ಸಾರಾಂಶ
ಸೇತುವೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನವ ದಂಪತಿ ಸೆಲ್ಫಿ ವಿಚಾರಕ್ಕಾಗಿ ಜಗಳವಾಡಿದ್ದು, ಈ ವೇಳೆ ನನ್ನನ್ನು ನದಿಗೆ ತಳ್ಳಿದ್ದಾಳೆ ಎಂದು ಪತ್ನಿಯ ವಿರುದ್ಧ ಪತಿ ಆರೋಪ ಮಾಡಿರುವ ಘಟನೆ ತಾಲೂಕಿನ ಗುರ್ಜಾಪುರ ಸಮೀಪದ ಕೃಷ್ಣಾ ನದಿ ಸೇತುವೆ ಮೇಲೆ ಜರುಗಿದೆ.
ರಾಯಚೂರು : ಸೇತುವೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನವ ದಂಪತಿ ಸೆಲ್ಫಿ ವಿಚಾರಕ್ಕಾಗಿ ಜಗಳವಾಡಿದ್ದು, ಈ ವೇಳೆ ನನ್ನನ್ನು ನದಿಗೆ ತಳ್ಳಿದ್ದಾಳೆ ಎಂದು ಪತ್ನಿಯ ವಿರುದ್ಧ ಪತಿ ಆರೋಪ ಮಾಡಿರುವ ಘಟನೆ ತಾಲೂಕಿನ ಗುರ್ಜಾಪುರ ಸಮೀಪದ ಕೃಷ್ಣಾ ನದಿ ಸೇತುವೆ ಮೇಲೆ ಜರುಗಿದೆ.
ತಾಲೂಕಿನ ಶಕ್ತಿನಗರದ ಲೇಬರ್ ಕಾಲೊನಿ ನಿವಾಸಿ ಪತಿ ತಾತಪ್ಪ ಹಾಗೂ ಪತ್ನಿ ಸುಮಂಗಳಾ ಜೊತೆಗೂಡಿ ರಾಯಚೂರು-ಯಾದಗಿರಿ ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಗುರ್ಜಾಪುರ ಸೇತುವೆ ಮೇಲೆ ಬೈಕ್‌ನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಕೆಳಗೆ ಇಳಿದಿದ್ದಾರೆ.
ನದಿಗೆ ಬಿದ್ದ ಪತಿ ಕಲ್ಲು ಬಂಡೆಗಳ ಮೇಲೆ ನಿಂತು ಜೀವ ರಕ್ಷಿಸುವಂತೆ ಜೋರಾಗಿ ಕೂಗಾಡಿದ್ದು, ತಕ್ಷಣ ಸ್ಥಳೀಯರು ಹಗ್ಗ ಕಟ್ಟಿ ಆತನನ್ನು ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದಾರೆ. ಇಷ್ಟೆಲ್ಲಾ ಘಟನೆ ನಡೆದರೂ ಸಹ ಪತ್ನಿ ಫೋನಿನಲ್ಲಿ ಮಾತನಾಡುತ್ತಾ ಸುಮ್ಮನಿದ್ದು, ಮೇಲಕ್ಕೆ ಬಂದ ಪತಿ ಚಿತ್ರ ಕ್ಲಿಕ್ಕಿಸುವಾಗ ನದಿಗೆ ದಬ್ಬಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ತಕ್ಷಣ ಫೋನಿನಲ್ಲಿ ಸಂಬಂಧಿಕರ ಜೊತೆ ಮಾತನಾಡಿ, ನನ್ನನ್ನು ಕೊಲ್ಲಲು ನದಿಗೆ ದಬ್ಬಿದ್ದಾಳೆ ಎಂದು ದೂರಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿರಸದಿಂದ ಕುದಿಯುತ್ತಿದ್ದ ನವದಂಪತಿಗೆ ಬುದ್ಧಿವಾದ ಹೇಳಿ, ಸಮಾಧಾನಪಡಿಸಿ ಕಳುಹಿಸಿದ್ದಾರೆ. ಎರಡು ದಿನಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.