ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುನಗರದ ಕೇಂದ್ರಭಾಗ ಕ್ಲಾಕ್ ಟವರ್‌ನಿಂದ ಸ್ಟೇಟ್‍ಬ್ಯಾಂಕ್‍ವರೆಗೆ ಈಗಿರುವ ಏಕಮುಖ ವಾಹನ ಸಂಚಾರವನ್ನು ದ್ವಿಮುಖ ಸಂಚಾರವಾಗಿ ಮಾರ್ಪಡಿಸುವ ಬಗ್ಗೆ ಕೂಡಲೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ‘ಪ್ರಜಾಸೌಧ’ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿಂದೆ ದ್ವಿಮುಖ ವಾಹನ ಸಂಚಾರವಿದ್ದ ಈ ರಸ್ತೆಯನ್ನು ಏಕಮುಖ ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಸಮಸ್ಯೆ ಉಂಟಾಗಿರುವ ಬಗ್ಗೆ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ದ್ವಿಮುಖ ಸಂಚಾರಕ್ಕೆ ಕೈಗೊಳ್ಳಬೇಕಾದ ಕಾಮಗಾರಿ ಮತ್ತು ಅಗತ್ಯವಿರುವ ಅನುದಾನದ ಕುರಿತು ಮುಂದಿನ ವಾರದೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ, ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸ್ಟೇಟ್‍ಬ್ಯಾಂಕ್ ಹ್ಯಾಮಿಲ್ಟನ್ ವೃತ್ತವನ್ನು ವೈಜ್ಞಾನಿಕವಾಗಿ ನಿರ್ಮಿಸಲು ಎನ್.ಐ.ಟಿ.ಕೆ. ಸಂಸ್ಥೆಯಿಂದ ತಾಂತ್ರಿಕ ವರದಿ ಪಡೆಯಲಾಗಿದ್ದು, ಈ ಕುರಿತು ಕೂಡಲೆ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ಪ್ರಮುಖ ಡಿವೈಡರ್‌ಗಳಿಗೆ ರೀಲಿಂಗ್ಸ್:
ಹಂಪನಕಟ್ಟೆ ಸಿಗ್ನಲ್ ವೃತ್ತದಲ್ಲಿ ರಸ್ತೆ ಮಧ್ಯೆ ಶಾಶ್ವತ ಬ್ಯಾರಿಕೇಡ್‍ಗಳನ್ನು ಅಳವಡಿಸಿರುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಕರಾವಳಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಜಂಕ್ಷನ್, ಬಲ್ಮಠ ಜಂಕ್ಷನ್‍ಗಳಲ್ಲಿ ರಸ್ತೆ ವಿಭಜಕಗಳಿಗೆ ಕಬ್ಬಿಣದ ರೀಲಿಂಗ್ಸ್ ಹಾಕಲು ಒಂದು ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು. ಈ ಜಂಕ್ಷನ್‍ಗಳಲ್ಲಿರುವ ಬಸ್ ನಿಲ್ದಾಣಗಳನ್ನು ಸಮೀಪದ ಜಾಗಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ನಗರದಲ್ಲಿ ಫುಟ್‌ಪಾತ್ ಅತಿಕ್ರಮಿಸಿರುವ ಅಂಗಡಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಪದೇ ಪದೇ ಒತ್ತುವರಿ ತೆರವು ಕಾರ್ಯಾಚರಣೆ ಬದಲು ಶಾಶ್ವತವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಬೈಕಂಪಾಡಿ ಅಂಡರ್‌ಪಾಸ್ ಮಂಜೂರು:ರಾಷ್ಟ್ರೀಯ ಹೆದ್ದಾರಿ ಬೈಕಂಪಾಡಿಯಲ್ಲಿ ಜೋಕಟ್ಟೆ ಕ್ರಾಸ್ ಬಳಿ ವಾಹನಗಳು ಕೈಗಾರಿಕಾ ಪ್ರದೇಶಕ್ಕೆ ತಿರುವು ಪಡೆಯಲು ಅಂಡರ್‌ಪಾಸ್ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವಿದ್ ಅಬ್ದುಲ್ಲಾ ತಿಳಿಸಿದರು.
ಟ್ರಕ್ ನಿಲುಗಡೆ:ಕೂಳೂರು- ಬೈಕಂಪಾಡಿ ರಸ್ತೆ, ಪಣಂಬೂರ್ ಬೀಚ್ ಮತ್ತು ತಣ್ಣೀರು ಬಾವಿ ರಸ್ತೆಯಲ್ಲಿ ಟ್ರಕ್, ಲಾರಿಗಳ ಪಾರ್ಕಿಂಗ್‌ನಿಂದ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತಿರುವುದರಿಂದ ಎನ್.ಎಂ.ಪಿ.ಎ ವತಿಯಿಂದ ಪ್ರಾಧಿಕಾರದ ಜಮೀನಿನಲ್ಲಿ ಟ್ರಕ್ ನಿಲುಗಡೆಗೆ ಸ್ಥಳಾವಕಾಶ ಒದಗಿಸುವ ಬಗ್ಗೆ ಎನ್.ಎಂ.ಪಿ.ಎ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಉಪ ಪೋಲಿಸ್ ಆಯುಕ್ತ ಸಿದ್ದಾರ್ಥ್ ಗೋಯಲ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ, ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಮಿತಿ ಸದಸ್ಯ ಗೋಪಾಲಕೃಷ್ಣ ಭಟ್ ಮತ್ತಿತರರು ಇದ್ದರು.ನಗರದ ಸಮಗ್ರ ಟ್ರಾಫಿಕ್ ವ್ಯವಸ್ಥೆ ವರದಿ ಸಲ್ಲಿಸಿಮಂಗಳೂರು ನಗರ ವ್ಯಾಪ್ತಿಯ ಎಲ್ಲ 4 ಸಂಚಾರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ತಮ್ಮ ವ್ಯಾಪ್ತಿಯ ಪ್ರಮುಖ ಟ್ರಾಫಿಕ್ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಜಂಟಿಯಾಗಿ ಚರ್ಚಿಸಿ ವರದಿ ಸಿದ್ಧಗೊಳಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದರು.
ಶಾಲಾ ಬಸ್ ಮತ್ತು ವಾಹನಗಳಲ್ಲಿ ಅಧಿಕ ಮಕ್ಕಳನ್ನು ಸಾಗಿಸುವುದರ ಬಗ್ಗೆ ದೂರುಗಳು ಬಂದಿದ್ದು, ಆ ವಾಹನಗಳಲ್ಲಿ ಎಷ್ಟು ಮಕ್ಕಳು ಸಂಚರಿಸುತ್ತಿದ್ದಾರೆ ಎಂಬುದರ ಬಗ್ಗೆ ಆಯಾ ಶಾಲೆಗಳಿಂದ ವರದಿ ಪಡೆಯಬೇಕು. ಜಲಜೀವನ್ ಮಿಷನ್ ಪೈಪ್‍ಲೈನ್ ಕಾಮಗಾರಿಯಲ್ಲಿ ಲೋಕೋಪಯೋಗಿ ರಸ್ತೆಗಳಿಗೆ ಅಡಚಣೆಯಾಗಿರುವ ಬಗ್ಗೆ ಸಂಬಂಧಿಸಿದವರಿಗೆ ದಂಡ ವಿಧಿಸುವಂತೆ ಸೂಚಿಸಿದರು.ಟಿಂಟ್ ಹಾಕಿದ ಸಂಸ್ಥೆಯೂ ಆರೋಪಿವಾಹನಗಳಿಗೆ ಟಿಂಟ್ ಹಾಕದಂತೆ ವಾಹನ ಶೋರೂಂಗಳಿಗೆ ಮತ್ತು ವಾಹನ ಅಲಂಕಾರ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಟಿಂಟೆಡ್ ಗ್ಲಾಸ್ ಹೊಂದಿರುವ ಕಾರಿನಲ್ಲಿ ಅಪರಾಧ ನಡೆದರೆ ಟಿಂಟ್ ಹಾಕಿದ ಸಂಸ್ಥೆಯನ್ನು ಕೂಡ ಅದೇ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಡಿಸಿಪಿ ತಿಳಿಸಿದರು.