ಸಾರಾಂಶ
ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರ ನಾರಾಯಣ ಖಂಡಿಗೆ ಮಾತನಾಡಿ ಕ್ಯಾಂಪ್ಕೋ ಸಂಸ್ಥೆಯ ಸದಸ್ಯರು ಸಂಸ್ಥೆಗೆ ಆಧಾರ ಸ್ತಂಭಗಳಾಗಿದ್ದು, ಸಂಸ್ಥೆಯ ರಾಯಭಾರಿಗಳಾಗಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಕ್ಯಾಂಪ್ಕೋ ಸದಸ್ಯ ರೈತರ ಹಿತ ಕಾಯುವ ನಿಟ್ಟಿನಲ್ಲಿ ಕ್ಯಾಂಪ್ಕೋ ವತಿಯಿಂದ ಮುಂದಿನ ೨ ತಿಂಗಳ ಒಳಗಾಗಿ ಮೊಬೈಲ್ ಮಣ್ಣು ಪರೀಕ್ಷಾ ಯಂತ್ರವನ್ನು ಖರೀದಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಸಣ್ಣ ಮಟ್ಟದ ಈ ಮಣ್ಣು ತಪಾಸಣೆ ಯಂತ್ರದ ಮೂಲಕ ನಡೆಸಲಾಗುವ ಮಣ್ಣು ಪರೀಕ್ಷೆಯಲ್ಲಿ ಶೇ.೯೯ ಯಶಸ್ವಿ ಫಲಿತಾಂಶ ಲಭಿಸುತ್ತಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.ಪುತ್ತೂರಿನಲ್ಲಿ ಶುಕ್ರವಾರ ನಡೆದ ಕೇಂದ್ರ ಅಡಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ (ಕ್ಯಾಂಪ್ಕೋ)ದ ನವಿಕೃತ ಕಚೇರಿ ಉದ್ಘಾಟನೆ ಮತ್ತು ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಯಾಂಪ್ಕೋ ಸಂಸ್ಥೆಯಲ್ಲಿ ೧.೪೫ ಲಕ್ಷ ಸದಸ್ಯರಿದ್ದು, ಎಲ್ಲಾ ಸದಸ್ಯರ ಹಿತಕಾಯುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಬದ್ಧವಾಗಿದೆ. ಮನುಷ್ಯ ಆಕ್ರಮಣದಿಂದ ಕಾಡು ಪ್ರಾಣಿಗಳು ನಾಡಿನತ್ತ ಬಂದು ಬೆಳೆಗಳಿಗೆ ಹಾನಿ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಮಂಗನಿಗೆ ಮಂಕಿ ಪಾರ್ಕ್, ಸಂತಾನ ಹರಣ ಚಿಕಿತ್ಸೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದರೂ ಈ ತನಕ ಕಾರ್ಯಗತವಾಗಿಲ್ಲ. ಕೋತಿಯನ್ನು ಅಂಡಮಾನ್ ದ್ವೀಪಕ್ಕೆ ಬಿಟ್ಟು ಬರುವಂತೆ ಸರ್ಕಾರಕ್ಕೆ ಮನವಿ ನೀಡುವ ಕಾರ್ಯವಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿಪಿಸಿಆರ್‌ಐ ನಿರ್ದೇಶಕರಲ್ಲಿ ಈಗಾಗಲೇ ಮಾತುಕತೆ ಮಾಡಲಾಗಿದೆ. ಕೊಬ್ಬರಿಯ ಜತೆಗೆ ತೆಂಗಿನ ಕಾಯಿ ಖರೀದಿಸುವ ಚಿಂತನೆಯಿದೆ ಎಂದು ತಿಳಿಸಿದರು.ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರ ನಾರಾಯಣ ಖಂಡಿಗೆ ಮಾತನಾಡಿ ಕ್ಯಾಂಪ್ಕೋ ಸಂಸ್ಥೆಯ ಸದಸ್ಯರು ಸಂಸ್ಥೆಗೆ ಆಧಾರ ಸ್ತಂಭಗಳಾಗಿದ್ದು, ಸಂಸ್ಥೆಯ ರಾಯಭಾರಿಗಳಾಗಿದ್ದಾರೆ ಎಂದರು.
ನವೀಕೃತ ಕಚೇರಿಯನ್ನು ಹಿರಿಯ ಸದಸ್ಯ ಬೆಳೆಗಾರರಾದ ಎನ್.ಎಸ್. ಹರಿಹರ್ ರಾವ್ ಕೊಡಿಪ್ಪಾಡಿ, ಸುರೇಶ್ ಬಲ್ನಾಡು, ಬಿ.ಟಿ. ನಾರಾಯಣ ಭಟ್, ಕೆ.ಟಿ. ಭಟ್ ಉದ್ಘಾಟಿಸಿದರು.ಕೃಷಿಕ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಬಿ.ಟಿ. ನಾರಾಯಣ ಭಟ್, ಶಂಕರ ನಾರಾಯಣ ಭಟ್, ಸುರೇಶ್ ಬಲ್ನಾಡು, ಸುಂದರ ಭಟ್ ಮತ್ತಿತರರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.
ಕ್ಯಾಂಪ್ಕೋ ನಿರ್ದೇಶಕರಾದ ಎಸ್. ಆರ್. ಸತೀಶ್ಚಂದ್ರ, ಕೃಷ್ಣ ಪ್ರಸಾದ್ ಮಡ್ತಿಲ, ಕೆ. ಬಾಲಕೃಷ್ಣ ರೈ, ಜಯರಾಮ ಸರಳಾಯ, ಜಯಪ್ರಕಾಶ್ ನಾರಾಯಣ ಟಿ. ಕೆ., ರಾಧಾಕೃಷ್ಣನ್ ಕೆ., ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ಜನರಲ್ ಮ್ಯಾನೇಜರ್ ರೇಶ್ಮಾ ಮಲ್ಯ, ಡಿ.ಜಿ.ಎಂ. ಪರಮೇಶ್ವರ್, ಎಆರ್‌ಡಿಎಫ್ ವಿಜ್ಞಾನಿ ಕೇಶವ ಭಟ್ ಮತ್ತಿತರರಿದ್ದರು.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಸ್ವಾಗತಿಸಿದರು. ಮಾರುಕಟ್ಟೆ ವಿಭಾಗ ಮುಖ್ಯಸ್ಥ ಗೋವಿಂದ ಭಟ್ ವಂದಿಸಿದರು. ನಿತಿನ್ ಕೋಟ್ಯಾನ್ ನಿರೂಪಿಸಿದರು.