ಬತ್ತದ ಬಿತ್ತನೆ ಬೀಜ ಮಾರಾಟದಿಂದ ಆದಾಯ ಕಂಡುಕೊಂಡ ರವಿಶಂಕರ್

| Published : Jun 28 2024, 12:52 AM IST

ಸಾರಾಂಶ

ಕೃಷಿಕ ರವಿಶಂಕರ್‌ ಅವರು 35 ತಳಿಯ ಬತ್ತ ಬೆಳೆದು ಬಿತ್ತನೆ ಬೀಜ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿದ್ದಾರೆ. ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೇರಳ ರಾಜ್ಯದಿಂದಲೂ ರೈತರು ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಮಳೆಗಾಲ ಆರಂಭವಾಗಿರುವುದಿಂದ ಜಿಲ್ಲೆಯಲ್ಲಿ ರೈತರು ಬತ್ತದ ಬಿತ್ತನೆ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಬತ್ತದ ಕೃಷಿ ಮಾಡುವುದು ಅಸಾಧ್ಯ ಎಂದು ಹಿಂದೇಟು ಹಾಕುವವರ ನಡುವೆ ಕೃಷಿಕ ರವಿಶಂಕರ್ ಅವರು ಸುಮಾರು 35 ತಳಿಯ ಬತ್ತವನ್ನು ಬೆಳೆದು ಬಿತ್ತನೆ ಬೀಜ ಮಾರಾಟ ಮಾಡಿ ಆದಾಯವನ್ನು ಕಂಡುಕೊಂಡಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದೂರು ಗ್ರಾಮದ ಪ್ರಗತಿಪರ ಕೃಷಿಕ ರವಿಶಂಕರ್, ಸುಮಾರು 35 ಎಕರೆ ಪ್ರದೇಶದಲ್ಲಿ ವಿವಿಧ ತಳಿಯ ಬತ್ತವನ್ನು ಬೆಳೆದು ಈಗ ಅದನ್ನು ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೇರಳ ರಾಜ್ಯದಿಂದಲೂ ಆಗಮಿಸಿ ರೈತರು ಬಿತ್ತನೆ ಬೀಜವನ್ನು ಖರೀದಿಸಿ ಬಿತ್ತನೆ ಕಾರ್ಯವನ್ನು ಮಾಡುತ್ತಿದ್ದಾರೆ.

ಸುಮಾರು 35 ಎಕರೆ ಪ್ರದೇಶದಲ್ಲಿ ಸಹೋದರ ಜೈ ಶಂಕರ್ ಅವರೊಂದಿಗೆ ರವಿಶಂಕರ್ ಅವರು ಸೇರಿ ಸುಮಾರು 35 ಬಗೆಯ ಬತ್ತದ ತಳಿಗಳನ್ನು ಹಾಕಿ ಕೃಷಿ ಮಾಡಿ, ಇದೀಗ ಬತ್ತದ ಬಿತ್ತನೆ ಬೀಜವನ್ನು ರೈತರಿಗೆ ನೀಡುತ್ತಿದ್ದಾರೆ.

ಕೊಡಗಿನ ಹವಾಮಾನಕ್ಕೆ ಸೂಕ್ತವಾದ ಹಾಗೂ ಬೇಡಿಕೆ ಹೆಚ್ಚಾಗಿರುವಂತಹ ಬತ್ತದ ತಳಿಗಳನ್ನೇ ಬೆಳೆದು ಅದನ್ನು ಮಾರಾಟ ಮಾಡಿ ಆದಾಯ ಪಡೆಯುವಲ್ಲಿ ರವಿಶಂಕರ್‌ ಸಫಲತೆ ಕಂಡಿದ್ದಾರೆ. ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಬತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಿದ್ದು, ದಿನಕ್ಕೆ ಐದಾರು ಮಂದಿ ರೈತರು ರವಿ ಶಂಕರ್ ಅವರ ಮನೆಗೆ ಆಗಮಿಸಿ ಬತ್ತದ ಬಿತ್ತನೆ ಬೀಜವನ್ನು ಖರೀದಿಸುತ್ತಿದ್ದಾರೆ.

ಇವರಲ್ಲಿ ಕೆ.ಎಚ್.ಪಿ 11 ಎಂಬ ತಳಿಗೆ ಹೆಚ್ಚಿನ ಬೇಡಿಕೆಯಿದೆ. ಕೊಡಗಿನಲ್ಲಿ ಬತ್ತದೊಂದಿಗೆ ಹುಲ್ಲಿಗೂ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಿಂದ ಕೇರಳಕ್ಕೆ ಹುಲ್ಲನ್ನು ತೆಗೆದುಕೊಂಡು ಹೋಗುತ್ತಾರೆ. ರವಿ ಶಂಕರ್ ಅವರು ಈ ತಳಿಯ ಬತ್ತವನ್ನು ಎಕರೆಗೆ 33 ಕ್ವಿಂಟಾಲ್ ಬೆಳೆದಿರುವುದು ವಿಶೇಷ.

ಕೆ.ಎಚ್.ಪಿ. 10, ಪರಿಮಳಯುಕ್ತ ಜೀರಿಗೆ ಸಣ್ಣ, ಗಂಧಸಾಲೆ, ಚಿಂಗರಿ, ಸುಹಾನ, ಕಾಳನಮಕ್ಕ್, ಬಿಕೆಆರ್, ಮಣಿಸಣ್ಣ, ಆಂಧ್ರ ಸೋನ, ಬಿಎಂ.ಎಸ್, ಮೈಸೂರು ಸಣ್ಣ, ರಾಜಮುಡಿ ಸೇರಿದಂತೆ ಹಲವು ತಳಿಯನ್ನು ಬೆಳೆದು, ಬತ್ತದ ಬಿತ್ತನೆ ಬೀಜಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.

ವರ್ಷಕ್ಕೆ 250 ಕ್ವಿಂಟಾಲ್ ಬಿತ್ತನೆ ಬೀಜವನ್ನು ಮಾರಾಟ ಮಾಡುತ್ತಾರೆ. ಅಲ್ಲದೆ 600 ಕ್ವಿಂಟಾಲ್ ಹೊರ ಭಾಗದಲ್ಲಿ ಮಾರಾಟವಾಗುತ್ತಿದೆ. ಸುಹಾನ ಎಂಬ ತಳಿಗೆ ಕ್ವಿಂಟಾಲ್ ಗೆ 10 ಸಾವಿರ ರುಪಾಯಿ ದೊರಕಿದೆ ಎನ್ನುತ್ತಾರೆ ರವಿಶಂಕರ್.

ಕೊಡಗಿನಲ್ಲಿ ಕಾಡಾನೆ ಸಮಸ್ಯೆ, ಕಾರ್ಮಿಕರ ಕೊರತೆ ಹಾಗೂ ಹವಾಮಾನ ವೈಪರೀತ್ಯ ಪರಿಣಾಮ ವರ್ಷದಿಂದ ವರ್ಷಕ್ಕೆ ಬತ್ತದ ಕೃಷಿ ಮಾಡುವವರ ಸಂಖ್ಯೆ ಇಳಿಮುಖವಾಗುತ್ತಿರುವ ಸಂದರ್ಭದಲ್ಲಿ ಕೃಷಿಕ ರವಿಶಂಕರ್ ಅವರು, ಸುಮಾರು 35 ತಳಿಗಳನ್ನು ಬೆಳೆದು ಬಿತ್ತನೆ ಬೀಜದಿಂದ ಆದಾಯ ಗಳಿಸುವ ಮೂಲಕ ಬತ್ತದ ಕೃಷಿ ಮಾಡಲು ಹಿಂದೇಟು ಹಾಕುವವರಿಗೆ ಮಾದರಿಯಾಗಿದ್ದಾರೆ.

ಕೊಡಗಿನಲ್ಲಿ ಬತ್ತ ಕೃಷಿ ಲಾಭದಾಯಕವಲ್ಲದ ಕಾರಣ ಹೆಚ್ಚಾಗಿ ಬೆಳೆಯುತ್ತಿಲ್ಲ. ಕೊಡಗಿನಲ್ಲಿ ಶೇ.70ರಷ್ಟು ಬತ್ತದ ಗತ್ತೆಗಳನ್ನು ಪಾಳು ಬಿಟ್ಟಿದ್ದಾರೆ. ಆದ್ದರಿಂದ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕು. ಹಾಗಾದರೆ ಮಾತ್ರ ಕೃಷಿಕರು ಬತ್ತ ಬೆಳೆಯಲು ಆಸಕ್ತಿ ತೋರುತ್ತಾರೆ. ಪೇಟೆಯಲ್ಲಿ ದೊರಕುವ ಅಕ್ಕಿಗಿಂತ ರೈತರು ಬೆಳೆದ ಅಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಆದರೂ ಕೆಲವರು ಮಾತ್ರ ಬೆಳೆಯುತ್ತಿದ್ದಾರೆ. ಈ ಬಾರಿಯೂ 35 ತಳಿಯ ಭತ್ತವನ್ನು ಬೆಳೆಯಲು ಚಿಂತನೆ ನಡೆಸಿದ್ದೇನೆ ಎಂದು ಹುದೂರು ಗ್ರಾಮ ಕೃಷಿಕ ರವಿಶಂಕರ್ ಹೇಳಿದರು.