ಸಾರಾಂಶ
ದಾಸರ ಸಮುದಾಯವರು ನಾವು ಅತ್ಯಂತ ತುಳಿತಕ್ಕೆ ಒಳಗಾಗಿದ್ದೇವೆ. ಈಗಲೂ ಎಸ್ಸಿ ಸಮುದಾಯದಲ್ಲಿಯೇ ಸ್ಪರ್ಧೆ ಮಾಡುವಷ್ಟು ಶಕ್ತಿ ಹೊಂದಿಲ್ಲ. ಹೀಗಾಗಿ ಮೊದಲೇ ನಿಗದಿ ಮಾಡಿದಂತೆ ಪ್ರತ್ಯೇಕ ಮೀಸಲಾತಿ ಪ್ರಮಾಣ ಪತ್ರ ನೀಡಬೇಕು.
ಕೊಪ್ಪಳ:
ಅಲೆಮಾರಿಗಳು ಸೇರಿದಂತೆ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಗಳಿಗೆ ಪ್ರತ್ಯೇಕ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.ಚನ್ನದಾಸರ ಸಮುದಾಯದ ನಾಯಕರೊಬ್ಬರು ಮಂಡಿಯೂರಿ ಕಣ್ಣೀರಿಟ್ಟು ನಮಗೂ ನ್ಯಾಯ ಕೊಡಿ ಎಂಬ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಬೆಂಬಲವೂ ವ್ಯಕ್ತವಾಗಿದೆ.
ಪ್ರತಿಭಟನೆಯಲ್ಲಿ ದಾಸರ ಪದ ಮತ್ತು ಗೀಗಿ ಪದ ಹಾಡಿ ವಿಶೇಷ ಗಮನ ಸೆಳೆಯಲಾಯಿತು. ಅದರಲ್ಲೂ ದಾಸರ ಸಮುದಾಯವರು ನಾವು ಅತ್ಯಂತ ತುಳಿತಕ್ಕೆ ಒಳಗಾಗಿದ್ದೇವೆ. ಈಗಲೂ ಎಸ್ಸಿ ಸಮುದಾಯದಲ್ಲಿಯೇ ಸ್ಪರ್ಧೆ ಮಾಡುವಷ್ಟು ಶಕ್ತಿ ಹೊಂದಿಲ್ಲ. ಹೀಗಾಗಿ ಮೊದಲೇ ನಿಗದಿ ಮಾಡಿದಂತೆ ಪ್ರತ್ಯೇಕ ಮೀಸಲಾತಿ ಪ್ರಮಾಣ ಪತ್ರ ನೀಡಬೇಕು. ನಮಗೆ ದೊಡ್ಡ ಹೋರಾಟ ಮಾಡುವ ಶಕ್ತಿ ಇಲ್ಲ. ಅತ್ಯಂತ ಹಿಂದುಳಿದ ಸಮುದಾಯ ಆಗಿರುವುದರಿಂದ ಜಾಗೃತಿಯೂ ಇಲ್ಲ. ಹೀಗಾಗಿ ನಮಗೆ ಅನ್ಯಾಯವಾಗುವುದನ್ನು ತಪ್ಪಿಸಲು ಪ್ರತ್ಯೇಕ ಮೀಸಲಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಕಣ್ಣೀರು ಹಾಕಿದ ನಾಯಕ:
ಚನ್ನದಾಸರ ಸಮುದಾಯದ ನಾಯಕರೊಬ್ಬರು ಹೋರಾಟದ ವೇಳೆ ಜಿಲ್ಲಾಡಳಿತ ಭವನದ ಎದುರು ಮಂಡಿಯೂರಿ ಬೇಡಿಕೊಂಡು ಕಣ್ಣೀರು ಹಾಕಿ ತಮ್ಮ ಅಳಲು ತೋಡಿಕೊಂಡರು. ನಮಗೂ ನ್ಯಾಯ ಒದಗಿಸಿ ಎಂದು ಬೇಡಿಕೊಳ್ಳುತ್ತಿರುವ ಪರಿ ನೋಡಿ ಅಲ್ಲಿದ್ದವರೆಲ್ಲ ಮಮ್ಮಲ ಮರುಗಿದರು.ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು ಮಮ್ಮಲ ಮರುಗುತ್ತಿದ್ದಾರೆ. ಮತ್ತು ರಾಜ್ಯ ಸರ್ಕಾರ ಇಂಥವರ ನೆರವಿಗೆ ತಕ್ಷಣ ಬರಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಪರಸಪ್ಪ ಚನ್ನದಾಸರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರೆಪ್ಪ ಚನ್ನದಾಸರ, ಜಿಲ್ಲಾಧ್ಯಕ್ಷ ದುರಗಪ್ಪ ದೊಡ್ಡಮನಿ, ಗುಂಡಪ್ಪ ಮಾರೆಪ್ಪ, ಯಲ್ಲಪ್ಪ ಮಾರೆಪ್ಪ, ಅಂಜಿನಪ್ಪ ಚನ್ನದಾಸರ, ಯಲ್ಲಪ್ಪ ನಾಗಪ್ಪ, ಮಾರುತಿ ಗಿತ್ತೋಡೆಪ್ಪ ಇದ್ದರು.