ಸಾರಾಂಶ
ಧಾರವಾಡ
ಹು-ಧಾ ಅವಳಿ ನಗರವು ದಿನದಿಂದ ದಿನಕ್ಕೆ ಅತಿ ವೇಗವಾಗಿ ಬೆಳೆಯುತ್ತಿದೆ. ಪಾಲಿಕೆ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ಸ್ಮಶಾನ ಸಮಸ್ಯೆ ಉದ್ಭವಿಸಿದ್ದು, ಈ ಕುರಿತು ಸಮಗ್ರ ವರದಿಯೊಂದನ್ನು ಸರ್ಕಾರಕ್ಕೆ ಕಳುಹಿಸಲು ಮೇಯರ್ ರಾಮಣ್ಣ ಬಡಿಗೇರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.ಕಳೆದ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಅವಳಿ ನಗರದಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿದೆ. ಕಂದಾಯ ಇಲಾಖೆ, ಹುಡಾ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜತೆಗೂಡಿ ಪಾಲಿಕೆ ಅಧಿಕಾರಿಗಳು ಸಮಗ್ರ ಚರ್ಚೆ ಮಾಡಿ ಆದಷ್ಟು ಶೀಘ್ರ ಈ ಕುರಿತು ಸರ್ಕಾರಕ್ಕೆ ವರದಿ ನೀಡಬೇಕು. ಸರ್ಕಾರದ ಮೇಲೆ ಒತ್ತಡ ಹೇರಿ ಸ್ಮಶಾನಕ್ಕೆ ಅಗತ್ಯವಾದ ಜಾಗ ಪಡೆದುಕೊಳ್ಳಲು ಬೇಕಾದ ಪ್ರಯತ್ನಗಳನ್ನು ಮಾಡೋಣ ಎಂದರು.
ಇಲ್ಲಿಯ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರಾದ ಸುವರ್ಣಾ ಕಲಗುಂಟ್ಲ ಸ್ಮಶಾನ ಜಾಗ ಕುರಿತು ಸಮಸ್ಯೆಗಳನ್ನು ಸಭೆಗೆ ಗಮನಕ್ಕೆ ತಂದಾಗ ಮೇಯರ್ ಈ ರೀತಿ ಪ್ರತಿಕ್ರಿಯೆ ನೀಡಿದರು. ತಮ್ಮ ವಾರ್ಡ್‌ನ ಸ್ಮಶಾನ ಜಾಗ ಚಿಕ್ಕದಾಗಿದ್ದು, ರಕ್ಷಣೆ ಇಲ್ಲದ್ದರಿಂದ ರಾತ್ರಿ ನಾಯಿಗಳು ಮೃತದೇಹವನ್ನು ಹೊರತೆಗೆದು ತಿಂದು ಹಾಕುತ್ತಿವೆ. ಹೀಗಾಗಿ ಶವ ಸಂಸ್ಕಾರ ಮಾಡುವುದೇ ದುಸ್ತರವಾಗಿದೆ ಎಂದರು.ಬೈರಿದೇವರಕೊಪ್ಪದಲ್ಲಿ ಖಾಸಗಿ ಮಾಲೀಕತ್ವದ ಜಾಗದಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಸ್ಮಶಾನಕ್ಕಾಗಿ ಅರ್ಜಿ ಕೊಟ್ಚು ಸಾಕಾಗಿದೆ. ಇದೇ ರೀತಿ ಮುಂದುವರಿದರೆ ಶವವನ್ನು ಪಾಲಿಕೆ ಎದುರಿಟ್ಟು ಪ್ರತಿಭಟಿಸಲಾಗುವುದು ಎಂದು ಸದಸ್ಯ ಸತೀಶ ಹಾನಗಲ್ ಎಚ್ಚರಿಸಿದರು. ಸದಸ್ಯರಾದ ರಾಜಣ್ಣ ಕೊರವಿ, ಅರವಾಳದ, ಚಂದ್ರಶೇಖರ ಮನಗುಂಡಿ ಸೇರಿದಂತೆ ಹಲವರು ಸ್ಮಶಾನ ಸಮಸ್ಯೆ ಕುರಿತು ಪ್ರಸ್ತಾಪಿದರು.
ಆಗ, ಪಾಲಿಕೆ ಹಿರಿಯ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಎಲ್ಲ ಸಮಾಜಕ್ಕೂ ಶವ ಸಂಸ್ಕಾರಕ್ಕೆ ಸ್ಮಶಾನ ಬೇಕು. ಯಾವ ಸಮಾಜಕ್ಕೆ ಎಷ್ಟು ಜಾಗ ಬೇಕು ಎಂಬುದರ ಬಗ್ಗೆ ಸಮೀಕ್ಷೆ ನಡೆಯಬೇಕು. ಎಲ್ಲಿ ಜಾಗವಿದೆ? ಅದರ ಮಾಲೀಕರು ಯಾರು? ಅವರಿಂದ ಜಾಗ ಖರೀದಿ, ಸರ್ಕಾರಕ್ಕೆ ಈ ಕುರಿತು ಮನವರಿಕೆ ಮಾಡಬೇಕು. ಈ ಕುರಿತು ವರದಿ ಸಿದ್ಧಪಡಿಸಿ ಆಯುಕ್ತರು ವರದಿ ನೀಡಬೇಕೆಂಬ ಸಲಹೆ ನೀಡಿದರು. ಈ ಸಲಹೆಯಂತೆ ಮೇಯರ್ ರಾಮಣ್ಣ ಆಯುಕ್ತರಿಗೆ ಆದೇಶ ಮಾಡಿದರು.ಪೌರ ಕಾರ್ಮಿಕರಿಗೆ ಮೊಟ್ಟೆ:
ಆನಂತರ ವಿಷಯ ಪಟ್ಟಿಯ ಪೈಕಿ ಪಾಲಿಕೆಯ ಕಾಯಂ, ಹೊರಗುತ್ತಿಗೆ, ನೇರ ವೇತನದ ಅಡಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರಿಗೆ ಬೆಳಗಿನ ಉಪಾಹಾರವನ್ನು ಗುತ್ತಿಗೆದಾರರ ಮೂಲಕ ಪೂರೈಸಲು ಅನುಮೋದನೆ ಕೋರಲಾಯಿತು. ಧಾರವಾಡ ವಿಭಾಗದಲ್ಲಿ 741 ಕಾರ್ಮಿಕರಿದ್ದು, ಪ್ರತಿ ದಿನಕ್ಕೆ ಒಬ್ಬರಿಗೆ ₹ 35ರಂತೆ ವಾರ್ಷಿಕವಾಗಿ ₹ 95.81 ಲಕ್ಷ, ಹುಬ್ಬಳ್ಳಿ ಉತ್ತರ ವಿಭಾಗದಲ್ಲಿ 829 ಕಾರ್ಮಿಕರಿಗೆ ₹ 1.05 ಕೋಟಿ ಹಾಗೂ ಹುಬ್ಬಳ್ಳಿ ದಕ್ಷಿಣ ವಿಭಾಗದಲ್ಲಿ 950 ಕಾರ್ಮಿಕರಿಗೆ ₹ 1.21 ಕೋಟಿ ವೆಚ್ಚದಲ್ಲಿ ಉಪಾಹಾರ ನೀಡಲಾಗುವುದು. ಉಪಾಹಾರದೊಂದಿಗೆ ಈ ಬಾರಿ ಮೊಟ್ಟೆ ಸಹ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಉಪಾಹಾರ ಪೂರೈಸಲು ಬೆಂಗಳೂರು ಸೇರಿದಂತೆ ಹೊರಗಿನವರಿಗೆ ನೀಡುವ ಬದಲು ಇಸ್ಕಾನ್ ಅಂತಹ ಸ್ಥಳೀಯ ಉತ್ತಮ ಸಂಸ್ಥೆಗಳಿಗೆ ನೀಡಲು ಮಾಜಿ ಮೇಯರ್ ಈರೇಶ ಅಂಚಟಗೇರಿ ಸಲಹೆ ನೀಡಿದರು.ಪೊಲೀಸ್ ಠಾಣೆ ಶಿಫ್ಟ್:
ವಾರ್ಡ್ 66ರ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆ ಶಿಥಿಲಾವಸ್ಥೆಯಲ್ಲಿದ್ದು, ಪೊಲೀಸರು ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೈ ಭಾರತ ವೃತ್ತದ ಬಳಿಯ ಪಾಲಿಕೆ ಸಮುದಾಯ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಕುರಿತು ಸಭೆಯು ಅನುಮೋದನೆ ನೀಡಿತು. ಸರ್ಕಾರದ ಆಯೋಜಿತ ತಂತ್ರಾಂಶ ನಿಭಾಯಿಸಲು, ಪಾಲಿಕೆ ಕಚೇರಿಗಳ ಐಟಿ ಸಂಬಂಧಿತ ಕೆಲಸ ನಿಭಾಯಿಸಲು ಒಬ್ಬ ಪ್ರೋಗ್ರಾಮರ್, ಐದು ಜ್ಯೂನಿಯರ್ ಪ್ರೋಗ್ರಾಮರ್ ಗುತ್ತಿಗೆ ಆಧಾರದ ಮೇಲೆ ಪಡೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಆದರೆ, ಅವರನ್ನು ಕಡ್ಡಾಯವಾಗಿ ಪಾಲಿಕೆ ಅಧಿಕಾರಿಗಳು ಸಂದರ್ಶನ ಮಾಡಿ ನೌಕರಿಗೆ ತೆಗೆದುಕೊಳ್ಳಲು ಕೆಲವು ಸದಸ್ಯರು ಸೂಚಿಸಿದರು.ಪಾಲಿಕೆಯ ವಿವಿಧ ಕಚೇರಿಗಳ ವ್ಯಾಜ್ಯಗಳನ್ನು ನಿರ್ವಹಿಸಲು ಹೈಕೋರ್ಟ್ ನ್ಯಾಯವಾದಿಗಳ ಶುಲ್ಕ ಕುರಿತು ವಿಷಯ ಪಟ್ಟಿ 12ರಂತೆ ಚರ್ಚೆ ನಡೆಯಿತು. ಮಾಜಿ ಮೇಯರ್ ಈರೇಶ ಅಂಚಟಗೇರಿ, ಆರ್ಥಿಕ ಹೊರೆ ಆಗದಂತೆ ಎಚ್ಚರಿಕೆ ವಹಿಸಿ ಪಾಲಿಕೆ ಆಯುಕ್ತರು, ಮೇಯರ್ ಗಮನಕ್ಕೆ ತಂದು ನ್ಯಾಯಾವಾದಿಗಳ ಶುಲ್ಕ ನೀಡಲು ಸಲಹೆ ನೀಡಿದರು.
ಜಿಐಎಸ್ ಸಮೀಕ್ಷೆಗೂ ಒಪ್ಪಿಗೆ..ಮಹಾನಗರ ಪಾಲಿಕೆ ವಲಯ ಕಚೇರಿಗಳ ಅನುಸಾರವಾಗಿ 12 ವಿಭಾಗಗಳನ್ನಾಗಿ ಮಾಡಿ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ)ಯುಳ್ಳ ಸಮೀಕ್ಷೆ ಕುರಿತು ಸಾಮಾನ್ಯ ಸಭೆಯಲ್ಲಿ ವಾದ-ವಿವಾದ ಹಾಗೂ ಚರ್ಚೆಗಳು ನಡೆದು ಕೊನೆಗೆ ಒಪ್ಪಿಗೆ ಸೂಚಿಸಲಾಯಿತು.
2004-05 ಹಾಗೂ 2006-07ರಲ್ಲಿ ಅವಳಿ ನಗರದ ಆಸ್ತಿಗಳ ಬಗ್ಗೆ ಸಮೀಕ್ಷೆಗಳು ನಡೆದಿವೆ. ತದ ನಂತರ ಸಾಕಷ್ಟು ಕಟ್ಟಡಗಳನ್ನು ನಿಯಮ ಉಲ್ಲಂಘಿಸಿ ನಿರ್ಮಾಣವಾಗಿವೆ. ರಾಣಿಬೆನ್ನೂರು ಅಂತಹ ಊರಿನಲ್ಲಿ ವಾರ್ಷಿಕವಾಗಿ ₹ 80 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದ್ದು, 2ನೇ ಅತಿ ದೊಡ್ಡ ಪಾಲಿಕೆಯಾಗಿರುವ ಹು-ಧಾ ಮಹಾನಗರ ಪಾಲಿಕೆಗೆ ವಾರ್ಷಿಕ ₹ 130 ಕೋಟಿ ಆಗುತ್ತಿರುವುದು ಬೇಸರದ ಸಂಗತಿ ಎಂದ ಪಾಲಿಕೆ ಆಯುಕ್ತ ಡಾ. ಉಳ್ಳಾಗಡ್ಡಿ, ಪಾಲಿಕೆ ತೆರಿಗೆ ಜಾಲದಿಂದ ಹೊರಗುಳಿದ ಆಸ್ತಿಗಳನ್ನು ಸೇರ್ಪಡೆಗೊಳಿಸಲು ಈ ಸರ್ವೇ ಬಹುಮುಖ್ಯ. ಇದರಿಂದ ಪಾಲಿಕೆ ವಾರ್ಷಿಕ ₹ 400 ಕೋಟಿ ಆದಾಯ ನಿರೀಕ್ಷೆ ಹೊಂದಲಾಗಿದೆ ಎಂದರು.ಹೊಸ ಬಡಾವಣೆ, ನಿರ್ಮಾಣಗೊಂಡ ಕಟ್ಟಡಗಳನ್ನು ಸರ್ವೇ ಮಾಡಿ ದತ್ತಾಂಶದ ಅಡಿ ತರಲು ಒಂದೇ ಏಜೆನ್ಸಿ ವಹಿಸಿದರೆ ಪಾಲಿಕೆಗೆ ಆರ್ಥಿಕ ಹೊರೆ ಬೀಳಲಿದ್ದು ಸುಮಾರು 3 ಅಥವಾ 4 ವರ್ಷ ಸಮಯ ಬೇಕಾಗುತ್ತದೆ. ಆದ್ದರಿಂದ 12 ವಿಭಾಗಗಳನ್ನಾಗಿ ಮಾಡಿ ಸರ್ವೇ ಕಾರ್ಯ ಮಾಡಿದರೆ ಆರೇಳು ತಿಂಗಳಲ್ಲಿ ಸರ್ವೇ ಕಾರ್ಯ ಮುಗಿಯಬಹುದು. ಈ ಸರ್ವೇ ಕಾರ್ಯಕ್ಕೆ ಅಂದಾಜು ₹ 12 ಕೋಟಿಗೂ ಹೆಚ್ಚು ವೆಚ್ಚವಾಗಬಹುದು ಎಂದು ಆಯುಕ್ತರು ಹೇಳಿದರು.
₹12 ಕೋಟಿ ವೆಚ್ಚದ ಸಮೀಕ್ಷೆಗೆ ಪಾಲಿಕೆ ವಿರೋಧ ಪಕ್ಷದ ರಾಜಶೇಖರ ಕಮತಿ, ಇರ್ಮಾನ ಎಲಿಗಾರ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದರು. ಸಮೀಕ್ಷೆಯನ್ನು ಪಾಲಿಕೆ ಅಧಿಕಾರಿ, ಸಿಬ್ಬಂದಿ ಮೂಲಕ ಮಾಡಿಸಲು ಸಲಹೆ ನೀಡಿದರು. ಆದರೆ, ಈ ಕುರಿತು ಸ್ಪಷ್ಟನೆ ನೀಡಿದ ತಿಪ್ಪಣ್ಣ ಮಜ್ಜಗಿ, ಇದು ಬರೀ ಮನೆಗಳ ಸಮೀಕ್ಷೆ ಮಾತ್ರವಲ್ಲ, ಪ್ರತಿಯೊಂದು ಆಸ್ತಿಯ ಸಂಪೂರ್ಣ ಮಾಹಿತಿಯುಳ್ಳ ಸಮೀಕ್ಷೆ. ಮನೆ ಪ್ರಕಾರ, ಯಾವ ಟೈಲ್ಸ್, ಅಂತಸ್ತು ಸೇರಿ ಎಲ್ಲವೂ ಇರಲಿದೆ. ಈಗಾಗಲೇ ಪಾಲಿಕೆ ಬೇಕಾಬಿಟ್ಟಿಯಂತಾಗಿದ್ದು ಆಸ್ತಿ ಕರ ವಸೂಲಿ ಆಗುತ್ತಿಲ್ಲ. ಪಾಲಿಕೆ ಎಂದರೆ ಗೌರವ ಬರುವಂತೆ ಇರಬೇಕು. ಈ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಒಪ್ಪಿಗೆ ಕೊಡೋಣ ಎಂದು ಮನವಿ ಮಾಡಿದರು.