ಜೀವ ಸಂಕುಲ ಉಳುವಿಗೆ ಸಸ್ಯ ಸಂಪತ್ತು ರಕ್ಷಿಸಿ

| Published : Oct 07 2024, 01:31 AM IST

ಸಾರಾಂಶ

ಬೇವಿನ ಎಣ್ಣಿ ಬಳಸುವ ಮೂಲಕ ಸಾವಯವ ಕೃಷಿ ಪದ್ಧತಿ ಅನುಸರಿಸಿಕೊಂಡು ಆರೋಗ್ಯಯುಕ್ತ ಆಹಾರ ಬೆಳೆಯುವಲ್ಲಿ ರೈತರು ಮುಂದಾಗಬೇಕು

ರೋಣ: ಜೀವ ಸಂಕುಲದ ಉಳಿವಿಗಾಗಿ ಸಸ್ಯ ಸಂಪತ್ತು ರಕ್ಷಿಸಿ. ಈ ನಿಟ್ಟಿನಲ್ಲಿ ರೈತರಷ್ಟೇ ಅಲ್ಲದೇ ಪ್ರತಿಯೊಬ್ಬರದ್ದು ಬಹುಮುಖ್ಯ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ತೋಟಗಾರಿಕೆ ವಿಶ್ರಾಂತ ಹಿರಿಯ ಪ್ರಾಧ್ಯಾಪಕ ಸುರೇಶ ಕುಂಬಾರ ಹೇಳಿದರು.

ಅವರು ಭಾನುವಾರ ತಾಲೂಕಿನ ಅರಹುಣಸಿ ಗ್ರಾಮದ ರಮೇಶ ಕುರಿ ಅವರ ತೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗದಗ, ನಿರಂತರ ಪ್ರಕಾಶನ ಗದಗ ಮತ್ತು ತುಷಾರ ಪ್ರಕಾಶನ ಕೊಪ್ಪಳ ಇವರುಗಳ ಸಹಯೋಗದಲ್ಲಿ ಜರುಗಿದ ತೋಟದಲ್ಲಿ ಸಾಹಿತ್ಯ ಕೂಟ, ಒಕ್ಕಲಿಗನ ಒಳದನ ಹಾಗೂ ನೆಲದ ಹಾಡು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಸಿರು ಕ್ರಾಂತಿಯಿಂದ ಭಾರತ ಆಹಾರ ಭದ್ರತೆ ಹೊಂದಿದೆ. ಇದರ ಶ್ರೇಯಸ್ಸು ರೈತರಿಗೆ ಸಲ್ಲುತ್ತದೆ. ನಾವೆಲ್ಲರೂ ಇಂದು ಸಮೃದ್ಧವಾಗಿ ಆಹಾರ ಸೇವಿಸಲು ರೈತರು ಶ್ರಮವಿದೆ. ಆಹಾರ ಭದ್ರತೆಯಲ್ಲಿ ಸ್ವಾವಲಂಬನೆ ಹೊಂದಿದ್ದೇವೆ ಆದರೂ ನಾವಿಂದು ಅಪೌಷ್ಟಿಕತೆಯಿಂದ ಬಳಲುತ್ತಿದ್ದೇವೆ. ಅಪೌಷ್ಟಿಕತೆ ನಿವಾರಣೆಯಾಗಬೇಕಾದಲ್ಲಿ ಸಾವಯವ ಕೃಷಿ ಅಗತ್ಯ. ಹಣ್ಣು, ತರಕಾರಿಗಳನ್ನು ಹೇರಳವಾಗಿ ಬೆಳೆಯಬೇಕು ಎಂದರು.

ಬೆಳಗಾವಿ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಸಿ.ಎಂ. ರಫೀಕ ಮಾತನಾಡಿ, ಯರೇಗೊಬ್ಬರ, ಬೇವಿನ ಎಣ್ಣಿ ಬಳಸುವ ಮೂಲಕ ಸಾವಯವ ಕೃಷಿ ಪದ್ಧತಿ ಅನುಸರಿಸಿಕೊಂಡು ಆರೋಗ್ಯಯುಕ್ತ ಆಹಾರ ಬೆಳೆಯುವಲ್ಲಿ ರೈತರು ಮುಂದಾಗಬೇಕು ಎಂದರು.

ಗದಗ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಎಸ್‌.ಎಲ್. ಪಾಟೀಲ ಮಾತನಾಡಿ, ತರಕಾರಿ ಬೆಳೆಗಳು, ಹಣ್ಣು ಬೆಳೆಗಳನ್ನು ಬೆಳೆಯುವಲ್ಲಿ ಹಾಗೂ ನೀರು ನಿರ್ವಹಣೆ, ಸಾವಯವ ನಿರ್ವಹಣೆಯಲ್ಲಿ ರೈತರು ತೊಡಗಬೇಕು. ಗದಗ ಜಿಲ್ಲೆಯಲ್ಲಿ ಕಡಲೆ ಮುಖ್ಯ ಬೆಳೆಯಾಗಿದೆ. ಆದರೆ ಕಡಲೆ ಹೊರತುಪಡಿಸಿ ಪರ್ಯಾಯ ಬೆಳೆ ಬೆಳೆಯುತ್ತಿಲ್ಲ. ಇದರಿಂದ ಸಿಡಿ ರೋಗ ಸೇರಿದಂತೆ ಮುಂತಾದ ರೋಗಗಳ ಬೆಳೆಗೆ ಕಾಡುತ್ತದೆ. ಆದ್ದರಿಂದ ಕಡಲೆ ಹೊರತು ಪಡಿಸಿ ಪರ್ಯಾಯ ಬೆಳೆ ಬೆಳೆಯಬೇಕು. ಕಡಲೆಗೆ ಸಿಡಿ ರೋಗಬಾಧೆ ತಡೆಗೆ ಬೀಜೋಪಚಾರ ಸೇರಿದಂತೆ ಮುಂತಾದ ಕ್ರಮ ಅಳವಡಿಸಿಕೊಳ್ಳಬೇಕು. ಬೀಜೋಪಚಾರದಿಂದ ರಸಾಯನಿಕ ಗೊಬ್ಬರ ಬಳಕೆ ಕಡಿಮೆಯಾಗುವದರ ಜತೆಗೆ ಸಾರಜನಕ ಉತ್ಪತ್ತಿಯಾಗುತ್ತದೆ. ಇದರಿಂದ ಇಳುವರಿ ವೃದ್ಧಿಯಾಗುವದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಮ್ಮದು ಮಣ್ಣಿನ ಸಂಸ್ಕೃತಿಯಾಗಿದೆ. ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಮಣ್ಣಿನ ಬಳಕೆ ಕಾಣುತ್ತೇವೆ. ಮನಸ್ಸನ್ನು ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಸಂವಾದ ನಡೆಯಬೇಕು. ಈ ದಿಶೆಯಲ್ಲಿ ಕೃಷಿ ಕುರಿತು ಜನರಲ್ಲಿ ಆಸಕ್ತಿ ಮೂಡಿಸುವಲ್ಲಿ ಹೆಚ್ಚು ಹೆಚ್ಚು ಸಂವಾದ ನಡೆಯಬೇಕು. ಕೃಷಿ ಪ್ರಾತ್ಯಕ್ಷಿಕೆ ಜರುಗಬೇಕು ಎಂದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತಕ ಚಂದ್ರಶೇಖರ ವಸ್ತ್ರದ ಕಾರ್ಯಕ್ರಮ ಉದ್ಘಾಟಿಸಿದರು.

ಕೇಂದ್ರ ಸಾಹಿತ್ಯ ಆಕಾಡೆಮಿ ಸಲಹಾ ಮಂಡಳಿ ಸದಸ್ಯ ಚನ್ನಪ್ಪ ಅಂಗಡಿ, ಮೈಸೂರ ತೋಟಗಾರಿಕೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಸಿದ್ದಪ್ಪ‌ಆರ್, ಗದಗ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಎಸ್.ಎಲ್. ಪಾಟೀಲ ಮಾತನಾಡಿದರು.

ಜನಪದ ಕಲಾವಿದ ಶರಣಪ್ಪ ವಡಗೇರಿ, ಅನ್ಮಪೂರ್ಣ ಮನ್ನಾಪೂರ, ಮಲ್ಲಮ್ಮ ಕಟ್ಟೆಣ್ಣವರ ಹಾಗೂ ತಂಡದಿಂದ ಗೀತ ಗಾಯನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಸಿ.ಎಂ.ರವಿ, ವಿಶ್ರಾಂತ ತೋಟಗಾರಿಕೆ ಹಿರಿಯ ನಿರ್ದೇಶಕ ಸುರೇಶ ಕುಂಬಾರ, ಸಾಹಿತಿ ವಿ.ಕೆ. ಪಾಟೀಲ, ಡಾ. ಜಿ.ಬಿ. ಪಾಟೀಲ, ಶಿವಣ್ಣ ಅರಹುಣಸಿ, ಮುತ್ತಣಗೌಡ ಚೌಡರಡ್ಡಿ, ನಾಗರಾಜ ಗುದ್ನೆಪ್ಪನವರ, ಜಿಲ್ಲಾ ಖಜಾನೆ ಅಧಿಕಾರಿ ವಿ. ಹರಿನಾಥಬಾಬು, ಬಿ.ಎಸ್. ಗೊರವರ, ಸಾಹಿತಿ ಅಕ್ಬರ ಕಾಲಿಮಿರ್ಚಿ, ಶೋಭಾ ಮೇಟಿ, ಕಸಾಪ ಗದಗ ತಾಲೂಕಾಧ್ಯಕ್ಷ ಡಾ.ರಶ್ಮಿ ಮಾಗಡಿ, ಡಾ. ಬಸವರಾಜ ಪೂಜಾರ, ಡಾ. ರಾಜೇಂದ್ರ ಗಡಾದ, ಪ್ರಕಾಶ ಕಡಮೆ, ಪ್ರಕಾಶ ಹೊಸಮನಿ, ಚಂದ್ರಕಲಾ ಇಟಗಿಮಠ, ನಿರ್ಮಲಾ ಶೆಟ್ಟರ್‌, ಹೆಬಸೂರ ರಂಜಾನ್, ಶಿವಕುಮಾರ ಕರಿನಂದಿ, ಲಕ್ಷ್ಮನ ನಂದಿಹಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಿಲ್ಪಾ ಕುರಿ ಸ್ವಾಗತಿಸಿದರು.