ಪಡಸಲನತ್ತ ಗ್ರಾಮಕ್ಕೆ ಪರಿಹಾರ ಎತ್ತ..?

| Published : May 13 2024, 12:01 AM IST

ಸಾರಾಂಶ

ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪಡಸಲನಾಥ ಗ್ರಾಮದಲ್ಲಿ 110 ಕುಟುಂಬಗಳಿದ್ದು, 350 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದ ಜನರು ಇನ್ನೂ ಸ್ವಾತಂತ್ರ್ಯ ಪೂರ್ವದ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ.

ಜಿ ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪಡಸಲನಾಥ ಗ್ರಾಮದಲ್ಲಿ 110 ಕುಟುಂಬಗಳಿದ್ದು, 350 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದ ಜನರು ಇನ್ನೂ ಸ್ವಾತಂತ್ರ್ಯ ಪೂರ್ವದ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಈ ಗ್ರಾಮಕ್ಕೆ ರಸ್ತೆ ಇಲ್ಲಾ, ವಿದ್ಯುತ್ ಇಲ್ಲಾ, ಕಾಡು ಪ್ರಾಣಿಗಳ ಹಾವಳಿಯಂತೂ ತಪ್ಪಿದ್ದಲ್ಲ. ತಲೆಯ ಮೇಲೆ ದಿನಸಿ, ಸರಕುಗಳನ್ನು ಹೊತ್ತು ಕಿ.ಮೀ.ಗಟ್ಟಲೇ ನಡೆಯಬೇಕಾದ ಪರಿಸ್ಥಿತಿ ಇಲ್ಲಿನದ್ದಾಗಿದೆ‌.

ಸರ್ಕಾರದ ದೃಷ್ಟಿ ಬೀಳದ ಕಾನನದ ಹಾದಿ:

ಪಡಸಲನತ್ತ ಗ್ರಾಮದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆ ಕಲ್ಲು ಮಣ್ಣಿನಿಂದ ಕೂಡಿದ ಹಾದಿಯಾಗಿದೆ. ತಮಗೇ ಯಾವ ವಸ್ತು ಬೇಕಾದರೂ, ಆಸ್ಪತ್ರೆಗೆ ಹೋಗಬೇಕಾದರೂ ದಟ್ಟ ಅರಣ್ಯದ ಮಧ್ಯದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ 16 ಕಿಮೀ ಕಾಲ್ನಡಿಗೆಯಲ್ಲೇ ಸಾಗಬೇಕಿದೆ‌.

ಭಯದಲ್ಲೇ ಬದುಕು ಬವಣೆ:

ಪಡಸಲನತ್ತ ಗ್ರಾಮದ ಸುತ್ತ ಅರಣ್ಯ ಪ್ರದೇಶ ಇರುವುದರಿಂದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಇಲಾಖೆ ಚಿರತೆಗಳನ್ನು ತಂದು ಬೇರಡೆಯಿಂದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಜೊತೆಗೆ ಕಾಡಾನೆ ಹಾವಳಿಂದಲೂ ಗ್ರಾಮಸ್ಥರು ಅರಣ್ಯದಲ್ಲಿ ಹೋಗಿ ಬರಲು ಭಯದಲ್ಲೇ ಎಲ್ಲಿ ಪ್ರಾಣಿಗಳು ತಮ್ಮ ಮೇಲೆ ದಾಳಿ ಮಾಡುತ್ತೋ ಎಂಬ ಭೀತಿಯಲ್ಲಿಯೇ ಇಲ್ಲಿನ ಪಡಸಲನತ್ತ ಗ್ರಾಮಸ್ಥರು ಜೀವನ ಕಳೆಯುತ್ತಿದ್ದಾರೆ.

ಗ್ರಾಮದಲ್ಲಿ ಜಲಕ್ಷಮದ ಭೀತಿ:

ಪಡಸಲನತ್ತ ಗ್ರಾಮದಲ್ಲಿ ಎರಡು ಹ್ಯಾಂಡ್ ಪಂಪ್ ಇದೆ. ಅದರಲ್ಲಿ ಒಂದು ಪಂಪ್‌ನಲ್ಲಿ ಮಾತ್ರ ನೀರು ಬರುತ್ತಿದೆ. ಇನ್ನೊಂದರಲ್ಲಿ ಮಳೆ ಇಲ್ಲದೆ ಅಂತರ್ಜಲ ಕುಸಿತದಿಂದ ನೀರು ಕಡಿಮೆಯಾಗಿದೆ. ಇಲ್ಲದಿದ್ದರೆ ಗ್ರಾಮದಿಂದ 500 ಮೀಟರ್ ದೂರದಲ್ಲಿರುವ ತೋಡುಬಾವಿಯಿಂದ ಗಂಟೆಗಟ್ಟಲೆ ಕಾದು ಬಾವಿಯಲ್ಲಿ ಸೋರುವ ನೀರನ್ನು ಶೇಖರಿಸಿ ಮನೆಗಳಿಗೆ ತರಬೇಕಾಗಿದೆ. ಮಳೆ ಇಲ್ಲದೆ ಕಂಗಲಾಗಿರುವ ಗ್ರಾಮಸ್ಥರಿಗೆ ಮಳೆ ಬಂದರೆ ಮಾತ್ರ ಗ್ರಾಮದಲ್ಲಿ ಬೆಳೆ. ಇಲ್ಲದಿದ್ದರೆ ಜಲಕ್ಷಾಮದ ಭೀತಿಯಲ್ಲಿ ಈ ಜನ ದಿನ ಕಳೆಯುವಂತಾಗಿದೆ.

ಆರೋಗ್ಯ ಹದಗೆಟ್ಟರೇ ಡೋಲಿಯೇ ಗತಿ: ಈ ಗ್ರಾಮದಲ್ಲಿನ ನಿವಾಸಿಗಳ ಆರೋಗ್ಯ ಹದಗೆಟ್ಟರೆ ತುರ್ತು ಸಂದರ್ಭಗಳಲ್ಲಿ ವಾಹನಗಳು ಬರದೇ ಇದ್ದರೆ ಆಸ್ಪತ್ರೆಗೆ ತೆರಳಬೇಕಾದರೆ (ಡೋಲಿ) ನಾಣೆ ಕಟ್ಟಿ ಮರದ ಕೋಲಿನ ಸಹಾಯದಿಂದ ವ್ಯಕ್ತಿಗಳು ಅದರಲ್ಲಿ ಒತ್ತುಕೊಂಡು ತಮಿಳುನಾಡಿನ ಆಸ್ಪತ್ರೆಗೆ ಹೋಗಬೇಕು. ಇಲ್ಲದಿದ್ದರೆ ಮಹದೇಶ್ವರ ಬೆಟ್ಟ 16 ಕಿಲೋಮೀಟರ್ ದುರ್ಗಮ ಅರಣ್ಯ ಪ್ರದೇಶದಲ್ಲಿ ಬೆಟ್ಟಗುಡ್ಡಗಳ ನಡುವೆ ತೆರಳಬೇಕಾಗಿರುವ ದುಸ್ಧಿತಯಲ್ಲಿ ಇಲ್ಲಿನ ಹಾಡಿಯ ಜನತೆ ಬವಣೆಯಲ್ಲಿ ಬದುಕುತ್ತಿದ್ದಾರೆ.

ವಿದ್ಯುತ್ ವಂಚಿತ ಗ್ರಾಮ:

ತಲತಲಾಂತರದಿಂದ ಗ್ರಾಮದಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ವಿದ್ಯುತ್ ಸೌಲಭ್ಯವಿಲ್ಲದೆ ಸರ್ಕಾರ ಗ್ರಾಮಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಿದೆ. ಆದರೆ ಪರಿಕರಗಳೆಲ್ಲ ತುಕ್ಕು ಹಿಡಿದು ಗ್ರಾಮದಲ್ಲಿ ದೀಪ ಬೆಳಗದೆ ಹರಳೆಣ್ಣೆ ಬುಡ್ಡಿ ದೀಪ ಅಥವಾ ಕೊಳ್ಳಿ ಬೆಳಕು ಉಪಯೋಗಿಸುತ್ತಿದ್ದಾರೆ. ಗ್ರಾಮದಲ್ಲಿ ರಾಗಿ ಬೀಸಲು ಮಲೆ ಮಹದೇಶ್ವರ ಬೆಟ್ಟ ಅಥವಾ ತಮಿಳುನಾಡಿಗೆ ಹೋಗಬೇಕಾಗಿರುವುದರಿಂದ ಗ್ರಾಮದಲ್ಲಿ ಮಹಿಳೆಯರೇ ರಾಗಿ ಕಲ್ಲಿನಿಂದ ಹಿಟ್ಟು ತಯಾರಿಸಿ ರಾಗಿ ಮುದ್ದೆ ಮಾಡುವುದೇ ಇಲ್ಲಿನ ಮಹಿಳೆಯರ ದಿನದ ಕಾಯಕವಾಗಿದೆ.ಸೌಲಭ್ಯಗಳಿಗಾಗಿ ಚುನಾವಣೆ ಬಹಿಷ್ಕಾರ:

ಕಳೆದ ಹಲವಾರು ಚುನಾವಣೆಗಳಲ್ಲಿ ಮತದಾನ ಮಾಡಿರುವ ಗ್ರಾಮಸ್ಥರು ಈ ಹಿಂದೆ ನಡೆದಂತಹ ವಿಧಾನಸಭಾ ಚುನಾವಣೆಯಲ್ಲೂ ಸಹ ಮತದಾನ ಮಾಡಿರುವ ಗ್ರಾಮಸ್ಥರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಸರ್ಕಾರಕ್ಕೆ ಹೀಗಿದ್ದರೂ ಜನಪ್ರತಿನಿಧಿಗಳ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗ್ರಾಮದಲ್ಲಿ ಎಂಟು ಜನ ಮಾತ್ರ ಮತದಾನ ಮಾಡಿ ಉಳಿದಂತೆ ಗ್ರಾಮಸ್ಥರೆಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ಚುನಾವಣೆ ಬಹಿಷ್ಕರಿಸಿದ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ನಿಮ್ಮ ಹಕ್ಕು ಚಲಾಯಿಸಿ ನಂತರ ನಿಮಗೆ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೂ ಇಲ್ಲಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.

ಬೇಕಾಗಿದೆ ಸರ್ಕಾರದ ಅಭಯ:

ಮಲೆ ಮಹದೇಶ್ವರ ಬೆಟ್ಟದ ತಪಲಿನಲ್ಲಿ ಬರುವ ಪಡಸಲತ್ತ ಗ್ರಾಮಕ್ಕೆ ಸರ್ಕಾರದ ಅಭಯ ಬೇಕಾಗಿದೆ . ಹೀಗಾಗಿ ಇನ್ನು ಮುಂದಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಈ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗುವರೆ? ಕಾದು ನೋಡಬೇಕಾಗಿದೆ.

ಪಡಸಲನತ್ತ ಗ್ರಾಮದಲ್ಲಿ ಸೋಲಾರ್ ಕೆಟ್ಟಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ನಿರ್ವಹಣೆ ಕೊರತೆಯಿಂದ ಜೊತೆಗೆ ಜಲಜೀವನ್ ಮಿಷನ್ ಯೋಜನೆಯ ಪೈಪ್ ಲೈನ್ ತೋಡುವ ವೇಳೆಯಲ್ಲಿ ಸೋಲಾರ್ ಅಳವಡಿಸಿರುವ ಮನೆಗಳಲ್ಲಿರುವ ವೈರ್ ಗಳನ್ನು ಸಹ ತುಂಡರಿಸಿ ಸಮಸ್ಯೆ ಉಂಟಾಗಿದೆ ದುರಸ್ತಿಪಡಿಸಲು ಸಿಬ್ಬಂದಿ ಕಳುಹಿಸಿ ಕ್ರಮ ಕೈಗೊಳ್ಳಲಾಗುವುದು. -ಶಂಕರ್, ಎಇಇ ಚೆಸ್ಕಾಂ, ಹನೂರು ಉಪ ವಿಭಾಗ

ತಲಾತಲಾಂತರದಿಂದ ಮಾದಪ್ಪನ ತಪ್ಪಲಿನ ಗ್ರಾಮದಲ್ಲಿ ವಾಸಸುತ್ತಿರುವ ನಮಗೆ ಕಾಡುಪ್ರಾಣಿಗಳ ಉಪಟಳ ಒಂದು ಕಡೆಯಾದರೆ, ರಸ್ತೆ ಹಾಗೂ ವಿದ್ಯುತ್ ಇಲ್ಲದೆ ರಾಗಿ ಕಲ್ಲಿನಲ್ಲಿ ಬಿಸಿ ನಂತರ ಮುದ್ದೆ ಮಾಡುವುದೇ ಮಹಿಳೆಯರ ಕಾಯಕವಾಗಿದೆ ಜೊತೆಗೆ ಗ್ರಾಮದಲ್ಲಿರುವ ಸೋಲಾರ್ ಸಹ ಕೆಟ್ಟು ನಿಂತಿದೆ ಗ್ರಾಮ ಕಗ್ಗತ್ತಿನಲ್ಲಿ ಮುಳುಗಿದೆ. ಜನಪ್ರತಿನಿಧಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಗ್ರಾಮಗಳು ಇದ್ದು ಇಲ್ಲದಂತಾಗಿದೆ.-ನಾಗರಾಜು, ಪಡಸಲನತ್ತ ಗ್ರಾಮಸ್ಥ.