ಸಾರಾಂಶ
ಧಾರವಾಡ:
ಕ್ವಿಟ್ ಇಂಡಿಯಾ ಚಳವಳಿ ಕರ್ನಾಟಕದಲ್ಲಿ ಹೆಚ್ಚು ಜನಜಾಗೃತಿ ಮೂಡಿಸಿತು. ಇದು ಬ್ರಿಟಿಷ್ ಸರ್ಕಾರವನ್ನು ದಂಗು ಬಡಿಸಿ ಅವರು ಇಲ್ಲಿಂದ ಕಾಲ್ತೆಗೆಯುವಂತೆ ಮಾಡಿತು ಎಂದು ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ವೀಣಾ ಬಿರಾದಾರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಸುವರ್ಣ ಕರ್ನಾಟಕ ಸಂಭ್ರಮ ಮತ್ತು 78ನೇ ಸ್ವಾತಂತ್ರೋತ್ಸವ ಅಂಗವಾಗಿ ವೀರಾಪೂರದ ಸರ್ಕಾರಿ ಪ್ರೌಢ ಶಾಲೆಯಲ್ಲಿ “ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧಾರವಾಡ ಜಿಲ್ಲಾ ಹೋರಾಟಗಾರರ ಪಾತ್ರ” ಕುರಿತು ಮಾತನಾಡಿದರು.1942ರ ಆ. 9ರಂದು ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳವಳಿ ಪ್ರಕಟಿಸಿದಾಗ ಬ್ರಿಟಿಷ ಸರ್ಕಾರ ಗಾಂಧೀಜಿ ಮತ್ತು ಅನೇಕ ರಾಷ್ಟ್ರನಾಯಕರನ್ನು ದಸ್ತಗಿರಿ ಮಾಡಿತು. ರೊಚ್ಚಿಗೆದ್ದ ಹೋರಾಟಗಾರರು ಸರ್ಕಾರಿ ಕಚೇರಿ, ರೈಲು ಕಂಬಿ, ನಿಲ್ದಾಣ ದ್ವಂಸಗೊಳಿಸಿದರು. ಖಜಾನೆಗಳನ್ನು ಲೂಟಿ ಮಾಡಿದರು. ಟೆಲಿಫೋನ್ ತಂತಿ ಕತ್ತರಿಸಿದರು. ವಿದ್ಯಾರ್ಥಿಗಳು ಶಾಲಾಕಾಲೇಜುಗಳಿಗೆ ಬಹಿಷ್ಕಾರ ಹಾಕಿದರೆ, ವಕೀಲರು ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕಿದರು. ಕರ್ನಾಟಕದಲ್ಲಿ ಈ ಚಳವಳಿ ಅತ್ಯಂತ ಪ್ರಖರವಾಗಿತ್ತು. ರಂಗನಾಥ ದಿವಾಕರ, ಡಿ.ಪಿ. ಕರ್ಮಕರ, ಶಂಕರ ಕುರ್ತಕೋಟಿ, ಮೈಲಾರ ಮಹಾದೇವಪ್ಪ, ಆರ್.ಎಸ್. ಹುಕ್ಕೇರಿಕರ, ಶಕುಂತಲಾ ಕುರ್ತಕೋಟಿ, ಉಮಾಬಾಯಿ ಕುಂದಾಪುರ, ಸಿದ್ದಪ್ಪ ಹೊಸಮನಿ, ನಾ.ಸು. ಹರ್ಡಿಕರ, ವೆಂಕಟೇಶ ಮಾಗಡಿ, ಗಂಗಾಧರರಾವ್ ದೇಶಪಾಂಡೆ ಮುಂತಾದ ಹೋರಾಟಗಾರರು ಬಂಧನಕ್ಕೆ ಗುರಿಯಾದರು ಎಂದು ಹೋರಾಟಗಾರರನ್ನು ಸ್ಮರಿಸಿದರು.
ಕರ್ನಾಟಕದಲ್ಲಿ 7000 ಕನ್ನಡಿಗರು ಬ್ರಿಟಿಷ ಸರ್ಕಾರದ ವಿರುದ್ಧ ಚಲೇಜಾವ ಚಳವಳಿಯಲ್ಲಿ ಭಾಗವಹಿಸಿದ್ದರು. ಈ ಮಧ್ಯೆ ಈಸೂರು ಧ್ವಜ ಸತ್ಯಾಗ್ರಹವು ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಉಜ್ವಲ ಅಧ್ಯಾಯವಾಗಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನಗಳನ್ನು ವಿದ್ಯಾರ್ಥಿಗಳು ಸ್ಮರಿಸಬೇಕು. ಅಂದಾಗ ಸ್ವಾತಂತ್ರ್ಯಕ್ಕೆ ಬೆಲೆ ಬಂದಂತಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಮಕ್ಕಳೇ ಈ ದೇಶದ ನಿಜವಾದ ಸಂಪತ್ತು. ವಿದ್ಯಾರ್ಥಿಗಳು ಕುಟುಂಬದ ಆಸ್ತಿ ಮಾತ್ರವಲ್ಲ. ದೇಶದ ನಿಜವಾದ ಜೀವಂತ ಸಂಪತ್ತು ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ ಮಂಗಳಗೌರಿ ಬಡಿಗೇರ ಮಾತನಾಡಿದರು. ಗ್ರಾಮದ 97ರ ಹಿರಿಯ ಸ್ವಾತಂತ್ರ್ಯ ಯೋಧ ಯಲ್ಲಪ್ಪ ಬಡಿಗೇರ ಇತ್ತೀಚೆಗೆ ನಿಧನರಾದ ನಿಮಿತ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಾದೇವಿ ಪಾಟೀಲ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಎ.ಎ. ಬೆಣ್ಣಿ ನಿರೂಪಿಸಿದರು. ಸುರೇಶ ಮುಗಳಿ ವಂದಿಸಿದರು. ಸ್ಮೀತಾ ವಡಗಾವಿ ಪರಿಚಯಿಸಿದರು.