ಸಾರಾಂಶ
ಬಡ, ಮಧ್ಯಮವರ್ಗದವರನ್ನು ಗುರಿಯಾಗಿಸಿಕೊಂಡು ಒಂದೇ ಸೂರಿನಡಿ ಸಕಲ ವಸ್ತುಗಳು ಅಗ್ಗದ ದರಕ್ಕೆ ದೊರಕಿಸುವ ಉದ್ದೇಶದಿಂದ ಆರಂಭವಾದ ವಾರದ ಸಂತೆ ಎಂಬ ಪೂರ್ವಿಕರ ಪರಿಕಲ್ಪನೆ, ವ್ಯಾಪಾರಿಗಳ ಅತಿಯಾಸೆ ಜನರ ಸೋಮಾರಿತನದ ಫಲವಾಗಿ ಅವನತಿಯತ್ತ ಸಾಗುತಿದೆ. ಬೀದಿಬದಿಯ ವ್ಯಾಪಾರಕ್ಕೆ ಸಂತೆ ವ್ಯಾಪಾರಿಗಳು ಮುಂದಾಗಿರುವುದರಿಂದ ಪಟ್ಟಣದ ವಾರದ ಸಂತೆ ಅಳಿವಿನತ್ತ ಸಾಗುತ್ತಿದೆ. ಸಂತೆ ನಡೆಯುವ ಪ್ರದೇಶದಲ್ಲಿ ಸಕಲ ಮೂಲಭೂತ ಸೌಕರ್ಯ ಒದಗಿಸಲಾಗಿದ್ದು ಎಪಿಎಂಸಿ ಅಧಿಕಾರಿಗಳು ಹಿಂದಿನ ಪುರಸಭೆಗೆ ಹೋಲಿಸಿದರೆ ಅತ್ಯಂತ ಕಡಿಮೆ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಆದರೂ, ಪಟ್ಟಣದ ವಾರದ ಸಂತೆ ಕ್ಷೀಣಿಸುತ್ತಾ ಸಾಗಿದೆ.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಬೀದಿಬದಿಯ ವ್ಯಾಪಾರಕ್ಕೆ ಸಂತೆ ವ್ಯಾಪಾರಿಗಳು ಮುಂದಾಗಿರುವುದರಿಂದ ಪಟ್ಟಣದ ವಾರದ ಸಂತೆ ಅಳಿವಿನತ್ತ ಸಾಗುತ್ತಿದೆ.ಹೌದು ಬಡ, ಮಧ್ಯಮವರ್ಗದವರನ್ನು ಗುರಿಯಾಗಿಸಿಕೊಂಡು ಒಂದೇ ಸೂರಿನಡಿ ಸಕಲ ವಸ್ತುಗಳು ಅಗ್ಗದ ದರಕ್ಕೆ ದೊರಕಿಸುವ ಉದ್ದೇಶದಿಂದ ಆರಂಭವಾದ ವಾರದ ಸಂತೆ ಎಂಬ ಪೂರ್ವಿಕರ ಪರಿಕಲ್ಪನೆ, ವ್ಯಾಪಾರಿಗಳ ಅತಿಯಾಸೆ ಜನರ ಸೋಮಾರಿತನದ ಫಲವಾಗಿ ಅವನತಿಯತ್ತ ಸಾಗುತಿದೆ. ಪಟ್ಟಣದ ಸುಭಾಷ್ ಮೈದಾನ ಸಮೀಪದ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಐದನೂರಕ್ಕೂ ಅಧಿಕ ಅಂಗಡಿಮುಂಗಟ್ಟುಗಳನ್ನು ಪ್ರತಿವಾರ ಹಾಕಲಾಗುತ್ತಿದ್ದು, ಪ್ರತಿವಾರದ ಸಂತೆಯಲ್ಲಿ ಲಕ್ಷಾಂತರ ರು. ವಹಿವಾಟು ನಡೆಯುತ್ತಿತ್ತು. ಇದರಿಂದ ಪುರಸಭೆಗೂ ವಾರ್ಷಿಕ ಲಕ್ಷಾಂತರ ರು. ಆದಾಯ ಬರುತಿತ್ತು. ಆದರೆ, ಪುರಸಭೆ ಆದಾಯ ಪಡೆಯುತ್ತಿದೆಯಾದರೂ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ. ಇದರಿಂದ ಕೆಸರಿನಲ್ಲೆ ವ್ಯಾಪಾರ ವಹಿವಾಟು ನಡೆಸಬೇಕು ಎಂಬ ಆರೋಪ ಸಾರ್ವಜನಿಕ ವಲಯದಿಂದ ದಟ್ಟವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ, ಅಲ್ಲದೆ ಎ.ಪಿಎಂಸಿ ಆವರಣದಲ್ಲೆ ಸಂತೆ ನಡೆಯಬೇಕು ಎಂಬ ನಿಯಮದಿಂದಾಗಿ ಹಲವರ ವಿರೋಧದ ನಡುವೆ ಸಂತೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಸಂತೆ ನಡೆಯುವ ಪ್ರದೇಶದಲ್ಲಿ ಸಕಲ ಮೂಲಭೂತ ಸೌಕರ್ಯ ಒದಗಿಸಲಾಗಿದ್ದು ಎಪಿಎಂಸಿ ಅಧಿಕಾರಿಗಳು ಹಿಂದಿನ ಪುರಸಭೆಗೆ ಹೋಲಿಸಿದರೆ ಅತ್ಯಂತ ಕಡಿಮೆ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಆದರೂ, ಪಟ್ಟಣದ ವಾರದ ಸಂತೆ ಕ್ಷೀಣಿಸುತ್ತಾ ಸಾಗಿದೆ.೨೦೦೪ರಲ್ಲಿ ಸಂತೆ ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಂಡ ವೇಳೆ ಸುಮಾರು ಎರಡು ಎಕರೆ ಪ್ರದೇಶದ ತುಂಬೆಲ್ಲ ಅಂಗಡಿ ಮುಂಗಟ್ಟುಗಳನ್ನು ಹಾಕಲಾಗುತ್ತಿತ್ತು. ಎಪಿಎಂಸಿ ಅಧಿಕಾರಿಗಳ ಪ್ರಖರ ೨೫೦ರಿಂದ ೩೦೦ ಅಂಗಡಿಗಳನ್ನು ಪ್ರತಿವಾರ ಹಾಕಲಾಗುತ್ತಿದೆ ಎಂಬ ಅಂಕಿ ಅಂಶಗಳಿದ್ದವು. ಆದರೆ, ಕಳೆದ ನಾಲ್ಕು ವರ್ಷದಿಂದ ಸಂತೆಗಳಲ್ಲಿ ಅಂಗಡಿಮುಂಗಟ್ಟುಗಳು ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದ್ದು ೧೦೦ರಿಂದ ೧೨೦ ವ್ಯಾಪಾರಿಗಳು ಮಾತ್ರ ಸಂತೆಯಲ್ಲಿ ವಹಿವಾಟು ನಡೆಸುತ್ತಿದ್ದಾರೆ ಎಂಬ ಲೆಕ್ಕವನ್ನು ಎಪಿಎಂಸಿ ಅಧಿಕಾರಿಗಳು ನೀಡುತ್ತಿದ್ದಾರೆ. ಇದರಿಂದಾಗಿ ಒಂದು ಕಾಲದಲ್ಲಿ ಅಂಗಡಿಮುಂಗಟ್ಟುಗಳಿಂದ ತುಂಬಿ ತುಳುಕುತ್ತಿದ್ದ ಸಂತೆ ಮೈದಾನ ಇಂದು ಅಂಗಡಿಗಳ ಕೊರತೆಯಿಂದ ಖಾಲಿ ಉಳಿಯುವಂತಾಗಿದೆ. ಅಂಗಡಿಗಳ ಪ್ರಮಾಣ ವಾರದಿಂದ ವಾರಕ್ಕೆ ತೀವ್ರಗತಿಯಲ್ಲಿ ಕುಸಿಯುತ್ತಿದ್ದು ಇನ್ನೂ ಕೆಲವೇ ವರ್ಷಗಳಲ್ಲಿ ವಾರದ ಸಂತೆ ಎಂಬ ಪರಿಕಲ್ಪನೆ ಮಲೆನಾಡಿನಲ್ಲಿ ಇತಿಹಾಸದ ಪುಟ ಸೇರಲಿದೇಯ ಎಂಬ ಸಂದೇಹ ಹುಟ್ಟುಹಾಕುವಂತೆ ಮಾಡಿದೆ.ಕುಸಿತವೇಕೆ; ಪುರಸಭೆ ಆಡಳಿತ ದಿವ್ಯ ನಿರ್ಲಕ್ಷ್ಯದ ಪರಿಣಾಮ ಸಂತೆ ವ್ಯಾಪಾರಕ್ಕೆಂದು ಬರುವ ವ್ಯಾಪಾರಿಗಳು ಪಟ್ಟಣದ ಹಳೇಬಸ್ ನಿಲ್ದಾಣ ಸಮೀಪದ ಪಾದಚಾರಿ ರಸ್ತೆಯಲ್ಲಿ ಅಂಗಡಿಮುಂಗಟ್ಟುಗಳನ್ನು ತೆರೆಯುತ್ತಿದ್ದು ಬಸ್‌ನಿಲ್ದಾಣ ಸುತ್ತಲಿನ ಸುಮಾರು ನೂರು ಮೀಟರ್ ಆವರಣದಲ್ಲಿ ಸಾಕಷ್ಟು ತರಕಾರಿ ಅಂಗಡಿಗಳು ಪ್ರತಿಗುರುವಾರ ತಲೆ ಎತ್ತುತ್ತಿವೆ. ಇದರಿಂದಾಗಿ ಸಂತೆಗೆ ಹೋಗಲು ಸೋಮಾರಿತನ ತೋರುವ ಜನರು ಸಂತೆ ಬದಲು ಬೀದಿಬದಿಯಲ್ಲೆ ವ್ಯಾಪಾರ ಮಾಡುವುದರಿಂದ ಸಂತೆಗಿಂತ ಬೀದಿಬದಿಯ ವ್ಯಾಪಾರವೇ ಹೆಚ್ಚಿನ ಆಕರ್ಷಕವಾಗಿ ವ್ಯಾಪಾರಿಗಳಿಗೆ ಕಾಣುತ್ತಿದೆ. ಇದರಿಂದಾಗಿ ರಸ್ತೆಬದಿಯಲ್ಲಿ ಪ್ರತಿವಾರ ಒಂದೊಂದೆ ಅಂಗಡಿಗಳು ಹೆಚ್ಚುತ್ತಿದ್ದರೆ ಸಂತೆಯಲ್ಲಿ ಒಂದೊಂದೆ ಅಂಗಡಿಗಳು ಕಡಿಮೆಯಾಗುತ್ತಿವೆ. ಗುರುವಾರ ಬಹುತೇಕ ಪಾದಚಾರಿ ರಸ್ತೆ ತರಕಾರಿ ವ್ಯಾಪಾರಿಗಳಿಂದ ತುಂಬಿಹೋಗುವುದರಿಂದ ಜನರು ಅನಿವಾರ್ಯವಾಗಿ ಹೆದ್ದಾರಿಯಲ್ಲೆ ಸಂಚರಿಸಬೇಕಿದೆ. ಈ ಅನಾನುಕೂಲದ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜವಾಗಿಲ್ಲ. ಅಂಗಡಿ ತೆರವಿಗೆ ಮುಂದಾಗುವ ಪುರಸಭೆ ಅಧಿಕಾರಿಗಳಿಗೆ ವಾರಕ್ಕಾಗುವಷ್ಟು ತರಕಾರಿ ಕೋಡುವ ಮೂಲಕ ವ್ಯಾಪಾರಿಗಳು ಅಧಿಕಾರಿಗಳನ್ನು ಸಮಧಾನ ಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಸಂಜೆ ಸಂತೆ ಇಲ್ಲ: ಎಪಿಎಂಸಿಗೆ ವಾರದ ಸಂತೆ ಸ್ಥಳಾಂತರವಾದ ನಂತರ ಕೆಲವು ವ್ಯಾಪಾರಿಗಳು ಉಳಿದ ತರಕಾರಿಗಳನ್ನು ಸಂಜೆ ವೇಳೆ ಹಳೇಬಸ್ ನಿಲ್ದಾಣದ ಎದುರು ಇಟ್ಟು ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ಸಂಜೆ ಸಂತೆ ಎಂಬ ಹೆಸರು ಪಡೆದಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಉಳಿದ ತರಕಾರಿಗಳನ್ನು ರಾತ್ರಿ ವೇಳೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಈಗ ಮುಂಜಾನೆಯಿಂದಲೇ ಅಂಗಡಿಗಳನ್ನು ಹಾಕುತ್ತಿರುವ ಪರಿಣಾಮ ಸಂಜೆ ಸಂತೆ ಕಣ್ಮರೆಯಾಗಿದೆ.ಎಲ್ಲೆಲ್ಲೂ ತರಕಾರಿ ಅಂಗಡಿಗಳು: ಪುರಸಭೆ ಆಡಳಿತ ಜಾರಿಗೆ ಬಂದ ದಿನಗಳಿಂದಲು ಪಟ್ಟಣದ ಅಶೋಕ ರಸ್ತೆಯಲ್ಲಿ ತರಕಾರಿ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ಅಂದಿನ ಪುರಸಭೆ ಆಡಳಿತ ಬೀದಿಬದಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ನೀಡದಿದ್ದ ಪರಿಣಾಮ ಕಳೆದ ಎರಡು ದಶಕಗಳ ವರಗೆ ಮಾರುಕಟ್ಟೆ ತರಕಾರಿ ಅಂಗಡಿಗಳಿಂದ ತುಂಬಿತುಳುಕುತಿತ್ತು. ಆದರೆ, ಈಗಿನ ವರ್ಷಗಳಲ್ಲಿ ಪುರಸಭೆ ಆಡಳಿತ ಬಿಗಿ ಕಳೆದುಕೊಂಡಿರುವುದರಿಂದ ಪಟ್ಟಣದ ಪಾದಚಾರಿ ರಸ್ತೆಗಳೆಲ್ಲ ತರಕಾರಿ ಅಂಗಡಿಗಳಿಂದ ತುಂಬಿ ಹೋಗಿದೆ ಪರಿಣಾಮ ತರಕಾರಿ ಮಾರುಕಟ್ಟೆ ಎರಡೇ ಅಂಗಡಿಗಳಿಗೆ ಸೀಮಿತಗೊಂಡಿದೆ.*ಹೇಳಿಕೆ 1
ಕಳೆದ ಹಲವು ವರ್ಷಗಳಿಂದ ಗಮನಿಸುತ್ತಿರುವಂತೆ ಗುರುವಾರ ನಡೆಯುವ ವಾರದ ಸಂತೆಯಲ್ಲಿ ಅಂಗಡಿಗಳ ಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾಗುತ್ತಿವೆ.- ಮಧು, ಕಾರ್ಯದರ್ಶಿ, ಎಪಿಎಂಸಿ*ಹೇಳಿಕೆ 2
ಮಾರುಕಟ್ಟೆಯಲ್ಲೆ ತರಕಾರಿ ಮಾರಾಟ ಮಾಡಬೇಕು ಎಂಬ ನಿಯಮವಿದೆ ಆದರೆ ಹಿಂದಿನಿಂದಲೂ ಇಲ್ಲಿ ಬೀದಿಬದಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಸದ್ಯ ಬದಲಾವಣೆ ಕಷ್ಟ ಸಾಧ್ಯವಾಗಿದೆ.- ನಟರಾಜ್, ಮುಖ್ಯಾಧಿಕಾರಿ ಪುರಸಭೆ