ಸಾರಾಂಶ
ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಸಮಾರಂಭ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗವು ಭಾಗ್ಯಲಕ್ಷ್ಮಿ ನಾರಾಯಣ್ ಅವರ ಕಲ್ಲೋಲಿನಿ ಕಥಾ ಸಂಕಲನ ಬಿಡುಗಡೆ ಮತ್ತು ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬುಧವಾರ ಆಯೋಜಿಸಿತ್ತು.ಸಾಹಿತಿ ಸುಜಾತಾ ರವೀಶ್ ಅವರಿಗೆ ದಸರೆಯಕವಿ ಪ್ರಶಸ್ತಿ, ವಿವಿಧ ಕ್ಷೇತ್ರದ ಜ್ಞಾನಮೂರ್ತಿ, ಹುಸೇನಪಪ್, ಎಸ್.ಎಲ್. ಶ್ರೀರಮಣ, ಕೆ.ಆರ್. ಕೃಷ್ಣ, ಉದಯ್ ಹೆಜ್ಜೆಗೆಜ್ಜೆ, ಮೈಸೂರು ಆನಂದ್, ಸುಮತಿ ಸುಬ್ರಹ್ಮಣ್ಯ, ಭಾಗ್ಯಲಕ್ಷ್ಮಿ ನಾರಾಯಣ್, ಚಿಕ್ಕಳ್ಳಿ ಪಿ. ದೇವರಾಜ್, ಪಳನಿಸ್ವಾಮಿ ಮತ್ತು ಸ್ವರಾಜ್ ಜೈನ್ ಬಾಬು ಅವರಿಗೆ ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ವೇಳೆ ಪುಸ್ತಕ ಬಿಡುಗಡೆಗೊಳಿಸಿದ ಕೃಷಿ ವಿಜ್ಞಾನಿ ಡಾ. ವಸಂತಕುಮಾರ್ ತಿಮಕಾಪುರ ಮಾತನಾಡಿ, ಲೇಖಕಿ ಭಾಗ್ಯಲಕ್ಷ್ಮಿ ನಾರಾಯಣ್ ಅವರು ಬಹುಮುಖಿ ಪ್ರತಿಭೆ. ಶಿಕ್ಷಕಿಯಾಗಿ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಅವರು, ಪ್ರವೃತ್ತಿಯಲ್ಲಿ ಕಥೆ, ಕವನ ಬರೆದು, ಸಂಗೀತ ಸಂಯೋಜನೆ, ಹಾಡುಗಾರಿಕೆ ಮೂಲಕ ಬಹುಮುಖಿಯಾಗಿದ್ದಾರೆ ಎಂದು ಶ್ಲಾಘಿಸಿದರು.ಭಾಗ್ಯಲಕ್ಷ್ಮಿ ಅವರು ಅನೇಕ ಹೊಸ ಪದಗಳನ್ನು ತಮ್ಮ ಕಥೆಗಳಲ್ಲಿ ಸೃಷ್ಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಸಾಹಿತ್ಯದಲ್ಲಿ ಜೀವನದ ಕಥೆಗಳನ್ನು ಹೇಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ತಿಳಿಸಿದರು.ಈ ಕಾರ್ಯಕ್ರಮವನ್ನು ಮಹಾಕವಿ ಡಾ. ಲತಾ ರಾಜಶೇಖರ್ ಉದ್ಘಾಟಿಸಿದರು. ವಂಗೀಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂಕರ ಕಾವ್ಯದಸರಾ ಕವಿ ಸಮ್ಮೇಳನ ನಡೆಯಿತು.ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕವಿ ಶಿವಬಸಪ್ಪ ಹೊರೆಯಾಲ, ಎಂ. ಚಿನ್ನಸ್ವಾಮಿ, ಸಮಾಜ ಸೇವಕ ಕೆ. ರಘುರಾಂ, ಲೇಖಕ ಡಿ. ಪದ್ಮನಾಭ, ರಂಗನಾಥ್ ಮೈಸೂರು ಮೊದಲಾದವರು ಇದ್ದರು.