ವಲಯಗಳಾದ ಕೈಗಾರಿಕೆ, ಆಹಾರ ಸಂಸ್ಕಾರಣೆ ಮತ್ತಿತರ ಕ್ಷೇತ್ರಗಳಿಗೆ ಯಾವ ರೀತಿಯ ಉತ್ತೇಜನ ನೀಡಬೇಕು ಎಂಬುವುದನ್ನು ಅರಿತುಕೊಂಡು ಆ ಅಂಶಗಳನ್ನು ವರದಿಯಲ್ಲಿ ಅಳವಡಿಸಲಾಗುವುದು. ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು. ಸರ್ಕಾರದ ಯೋಜನೆ ತ್ವರಿತಗತಿಯಲ್ಲಿ ಜಾರಿಗೆ ತರುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿರುವುದಿಲ್ಲ. ಉದ್ಯೋಗಾಧಾರಿತ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಸರ್ಕಾರಿ ಶಾಲಾ-ಕಾಲೇಜುಗಳ ಗುಣಮಟ್ಟವನ್ನು ಖಾಸಗಿ ಮಾದರಿಯಲ್ಲಿ ಒದಗಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಮತ್ತು ನೀರಾವರಿ ಸೌಲಭ್ಯ ಒದಗಿಸುವ ಅಗತ್ಯವಿದೆ ಎಂದರು.ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಖಾನಾಪುರ ಕ್ಷೇತ್ರದಲ್ಲಿ ಶೇ.50 ರಷ್ಟು ಅರಣ್ಯ ಪ್ರದೇಶವಿರುವುದರಿಂದ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ; ಕೆಲವು ಪಂಚಾಯಿತಿಗಳಲ್ಲಿ ಮೂವತ್ತಕ್ಕೂ ಅಧಿಕ ಗ್ರಾಮಗಳಿದ್ದು, ಸಣ್ಣ ಸಣ್ಞ ಗ್ರಾಮ ಪಂಚಾಯಿತಿ ರಚಿಸುವ ಅಗತ್ಯವಿದೆ. ಮಲೆನಾಡು ಅಭಿವೃದ್ಧಿಗೆ ಹೆಚ್ಚಿನ‌ ಅನುದಾನ ಒದಗಿಸಬೇಕು. ಕಿತ್ತೂರು ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಕೆಲವು ಕಡೆ ಇರುವ ಭಾಷಾ ಅಸಮಾನತೆ ನಿವಾರಣೆಗೆ ಕ್ರಮ ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕೈಗಾರಿಕಾ ವಲಯದಲ್ಲಿ ಫೌಂಡ್ರಿ ಕ್ಲಸ್ಟ್ರರ್‌, ಏರೋಸ್ಪೇಸ್, ಪ್ರವಾಸೋದ್ಯಮ, ಜವಳಿ, ಅಪೇರಲ್ಸ್, ಅಗ್ರೋ ಹಾಗೂ ಸಕ್ಕರೆ ಉತ್ಪಾದನೆ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯು ಮುಂಚೂಣಿಯಲ್ಲಿದೆ. ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ. ಕೃಷಿ ಸೇರಿದಂತೆ ಈ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಕಾನೂನು ಸುವ್ಯವಸ್ಥೆ ರಕ್ಷಣೆಗೆ ಅನುಕೂಲವಾಗುವಂತೆ ನಾಗರಿಕರ ಸಂಖ್ಯೆಯ ಅನುಪಾತದಲ್ಲಿರುವ ಅಸಮತೋಲನವನ್ನು ನಿವಾರಿಸಲು ಆದ್ಯತೆ ನೀಡಬೇಕಿದೆ ಎಂದರು.ಅಸಮತೋಲನ ನಿವಾರಣಾ ಸಮಿತಿಯ ನಿರ್ದೇಶಕ ಡಿ.ಚಂದ್ರಶೇಖರಯ್ಯ, ನಂಜುಂಡಪ್ಪ ಸಮಿತಿ ಸೂಚ್ಯಂಕಗಳಲ್ಲಿ ಬದಲಾವಣೆ ಅಗತ್ಯ ಕಂಡುಬಂದಿರುವುದರಿಂದ ಹೊಸದಾಗಿ ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ತಿಳಿಸಿದರು.ಉತ್ತರ ಕರ್ನಾಟಕ ವೇದಿಕೆ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ, ದಕ್ಷಿಣ ಕರ್ನಾಟಕದ ಸಮಗ್ರ ಅಭಿವೃದ್ಧಿಯಂತೆ ಆಡಳಿತಾತ್ಮಕ ಅಭಿವೃದ್ಧಿ ಉತ್ತರ ಕರ್ನಾಟಕದಲ್ಲಿ ಸಹ ಆಗಬೇಕು ಎಂಬುದು ಜನರ ಅಭಿಪ್ರಾಯವಾಗಿದೆ. ಉತ್ತರ ಕರ್ನಾಟಕದ ಭಾಗದ ಜನರಿಗೆ ಸರಳವಾಗಿ ಆಡಳಿತ ಸೌಲಭ್ಯಗಳು ಸಿಗಬೇಕಿದೆ. ಆಡಳಿತಾತ್ಮಕ ಶಕ್ತಿ ಕೇಂದ್ರವಾಗಿ ಸುವರ್ಣ ವಿಧಾನಸೌಧ ಮಾರ್ಪಡಬೇಕು. ಸುವರ್ಣ ವಿಧಾನಸೌಧದಿಂದ ಆಡಳಿತಾತ್ಮಕ ಅಧಿಕಾರ ಮುಂದುವರೆಯಬೇಕಿದೆ ಎಂದರು.ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ ಇನ್ನಷ್ಟು ಉತ್ತೇಜನ ನೀಡಲು ಅನುಕೂಲವಾಗುವಂತೆ ರಕ್ಷಣಾ ವಲಯದ ಉತ್ಪಾದನಾ ಘಟಕ, ಸಾರ್ವಜನಿಕ ಉದ್ಯಮ ಮತ್ತು ತಾಂತ್ರಿಕ ಶಿಕ್ಷಣ ಕೇಂದ್ರ ಸ್ಥಾಪಿಸುವ ಅಗತ್ಯವಿದೆ ಎಂದು ಆನಂದ ದೇಸಾಯಿ ತಿಳಿಸಿದರು. ಹೋಟೆಲ್ ಉದ್ಯಮ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಜಯ್ ಪೈ ಸಲಹೆ ನೀಡಿದರು.ರವೀಂದ್ರ ಪ್ರೈ.ಲಿ. ಕಂಪೆನಿಯ ಬಸವರಾಜ ಪಾಟೀಲ ಅವರು, ಸೋಲಾರ್ ಮತ್ತು ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಲಭ್ಯವಿರುವ ಅವಕಾಶಗಳು ಮತ್ತು ಅಭಿವೃದ್ಧಿಗೆ ಇರುವ ಅವಕಾಶಗಳ ಮೇಲೆ‌ ಬೆಳಕು ಚೆಲ್ಲಿದರು. ಸೋಲಾರ ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಅವಕಾಶಗಳಿದ್ದು, ಇದಕ್ಕೆ‌ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದರು.ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಮಾತನಾಡಿ, ನದಿತೀರದ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಪ್ರತಿ ವರ್ಷ ಶೇ.5 ಇಳುವರಿ ಹೆಚ್ಚಳವಾಗುತ್ತಿದೆ ಎಂದರು.ಸಮಿತಿಯ ಸದಸ್ಯರಾದ ಸೂರ್ಯನಾರಾಯಣರಾವ್ ಎಂ.ಎಚ್, ಡಾ.ಎಸ್.ಡಿ.ಬಾಗಲಕೋಟಿ, ಖಾನಾಪುರ ಶಾಸಕರಾದ ವಿಠ್ಠಲ ಹಲಗೇರ, ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಡಾ.ಆರ್.ವಿಶಾಲ್, ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸಭೆಯಲ್ಲಿ ಉಪಸ್ಥಿತರಿದ್ದರು.