ಸಾರಾಂಶ
ಹುಬ್ಬಳ್ಳಿ:
ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಪ್ರಸ್ತುತ ಶೇ. 88ರಷ್ಟು ರೈಲು ಮಾರ್ಗವೂ ವಿದ್ಯುದ್ದೀಕರಣಗೊಂಡಿದ್ದು, 2025ರ ಮಾರ್ಚ್ 2025ರ ವೇಳೆಗೆ ವಿದ್ಯುದ್ದೀಕರಣ ಪೂರ್ಣಗೊಳ್ಳಲಿದೆ ಎಂದು ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಹೇಳಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ₹ 47 ಸಾವಿರ ಕೋಟಿ ಮೌಲ್ಯದ 3840 ಕಿಮೀ ಉದ್ದದ 31 ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿವೆ. ವಲಯದ ವ್ಯಾಪ್ತಿಯಲ್ಲಿ 46 ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಪುನರಾಭಿವೃದ್ಧಿ, 5 ಪ್ರಮುಖ ನಿಲ್ದಾಣ ಅಭಿವೃದ್ಧಿಪಡಿಸಿ ವಿಶ್ವದರ್ಜೆಯ ಸೌಲಭ್ಯ ಒದಗಿಸುವುದು, ಪ್ರಯಾಣಿಕರ ಅನುಭವ ಹೆಚ್ಚಿಸುವುದು. ಮೂಲಸೌಕರ್ಯ ಆಧುನೀಕರಿಸಲಾಗುತ್ತಿದೆ. ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯ ಮತ್ತು ಸೇವೆ ಒದಗಿಸುವ ದೃಷ್ಟಿಕೋನವನ್ನು ಈ ನಿಲ್ದಾಣಗಳು ಹೊಂದಿರಲಿವೆ ಎಂದು ತಿಳಿಸಿದರು. ಯಶವಂತಪುರ ನಿಲ್ದಾಣವನ್ನು ₹ 367 ಕೋಟಿ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ₹ 484 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಎರಡು ನಿಲ್ದಾಣಗಳ ಅಭಿವೃದ್ಧಿ ಕಾರ್ಯವೂ 2025ರಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಹುಬ್ಬಳ್ಳಿ ನಿಲ್ದಾಣದ ಅಭಿವೃದ್ಧಿಗೆ ₹ 397 ಕೋಟಿ ಹಾಗೂ ₹ 84 ಕೋಟಿ ವೆಚ್ಚದಲ್ಲಿ ವಾಸ್ಕೋ ನಿಲ್ದಾಣ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟದ ದರ್ಜೆಗೇರಿಸಲಾಗುವುದು ಎಂದ ಅವರು, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ 558 ಲೋಕೊ ಪೈಲಟ್‌ಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಈಗಾಗಲೇ ಮೊದಲ ಹಂತದ ಪ್ರಕ್ರಿಯೆ ಮುಗಿದಿದೆ. ಸೆಪ್ಟೆಂಬರ್‌ನಲ್ಲಿ ಎರಡನೇ ಹಂತದ ಪ್ರಕ್ರಿಯೆ ಆರಂಭಿಸುತ್ತೇವೆ. ಇದೇ ರೀತಿ 400 ಟಿಕೆಟ್ ಪರಿವೀಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ಅಸಹಾಯಕತೆ ತೋರಿದ ಜಿಎಂಅತ್ತ ದೆಹಲಿಯಲ್ಲಿ ಸಚಿವ ಅಶ್ವಿನಿ ವೈಷ್ಣವ ಅವರು ಕರ್ನಾಟಕಕ್ಕೆ ಎಷ್ಟು ಅನುದಾನ ದೊರೆತಿದೆ ಎಂಬ ಮಾಹಿತಿ ನೀಡಿದರು. ಉಳಿದಂತೆ ಯಾವ ಯೋಜನೆಗಳಿಗೆ ಎಷ್ಟೆಷ್ಟು ಎಂಬ ಮಾಹಿತಿ ನೀಡಲಿಲ್ಲ. ಈ ಬಗ್ಗೆ ಕೇಳಿದರೆ ನಿಮ್ಮಲ್ಲಿನ ಜಿಎಂ ತಿಳಿಸುತ್ತಾರೆ ಎಂದ್ಹೇಳಿ ಪತ್ರಿಕಾಗೋಷ್ಠಿ ಮೊಟಕುಗೊಳಿಸಿದರು. ಆದರೆ ಸ್ಥಳೀಯ ರೈಲ್ ಸೌಧದಲ್ಲಿ ಹಾಜರಿದ್ದ ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಅವರು ಮಾಹಿತಿ ಇಲ್ಲದೇ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಮುಖ್ಯ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಬಂದ ತಕ್ಷಣ ಮಾಧ್ಯಮ ಸಂಸ್ಥೆಗಳಿಗೆ ರವಾನಿಸುವುದಾಗಿ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಚರ್ಚೆ ನಡೆಯುತ್ತಿದೆ:
ಕೊಂಕಣ ರೈಲ್ವೆಯ ವ್ಯಾಪ್ತಿಯ ನಿಲ್ದಾಣಗಳು ಮತ್ತು ಯೋಜನೆಗಳನ್ನು ಆಯಾ ರೈಲ್ವೆ ವಲಯಗಳಿಗೆ ವಿಲೀನ ಹಿನ್ನೆಲೆಯಲ್ಲಿ ಕರ್ನಾಟಕದ ವ್ಯಾಪ್ತಿಯ ಕೊಂಕಣ ರೈಲ್ವೆಯ ನಿಲ್ದಾಣಗಳನ್ನು ನೈಋತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಗೆ ಸಂಬಂಧಿಸಿ ರೈಲ್ವೆ ಮಂಡಳಿಯ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಅರವಿಂದ ಶ್ರೀವಾಸ್ತವ್ ಹೇಳಿದರು. 2024-25ನೇ ಸಾಲಿನ ಬಜೆಟ್ ನಲ್ಲಿ ರೈಲ್ವೆಗೆ ₹ 2,62,200 ಲಕ್ಷ ಕೋಟಿ ವಿನಿಯೋಗ ಮಾಡಲಾಗಿದ್ದು, ಇದರಲ್ಲಿ ಭಾರತೀಯ ರೈಲ್ವೆಯ ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ₹ 1,09,000 ಕೋಟಿ ಮೀಸಲಿಡಲಾಗಿದೆ ಎಂದರು.