ಸಾರಾಂಶ
ಬೆಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಶನಿವಾರದಿಂದ (ಮಾ.1) ರಾಜ್ಯಾದ್ಯಂತ ಆರಂಭವಾಗಲಿದ್ದು, ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆ ನಡೆಯಲಿವೆ. ಒಟ್ಟು 1,171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 7.13 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈ ಬಾರಿ ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಿ ಪಾರದರ್ಶಕತೆ ಹೆಚ್ಚಿಸಲು ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಅವಳಡಿಕೆ ಜೊತೆಗೆ ಅಲ್ಲಿನ ಚಿತ್ರಣವನ್ನು ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಯಲ್ಲಿ ಕೂತು ವೀಕ್ಷಿಸಲು ವೆಬ್‌ಕಾಸ್ಟಿಂಗ್ ಕಣ್ಗಾವಲು ವ್ಯವಸ್ಥೆ ಅಳವಡಿಸಲಾಗಿದೆ. ಉನ್ನತ ಅಧಿಕಾರಿಗಳು ಈ ಕೇಂದ್ರಗಳಲ್ಲಿ ಕುಳಿತು ತಮ್ಮ ಜಿಲ್ಲಾ ವ್ಯಾಪ್ತಿಯ ಯಾವುದೇ ಕೇಂದ್ರದ ಯಾವುದೇ ಕೊಠಡಿಯಲ್ಲಿನ ಆಗು ಹೋಗುಗಳನ್ನು ವೀಕ್ಷಿಸುತ್ತಿರುತ್ತಾರೆ. ಯಾವುದೇ ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ತೊಡಗಿರುವುದು, ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳನ್ನು ನೀಡದೆ ಲೋಪವೆಸಗುವುದು, ಸಾಮೂಹಿಕ ನಕಲು ಮಾಡಿಸುವಂತಹ ಯಾವುದೇ ಅಕ್ರಮಗಳು ಕಂಡುಬಂದರೆ ತಕ್ಷಣ ಕಾನೂನು ಕ್ರಮ ಜರುಗಿಸಲಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಪರೀಕ್ಷೆ ಬರೆಯಬೇಕು.
ಬೆಳಗ್ಗೆ 10ಕ್ಕೆ ಪರೀಕ್ಷೆ ಆರಂಭವಾಗುವುದರಿಂದ 9ರೊಳಗೆ ಪರೀಕ್ಷಾ ಕೇಂದ್ರ ತಲುಪಿ. ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿ ದಾಖಲಿಸಲಾಗಿದೆ ಎನ್ನುವುದನ್ನು ಕೇಂದ್ರದ ಆವರಣದಲ್ಲಿ ಪ್ರಕಟಿಸಿರುವ ಫಲಕದಲ್ಲಿ ನೋಡಿಕೊಳ್ಳಿ. ಮನೆಯಿಂದ ಹೊರಡುವಾಗ ತಪ್ಪದೆ ಹಾಲ್ ಟಿಕೆಟ್, ನೀಲಿ ಬಾಲ್ ಪಾಯಿಂಟ್‌ನ ಎರಡು ಮೂರು ಪೆನ್ನುಗಳನ್ನು ತೆಗೆದುಕೊಂಡು ಹೋಗಿ. ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಬೇಡಿ.
ನೋಂದಣಿ ಸಂಖ್ಯೆ ದಾಖಲಿಸುವುದು ಮರೆಯಬೇಡಿ:
ಈ ಬಾರಿ ಪರೀಕ್ಷಾ ಅವಧಿಯನ್ನು 15 ನಿಮಿಷ ಕಡಿಮೆ ಮಾಡಲಾಗಿದೆ. ವಿಜ್ಞಾನ ವಿಷಯಗಳಲ್ಲಿ ಶೇ.30ರಷ್ಟು ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ಇರುವಂತೆ ಕಲಾ, ವಾಣಿಜ್ಯ ವಿಷಯಗಳಿಗೂ ಶೇ.20ರಷ್ಟು ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಅಂಕ ನಿಗದಿಪಡಿಸಿರುವುದರಿಂದ ಮೊದಲು 3 ಗಂಟೆ 15 ನಿಮಿಷ ಇದ್ದ ಪರೀಕ್ಷಾ ಅವಧಿಯನ್ನು 3 ಗಂಟೆಗೆ ಇಳಿಸಲಾಗಿದೆ. ಮೊದಲು ಉತ್ತರ ಸಮರ್ಪಕವಾಗಿ ತಿಳಿದಿರುವ ಪ್ರಶ್ನೆಗಳಿಗೆ ಉತ್ತರಿಸಿ, ನಂತರ ಉತ್ತರ ಗೊತ್ತಿಲ್ಲದ ಅಥವಾ ಅಲ್ಪಸ್ವಲ್ಪ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. ಯಾವುದೇ ಪ್ರಶ್ನೆಗಳನ್ನೂ ಬಿಡದೆ ಗೊತ್ತಿರುವಷ್ಟಾದರೂ ಉತ್ತರ ಬರೆಯಿರಿ. ಉತ್ತರ ಪತ್ರಿಕೆಯಲ್ಲಿ ತಮ್ಮ ಹೆಸರು, ನೋಂದಣಿ ಸಂಖ್ಯೆ ಬರೆಯುವುದನ್ನು ಮರೆಯಬೇಡಿ.