ನಾಳೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನಾ ಧರಣಿ

| Published : May 07 2025, 12:48 AM IST

ನಾಳೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನಾ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ತ್ಯಾಜ್ಯ ವಿಲೇವಾರಿ ಘಟಕ‍‍ವನ್ನು ನದಿ ಪಾತ್ರದ ಮೇಲ್ಭಾಗದಲ್ಲಿ ಘಟಕ ನಿರ್ಮಿಸಿರುವುದರಿಂದ ಮಳೆ ಬಂದರೆ ನದಿ ಕಲುಷಿತಗೊಳ್ಳುತ್ತದೆ. ನೈಸರ್ಗಿಕ ಪ್ರದೇಶವೂ ಹಾಳಾಗುತ್ತದೆ. ಅಲ್ಲದೆ, ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತದೆ. ಈ ಘಟಕಕ್ಕೆ ಫಿಲೇಚರಿ, ಹಸಿ ಕಸ ಎಲ್ಲವನ್ನು ವಿಲೇವಾರಿ ಮಾಡಿದರೆ ಗಬ್ಬು ವಾಸನೆ ಹರಡುತ್ತದೆ.

ಕನ್ನಡಪ್ರಭ ವಾರ್ತೆ ರಾಮನಗರ

ತಾಲೂಕಿನ ಕಸಬಾ ಹೋಬಳಿ ಹರೀಸಂದ್ರ ಗ್ರಾಮದ ಸರ್ವೇ ನಂಬರ್ 166ರ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ಮೇ 8ರಂದು ಪ್ರತಿಭಟನಾ ಧರಣಿ ನಡೆಸಿಲು ಹರೀಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ಚಿಕ್ಕೇಗೌಡನದೊಡ್ಡಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಹರೀಸಂದ್ರ, ಚಿಕ್ಕೇಗೌಡನ ದೊಡ್ಡಿ, ಕಾಳೇಗೌಡನದೊಡ್ಡಿ, ಪಾದರಹಳ್ಳಿ, ಬೆಜ್ಜರಹಳ್ಳಿಕಟ್ಟೆ, ಮಾರೇಗೌಡನದೊಡ್ಡಿ, ಹನುಮಂತೇಗೌಡನ ದೊಡ್ಡಿ, ಕೆಂಪೇಗೌಡನದೊಡ್ಡಿ, ಮದರ್ ಸಾಬರದೊಡ್ಡಿ, ಆಲೆಮರದದೊಡ್ಡಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಸಭೆ ನಡೆಸಿ, ಜಿಲ್ಲಾಡಳಿತ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದಿಂದ ಹಿಂದೆ ಸರಿಯುವವರೆಗೆ ನಿರಂತರವಾಗಿ ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಲಾಯಿತು.

ಪ್ರತಿ ಹಳ್ಳಿಗಳಲ್ಲಿ ಆಟೋ ಪ್ರಚಾರ ಜೊತೆಗೆ ಕರಪತ್ರಗಳನ್ನು ಹಂಚಿ ಗ್ರಾಮಸ್ಥರನ್ನು ಹೋರಾಟದಲ್ಲಿ ಭಾಗಿಯಾಗುವಂತೆ ಮಾಡುವುದು. ಅಲ್ಲದೆ, ಮೇ 8ರಂದು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಜನರನ್ನು ಸೇರಿಸಿ ಚಿಕ್ಕೇಗೌಡನದೊಡ್ಡಿಯ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಘಟಕ ನಿರ್ಮಾಣದ ಸ್ಥಳದವರೆಗೆ ಪಾದಯಾತ್ರೆ ನಡೆಸಿ ಧರಣಿ ಕೂರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಚಿಕ್ಕೇಗೌಡನದೊಡ್ಡಿ ಗ್ರಾಮದ ಮುಖಂಡ ದೊಡ್ಡ ವೀರಯ್ಯ ಮಾತನಾಡಿ, ಹರೀಸಂದ್ರ ಸರ್ವೇ ನಂಬರ್ 166ರ ಸರ್ಕಾರಿ ಜಮೀನಿನಲ್ಲಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ರಾಮನಗರ ನಗರಸಭೆಗೆ 9.38 ಎಕರೆ ಹಾಗೂ ಬಿಡದಿ ಪುರಸಭೆ 9 ಎಕರೆ ಮಂಜೂರಾಗಿರುವುದನ್ನು ರದ್ದು ಪಡಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಹರೀಸಂದ್ರ, ಮಾಯಗಾನಹಳ್ಳಿ, ಬಿಳಗುಂಬ ಹಾಗೂ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರು ಹೈನುಗಾರಿಕೆ, ರೇಷ್ಮೆ, ಮಾವು , ತೆಂಗು ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇಲ್ಲಿ ಘಟಕ ನಿರ್ಮಾಣವಾಗುವುದರಿಂದ ಕೃಷಿ ಚಟುವಟಿಕೆ, ವಾಯು ಮಾಲಿನ್ಯ, ಜಲ ಮಾಲಿನ್ಯ, ಹೈನುಗಾರಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಘಟಕ ನಿರ್ಮಾಣಕ್ಕೆ ಅವಕಾಶ ನೀಡದಂತೆ ಮನವಿ ಮಾಡಿದೇವು. ಆದರೆ, ಉಪಮುಖ್ಯಮಂತ್ರಿಗಳು ನೀವೇ ಪರ್ಯಾಯ ಜಾಗ ಗುರುತಿಸಿಕೊಡುವಂತೆ ಹೇಳುತ್ತಾರೆ. ನಾವುಗಳು ಆ ಕೆಲಸ ಮಾಡುವುದಾದರೆ ಅಧಿಕಾರಿಗಳು ಏಕೆ ಬೇಕು. ಅಷ್ಟಕ್ಕೂ ಹರೀಸಂದ್ರ ಜಾಗವನ್ನು ನಾವು ಗುರುತಿಸಿಕೊಟ್ಟಿದ್ದೇವೆಯೇ ಎಂದು ದೊಡ್ಡ ವೀರಯ್ಯ ಪ್ರಶ್ನಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ರಾಮನಗರ ಮತ್ತು ಬಿಡದಿ ಪಟ್ಟಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಅಲ್ಲಿನ ಕಸವನ್ನು ಇಲ್ಲಿ ಸುರಿದು ಹಳ್ಳಿಗಳ ವಾತಾವರಣವನ್ನು ಕಲುಷಿತಗೊಳಿಸಲು ಅವಕಾಶ ನೀಡುವುದಿಲ್ಲ. ಘಟಕ ನಿರ್ಮಾಣದಿಂದ ಹಿಂದೆ ಸರಿಯದಿದ್ದರೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಸ ವಿಲೇವಾರಿ ಘಟಕ ನಿರ್ಮಾಣವಾದರೆ ಮಾವು, ತೆಂಗು ಮತ್ತು ರೇಷ್ಮೆ ಬೆಳೆಗಳಿಗೆ ಹೆಚ್ಚಿನ ಹಾನಿಯಾಗುತ್ತದೆ. ಅದೇ ರೀತಿ ರೈತಾಪಿ ಹಾಗೂ ಗ್ರಾಮಸ್ಥರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಬೇಕಾದ ಜಿಲ್ಲಾಡಳಿತ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರು ಅಲ್ಲಿಯೇ ಘಟಕ ನಿರ್ಮಾಣಕ್ಕೆ ಪಟ್ಟು ಹಿಡಿದಿದ್ದಾರೆ. ಮುಂದಾಗುವ ಎಲ್ಲ ಅನಾಹುತಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಹೇಳಿದರು.

ಮುಖಂಡ ಪಾದರಹಳ್ಳಿ ಚಂದ್ರು ಮಾತನಾಡಿ, ತ್ಯಾಜ್ಯ ವಿಲೇವಾರಿ ಘಟಕ‍‍ವನ್ನು ನದಿ ಪಾತ್ರದ ಮೇಲ್ಭಾಗದಲ್ಲಿ ಘಟಕ ನಿರ್ಮಿಸಿರುವುದರಿಂದ ಮಳೆ ಬಂದರೆ ನದಿ ಕಲುಷಿತಗೊಳ್ಳುತ್ತದೆ. ನೈಸರ್ಗಿಕ ಪ್ರದೇಶವೂ ಹಾಳಾಗುತ್ತದೆ. ಅಲ್ಲದೆ, ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತದೆ. ಈ ಘಟಕಕ್ಕೆ ಫಿಲೇಚರಿ, ಹಸಿ ಕಸ ಎಲ್ಲವನ್ನು ವಿಲೇವಾರಿ ಮಾಡಿದರೆ ಗಬ್ಬು ವಾಸನೆ ಹರಡುತ್ತದೆ. ಇದರಿಂದ ಉಸಿರಾಡಲು ಸಾಧ್ಯವಾಗದೆ ಜನರು ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಡದಿ ಪುರಸಭೆ ತ್ಯಾಜ್ಯವನ್ನು ಕಲ್ಲುಗೋಪಹಳ್ಳಿ ಅಥವಾ ಸುತ್ತಮುತ್ತಲ ಕ್ವಾರೆಗಳಲ್ಲಿ ವಿಲೇವಾರಿ ಮಾಡಬಹುದು. ರಾಮನಗರ ನಗರಸಭೆ ತ್ಯಾಜ್ಯವನ್ನು ಕೊತ್ತೀಪುರ ಸೇರಿದಂತೆ ಹಲವೆಡೆ ವಿಲೇವಾರಿ ಮಾಡಲು ಜಾಗವಿದೆ. ಕೂಡಲೇ ಜಿಲ್ಲಾಡಳಿತ ಘಟಕ ನಿರ್ಮಾಣದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ್, ಮುಖಂಡರಾದ ರಾಮಕೃಷ್ಣಯ್ಯ, ಮಳವಳ್ಳಿ ರಾಜು, ರಾಜಣ್ಣ, ಕೃಷ್ಣಯ್ಯ, ಸಂತೋಷ್, ಬಾಬಣ್ಣ, ರಾಮು, ಅಶ್ವಥ್, ಕೃಷ್ಣಮೂರ್ತಿ, ಕೃಷ್ಣೆಗೌಡ, ಮಹೇಶ್, ಮೋಹನ್, ಚರಣ್, ಶಾಂತಣ್ಣ, ಚಂದ್ರು, ರಾಜೀವ್ ಗೌಡ, ಮಹದೇವ್ ಮತ್ತಿತರರು ಹಾಜರಿದ್ದರು.