ಮಳೆರಾಯನ ಕಣ್ಣಾಮುಚ್ಚಾಲೆ: ಬೆಳೆ ಬಿತ್ತಿದ ರೈತರಲ್ಲಿ ಆತಂಕದಛಾಯೆ

| Published : Jul 11 2025, 12:32 AM IST

ಮಳೆರಾಯನ ಕಣ್ಣಾಮುಚ್ಚಾಲೆ: ಬೆಳೆ ಬಿತ್ತಿದ ರೈತರಲ್ಲಿ ಆತಂಕದಛಾಯೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ರಾಜ್ಯಾದ್ಯಂತ ಕರಾವಳಿ, ಮಲೆನಾಡು ಭಾಗದಲ್ಲಿ ಅಬ್ಬರಿಸಿದ ಪೂರ್ವಮುಂಗಾರಿಗೆ ಗಿರಿಶ್ರೇಣಿಗಳ ಜಲಪಾತಗಳಲ್ಲಿ ನೀರು ಧುಮುಕ್ಕಿದರೂ ಬಯಲುಸೀಮೆಯ ತಾಲೂಕಿನಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದ ರೈತರು ಬೇಸತ್ತು ಬಿತ್ತಿದ ಬೆಳೆಗಳಿಗೆ ಫಲ ಲಭಿಸುವುದೇ ಎಂಬ ಆತಂಕದಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ 48,249 ಹೆಕ್ಟರ್ ಕೃಷಿ ಪ್ರದೇಶದಲ್ಲಿ ಬಿತ್ತನೆ: ಕ್ರೀಯಾಶೀಲತೆ ಕಳೆದುಕೊಂಡ ಕೃಷಿ ಚಟುವಟಿಕೆಗಳು

ಬೀರೂರು ಎನ್.ಗಿರೀಶ್ಕನ್ನಡಪ್ರಭ ವಾರ್ತೆ, ಬೀರೂರು

ರಾಜ್ಯಾದ್ಯಂತ ಕರಾವಳಿ, ಮಲೆನಾಡು ಭಾಗದಲ್ಲಿ ಅಬ್ಬರಿಸಿದ ಪೂರ್ವಮುಂಗಾರಿಗೆ ಗಿರಿಶ್ರೇಣಿಗಳ ಜಲಪಾತಗಳಲ್ಲಿ ನೀರು ಧುಮುಕ್ಕಿದರೂ ಬಯಲುಸೀಮೆಯ ತಾಲೂಕಿನಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದ ರೈತರು ಬೇಸತ್ತು ಬಿತ್ತಿದ ಬೆಳೆಗಳಿಗೆ ಫಲ ಲಭಿಸುವುದೇ ಎಂಬ ಆತಂಕದಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೂನ್‌ ಆರಂಭದಲ್ಲಿ ಇದ್ದ ಬಿತ್ತನೆ ಆರ್ಭಟ ನಂತರ ಬಿಸಿಲಿನ ತಾಪಕ್ಕೆ ನೆಲ ಬಾಡಿದ್ದವು. ಇನ್ನೂ ಜುಲೈ ಆರಂಭದಲ್ಲಿ ಮೋಡ ಕವಿದರೂ ಜೋರು ಮಳೆ ಸುರಿಯದೆ ಸೋನೆ ಮಳೆಗೆ ಸೀಮಿತವಾಗಿದೆ. ತಾಲೂಕಿನ 48,249 ಹೆ. ಪ್ರದೇಶ ಬಿತ್ತನೆ ಯಾಗದೆ ಬಾಕಿ ಉಳಿದಿದೆ. ಮಳೆಯನ್ನೇ ನೆಚ್ಚಿಕೊಂಡು ಬಿತ್ತಿರುವ ರೈತರು ಮುಗಿಲು ನೋಡುವಂತ ಪರಿಸ್ಥಿತಿ ಎದುರಾಗಿದೆ. ಕೃಷಿ ಚಟುವಟಿಕೆಗಳು ಕ್ರೀಯಾಶೀಲತೆ ಕಳೆದುಕೊಂಡರೆ ಆರ್ಥಿಕತೆಗೂ ಮಾರಕ. ಕಡೂರು ತಾಲೂಕಿನಲ್ಲಿ ಕಸಬಾ, ಹಿರೇನಲ್ಲೂರು, ಸಖರಾಯಪಟ್ಟಣ, ಯಗಟಿ, ಚೌಳಹಿರಿಯೂರು, ಸಿಂಗಟಗೆರೆ, ಪಂಚನಹಳ್ಳಿ ಹೋಬಳಿ ಭಾಗಗಳಲ್ಲಿ ಮೇ ತಿಂಗಳಲ್ಲೇ ಪೂರ್ವ ಮುಂಗಾರಿಗೆ ಭೂಮಿ ಹಸನು ಮಾಡಿದ್ದ ರೈತರು, ಹತ್ತಿ, ಶೇಂಗಾ, ಹೆಸರು, ಜೋಳ, ಮೆಕ್ಕೆಜೋಳ, ಈರುಳ್ಳಿ ಸೇರಿ ಕೆಲ ಬೆಳೆಗಳನ್ನು ಬಿತ್ತಿದ್ದರು. ಜೂನ್‌ ನಲ್ಲಿ ನಿರೀಕ್ಷಿತ ಮಳೆಯಾಗದೆ ತಾಲೂಕಿನಾ ದ್ಯಂತ ಬಿತ್ತಿದ ಬೆಳೆ ಚಿಗುರೊಡೆಯದೆ ಬಿಸಿಲಿನಲ್ಲಿ ಮರುಟಿಹೋಗಿದೆ. ತಾಲೂಕಿನಲ್ಲಿ ಏಕದಳ, ದ್ವಿದಳ ಹಾಗೂ ಎಣ್ಣೆಕಾಳು ಸೇರಿದಂತೆ ವಿವಿಧ ಬೆಳೆಗಳಿಂದ ಒಟ್ಟು 53,575 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಹೊಂದಲಾಗಿದೆ. ಆದರೆ ಜೂನ್ ತಿಂಗಳಿನಿಂದ ಈವರೆಗೂ ಶೇ.58 ರಷ್ಟು ಮುಂಗಾರು ಮಳೆ ಕೊರತೆಯಾದ ಕಾರಣ ಕೇವಲ 5326 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಈಗಾಗಲೇ ತೊಗರಿ, ಅಲಸಂದೆ, ಉದ್ದು, ಹೆಸರು, ನೆಲಗಡಲೆ, ಎಳ್ಳು, ಈರುಳ್ಳಿ, ಆಲೂಗೆಡ್ಡೆ ಮತ್ತು ಸೂರ್ಯಕಾಂತಿಯ ಬಿತ್ತನೆ ಅವಧಿ ಮುಗಿದು ನಿರೀಕ್ಷಿತ ಗುರಿಯಷ್ಟು ಬಿತ್ತನೆಯಾಗದ ಫಸಲು ಕಡಿಮೆಯಾಗುವುದರಿಂದ ರೈತರು ಬರುವ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. 860 ಹೆ. ಪ್ರದೇಶದಲ್ಲಿ ಮಾತ್ರ ಏಕದಳ ಧ್ಯಾನಗಳ ಬಿತ್ತನೆಯಾಗಿ, ದ್ವಿದಳ ಧಾನ್ಯಗಳ ಬಿತ್ತನೆಯಲ್ಲಿ 2168.5 ಬಿತ್ತನೆ ಸಾಧನೆಯಾಗಿದೆ. 1542 ನಷ್ಟು ಹೆ. ಪ್ರದೇಶಗಳಲ್ಲಿಎಣ್ಣೆಕಾಳುಗಳ ಬಿತ್ತನೆಯಾಗಿದೆ.ಮಳೆ ಬಂದರೆ ರಾಗಿ, ಹೈಬ್ರಿಡ್ ಜೋಳ, ಮುಸುಕಿನ ಜೋಳ ದಂತ ಧಾನ್ಯಗಳ ಬಿತ್ತನೆಗೆ ಅವಕಾಶವಿದೆ. ಪ್ರಸ್ತುತ ಆಗಾಗ್ಗೆ ಸುರಿಯುವ ಸೋನೆ ಮಳೆ ರಾಗಿ ಬೆಳೆಗೆ ಅವಕಾಶ ನೀಡಿದೆ. ಆದರೆ ಉತ್ತಮ ಮಳೆ ಅಭಾವದಿಂದ ರೈತರು ಉತ್ತಮ ಫಸಲಿನ ಭರವಸೆ ಕಳೆದುಕೊಂಡಿದ್ದಾರೆ.ತರಕಾರಿಯತ್ತ ರೈತರ ಚಿತ್ತ : ಜಮೀನುಗಳಲ್ಲಿ ಕೊಳವೆಬಾವಿ ಹೊಂದಿರುವ ರೈತರು ಕೃಷಿ ಬೆಳೆ ಗಿಂತ ತೋಟಗಾರಿಕೆಯ ತರಕಾರಿ ಬೆಳೆಗಳತ್ತ ಮುಖ ಮಾಡಿದ್ದಾರೆ. ಬಹುತೇಕ ಜಮೀನು ಪ್ರದೇಶಗಳು ತೆಂಗಿಗಿಂತ ಅಡಕೆಯನ್ನೆ ಆವರಿಸಿದೆ.

ಶೇ.70ರಷ್ಟು ಈರುಳ್ಳಿ ಬಿತ್ತನೆ: ಮುಂಗಾರು ಹಂಗಾಮು ಆರಂಭಗೊಂಡು 15 ದಿನಗಳಾದರು ತಾಲೂಕಿನಲ್ಲಿ ಉತ್ತಮ ಮಳೆ ಯಾಗದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಈರುಳ್ಳಿ ಶೇ. 70 ರಷ್ಟು ಬಿತ್ತನೆಯಾಗಿದ್ದರೂ ಮುಂಗಾರು ಮಳೆ ತಡವಾಗಿರುವುದರಿಂದ ಗುರಿ ತಲುಪುವ ಸಾಧ್ಯತೆ ತೀವ್ರ ಕಡಿಮೆ. ತಾಲೂಕಿನ ಹಿರೇನಲ್ಲೂರು, ಕಸಬಾ, ಬೀರೂರು, ಯಗಟಿ, ಸಿಂಗಟಗೆರೆ, ಔಳಹಿರಿಯೂರು, ದೇವನೂರು ಹೋಬಳಿ ಸೇರಿದಂತೆ 2724.25 ಹೆ. ನಷ್ಟು ಈರುಳ್ಳಿ ಬಿತ್ತನೆಯಾಗಿದೆ. ಇನ್ನೂ ಆಲೂಗೆಡ್ಡೆಗೆ ಉತ್ತಮ ಬೆಲೆ ಇಲ್ಲದೆ ಶುಂಠಿ ಬೆಳೆಯಲು ಉತ್ಸುಕರಾಗಿದ್ದಾರೆ.ರಾಗಿ ಬೆಳೆಯಲು ಉತ್ಸುಕ!: ತಾಲೂಕಿನಲ್ಲಿ ಪೂರ್ವ ಮುಂಗಾರು ಕೈಕೊಟ್ಟಿರುವ ಪರಿಣಾಮ ಬಿತ್ತನೆ ಪ್ರದೇಶದ 48,249 ಹೆಕ್ಟರ್‌ ನ ಬಾಕಿ ಉಳಿದ ಜಮೀನುಗಳಲ್ಲಿ ರೈತರು ರಾಗಿ ಬೆಳೆಯಲು ಉತ್ಸುಕರಾಗಿ ಜಮೀನನ್ನು ಹಸನು ಮಾಡಿಟ್ಟು ಕೊಂಡಿದ್ದಾರೆ. ಈಗಾಗಲೇ ಬೆಂಬಲಬೆಲೆಯಲ್ಲಿ ರಾಗಿ ಖರೀದಿಯಾದ ಪರಿಣಾಮ ರಾಗಿಗೆ ಡಿಮ್ಯಾಂಡ್ ಇರಲಿದೆ ಎಂಬ ಭಾವನೆಯಲ್ಲಿ ಉತ್ತಮ ಮಳೆಗೆ ಕಾಯುತ್ತಿದ್ದಾರೆ.ಈರುಳ್ಳಿ - ಶೇಂಗಾ ಬಿತ್ತನೆಗೆ ಮಳೆ ಅಗತ್ಯ :

ಪ್ರಸ್ತುತ ಬಹಳಷ್ಟು ಕಡೆ ಮೋಡ ಮುಸುಕಿದ ವಾತಾವರಣ ಇದ್ದರು ಮಳೆ ಬರುತ್ತಿಲ್ಲ. ಸಾಲ ಮಾಡಿ ಬಿತ್ತನೆ ಬೀಜ ಗೊಬ್ಬರ ಸಂಗ್ರಹಿಸಿರುವ ರೈತರಿಗೆ ಮಳೆ ಕಣ್ಣಾ ಮುಚ್ಚಾಲೆಯಿಂದ ಕಂಗಾಲಾಗಿದ್ದಾರೆ. ಮೊದಲ-ಎರಡನೇ ವಾರ ಶೇಂಗಾ , ಈರುಳ್ಳಿ ಬಿತ್ತನೆಗೆ ಪೈರು ಮೇಲೆರಲು ಮಳೆ ನಿರ್ಣಾಯಕವಾಗಿರುವುದರಿಂದ ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸುವಂತಿಲ್ಲ.ವಾಡಿಕೆಗಿಂತ ಶೇ.11ರಷ್ಟು ಕೊರತೆ : ತಾಲೂಕಿನಲ್ಲಿ ವಾಡಿಕೆಯಂತೆ ಜ.1ರಿಂದ ಜೂ.30ವರೆಗೆ 208.8 ಮಿಮೀ ಮಳೆ ಯಾಗುವ ಜಾಗದಲ್ಲಿ 186.6 ಮಿಮೀ ಮಾತ್ರ ಮಳೆಯಾಗಿದೆ. ಶೇ.11ರಷ್ಟು ಮಳೆ ಕೊರತೆಯಾಗಿದೆ. ಕಸಬಾ ಹೋಬಳಿ ಯಲ್ಲಿ ಶೇ. 26 ರಷ್ಟು ಕಡಿಮೆ ಮಳೆಯಾಗಿದೆ. ಪಂಚನಹಳ್ಳಿ ಹೋಬಳಿಯಲ್ಲಿ ಮಾತ್ರ ವಾಡಿಕೆಗಿಂತ ಶೇ. 26 ರಷ್ಟು ಹೆಚ್ಚು ಮಳೆಯಾಗಿದೆ. --

ಮಳೆಯಾಶ್ರೀತ ಪ್ರದೇಶದ ಬೆಳೆಗಳಿಗೆ ಮಳೆಯೇ ಜೀವಾಳ. ಈಗಾಗಲೇ ಈರುಳ್ಳಿ ಬಿತ್ತನೆ ಕಾರ್ಯ ಮಾಡಲಾಗಿದೆ ಕೈ ಕೊಡುವ ಮಳೆಯಿಂದ ನಿರೀಕ್ಷಿತ ಮಟ್ಟದಲ್ಲಿ ಈರುಳ್ಳಿ ಹುಟ್ಟುತ್ತಿಲ್ಲ.

- ಮಲ್ಲೇಶ್, ಬೀರೂರು

--

ಪೂರ್ವಮುಂಗಾರಿನಲ್ಲಿಯೇ ಮಳೆ ಕೈಕೊಟ್ಟ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ಬಿತ್ತನೆ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಮುಂದೆ ಬರುವ ಮಳೆಯಿಂದ ರಾಗಿ ಬೆಳೆಯಲು ಅವಕಾಶ ಹೆಚ್ಚಳವಾಗಿದೆ.- ಕೆದಿಗೆರೆ ಬಸವರಾಜ್.--ಇಲಾಖೆಯಿಂದ ರೈತರಿಗೆ ಬೆಳೆ ಬೆಳೆಯಲು ಪೂರಕ ಮಾಹಿತಿಗಳನ್ನು ನೀಡಲಾಗುತ್ತಿದೆ. ಅಗತ್ಯ ರಸಗೊಬ್ಬರ ದಾಸ್ತಾನು ಹೊಂದಿದ್ದು, ಜುಲೈ ನಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತಮ ಮಳೆ ಬಿದ್ದರೆ ರೈತರು ಉತ್ತಮ ಬೆಳೆ ಬೆಳೆಯಲು ಸಾಧ್ಯ.- ಅಶೋಕ್,

ಸಹಾಯಕ ಕೃಷಿ ನಿರ್ದೇಶಕ ಕೃಷಿ ಇಲಾಖೆ. ಕಡೂರು.ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳಿಗೂ ರೈತರು ಒತ್ತು ಕೊಡುತ್ತಿದ್ದು, ಬೆಳೆಗಳ ಹಾನಿಯಿಂದ ಅಗತ್ಯ ಪರಿಹಾರ ಕಂಡುಕೊಳ್ಳಲು ಬೆಳೆ ರಕ್ಷಣೆಗಾಗಿ ಬೆಳೆ ವಿಮಾ ಯೋಜನೆಗಳು ಸಹಕಾರಿಯಾಗಲಿದೆ.- ಜಯದೇವಪ್ಪ,

ತೋಟಗಾರಿಕೆ ಸಹಾಯಕ ನಿರ್ದೇಶಕ, ಕಡೂರು.8 ಬೀರೂರು3 ಕಡೂರು ತಾಲ್ಲೂಕಿನ ಹಿರೇನಲ್ಲೂರು ಗ್ರಾಮದ ಜಮೀನನಲ್ಲಿ ಬಿತ್ತಿರುವ ಈರುಳ್ಳಿ ಬೆಳೆಗೆ ಕೈಕೊಟ್ಟ ಮಳೆಯಿಂದ ಈರುಳ್ಳಿ ಹುಟ್ಟದೆ ಇರುವುದು.8 ಬೀರೂರು 4(ಮುಂಗಾರಿಗೆ ರಾಗಿ ಬೆಳೆಯಲು ಹಸನು ಮಾಡಿರುವ ಜಮೀನು)