ಗ್ರಾಪಂ ನೌಕರರ ಬೇಡಿಕೆಗೆ ಒತ್ತಾಯಿಸಿ ಧರಣಿ

| Published : Nov 22 2025, 02:45 AM IST

ಗ್ರಾಪಂ ನೌಕರರ ಬೇಡಿಕೆಗೆ ಒತ್ತಾಯಿಸಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸರಕಾರ ಇವರನ್ನು ಪಂಚಾಯಿತಿ ನೌಕರರು ಎಂದು ಪರಿಗಣಿಸಬೇಕು. ಅಲ್ಲದೆ, ನಿಗದಿತ ವೇತನ ನೀಡಬೇಕು

ಕುಷ್ಟಗಿ: ಪಟ್ಟಣದ ಶಾಸಕರ ಕಾರ್ಯಾಲಯದ ಮುಂದೆ ಕುಷ್ಟಗಿ ತಾಲೂಕಿನ ಗ್ರಾಪಂ ನೌಕರರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದು ಮತ್ತು ಚ‍ಳಿಗಾಲದ ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿಸಿದರು.ಸಂಘಟನೆಯ ಪ್ರಮುಖರು ಮಾತನಾಡಿ, ರಾಜ್ಯದಲ್ಲಿ ಸುಮಾರು 63 ಸಾವಿರ ಗ್ರಾಮ ಪಂಚಾಯಿತಿಯ ನೌಕರರು, ಕರವಸೂಲಿಗಾರರಾಗಿ, ಕ್ಲರ್ಕ್, ಡಾಟಾ ಎಂಟ್ರಿ ಅಪರೇಟರ್‌ಗಳಾಗಿ, ಸ್ವಚ್ಛತೆಗಾರರು, ಸಿಪಾಯಿ, ವಾಟರಮನ್ ಕೆಲಸ ನಿರ್ವಹಿಸುವ ನೌಕರರು ಕಡಿಮೆ ಸಂಬಳದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದರು.

ಗ್ರಾಪಂ ಮಟ್ಟದಲ್ಲಿ ಸ್ವಚ್ಛ ವಾಹಿನಿ ನೌಕರರು ಎಂದು ಸರಕಾರ ತರಬೇತಿ ನೀಡಿ ಸಂಜೀವಿನಿ ಒಕ್ಕೂಟದಿಂದ ನೇಮಕಾತಿ ಮಾಡಿಕೊಂಡು ಗುತ್ತಿಗೆ ಆಧಾರದಲ್ಲಿ ಗುಲಾಮರಂತೆ ದುಡಿಸಿಕೊಳ್ಳುತ್ತಿದೆ. ಸರಕಾರ ಇವರನ್ನು ಪಂಚಾಯಿತಿ ನೌಕರರು ಎಂದು ಪರಿಗಣಿಸಬೇಕು. ಅಲ್ಲದೆ, ನಿಗದಿತ ವೇತನ ನೀಡಬೇಕು ಎಂದರು.

ಸರಕಾರದ ಹಲವಾರು ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿ ಜಾರಿ ಮಾಡುತ್ತಿರುವ ಪಂಚಾಯಿತಿ ನೌಕರರ ಸಮಸ್ಯೆಗಳ ಬಗ್ಗೆ ಯಾರೂ ಗಮನ ಕೊಡುತ್ತಿಲ್ಲ. ಕಳೆದ 5-6 ವರ್ಷಗಳಿಂದ ಪಂಚಾಯಿತಿ ನೌಕರರಿಗೆ ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ ಮಾಡಬೇಕು. ಕನಿಷ್ಠ ₹36 ಸಾವಿರ ವೇತನ ನೀಡಬೇಕು ಎಂದು ಹೋರಾಟ ನಡೆಸಿ ಸರಕಾರಕ್ಕೆ ಒತ್ತಾಯಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೌಕರರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಮೊನ್ನೆ ಚಾಮರಾಜನಗರ ಜಿಲ್ಲೆಯಲ್ಲಿ 27 ತಿಂಗಳಿಂದ ವೇತನ ಸಿಗದೆ ವಾಟರಮನ್ ಒಬ್ಬರು ನಿರಾಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೌಕರರು ದಿನ ಕಳೆಯುತ್ತಿದ್ದಾರೆ. ಶಾಸಕರಾದ ತಾವು ಪಂಚಾಯತ್ ನೌಕರರಿಗೆ, ಸ್ವಚ್ಛ ವಾಹಿನಿ ನೌಕರರಿಗೆ ಪ್ರತಿ ತಿಂಗಳು ವೇತನ ಸಿಗುವಂತೆ ಹಾಗೂ ಪ್ರಮುಖ ಬೇಡಿಕೆಗಳ ಕುರಿತಂತೆ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಿ ಸರಕಾರದ ಗಮನ ಸೆಳೆಯಬೇಕು ಎಂದು ತಿಳಿಸಿದರು.

ಬೇಡಿಕೆಗಳು:ಗ್ರಾಪಂ ನೌಕರರನ್ನು ಏಕಕಾಲಕ್ಕೆ ಸರಕಾರಿ ನೌಕರರು ಎಂದು ಘೋಷಣೆ ಮಾಡಬೇಕು. ವೇತನ ಹೆಚ್ಚಳ ಮಾಡಬೇಕು. ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ₹6000 ಪಿಂಚಣಿ ಅಥವಾ ಗ್ರಾಮ ಸೇವಕರಿಗೆ ನೀಡಿದಂತೆ ಪಂಚಾಯಿತಿ ನೌಕರರಿಗೂ ₹10 ಲಕ್ಷ ಇಡಗಂಟು ನೀಡಬೇಕು. ತರಬೇತಿ ಪಡೆದಿರುವ ಎಲ್ಲ ಸ್ವಚ್ಛ ವಾಹಿನಿ ನೌಕರರಿಗೆ ಉದ್ಯೋಗ ನೀಡಬೇಕು. ಒಡಂಬಡಿಕೆ ಪತ್ರ ಮತ್ತು ಪ್ರತಿ ವರ್ಷದ ನವೀಕರಣ ಪದ್ಧತಿ ರದ್ದು ಪಡಿಸಬೇಕು. 15ನೇ ಹಣಕಾಸಿನಲ್ಲಿ ವೇತನ ಪಾವತಿ ಮಾಡಬೇಕು. ಪ್ರತಿಯೊಂದು ಪಂಚಾಯಿತಿಗೆ ಒಬ್ಬರೇ ಚಾಲಕರು ಎಂದು ಪರಿಗಣಿಸಿ ₹15000 ವೇತನ ನೀಡಬೇಕು. ₹1.20 ಲಕ್ಷ ಆದಾಯ ಇರುವ ನೌಕರರ ಮತ್ತು ಕಾರ್ಮಿಕರ ಪಡಿತರ ಚೀಟಿ ರದ್ದುಪಡಿಸದೇ ಆದಾಯದ ಮಿತಿಯನ್ನು ತಾವು ನಿಗದಿ ಮಾಡುತ್ತಿರುವ ಕನಿಷ್ಠ ವೇತನವನ್ನು ಮಾನದಂಡವಾಗಿಟ್ಟುಕೊಂಡು ಆದಾಯದ ಮಿತಿಯನ್ನು ಹೆಚ್ಚಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು. ಹೆಚ್ಚುವರಿ ಕರವಸೂಲಿಗಾರರಿಗೆ ಅನುಮೋದನೆ ನೀಡಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಚಂದನಗೌಡ ಗೌಡರ, ಕಾರ್ಯದರ್ಶಿ ಹನಮಂತಪ್ಪ ಕೊಂಡಗುರಿ, ಛತ್ರಪ್ಪ ಕಾಟಿಗಲ್, ಸಂಗನಗೌಡ, ಮುತ್ತನಗೌಡ, ಹನಮಂತ, ಮಂಜುನಾಥ, ಗೋಪಾಲ, ಅಮರೇಶ, ಬಸವರಾಜ, ಬಾಳಪ್ಪ, ಸೇರಿದಂತೆ ನೂರಾರು ಜನ ಗ್ರಾಪಂ ನೌಕರರು ಇದ್ದರು.