ಸಾರಾಂಶ
ಬ್ಯಾಡಗಿ: ಪ್ರಸಕ್ತ ಸಾಲಿನ ಬೆಳೆವಿಮೆ, ಪರಿಹಾರ ಹಣ ನೀಡದೆ ಕಂದಾಯ ಅಧಿಕಾರಿಗಳು ರೈತರಿಗೆ ಅಲೆದಾಡಿಸುತ್ತಿದ್ದಾರೆ. ಪರಿಹಾರ ವಿತರಣೆ ಅಡಚಣೆ ತಪ್ಪಿಸಲು ತಹಸೀಲ್ದಾರ ಹಾಗೂ ಸಿಬ್ಬಂದಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಬಾರದ ಗ್ರಾಮಲೆಕ್ಕಾಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ರೈತರು ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ನೇತೃತ್ವದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡಿಸಿ ಘೋಷಣೆ ಹಾಕಿದರಲ್ಲದೇ, ನಿರ್ಲಕ್ಷ್ಯ ತೋರುವ ಸಿಬ್ಬಂದಿಗೆ ಕೂಡಲೇ ನೋಟಿಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.ಗ್ರಾಮಕ್ಕೆ ಬಾರದ ಗ್ರಾಮಲೆಕ್ಕಾಧಿಕಾರಿಗಳು: ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ತಾಲೂಕಿನಲ್ಲಿ 22 ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರಗಳಿದ್ದು (ಸಾಜಾ) ಕೇವಲ 16 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ, ಒಬ್ಬೊಬ್ಬರಿಗೆ ಎರಡೆರಡು ಸಾಜಾ ಉಸ್ತುವಾರಿ ನೀಡಿದ್ದು, ಕನಿಷ್ಠ 6ರಿಂದ 10 ಗ್ರಾಮಗಳನ್ನು ಒಳಗೊಂಡಿವೆ, ಯಾವೊಬ್ಬ ಗ್ರಾಮಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಾಗಿಲ್ಲ, ದೂರದ ಹಾವೇರಿ, ರಾಣಿಬೆನ್ನೂರು, ಬೇರೆ ಬೇರೆ ತಾಲೂಕು ಕೇಂದ್ರಗಳಿಂದ ನೌಕರಿಗೆ ಬರುತ್ತಿದ್ದು, ಬೆಳಗ್ಗೆ 11 ರಿಂದ 12 ಗಂಟೆಗೆ ಆಗಮಿಸಿ ಯಾವುದಾದರೂ ಒಂದು ಗ್ರಾಮಕ್ಕೆ ತೆರಳಿ ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ವಾಪಸ್ಸು ಮರಳಿದ್ದಾರೆ. ರೈತರ ಆರ್‌ಟಿಸಿ ಉತಾರಕ್ಕೆಆಧಾರ ಲಿಂಕ್ ಮಾಡಿಸಲು ಸರ್ಕಾರ ಕಡ್ಡಾಯವಾಗಿ ಸೂಚಿಸಿದೆ, ಅಧಿಕಾರಿಗಳು ಸಕಾಲಕ್ಕೆ ಸಿಗದಿರುವುದಕ್ಕೆ ತಾಲೂಕಿನಾದ್ಯಂತ ಏಜೆಂಟರ್ ಹುಟ್ಟಿಕೊಂಡಿದ್ದು, 100 ರಿಂದ 300 ರು.ಲಂಚ ಪಡೆಯುತ್ತಿದ್ದಾರೆ. ಬರಗಾಲದಲ್ಲಿ 10 ರು.ಗೆ ಪರದಾಡುವ ರೈತನಿಗೆ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಿಬ್ಬಂದಿಗಳಿಂದ ಹಾರಿಕೆ ಉತ್ತರ:ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ತಹಸೀಲ್ದಾರ ಕಾರ್ಯಾಲಯದಲ್ಲಿ ಸಿಬ್ಬಂದಿಗಳಿಗೆ ಯಾವ ಮಾಹಿತಿಯೂ ಇಲ್ಲವಾಗಿದೆ, ಚುನಾವಣೆ ಮಾಹಿತಿ, ರಿಕಾರ್ಡ್ ರೂಮ್, ಬೆಳೆವಿಮೆ, ಪರಿಹಾರ ವಿತರಣೆ, ಭೂಮಿಕೇಂದ್ರ ಬಹುತೇಕ ಮಾಹಿತಿಗಳನ್ನು ಸಾರ್ವಜನಿಕರು ಕೇಳಿದರೆ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ, ಆ ಸಿಬ್ಬಂದಿ ರಜೆಯಲ್ಲಿದ್ದಾರೆ, ನಾನು ನಿಯೋಜಿತ ಸಿಬ್ಬಂದಿ, ಸಾಹೇಬ್ರನ ಕೇಳ್ರಿ ಎನ್ನುತ್ತಾರೆ. ರೈತರ ಎಲ್ಲದಕ್ಕೂ ಕಚೇರಿ ಎದುರು ಪ್ರತಿಭಟನೆ ಮಾಡಿದ ಬಳಿಕ ಸೌಲಭ್ಯ ಪಡೆಯುವಂತಹ ದುಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ಸಮರ್ಪಕ ಸೇವೆ ಸಿಗೋಲ್ಲ, ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದರು.ಲಿಂಕ್ ನಿಲ್ಲಿಸಲುಒತ್ತಾಯ:ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಫೆಡರೇಷನ್ ಮೂಲಕ ಗೊಬ್ಬರವನ್ನು ಹಿಂದೆ ಸೊಸೈಟಿಗೆ ನೀಡಲಾಗುತ್ತಿತ್ತು. ಈಗ ನೇರವಾಗಿ ಡೀಲರ್ ಪಡೆದ ಸಂಘಗಳಿಗೆ ಡಿಎಪಿ ನೀಡುತ್ತಿದ್ದು, ಇದರೊಂದಿಗೆ 20.20 ಹಾಗೂ ಕಾಂಪ್ಲೆಕ್ಸ್ ಗೊಬ್ಬರ ನೀಡುತ್ತಿದ್ದು, ರೈತರಿಗೆ ಹೊರೆಯಾಗಿದೆ. ಕೂಡಲೇ ಇದನ್ನು ಬಂದ್ ಮಾಡಬೇಕು. ಸಕಾಲಕ್ಕೆ ಗೊಬ್ಬರ ಪೂರೈಸಬೇಕು.ಬೀಜಗಳನ್ನು ಶೇ.75 ರಿಯಾಯ್ತಿ ದರದಲ್ಲಿ ಸರ್ಕಾರ ವಿತರಿಸಲು ಒತ್ತಾಯಿಸಿದರು.
ಸಹಾಯವಾಣಿ ದೂರಿಗೆ ಸ್ಪಂದಿಸಿಲ್ಲ: ರೈತರ ಪರಿಹಾರ, ಬೆಳೆವಿಮೆ ಕುರಿತು ಅನ್ಯಾಯವಾಗಿದೆ ಹಿಂದೆ ಪ್ರತಿಭಟನೆ ನಡೆಸಿದ ಬಳಿಕ ಒಬ್ಬ ಸಿಬ್ಬಂದಿ ನೇಮಿಸಿ ಸಹಾಯವಾಣಿ ತೆರೆಯಲಾಗಿದೆ, ಒಂದು ತಿಂಗಳಿಂದ ಸಹಾಯವಾಣಿಯಲ್ಲಿ ದಾಖಲಾದ ದೂರುಗಳಿಗೆ ಸ್ಪಂದಿಸಿ, ಪ್ರತಿದಿನ ಮೇಲಾಧಿಕಾರಿಗಳಿಗೆ ಅಪ್‌ಡೇಟ್ ಮಾಡುವ ಮೂಲಕ ವರದಿ ಸಲ್ಲಿಸಬೇಕಿದೆ. ಸುಮಾರು 200ಕ್ಕೂ ಹೆಚ್ಚು ರೈತರನ್ನು ರಜಿಸ್ಟರ್‌ನಲ್ಲಿ ದೂರು ದಾಖಲಿಸಿಕೊಂಡಿದ್ದಾರೆ ಹೊರತು, ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಓ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸಿಬ್ಬಂದಿಗಳಿಂದ ಮಾಹಿತಿ ತರಿಸಿಕೊಂಡು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ನಿರ್ಲಕ್ಷಿಸಿದರೆ ನೀತಿ ಸಂಹಿತೆ ಮುಗಿದ ಬಳಿಕ ಧರಣಿ ಹೂಡಲಾಗುವುದು ಎಂದು ಎಚ್ಚರಿಸಿದರು. ಬಳಿಕ ಶಿರಸ್ತೇದಾರ ನಾಗರತ್ನ ಕಾಳೆ ಇವರಿಗೆ ಮನವಿ ಸಲ್ಲಿಸಿದರು. ರುದ್ರಗೌಡ್ರ ಕಾಡನಗೌಡ್ರ, ಜಾನ್ ಪುನೀತ್, ನಿಂಗಪ್ಪ ಮಾಸಣಗಿ, ಮಲ್ಲೇಶ ಡಂಬಳ, ಶಂಕರ ಮರಗಾಲ, ಕೆ.ವಿ.ದೊಡ್ಡಗೌಡ್ರಇದ್ದರು.