ಸಾರಾಂಶ
ಪ್ರವಾಸಿ ಕ್ಷೇತ್ರ ಮುರುಡೇಶ್ವರದಲ್ಲಿ ಬಂದಾಗಿದ್ದ ಜಲ ಸಾಹಸ ಕ್ರೀಡೆಗಳಿಗೆ ಜಿಲ್ಲಾಡಳಿತ ಪುನರಾರಂಭಿಸಲು ಹಸಿರು ನಿಶಾನೆ ತೋರಿಸಿದೆ. ಇದರಿಂದ ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವುದರ ಜತೆಗೆ ವ್ಯಾಪಾರ-ವಹಿವಾಟು ಚೇತರಿಸಿಕೊಳ್ಳುವಂತಾಗಿದೆ.
ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳ: ಚೇತರಿಸಿಕೊಳ್ಳುತ್ತಿರುವ ವ್ಯಾಪಾರ-ವಹಿವಾಟು
ಕನ್ನಡಪ್ರಭ ವಾರ್ತೆ ಭಟ್ಕಳಪ್ರವಾಸಿ ಕ್ಷೇತ್ರ ಮುರುಡೇಶ್ವರದಲ್ಲಿ ಬಂದಾಗಿದ್ದ ಜಲ ಸಾಹಸ ಕ್ರೀಡೆಗಳಿಗೆ ಜಿಲ್ಲಾಡಳಿತ ಪುನರಾರಂಭಿಸಲು ಹಸಿರು ನಿಶಾನೆ ತೋರಿಸಿದೆ. ಇದರಿಂದ ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವುದರ ಜತೆಗೆ ವ್ಯಾಪಾರ-ವಹಿವಾಟು ಚೇತರಿಸಿಕೊಳ್ಳುವಂತಾಗಿದೆ.
ಕಳೆದೊಂದು ವರ್ಷದಿಂದ ಮುರುಡೇಶ್ವರದಲ್ಲಿ ಜಲ ಸಾಹಸ ಕ್ರೀಡೆಗೆ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ನಾನಾ ರೀತಿಯ ಕಾರಣಗಳಿದ್ದರೂ ಸಹ ಮುರುಡೇಶ್ವರ ಸಮುದ್ರದಲ್ಲಿ ಸಂಭವಿಸಿದ್ದ ಸಾಲು ಸಾಲು ಸಾವುಗಳು, ವಿದ್ಯಾರ್ಥಿಗಳ ಸಾವು, ಜಲ ಸಾಹಸ ಕ್ರೀಡೆಯ ಹಂಚಿಕೆ ಕುರಿತು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಜಲ ಸಾಹಸ ಕ್ರೀಡಾ ಚಟುವಟಿಕೆ ಸ್ಥಗಿತಗೊಳಿಸಿ, ಸಮುದ್ರ ತೀರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೂ ಬೇಸರ ತಂದಿತ್ತು. ಇತ್ತೀಚೆಗಷ್ಟೇ ದೇವಸ್ಥಾನದ ಸಹಯೋಗದಲ್ಲಿ ಪ್ರಧಾನ ಅರ್ಚಕ ವೇ.ಮೂ. ಜಯರಾಮ ಅಡಿಗಳ್ ನೇತೃತ್ವದಲ್ಲಿ ಈಶ್ವರನಿಗೆ ರುದ್ರಾನುಷ್ಠಾನ, ಸಮುದ್ರ ರಾಜನಿಗೆ ಸಮುದ್ರದಾರತಿ ಬೆಳಗಿ ಸಂಕಷ್ಟವನ್ನು ಪರಿಹರಿಸುವಂತೆ ಮುಷ್ಠಿ ನಾಣ್ಯ, ಮುಷ್ಠಿ ಧಾನ್ಯ ಸಮರ್ಪಣೆ ಇತ್ಯಾದಿಗಳು ನಡೆದಿದ್ದವು. ಮುರುಡೇಶ್ವರ ವಿಶ್ವಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಮುರುಡೇಶ್ವರಕ್ಕೆ ಒಮ್ಮೆ ಬಂದರೆ ಮತ್ತೊಮ್ಮೆ ಬರಬೇಕೆನಿಸುವುದು ಸಹಜ. ಮುರುಡೇಶ್ವರದ ಸೌಂದರ್ಯ ಎಂತವರನ್ನೂ ಆಕರ್ಷಿಸುತ್ತದೆ. ಹಾಗೆಯೇ ಇಲ್ಲಿನ ಜಲ ಸಾಹಸ ಕ್ರೀಡೆಗಳೆಂದು ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿತ್ತು. ಜಲಸಾಹಸ ಕ್ರೀಡೆಗೆ ನಿರ್ಬಂಧ ಹೇರಿದ ಬಳಿಕ ಮುರುಡೇಶ್ವರದಲ್ಲಿ ವ್ಯಾಪಾರ ವಹಿವಾಟಿನ ಮೇಲೂ ಹೊಡೆತ ಬಿದ್ದಿತ್ತು. ಮುರುಡೇಶ್ವರದ ಪ್ರವಾಸೋದ್ಯಮದ ಮೇಲೆ ನಿರ್ಬಂಧದ ಪರಿಣಾಮದ ಗಂಭೀರತೆ ಅರಿತ ಜಿಲ್ಲಾಡಳಿತ ಮತ್ತೆ ಜಲಸಾಹಸ ಕ್ರೀಡೆ ಪುನರಾರಂಭಕ್ಕೆ ಅನುವು ಮಾಡಿಕೊಟ್ಟಿದೆ.ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆ ಮುರುಡೇಶ್ವರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿದಂತಾಗಿದೆ. ಮುರುಡೇಶ್ವರಕ್ಕಾಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಮುರುಡೇಶ್ವರದಲ್ಲಿ ಪ್ರವಾಸೋದ್ಯಮದ ಮತ್ತಷ್ಟು ಬೆಳವಣಿಗೆಗೆ ಉತ್ತಮ ಅವಕಾಶ ಇದೆ. ಜಲಸಾಹಸ ಕ್ರೀಡೆ ಮತ್ತು ಕಡಲತೀರಕ್ಕೆ ನಿರ್ಬಂಧ ಹೇರಿದರೆ ಸ್ಥಳೀಯ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಜಿಲ್ಲಾಡಳಿತ ಜಲಸಾಹಸ ಕ್ರೀಡೆಗಳನ್ನು ಪುನರಾರಂಭಿಸಲು ಒಪ್ಪಿಗೆ ನೀಡಿದ್ದರಿಂದ ಸ್ಥಳೀಯ ವ್ಯಾಪಾರ ವಹಿವಾಟಿಗೆ ಅನುಕೂಲವಾಗಿದೆ.