ಸಾರಾಂಶ
ಈರಣ್ಣ ಬುಡ್ಡಾಗೋಳ
ಕನ್ನಡ ಪ್ರಭವಾರ್ತೆ ರಾಮದುರ್ಗಮಲಪ್ರಭೆಯ ಅಬ್ಬರಕ್ಕೆ ಸಾಲ ಮಾಡಿ ಬೆಳೆದ ಬೆಳೆ ಮಲಪ್ರಭೆಯ ಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ತಾಲೂಕಿನ ನದಿ ತಟದ ರೈತರದ್ದಾಗಿದೆ.ಇದು ಈ ವರ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯಲ್ಲಿ ಅತಿವೃಷ್ಟಿ ಉಂಟಾಗಿ ಮಲಪ್ರಭಾ ಜಲಾಶಯ ಭರ್ತಿಯಾಗಿ ಅಣೆಕಟ್ಟೆಯಿಂದ ನೀರು ಬಿಟ್ಟಾಗಲೊಮ್ಮೆ ಅಣೆಕಟ್ಟೆ ಕೆಳಭಾಗದ ನದಿಪಾತ್ರದ ಜನರು, ರೈತರು ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯವಾಗಿದೆ.
ಪಶ್ಚಿಮಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಜನ್ಮತಳಿದ ಮಲಪ್ರಭಾ ನದಿಗೆ ಮುನವಳ್ಳಿ ಹತ್ತಿರ ನವಿಲುತೀರ್ಥ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಸದ್ಯ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನದಿಗೆ 15 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹೊರಬಿಟ್ಟಿರುವ ಪರಿಣಾಮ ರಾಮದುರ್ಗ ತಾಲೂಕಿನ ಮಲಪ್ರಭಾ ನದಿ ದಂಡೆಯ ಜನರ ಜೀವನ ಆತಂಕದಲ್ಲಿದೆ. ನದಿಯ ನೀರಿನ ಮೂಲದಿಂದ ಹಾಗೂ ಕೊಳವೆ ಬಾವಿಯಿಂದ ನೀರಾವರಿ ಮಾಡಿಕೊಂಡು ನೆಮ್ಮದಿ ಜೀವನ ಸಾಗಿಸುತ್ತಿದ್ದ ರೈತರ ಬೆಳೆ ನೀರುಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಕಳೆದ ವರ್ಷ ಬರಗಾಲದಿಂದ ಕಂಗೆಟ್ಟಿದ್ದ ರೈತರು ಈ ಸಲ ಉತ್ತಮ ಮುಂಗಾರು ಮಳೆಯಾಗಿ ಬಿತ್ತನೆ ಮಾಡಿ ಬೆಳೆಗಳು ನಳನಳಿಸುತ್ತಿದ್ದರಿಂದ ಸಂತಸಗೊಂಡು ಈ ವರ್ಷವಾದರೂ ಜೀವನ ಹಸನಾಗುವ ಕನಸು ಕಂಡಿದ್ದರು. ಆದರೆ, ವರುಣನ ಆರ್ಭಟದಿಂದ ಕನಸು ನುಚ್ಚುನೂರಾಗಿದೆ.
ಮಲಪ್ರಭಾ ನದಿ ದಂಡೆಯ ಜಮೀನುಗಳು ಸಂಪೂರ್ಣ ಜಲಾವೃತಗೊಂಡು ಕಬ್ಬು, ಗೋವಿನಜೋಳ, ಹತ್ತಿ, ಸೂರ್ಯಕಾಂತಿ, ಹೆಸರು, ಬಾಳೆ, ಉಳ್ಳಾಗಡ್ಡಿ ಬೆಳೆ ನೀರಲ್ಲಿ ನಿಂತಿದೆ. ಪಂಚಮಿ ಹಬ್ಬದಲ್ಲಿ ಸಿಹಿ ತಿನ್ನಬೇಕಾದ ರೈತಕುಲಕ್ಕೆ ಮಲಪ್ರಭೆಯ ಅಬ್ಬರ ಕಹಿಯಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.ತಾಲೂಕಿನಲ್ಲಿ ಮಲಪ್ರಭಾ ನೆರೆಗೆ 350 ಹೆಕ್ಟೇರ್ ಹೆಸರು, 240 ಹೆಕ್ಟೇರ್ ಗೋವಿನಜೋಳ, 270 ಹೆಕ್ಟೇರ್ ಹತ್ತಿ, 178 ಹೆಕ್ಟೇರ್ ಸೂರ್ಯಕಾಂತಿ, 300 ಹೆಕ್ಟೇರ್ ಪ್ರದೇಶದಲ್ಲಿನ ಕಬ್ಬು ಬೆಳೆ ನೀರು ನಿಂತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್. ಎಫ್. ಬೆಳವಟಗಿ ಮಾಹಿತಿ ನೀಡಿದ್ದಾರೆ.
ತೋಟಗಾರಿಕೆ ಬೆಳೆಯಲ್ಲಿ ಬಾಳೆ 10 ಹೆಕ್ಟೇರ್, ಉಳ್ಳಾಗಡ್ಡಿ 59 ಹೆಕ್ಟೇರ್ ಮತ್ತು ತರಕಾರಿ ಮತ್ತು ಹೂವಿನ ಬೆಳೆ 31 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನೀರುಪಾಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸಂಗೀತಾ ಕುರೇರ ಹೇಳಿದ್ದಾರೆ.ಮಲಪ್ರಭಾ ನದಿಗೆ ಹೆಚ್ಚು ನೀರು ಹರಿಬಿಟ್ಟ ಪರಿಣಾಮ ಹಿನ್ನೀರು ಜಮೀನಿಗೆ ನುಗ್ಗಿ ಹತ್ತಿ, ಉಳ್ಳಾಗಡ್ಡಿಯಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ. ಸಾಲ ಮಾಡಿ ಬೀಜ, ರಸಗೊಬ್ಬರ ಮತ್ತು ಆಳುಗಳ ಪಗಾರ ಸೇರಿ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದು, ಈಗ ಕೈಗೆ ಬಂದಿದ್ದು ಬಾಯಿಗೆ ಬಾರದಂತಾಗಿದೆ. ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕಾಗಿದೆ.
-ಮಾಳಪ್ಪ ಶಿಂದೋಗಿ, ಅವರಾದಿ ರೈತಮಲಪ್ರಭಾ ನದಿಗೆ ಪ್ರವಾಹ ಬಂದು ರೈತರ ಬೆಳೆ ಹಾನಿಗೊಳಗಾದರೂ ಜನಪ್ರತಿನಿಧಿಗಳು, ತಾಲೂಕಿನ ಪ್ರಮುಖ ಅಧಿಕಾರಿಗಳು, ಜಮೀನುಗಳಿಗೆ ಭೇಟಿ ನೀಡುತ್ತಿಲ್ಲ, ಅಧಿಕಾರಿಗಳು ಕೇವಲ ಮುಳುಗಡೆಯಾಗುವ ಸೇತುವೆಗಳ ಮುಂದೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆಯೇ ಹೊರತು ರೈತರ ನೆರವಿಗೆ ಧಾವಿಸುತ್ತಿಲ್ಲ. ಎನ್‌ಡಿಆರ್‌ಎಫ್ ನಿಯಮದಂತೆ ಪರಿಹಾರ ನೀಡುತ್ತೇವೆ ಎನ್ನುವುದು ಸರಿಯಲ್ಲ. 2019ರಲ್ಲಿ ಬಿಜೆಪಿ ಸರ್ಕಾರ ನೀಡಿದಂತೆ ಹಾನಿಯಾದ ಮನೆಗಳಿಗೆ ನಿರ್ಮಾಣಕ್ಕೆ ₹ 5 ಲಕ್ಷ ನೀಡಬೇಕು. ಬೆಳೆ ಹಾನಿಗೆ ಸಮರ್ಪಕ ಪರಿಹಾರ ನೀಡಬೇಕು.
-ಚನ್ನಬಸು ಕುಲಕರ್ಣಿ, ರೈತ ಮುಖಂಡಮಲಪ್ರಭಾ ನದಿಗೆ ಹದಿನೈದು ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿದ್ದರಿಂದ ತಾಲೂಕಿನಲ್ಲಿ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ. ನದಿ ದಂಡೆಯ ಗ್ರಾಮಗಳಾದ ಸುನ್ನಾಳ, ಹಾಲೋಳ್ಳಿ, ಕಿಲಬನೂರ, ಹಲಗತ್ತಿ, ಘಟಕನೂರ, ಗೊಣ್ಣಾಗರ, ಅವರಾದಿ, ಸಂಗಳ, ಹಂಪಿಹೋಳಿ, ಚಿಕ್ಕತಡಸಿ ಸೇರಿದಂತೆ ಹಲವು ಗ್ರಾಮಗಳ ರೈತರ ಬೆಳೆ ನೀರಲ್ಲಿ ನಿಂತಿದೆ. ನೀರು ಕಡಿಮೆಯಾದ ಬಳಿಕ ಬೆಳೆಯ ಹಾನಿಯ ನಿಖರ ಮಾಹಿತಿ ತಿಳಿದು ಬರಲಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
- ಪ್ರಕಾಶ ಹೊಳೆಪ್ಪಗೋಳ, ತಹಸೀಲ್ದಾರ್ ರಾಮದುರ್ಗ