ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡಿ: ದೇವರಾಜ್‌ ಶೆಟ್ಟಿ

| Published : Jul 08 2024, 12:42 AM IST

ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡಿ: ದೇವರಾಜ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯಲ್ಲಿ ''ತಾಯಿಗೊಂದು ಗಿಡ'' ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಅವರ ತಾಯಿ ಆಶಾ ಭಾನುವಾರ ಚಾಲನೆ ನೀಡಿದರು. ದೇವರಾಜ್‌ಶೆಟ್ಟಿ, ರಾಜಪ್ಪ, ಶಶಿ ಆಲ್ದೂರು, ಸಚ್ಚಿನ್‌ಗೌಡ ಇದ್ದರು.

ಕನ್ನಡಪ್ರಭವಾರ್ತೆ ಚಿಕ್ಕಮಗಳೂರು

ಹವಾಮಾನ ವೈಪರೀತ್ಯದಿಂದ ವಾತಾವರಣ ಕಲುಷಿತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಜ್ಞಾವಂತ ನಾಗರಿಕರು ಮನೆಯಂಗಳದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ ಶೆಟ್ಟಿ ಕರೆ ನೀಡಿದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ವಿಜಯಪುರ ಸಮೀಪ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪದಂತೆ ''''ತಾಯಿಗೊಂದು ಗಿಡ’ ನೆಡುವ ಕಾರ್ಯಕ್ರಮದಲ್ಲಿ ಭಾನುವಾರ ಮುಂಜಾನೆ ಪಾಲ್ಗೊಂಡು ಅವರು ಮಾತನಾಡಿದರು.

ಪರಿಸರಕ್ಕೆ ಪೂರಕವಾಗಿರುವ ತೆಂಗು, ಮಾವು, ನೇರಳೆ, ಹೊಂಗೆ ಸೇರಿದಂತೆ ವಿವಿಧ ತಳಿಗಳ ಸಸಿಗಳನ್ನು ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಇಂದಿನಿಂದಲೇ ಮುಂದಾಗಬೇಕು ಎಂದು ತಿಳಿಸಿದರು.ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ನಿವಾಸಿಗಳು ಮನೆಗೊಂದು ಗಿಡ ನೆಡುವ ಕಾರ್ಯಕ್ಕೆ ಮುಂದಾದರೆ ದೇಶವು ಕಲ್ಪವೃಕ್ಷಗಳ ನಾಡಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಪೋಷಕರು ಮಕ್ಕಳ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಪರಿಸರದ ಕಾಳಜಿ ಮೂಡಿಸಿಕೊಳ್ಳಬೇಕು ಎಂದರು.ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ ಮಾತನಾಡಿ, ಪ್ರಧಾನ ಮಂತ್ರಿ ಆಶಯದಂತೆ ಗಿಡ ಕಾರ್ಯಕ್ರಮ ಹಮ್ಮಿಕೊಂಡಿರುವುದು ಖುಷಿಯ ಸಂಗತಿ. ಜೊತೆಗೆ ದೇಶಕ್ಕಾಗಿ ಜೀವನ ಮುಡಿಪಿಟ್ಟು ಜನಸಂಘ ಸ್ಥಾಪನೆಗೆ ಶ್ರಮಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಮುಖರ್ಜಿ ರಾಷ್ಟ್ರಕ್ಕಾಗಿ ಕೈಗೊಂಡಂತಹ ಕ್ರೀಯಾಶೀಲ ಕಾರ್ಯಗಳು, ಚಿಂತನೆಗಳು ಅವಿಸ್ಮರಣೀಯ. ದೇಶದ ಐಕ್ಯತೆಗಾಗಿ ಮುಖರ್ಜಿ ಬದುಕನ್ನು ಮುಡಿಪಿಟ್ಟವರು. ರಾಜಕೀಯ ಮುತ್ಸದ್ದಿ ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಮಾದರಿಯಾಗಿದ್ದರು. ಇಂದಿನ ಯುವ ಪೀಳಿಗೆ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಇಂದು ತಮ್ಮ ತಾಯಿಯ ಜೊತೆಗೂಡಿ ಸಸಿ ನೆಡಲಾಗಿದೆ ಎಂದ ಅವರು ದೂರದೃಷ್ಟಿಯ ಚಿಂತನೆ ಹೊಂದಿರುವ ಪ್ರಧಾನಿ ಕರೆಗೆ ನಿರ್ಲಕ್ಷ್ಯ ವಹಿಸದೇ ಪ್ರತಿಯೊಬ್ಬರು ಸಸಿ ನೆಟ್ಟು ಹೆತ್ತ ತಾಯಿಗೆ ಗೌರವ ಸಲ್ಲಿಸಬೇಕು ಎಂದರು.

ಇಂದು ಜಾಗತಿಕ ತಾಪಮಾನ ಏರಿಕೆಯಿಂದ ಪರಿಸರವು ಯಥೇಚ್ಛವಾಗಿ ಮಲಿನವಾಗುತ್ತಿದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ನಾಗರಿಕರು ಕೈಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತರಾಮ ಭರಣ್ಯ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚ್ಚಿನ್‌ಗೌಡ, ಕಾರ್ಯದರ್ಶಿ ಶಶಿ ಆಲ್ದೂರು, ನಗರ ಪ್ರಧಾನ ಕಾರ್ಯದರ್ಶಿ ಗೌತಮ್, ಉಪಾಧ್ಯಕ್ಷ ನವೀನ್ ಹಾಗೂ ಕಾರ್ಯಕರ್ತರು ಇದ್ದರು.