ಧರ್ಮ ಮತ್ತು ಸಂವಿಧಾನ ಬೇರೆಯಲ್ಲ, ಎರಡರ ಉದ್ದೇಶವೂ ಶಾಂತಿಯುತ ಸಮಾಜದ ನಿರ್ಮಾಣವೇ ಆಗಿದೆ ಎಂದು ಖ್ಯಾತ ನಟ, ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರಿಂದ ‘ಅಭಿನವ ಕೃಷ್ಣದೇವರಾಯ’ ಬಿರುದು ಸ್ವೀಕರಿಸಿ ಅವರು ಮಾತನಾಡಿದರು.

 ಉಡುಪಿ : ಧರ್ಮ ಮತ್ತು ಸಂವಿಧಾನ ಬೇರೆಯಲ್ಲ, ಎರಡರ ಉದ್ದೇಶವೂ ಶಾಂತಿಯುತ ಸಮಾಜದ ನಿರ್ಮಾಣವೇ ಆಗಿದೆ ಎಂದು ಖ್ಯಾತ ನಟ, ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ತಿಂಗಳ ಕಾಲ ನಡೆದ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರಿಂದ ‘ಅಭಿನವ ಕೃಷ್ಣದೇವರಾಯ’ ಬಿರುದು ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಪವನ್ ಕಲ್ಯಾಣ್

‘ಕೃಷ್ಣ ಸನ್ನಿಧಿಗೆ ಶಿರಸಾಷ್ಟಾಂಗ ನಮಸ್ಕಾರ, ಶ್ರೀಗಳಿಗೆ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪವನ್ ಕಲ್ಯಾಣ್, ಕನ್ನಡ ಬರದಿರುವುದರಿಂದ ನಾನು ಮೆಕಾಲೆಯ ಇಂಗ್ಲಿಷ್ ನಲ್ಲಿ ಮಾತು ಮುಂದುವರಿಸುತ್ತೇನೆ ಎಂದರು.

ಇಂಗ್ಲಿಷ್ ಭಾಷೆ ಭಾರತದ ಸನಾತನ ಧರ್ಮವನ್ನು ಹಾಳು ಮಾಡುತ್ತದೆ ಎಂದು ಮೆಕಾಲೆ ಹೇಳಿದ್ದ. ಆದರೆ, ಸನಾತನ ಧರ್ಮದ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ. ವೇದಗಳು ಮತ್ತು ಗೀತೆ ನಮ್ಮ ಸಂಸ್ಕೃತಿಯನ್ನು ಉಳಿಸಿವೆ ಎಂದರು.

ಉಡುಪಿ ಆಧ್ಯಾತ್ಮದ ಪವರ್ ಹೌಸ್ ನಂತಿದೆ. ಇಲ್ಲಿಗೆ ಬಂದಾಗ ಆಧ್ಯಾತ್ಮದ ಸೆಳೆತವನ್ನು ಕಂಡಿದ್ದೇನೆ. ಪುತ್ತಿಗೆ ಶ್ರೀಗಳು ಒಂದು ಕೋಟಿ ಜನರಿಂದ ಗೀತೆ ಬರೆಸುತ್ತಿದ್ದಾರೆ, ನಾನು ಕೂಡ ಗೀತಾ ಲೇಖನ ಯಜ್ಞ ಸಂಕಲ್ಪ ಸ್ವೀಕರಿಸಿದ್ದೇನೆ, ನಾನೂ ಭಗವದ್ಗೀತೆ ಬರೆಯುತ್ತೇನೆ ಎಂದರು.

ಪ್ರಧಾನಿ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್ ಗೆ ಭಗವದ್ಗೀತೆಯನ್ನುಕೊಡುಗೆ ನೀಡಿದ್ದು ಸಕಾಲಿಕ ಉಡುಗೊರೆಯಾಗಿದೆ. ಅಲ್ಲಿನ ಇಂದಿನ ಯುದ್ಧಕಾಲದಲ್ಲಿ ಪಾಠ ಹೇಳುವ ಉಡುಗೊರೆ ಅದು. ಹಿಂದಿಗಿಂತಲೂ ಇಂದು ಭಗವದ್ಗೀತೆ ಹೆಚ್ಚು ಸಕಾಲಿಕವಾಗಿದೆ ಎಂದ ಹೇಳಿದರು. 

ಆಂಧ್ರ ಪಠ್ಯದಲ್ಲಿ ಗೀತೆ ಸೇರಿಸಿ: ಪುತ್ತಿಗೆ ಶ್ರೀ

ನಮ್ಮ ರಾಜ್ಯದಲ್ಲಿ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಬಗ್ಗೆ ಪರ-ವಿರೋಧ ಚರ್ಚೆಗಳಾಗುತ್ತಿವೆ. ಆಂಧ್ರಪ್ರದೇಶ ಪಠ್ಯದಲ್ಲಿ ಗೀತೆಯನ್ನು ಸೇರಿಸಿ, ಈ ವಿಚಾರದಲ್ಲಿ ಮುಂಚೂಣಿ ನಿರ್ಧಾರ ಕೈಗೊಳ್ಳಿ ಎಂದು ಪುತ್ತಿಗೆ ಶ್ರೀಗಳು ಡಿಸಿಎಂ ಪವನ್ ಕಲ್ಯಾಣ್ ಗೆ ಸಲಹೆ ನೀಡಿದರು.

ಆಂಧ್ರದ ಪಠ್ಯದಲ್ಲಿ ಈಗಾಗಲೇ ಆಚಾರ್ಯ ಶಂಕರ, ರಾಮಾನುಜಾಚಾರ್ಯ, ಬಸವಣ್ಣರ ಬಗ್ಗೆ ಪಾಠಗಳಿವೆ. ಅದರಂತೆ ಆಚಾರ್ಯ ಮಧ್ವರ ಪಠ್ಯ ಸೇರಿಸಿ. ತ್ಯಾಗರಾಜರು 24,000 ಕೀರ್ತನೆಗಳನ್ನು ಬರೆದಿದ್ದಾರೆ. ಆದರೇ ಕೇವಲ 700 ಕೀರ್ತನೆಗಳು ಲಭ್ಯ ಇವೆ. ಈ ಬಗ್ಗೆ ಸಂಶೋಧನೆ ನಡೆಸಲು ಸಮಿತಿ ರಚಿಸಿ ಎಂದು ಶ್ರೀಗಳು ಸಲಹೆ ನೀಡಿದರು. 

ಪವನ್‌ ಕಲ್ಯಾಣ್‌-ಡಾ.ಕಲ್ಲಡ್ಕ ಭೇಟಿ:

ಉಡುಪಿ ಕೃಷ್ಣಮಠದ ಕಾರ್ಯಕ್ರಮಕ್ಕೆ ಆಗಮಿಸಿದ ಪವನ್ ಕಲ್ಯಾಣ್ ಅವರನ್ನು ಆರ್‌ಎಸ್‌ಎಸ್‌ ನಾಯಕ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಗರದ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೂಡ ಉಪಸ್ಥಿತರಿದ್ದರು. 

ಕನಕನ ಕಿಂಡಿಯಿಂದ ಕೃಷ್ಣ ದರ್ಶನ:

ಉಡುಪಿಯಲ್ಲಿ ‘ಲಕ್ಷ ಕಂಠ ಗೀತಾ ಪಾರಾಯಣ’ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಡುಪಿಯ ರಥಬೀದಿಗೆ ಆಗಮಿಸಿದ ಪವನ್ ಕಲ್ಯಾಣ್ ಅವರನ್ನು ಮಠದಿಂದ ಸಾಂಪ್ರದಾಯಿಕ ವಾದ್ಯಘೋಷಗಳೊಂದಿಗೆ ಸ್ವಾಗತಿಸಲಾಯಿತು. ಪವನ್‌ ಕಲ್ಯಾಣ್‌ ಅವರು ಮೊದಲು ಕನಕನ ಗುಡಿ ದರ್ಶನ ಮಾಡಿ, ನಂತರ ಚಿನ್ನದ ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿದರು. ಬಳಿಕ, ರಥಬೀದಿಯಲ್ಲಿರುವ ಅನಂತೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ, ಕೃಷ್ಣಮಠಕ್ಕೆ ಆಗಮಿಸಿ ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡರು. ಈ ವೇಳೆ, ಅವರನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಬರಮಾಡಿಕೊಂಡು, ಕನಕ ನವಗ್ರಹ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಮಾಡಿಸಿದರು. ನಂತರ, ಸುವರ್ಣ ತೀರ್ಥಮಂಟಪದಲ್ಲಿ ಪ್ರಸಾದ ನೀಡಿ ಗೌರವಿಸಿದರು. ಬಳಿಕ ಶ್ರೀಗಳು ಅವರನ್ನು ಗೀತಾಮಂದಿರಕ್ಕೆ ಕರೆದೊಯ್ದು, ಅಲ್ಲಿನ ಭಿತ್ತಿಗಳ ಮೇಲೆ ಗೀತೆಯ ಶ್ಲೋಕಗಳನ್ನು ವಿವರಿಸಿದರು.