ಸಾರಾಂಶ
ನವಾಬರ ಆಡಳಿತ ಕಂಡ ಸವಣೂರಲ್ಲಿರುವ ಇತಿಹಾಸ ಸಾರುವ ಐತಿಹಾಸಿಕ ಕುರುಹಿನ ಕೋಟೆ ಬಾಗಿಲುಗಳು ಸೂಕ್ತ ರಕ್ಷಣೆ ಮತ್ತು ದುರಸ್ತಿ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂಪೂರ್ಣ ಅವಸಾನದತ್ತ ಸಾಗಿರುವುದು ಸ್ಥಳೀಯ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅಶೋಕ ಕಳಲಕೊಂಡ
ಕನ್ನಡಪ್ರಭ ವಾರ್ತೆ ಸವಣೂರುನವಾಬರ ಆಡಳಿತ ಕಂಡ ಸವಣೂರಲ್ಲಿರುವ ಇತಿಹಾಸ ಸಾರುವ ಐತಿಹಾಸಿಕ ಕುರುಹಿನ ಕೋಟೆ ಬಾಗಿಲುಗಳು ಸೂಕ್ತ ರಕ್ಷಣೆ ಮತ್ತು ದುರಸ್ತಿ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂಪೂರ್ಣ ಅವಸಾನದತ್ತ ಸಾಗಿರುವುದು ಸ್ಥಳೀಯ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷ್ಯದಿಂದ ನವಾಬರ ಆಡಳಿತ ರಾಜಧಾನಿಯಾಗಿದ್ದ ಸವಣೂರು ಗತ ವೈಭವದ ಇತಿಹಾಸ ಸಾರುವ ಐತಿಹಾಸಿಕ ಕೋಟೆ ಬಾಗಿಲುಗಳನ್ನು ರಕ್ಷಣೆ ಮಾಡುವವರು ಯಾರು ಎಂಬ ಯಕ್ಷ ಪ್ರಶ್ನೆ ಮೂಡಿಸಿದೆ.ರಾಜ ಮಹಾಜರ ಕಾಲದ ಕೋಟೆ ಕೊತ್ತಲಗಳು, ಕಂದಕಗಳು ಭದ್ರತೆಯ ಸಂಕೇತ. ನವಾಬರ ಕಾಲದಲ್ಲಿ ಪಟ್ಟಣದ ಸುರಕ್ಷತೆಗಾಗಿ ಪುರ ಪ್ರವೇಶದ ನಾಲ್ಕು ದಿಕ್ಕಿನಲ್ಲಿ ಅಂದರೆ ಸವಣೂರ ಪಟ್ಟಣದ ಹೆಸ್ಕಾಂ ಇಲಾಖೆ ಎದುರಿಗೆ, ಮೋತಿ ತಲಾಬ್ ಕೆರೆ ಪಕ್ಕದಲ್ಲಿ, ಶುಕ್ರವಾರ ಪೇಟೆಯ ಮತ್ತು ಹಳೇ ಕೋರ್ಟ್ (ಕಂದಾಯ ಇಲಾಖೆ ಕಚೇರಿ) ರಸ್ತೆಯಲ್ಲಿರುವ ದೊಡ್ಡ ದೊಡ್ಡ ಕೋಟೆ ದ್ವಾರ ಬಾಗಿಲಗಳು ಅಕ್ಷರಶಃ ಅನಾಥವಾಗಿವೆ.೧೫ನೇ ಶತಮಾನದಿಂದ ಸ್ವಾತಂತ್ರ‍್ಯ ಬರುವವರೆಗೂ ಆಡಳಿತ ನಡೆಸಿದ ನವಾಬರು ಸವಣೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ರಾಜಧಾನಿಯಲ್ಲಿ ನವಾಬ ರಾಜ್ಯದ ಸಂಸ್ಥಾಪಕ ಅಬ್ದುಲ್ ರವೂಫ್‌ಖಾನ್ ದಲೇಲಪುರ ಅವಧಿಯಲ್ಲಿ ಈ ಕೋಟೆ ಬಾಗಿಲುಗಳು ನಿರ್ಮಾಣಗೊಂಡಿವೆ.ಸ್ವಾತಂತ್ರ‍್ಯ ನಂತರದಲ್ಲಿ ನಿರ್ವಹಣೆ, ಮೇಲುಸ್ತುವಾರಿ ಕೊರತೆಯಿಂದ ಕೋಟೆ ಬಾಗಿಲುಗಳು ಕುಸಿಯುತ್ತಾ ಸಾಗಿದೆ. ಕೋಟೆ ಸುತ್ತಲಿನ ಕಂದಕ ಘನತ್ಯಾಜ್ಯ ಹಾಕುವ ಸ್ಥಳವಾಗಿದ್ದು, ಕೊಳಚೆ ನೀರು ಸಂಗ್ರಹಗೊಂಡು ಪಟ್ಟಣದಲ್ಲಿ ರೋಗ ಹರಡುವ ತಾಣವಾಗಿದೆ. ಈಗಾಗಲೇ ೨೦೨೦-೨೧ ಸಾಲಿನಲ್ಲಿ ನೆರೆ ಹಾವಳಿಗೆ ಸಾಕಷ್ಟು ಮನೆಗಳು ಕುಸಿದವು. ಅದೇ ಸಮಯದಲ್ಲಿ ಹಳೇ ಕೋರ್ಟ್‌ಗೆ ತೆರಳುವ ಮಾರ್ಗದ ಕೋಟೆ ದ್ವಾರ ಬಾಗಿಲು ಮತ್ತು ಬಂಕಾಪುರ ರಸ್ತೆಯ ಕೋಟೆ ದ್ವಾರ ಬಾಗಿಲು ಕುಸಿದಿದೆ. ಸರ್ಕಾರ ಬಿದ್ದ ಮನೆಗಳಿಗೆ ಪರಿಹಾರ ನೀಡಿತು, ಮತ್ತೆ ಮನೆಗಳು ನಿರ್ಮಾಣವಾದವು. ಆದರೆ, ಕೋಟೆ ಗೋಡೆ ಕುಸಿದು ೨-೩ ವರ್ಷಗಳೇ ಕಳೆದರೂ ಪುನಃ ನಿರ್ಮಾಣಕ್ಕೆ ಇಲಾಖೆ ಮತ್ತು ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ.ಪಟ್ಟಣದ ಹೆಸ್ಕಾಂ ಇಲಾಖೆ ಕಚೇರಿ ಎದುರಲ್ಲಿರುವ, ಮೋತಿ ತಲಾಬ್ ಎದುರಲ್ಲಿ ಹಾಗೂ ಶುಕ್ರವಾರ ಪೇಟೆಯ ರಸ್ತೆಯಲ್ಲಿರುವ ಕೋಟೆ ಬಾಗಿಲುಗಳ ಮೇಲ್ಭಾಗದಲ್ಲಿ ಬೇವಿನ ಮರಗಳು, ಮುಳ್ಳಿನ ಗಿಡ ಗಂಟಿಗಳು ಬೆಳೆದು ಬಿರುಕು ಬಿಟ್ಟಿದ್ದು, ಮಳೆ ನೀರು ಗೋಡೆಯೊಳಗೆ ಸೇರಿ ಕೋಟೆ ಬಾಗಿಲುಗಳು ಕುಸಿಯಲು ಕಾರಣವಾಗಿದೆ. ಈ ಐತಿಹಾಸಿಕ ಕೋಟೆ ಬಾಗಿಲುಗಳನ್ನು ರಕ್ಷಿಸಿ ಮುಂದಿನ ಯುವ ಪೀಳಿಗೆಗೆ ಇತಿಹಾಸ ತಿಳಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕೋಟೆ ಬಾಗಿಲುಗಳು ಕುಸಿದು ಬಿದ್ದಿರುವ ಸ್ಥಳಗಳನ್ನು ಪುನಃ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.ಸ್ಥಳೀಯ ಕೋಟೆ ಬಾಗಿಲುಗಳನ್ನು ಪುನರ್ ನವೀಕರಣಗೊಳಿಸಿ ಕೋಟೆಯನ್ನು ಮುಂದಿನ ಯುವ ಸಮೂಹಕ್ಕೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗುವುದು ಅವಶ್ಯವಿದೆ ಮಂತ್ರವಾಡಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಸನಗೌಡ ಕೊಪ್ಪದ ಹೇಳುತ್ತಾರೆ.
ನವಾಬರ ಕಾಲದ ಕೋಟೆ ಬಾಗಿಲುಗಳು ಕಾಲ ಕ್ರಮೇಣ ನಶಿಸುತ್ತಿರುವದು ದುರದೃಷ್ಟಕರವಾಗಿದೆ. ಸರ್ಕಾರ ಕೂಡಲೇ ನವೀಕರಣಕ್ಕೆ ಸೂಕ್ತ ನಿರ್ದೇಶನ ನೀಡಿ ಕೋಟೆ ಬಾಗಿಲುಗಳ ಪುನಶ್ಚೇತನಕ್ಕೆ ಮುಂದಾಗಬೇಕು. ಎನ್ನುತ್ತಾರೆ ಜೇಕಿನಕಟ್ಟಿ ನಿವಾಸಿ ಚನ್ನಬಸಯ್ಯ ಪ್ರಭ್ಯನವರಮಠ